ಹುಲಿ ಉಗುರು ಧರಿಸಿದ್ದಾರೆಂದು ಕರ್ನಾಟಕ ಅರಣ್ಯ ಇಲಾಖೆ ಕೆಲವರ ವಿರುದ್ಧ ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ- 1972 ರ ಪ್ರಕಾರ ಕ್ರಿಮಿನಲ್ ಪ್ರಕರಣ ದಾಖಲಿಸಿರುವ ವಿಷಯ ತೀವ್ರ ಚರ್ಚೆಗೆ ಕಾರಣ ಮಾಡಿಕೊಟ್ಟಿದೆ.
ನಮ್ಮ ಭಾರತೀಯ ದ್ರಾವಿಡರ ಕೇಂದ್ರ ಪ್ರಜ್ಞೆಯ ನಾಯಕನಾದ ಶಿವನು ಹುಲಿ ಚರ್ಮಾಂಬರಧಾರಿಯಾಗಿದ್ದಾನೆ. ಬುದ್ಧಗುರುವಿನ ಪೂರ್ವಕಾಲದ ಆದಿಸಿದ್ಧರು ಗವಿ ಗವ್ವಾರಗಳಲ್ಲಿ ಹುಲಿಗಳೊಂದಿಗೆ ಕಾಡಿನಲ್ಲಿ ಸಹಜೀವನ ನಡೆಸಿದವರು.
ಬೌದ್ಧ ಸಿದ್ಧರು, ತಾಂತ್ರಿಕರು, ರಸ ಸಿದ್ಧರು, ತಾವೋ ಗುರುಗಳು ತಮ್ಮ ಆಶ್ರಮಗಳಲ್ಲಿ ಆನೆ ಹುಲಿ ಜಿಂಕೆ ಗಿಣಿ ನವಿಲು ಮುಂತಾದ ಜೀವಿಗಳನ್ನು ತಮ್ಮಂತೆಯೇ ಉಪಚರಿಸುತ್ತಾ ಒಂದೇ ಚಾವಣಿಯ ಕೆಳಗೆ ಬದುಕಿದವರು.
ದೇಶಿ ಸಾಧು ಸಂತರು, ಯೋಗಿಗಳು ಹುಲಿ ಚರ್ಮಗಳ ಮೇಲೆ ಆಸೀನರಾಗಿ ತಪಸ್ಸಾಧನೆ ಮಾಡಿದವರು. ಮಲೆಮಹದೇಶ್ವರ – ಮಂಟೇಸ್ವಾಮಿಯಂತಹ ದೇಶಿ ಬಂಡುಕೋರ ಸಿದ್ಧರು ಹುಲಿ ಸವಾರಿ ಮಾಡುತ್ತಿದ್ದರು.
ಬೌದ್ಧ ಭಿಕ್ಷುವಾದ ಧಮ್ಮಸಾಸ್ತ (ಅಯ್ಯಪ್ಪ) ಕೂಡಾ ಹುಲಿವಾನದ ಸಾಧಕ. ಇವರು ಹುಲಿವಾನದಯ್ಯಗಳಾಗಿದ್ದರಿಂದ ಅಂಥದ್ದೇ ರೂಪಗಳಲ್ಲಿ ಅವರ ಚಿತ್ರಗಳನ್ನು ಮತ್ತು ಹಾಡುಗಳನ್ನು ರಚಿಸಲಾಗಿದೆ. ಈಗಲೂ ಶೈವ ಪರಂಪರೆಯ ಆಶ್ರಮವಾಸಿಗಳು ಹುಲಿ ಚರ್ಮದ ಮೇಲೆ ಕುಳಿತು ಧ್ಯಾನಿಸಿದರೆ ಸಿದ್ಧಿಗಳು ಪ್ರಾಪ್ತವಾಗುತ್ತದೆಂಬ ನಂಬಿಕೆಯೂ, ಹುಲಿ ಚರ್ಮದ ಮೇಲೆ ಕುಳಿತುಕೊಳ್ಳುವ ನಡೆಯೂ ಇರುತ್ತದೆ.
ಅಂದ್ಹಾಗೆ ಅವರು ಹುಲಿಗಳನ್ನು ಕೊಂದವರಲ್ಲ. ಕೆಲವೊಮ್ಮೆ ಪ್ರಾಣ ರಕ್ಷಣೆಗಾಗಿ ಕೊಂದಿರಲೂ ಬಹುದು. ಇವರೆಲ್ಲರೂ ಸರಳ ಜೀವನ ತತ್ವವನ್ನು ಅಳವಡಿಸಿಕೊಂಡು ಪ್ರಕೃತಿಯ ಮಕ್ಕಳಾಗಿ ಬಾಳಿದವರು. ಹುಲಿಯಂತೆಯೇ ಸಕಲ ಜೀವಿಗಳು ಇವರಿಂದ ರಕ್ಷಣೆಯಾಗಿವೆ.
ಕೊಂಡಮಾಮ ವೇಷದವರು, ಬೈರಾಗಿ ವೇಷದವರು, ಜೋಗಿಗಳು, ಬುಡುಬುಡಿಕೆಯವರು, ಗೋಂದಳಿಯವರು, ಸುಡುಗಾಡು ಸಿದ್ಧರು, ಬಾಳ ಸಂತರು, ಬಾಲ ಬಸವರು, ಕೋಲೆಬಸವನವರು, ಮೊಂಡರು ಇನ್ನೂ ಮುಂತಾದವರು ತಮ್ಮ ಕೊರಳಿಗೂ ತೋಳಿನ ರಟ್ಟೆಗಳಿಗೂ ರುದ್ರಾಕ್ಷಿ ಮಣಿಸರ ಹವಳ ಹುಲಿಯುಗುರು, ಧರಿಸಿಕೊಂಡು ಭಿಕ್ಷಾಟನೆಗೋ, ನಾಟಿ ವೈದ್ಯಕೀಯಕ್ಕೋ ಅಥವಾ ಕಲಾಪ್ರದರ್ಶನಕ್ಕೋ ನಿಮ್ಮ ಮನೆಬಾಗಿಲು ಬೀದಿಗಿಳಿಯುವುದನ್ನು ನೀವು ನೋಡಿದ್ದೀರಿ.
ಮೈಲಾರಲಿಂಗ – ಮಲ್ಲಿಕಾರ್ಜುನನ ಪರಂಪರೆಯ ಗೊರವರು, ಕರಡಿ ಚರ್ಮದ ಟೋಪಿ ಧರಿಸಿಕೊಂಡು ಪಿಳ್ಳಂಗೋವಿ ಮತ್ತು ಡಮರು ನುಡಿಸುತ್ತಾ ಬರುತ್ತಾರೆ. 1972 ವನ್ಯಜೀವಿಗಳ ಸಂರಕ್ಷಣಾ ಕಾಯ್ದೆಯ ಪ್ರಕಾರ ಇವರೆಲ್ಲರೂ ವನ್ಯಜೀವಿಗಳ ವಸ್ತುಗಳನ್ನು ಹೊಂದುವಂತಿಲ್ಲ.
ಇವರಾರೂ ಕಾಡನ್ನು ನಾಶ ಮಾಡಿಯೋ ಕಾಡುಜೀವಿಗಳನ್ನು ಉದ್ದೇಶಪೂರ್ವಕವಾಗಿ ಕೊಂದೋ ಇಂತಹ ವಸ್ತುಗಳನ್ನು ಹೊಂದಿರುವವರಲ್ಲ. ಇವರ ಪೂರ್ವಿಕರ ಕಾಲದಿಂದಲೂ ದತ್ತಕವಾಗಿ ಬಂದವುಗಳಾಗಿವೆ. ಅವುಗಳನ್ನು ಹೆಚ್ಚಿನಂಶ ಪ್ರಾಣಿಗಳ ವಿಸರ್ಜಿತ ಕಳೇಬರಗಳಿಂದಲೂ ಅಥವಾ ಕಳೇಬರಗಳು ಹಾಳಾದ ಮೇಲೆ ಉಳಿದವನ್ನು ಹೆಕ್ಕಿ ಸಂಗ್ರಹಿಸಿದ್ದಾರೆ.
ಇವರು ‘ಅಡವಿ ತಾಯಿ’ , ‘ಅಡವಿ ಮಾ ತಲ್ಲಿ’, ‘ಕಾನ್ ದೈವ’ ಎಂದು ಕಾಡು ಉಳಿದರೆ ತಾವೂ ಉಳಿಯುವೆವೆಂದು ನಂಬಿಕೊಂಡು ಬಾಳಿದವರು. ಇವರು ಬಹುತೇಕ ಕಾಡುಮೂಲದ ಬುಡಕಟ್ಟು ಜನರಾಗಿರುವುದರಿಂದ ದೇಶಿ ವೈದ್ಯವಿಜ್ಞಾನ ಮತ್ತು ಕಾಡಿನ ಸಮಸ್ತ ಮರಗಿಡ ಪ್ರಾಣಿ ಪಕ್ಷಿ ಎಲ್ಲದರ ಜೀವಜಾಲ ಪರಿಸರವನ್ನು ತುಂಬಾ ಚೆನ್ನಾಗಿ ಬಲ್ಲವರಾಗಿದ್ದಾರೆ. ಕಾಡೆಂದರೆ ತಮ್ಮ ಜೀವನಕ್ಕೆ ಬೇಕಾದ ಮೇವು ನೀರು ಸೌದೆ ಹಣ್ಣುಹಂಪಲು, ವನಸ್ಪತಿ, ಜೇನು ಅತ್ತರ್ ಗಾಳಿ ಮಳೆಯ ದೈವ ಎಂಬುದೇ ಇವರ ನಂಬಿಕೆ.
ಆದರೆ, ಆಧುನಿಕ ನಾಗರಿಕರ ಕಣ್ಣುಗಳಿಗೆ ಇದೇ ಕಾಡು, ಕೈಗಾರಿಕೆಗೆ ಬೇಕಾಗುವ ಕಚ್ಚಾವಸ್ತುಗಳ ಗಣಿಯಾಗಿ ಕಾಣಿಸಿತು. ಮನರಂಜನಾ ಉದ್ಯಮದ ತಾಣವಾಗಿ ಕಾಣಿಸಿತು. ಅಣೆಕಟ್ಟುಗಳನ್ನು ಕಟ್ಟಲು ಸೂಕ್ತ ಭೂಮಿಯಾಗಿ ಕಾಣಿಸಿತು. ಕಾಡಿನ ಮರಗಳು ಮತ್ತು ಬೆಟ್ಟಗುಡ್ಡಗಳು ಹಡಗುಗಳನ್ನು ಕಟ್ಟಲು ರೈಲುರಸ್ತೆ ನಿರ್ಮಿಸಲು, ಭವ್ಯ ಬಂಗಲೆ, ದೊಡ್ಡ ಮನೆ ಕಟ್ಟಲು ಕಚ್ಚಾವಸ್ತುಗಳ ಪೂರೈಕೆಯ ಮೂಲಗಳಾಗಿ ಕಾಣಿಸಿದವು. ನದಿಗಳು ಮತ್ತು ಸಮುದ್ರ ಕೈಗಾರಿಕಾ ತ್ಯಾಜ್ಯ ವಿಲೇವಾರಿಯ ಮಾಧ್ಯಮಗಳಾಗಿ ಕಾಣಿಸಿದವು. ಇಂಥವರಿಗೆ ಪೂರಕವಾಗಿರುವ ವ್ಯಾಪಾರಿ ಅರಣ್ಯ ನೀತಿಗಳ ಧೋರಣೆಯ ಪ್ರಕಾರ ಆದಿವಾಸಿ ಬುಡಕಟ್ಟಿನ ಜನ ಹೊಟ್ಟೆಪಾಡಿಗಾಗಿ ಇಲಿ ಅಳಿಲು ಗೊರವಂಕ ಉಡಹೋತಿ ಕೋತಿ ಯಾವುದನ್ನೂ ಬೇಟೆಯಾಡುವಂತಿಲ್ಲ. ಇವರು ಬ್ರಿಟಿಷರು ಕ್ರಿಮಿನಲ್ ಟ್ರೈಬ್ಸ್ ಎಂದು ಘೋಷಿಸಿ ಬಿಟ್ಟುಹೋಗಿರುವ ಜನ್ಮತಃ ಅಪರಾಧಿಗಳಾಗಿದ್ದಾರೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ -1972 ಜಾರಿಯಾದ ಬಳಿಕ ವನ್ಯಜೀವಿಗಳ ಸಾಕಾಣಿಕೆ, ಕರಡಿ ಆಟ, ಕೋತಿ ಆಟ, ಹಾವಾಡಿಗರ ಆಟ ನಿಷೇಧವಾಯಿತು. ಪರವಾನಗಿ ಪಡೆದ ಸರ್ಕಸ್ ಕಂಪೆನಿಗಳು ಮಾತ್ರ ಪ್ರಾಣಿಗಳನ್ನು ಸಾಕಿದ್ದರು. ಆ ನಂತರದಲ್ಲಿ ಕಾಯ್ದೆಯನ್ನು ಮತ್ತೆ ಮತ್ತೆ ಪರಿಷ್ಕರಣೆ ಮಾಡಿ ಜಾರಿ ಮಾಡಿ ಸಂಪೂರ್ಣ ನಿಷೇಧಿಸಲಾಯಿತು.
ನಾನು ಕೊನೆಯಲ್ಲಿ ಕಂಡಂತೆ 2001 ನೇ ಇಸವಿಯಲ್ಲಿ ಕುಣಿಗಲ್ ಪೊಲೀಸರು ಕರಡಿ ಆಡಿಸುತ್ತಿದ್ದ ಕರಡಿ ಖಲಂದರರನ್ನು ಬಂಧಿಸಿದ್ದರು. ಇಡೀ ದಿನ ಎರಡು ಕರಡಿಗಳು ಪೊಲೀಸ್ ಠಾಣೆಯ ಹೊರ ಆವರಣದಲ್ಲಿ ಮತ್ತು ಠಾಣೆಯೊಳಗೆ ಲಾಕಪ್ಪಿನಲ್ಲಿ, ಆ ಕರಡಿಗಳನ್ನು ಸಾಕಿದ್ದ ಕರಡಿ ಖಲಂದರರ ಇಬ್ಬರು ವ್ಯಕ್ತಿಗಳು ಅಳುತ್ತಲೇ ಇದ್ದರು. ನಂತರ ಪೊಲೀಸರು ಕೃಷ್ಣಮೂರ್ತಿ CPI ಅವರ ನೇತೃತ್ವದಲ್ಲಿ ಕರಡಿಗಳನ್ನು ಹುರುಳಿ ಭೋರಸಂದ್ರದ ಕಾಡಿಗೆ ಬಿಟ್ಟು ಬಂದರು. ಆಮೇಲಿನ ಸಂಗತಿ ನನಗೆ ತಿಳಿಯಲಿಲ್ಲ. ಕರಡಿ ಖಲಂದರರಿಂದ ಕಾಡು ನಾಶವಾಗಲಿಲ್ಲ. ವಸಾಹತುಶಾಹಿ ಬ್ರಿಟಿಷರ ಕೆಲವು ಕಾನೂನುಗಳನ್ನು ಈಗಲೂ ಪಾಲಿಸುತ್ತಿರುವ ಸರ್ಕಾರದ ನೀತಿಗಳ ಧೋರಣೆಯ ಪ್ರಕಾರ ಕರಡಿ ಖಲಂದರರು ಜನ್ಮತಃ ಕ್ರಿಮಿನಲ್ ಟ್ರೈಬ್ಸ್ !
Ecotourism ಮತ್ತು Taj Group of Tourist Hotels ಹೆಸರಿನಲ್ಲಿ ಬಂಡವಾಳಶಾಹಿಗಳು ಕಾಡನ್ನು ನಾಶ ಮಾಡುತ್ತಿದ್ದಾರೆ. ನಗರಗಳಲ್ಲಿ ದೊಡ್ಡ ದೊಡ್ಡ ಕಾಂಪ್ಲೆಕ್ಸ್, ಕಟ್ಟಡಗಳನ್ನು ಕಟ್ಟಲು ನದಿ ನದಾರ ಬೆಟ್ಟಗುಡ್ಡಗಳನ್ನು ಗೋರಿಕೊಂಡು ಹೊತ್ತೊಯ್ಯುತ್ತಿದ್ದಾರೆ. ಬಂಡವಾಳಶಾಹಿಗಳಿಂದ ನಾಶವಾಗದಿರುವ ಕಾಡು ಇಲಿ ಅಳಿಲು ಪಾರಿವಾಳ ಗೊರವಂಕಗಳನ್ನು ಬೇಟೆಯಾಡಿ ತಿಂದು ಜೀವ ಉಳಿಸಿಕೊಳ್ಳುವ ಬಡಪಾಯಿಗಳಿಂದ ನಾಶವಾಗುತ್ತದೆ ಎಂದರೆ ಏನರ್ಥ?!!
- ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿಗಳು




