ನಮ್ಮ ಮನೆಯಲ್ಲಿಂದು ಸತ್ಯನ ನಳಪಾಕ

2 years ago

#Satyanarayana #Nalapaka #house #TYallappa #humanity #cooking #literature

ಆತ್ಮೀಯರೆ,
ಇಂದು ಬೆಳಿಗ್ಗೆ ಡಾ.ಎಚ್.ಎಸ್.ಸತ್ಯನಾರಾಯಣ  ಹೊಸ ತಲೆಮಾರಿನ ಸಾಹಿತಿಗಳ ಪಾಲಿನ ಡಾರ್ಲಿಂಗ್ , ವಿಮರ್ಶಕ, ವಾಗ್ಮಿ, ಮಾತಿನ ಮಲ್ಲ, ತಮ್ಮ ಮುಖಪುಟದಲ್ಲಿ ನಳಪಾಕದ ಬಗ್ಗೆ ಬರೆದಿದ್ದರು. ತಾವೆಲ್ಲಾ ಓದಿರುವಿರಿ. ಅದೊಂದು ಅತ್ಯುತ್ತಮ ಲಲಿತ ಪ್ರಬಂಧ ಕೂಡಾ. ತಾವು ಅಡುಗೆ ಕಲಿತದ್ದು, ತಾವು ಕಲಿತ ಅಡುಗೆಗಳ ಒಂದು ಮೀಮಾಂಸೆಯೇ ಅಲ್ಲಿತ್ತು. ಅವರ ಈ ಬರಹಕ್ಕೆ ನಾನೂ ಒಂದು ಪ್ರತಿಕ್ರಿಯೆ ಬರೆದಿದ್ದೆ ಕೂಡಾ……

ಈಗ ಮತ್ತೆ ಅವರ ಬರಹಕ್ಕೆ ಮತ್ತೆ ನನ್ನೀ ಬಾಲಂಗೋಚಿ ಬರಹ ನೋಡಿ ತಾವುಗಳು ಮುಜುಗರ ಪಡಬಾರದೆಂದು ಈ ಸ್ಪಷ್ಟನೆ …..

ಸಾಮಾನ್ಯವಾಗಿ ನಮ್ಮ ತೀರಾ ಆತ್ಮೀಯರು ನಮ್ಮನ್ನು ಅಗಲಿದ ಮೇಲೆ ಅವರ ಬಗ್ಗೆ ಪುಟಗಟ್ಟಲೆ ಬರೆಯುವುದು ವಾಡಿಕೆ ಅಥವಾ ಅವರು ಬದುಕಿರುವಾಗಲೇ ಏನನ್ನಾದರೂ ದೊಡ್ಡದನ್ನು ಸಾಧಿಸಿದಾಗ ಅನಿವಾರ್ಯವಾಗಿ ಒಂದೆರಡು ಪ್ರಶಂಸೆಯ ಮಾತು ಬರೆಯುವುದೂ ಕೂಡಾ ನಮ್ಮಲ್ಲಿ  ಔಪಚಾರಿಕವಾಗಿ ರೂಢಿಯಲ್ಲಿರುವ ವಾಡಿಕೆ..   ಅದು ಬಿಟ್ಟು ಆತ್ಮೀಯರಾದವರ ಬಗ್ಗೆ ಬರೆಯುವುದು ಮುಜುಗರದ ಸಂಗತಿಯೇ … ಅದೂ ಅಲ್ಲದೆ ಏನಾದರೂ ನಮ್ಮ ಗೆಳೆಯರಾದವರು ಅಧಿಕಾರದ ಆಯಕಟ್ಟಿನ ಹುದ್ದೆಗಳಲ್ಲಿ ಇದ್ದಾಗ ಬರೆಯುವುದಂತೂ ಇನ್ನೂ ಮುಜುಗರದ ಸಂಗತಿಯೇ .. ಇವನು ಏನೋ ಬಕೇಟು ಹಿಡಿಯಲು ಈ ರೀತಿ  ಬರೆಯುತಿದ್ದಾನೆ ಅಂತ ಜನರಿಗೆ ತಿಳಿದೇ ತಿಳಿಯುತ್ತದೆ. ಸದ್ಯ ಸತ್ಯನಾರಾಯಣ ಅವರು ಸದ್ಯಕ್ಕೆ ಅಂತಹ ಯಾವುದೇ ಪ್ರಭಾವಿ ಹುದ್ದೆಯಲ್ಲಿ ಇಲ್ಲ, ಒಬ್ಬ ಉಪನ್ಯಾಸಕರು ಅನ್ನುವುದೊಂದೇ ಅವರ ಬಗ್ಗೆ ಮುಜುಗರವಿಲ್ಲದೆ ನಾಕು ಮಾತು ಬರೆಯಲು ನನಗಿರುವ ನಿರಾಳದ ಸಂಗತಿ.

       ಡಾ.ಸತ್ಯಯನಾರಾಯಣ  ಹಾಗೂ ನನ್ನ ಸಂಬಂಧ ಸುಮಾರು ಮೂವತ್ತು ವರ್ಷಗಳಿಗೂ ಮಿಗಿಲಾದದ್ದು. ನಾವು ಬೆಂಗಳೂರಿನ ಎ.ಪಿ.ಎಸ್ ಕಾಲೇಜಿನಲ್ಲಿ ತೊಂಬತ್ತರ ದಶಕದಲ್ಲಿ ಅತಿಥಿ  ಉಪನ್ಯಾಸಕ ಸಹೊದ್ಯೋಗಿ ಮಿತ್ರರು. ತದನಂತರ ನಮ್ಮ ಆತ್ಮೀಯತೆ ಎಲ್ಲಿಯವರೆಗೆಂದರೆ ನಮ್ಮ ಮನೆಯಲ್ಲೆ ಒಂದೇ ಗಂಗಳದಲ್ಲಿ ಉಣ್ಣುವಷ್ಟು, ನಮ್ಮ ಅಮ್ಮನಿಗೆ ಈತ ಹಿರಿಮಗ, ನಮ್ಮ  ತಂಗಿ ತಮ್ಮಂದಿರಿಗೆ  ಸತ್ಯಣ್ಣ, ಅಕ್ಕನಿಗೆ ಮುದ್ದು ತಮ್ಮ , ಒಂದೆರಡು ವರ್ಷ ನಮ್ಮ ಮನೆ ಮಗನಾಗಿ, ನಮ್ಮ ಕಷ್ಟ ಸುಖಗಳ ಪಾಲುದಾರನಾಗಿ, ಇಡೀ ಬೀದಿಯ ಜನರ ಪಾಲಿನ ಪರಮಾಪ್ತ ಬಂಧು… ಈತ
      
ನಾನು ಇವರನ್ನು ಕರೆಯುತಿದ್ದದ್ದು ಸತ್ಯು ಎಂದೆ, ಸತ್ಯು ಇದ್ದಷ್ಟು ಕಾಲ, ದಿನವೂ ಭಾವಗೀತೆಗಳ ಗೋಷ್ಠಿ, ಕವಿಗೋಷ್ಠಿ ಮನೆಯಲ್ಲಿ, ಭಾನುವಾರ ಬಂತೆಂದರೆ ಬಾಡೂಟ ಮನೆಯಲ್ಲಿ. ನೀರು ದೋಸೆ, ಕೋಳಿಸಾರು, ಅಕ್ಕಿ ಕಡುಬು, ಮತ್ತೊಂದು ಭಾನುವಾರ ಹುರಿದ ಮೀನು, ಮೀನು ಸಾರು, ವಾರಪೂರ್ತಿ ಮನೆಯಲ್ಲಿ ಮಲೆನಾಡಿನ ಅಡುಗೆ, ತಂಬುಳಿ, ಬಸಳೆ ಸೊಪ್ಪಿನ ಸಾರು, ಇಂಗುತೆಂಗುಗಳ ಘಮ ಘಮ, ದಿನವೂ ಸಂಜೆ ಕಾಫಿಗೆ ವಿವಿಧ ರೀತಿಯ ಮಂಡಕ್ಕಿ , ಅವಲಕ್ಕಿಗಳ ಒಗ್ಗರಣೆ, ಗೊಜ್ಜವಲಕ್ಕಿ, ಪುಳಿಯೋಗರೆ, ಮೆಂತ್ಯೆ ಗೊಜ್ಜು , ಕಾಳುಹುಳಿ, ಬೇಳೆ ಸಾರು ಸಾಕ್ಷಾತ್ ನಳಮಹರಾಜನೇ ಧರೆಗಿಳಿದು ಮತ್ತೆ ಅಡುಗೆ ಮನೆಗೆ ಬಂದಂತೆ ( ನಳಮಹರಾಜ ಯಾವಾಗ ಅಡುಗೆ ಮಾಡಿದನೋ ಕಾಣೆ ..ಸತ್ಯನ ತಕರಾರು )

      ಮನೆಯಲ್ಲಿ ಸತ್ಯ ಇದ್ದರೆ ನೂರಾನೆ ಬಲ, ಸತ್ಯನಿಗೆ ಅದೆಷ್ಟು ಮನೆ ಮದ್ದು ಗೊತ್ತು. ದೇವರೆ !  ಅದೆಷ್ಟು ತರಹದ ಕಷಾಯ, ಲೇಹ್ಯ ಮಾಡಿ ನೆಗಡಿ ಶೀತಗಳನ್ನು ಡಾಕ್ಟರ್ ನೆರವಿಲ್ಲದೆ ಓಡಿಸುತಿದ್ದ ಧನ್ವಂತರಿ ಈ ಮಹರಾಯ.
      
ಮನೆಯ ಎಲ್ಲ ಸದಸ್ಯರ ಜನ್ಮ ದಿನಾಂಕ ಈತನ ಸ್ಮೃತಿಪಟಲದಲ್ಲಿ. ಎಲ್ಲರ ಮದುವೆಯ ದಿನವೂ ನೆನಪಲ್ಲಿ. ಎಲ್ಲರ ಬರ್ತಡೆಗೂ ಹೊಸ ಬಟ್ಟೆ, ಗಿಪ್ಟು, ದಂಪತಿಗೆ  ಸೀರೆ, ಬಟ್ಟೆ ಮಕ್ಕಳಿಗೆ ಆಟಿಗೆ, ಜೊತೆಗೆ ತಾನೇ ಅವರ ಮನೆಗೋಗಿ ಈತನದೇ ಕರ್ಚಿನಲ್ಲಿ ಅವರಿಗಿಷ್ಟವಾದ ಅಡುಗೆ ಮಾಡಿ, ತಾನೇ ಬಡಿಸಿ, ತಾನೊಂದು ತುತ್ತು  ತಿಂದರೆ ತಿಂದ ಇಲ್ಲದಿದ್ದರೆ ಇಲ್ಲ. ಅವರು ತಿಂದು ಸಂತೃಪ್ತನಾದರೆ  ಅದೇ ತನ್ನ ಪಾಲಿನ ಪರಮ ಸುಖ.

        ಸತ್ಯ ತನ್ನ ಅಕ್ಕಂದಿರ ಬರ್ತಡೆ, ಮದುವೆ ದಿನ ಮಾತ್ರ ನೆನಪಿಟ್ಟು ಸಂಭ್ರಮಿಸಿದವರಲ್ಲ. ತನ್ನ ಗೆಳೆಯರ, ಸಹೋದ್ಯೋಗಿಗಳ ಬರ್ತಡೆ, ಮದುವೆ ದಿಗಳನ್ನೂ ಮರೆಯದೆ ಆಚರಿಸಿ ಸಂತಸಪಡುವ  ಒಬ್ಬ ಅಣ್ಣ,  ಅಣ್ಣ ತಮ್ಮಂದಿರಿಲ್ಲದ ಹೆಣ್ಣುಮಕ್ಕಳಿಗೆ  ಸತ್ಯನೊಬ್ಬ ದೇವರು ಕೊಟ್ಟ ಅಣ್ಣನೇ ಸರಿ, ಮಕ್ಕಳ ಪ್ರೀತಿ ವಂಚಿತ ತಾಯಂದಿರ ಪಾಲಿಗೆ ಸತ್ಯನೊಬ್ಬ ಹೃದಯವಂತ ಮಗ.  ನಿರ್ಗತಿಕ ಅಜ್ಜ ಅಜ್ಜಿಯರ ಪಾಲಿಗೂ ಅಡಿಗೆ ಮಾಡಿ  ಬಡಿಸುವ, ಉಳಿದ ಅಡುಗೆಯನ್ನು ಜತನವಾಗಿ ಎತ್ತಿಟ್ಟು ಕೊಂಡೊಯ್ದು ಅವರಿಗೆ ತಿನ್ನಿಸಿ ಬರುವ ಪರಮಾತ್ಮನಂತಹ ಪುಣ್ಯಾತ್ಮ.

     ಇನ್ನು ಒಬ್ಬ ಮೇಷ್ಟ್ರಾಗಿ ಸತ್ಯ ಅದೆಷ್ಟು ಬದ್ಧತೆ ಉಳ್ಳ ಮೇಷ್ಟೋ ಅಷ್ಟೇ ಪ್ರೀತಿ ಉಳ್ಳ ತಂದೆಯ ಹಾಗೆ. ಇವರ ಪ್ರೀತಿಗೆ ಪಾತ್ರನಾದರೆ ಸಾಕು. ಆ ವಿದ್ಯಾರ್ಥಿಯನ್ನು ಜೀವನದ  ಒಂದು ಸ್ವಾವಲಂಬಿ ದಡ ತಲುಪುವವರೆಗೆ  ಅವರ  ಊರುಗೋಲಾಗಿ ಕೈ ಹಿಡಿದು ನಡೆಸುವ ಗುರು. ಅದೆಷ್ಟೊ ವಿದ್ಯಾರ್ಥಿಗಳ  ಪರೀಕ್ಷೆ ಫೀಸು ಕಟ್ಟುವ, ಅವರ ಬರ್ತಡೆಗೆ ಕೇಕು ಕತ್ತರಿಸಿ, ಹೊಸ ಬಟ್ಟೆ ಕೊಡುವ, ಒಳ್ಳೆಯ ಪುಸ್ತಕ  ಕೊಂಡು,  ತಾನು ಓದಿ, ಅವರಿಗೂ ಓದಿಸಿ, ಒಂದು ಸಂಸ್ಕಾರದ  ನಡೆ ನುಡಿ ಕಲಿಸುವ ಆದರ್ಶ ಗುರು ನಮ್ಮ ಸತ್ಯ.

ನಾಡಿನ ಅದೆಷ್ಟೋ ಹೊಸ ಬರಹಗಾರರ ಬರಹಗಳನ್ನು ಓದಿ, ತಿದ್ದಿ, ತೀಡಿ  ಅವರ ಸಾಹಿತ್ಯದ ಅಭಿರುಚಿಯನ್ನು ತಿದ್ದುವ  ಈ ಸಾಹಿತ್ಯ  ಪರಿಚಾರಕ, ನನ್ನ ಸ್ನೇಹಿತ, ಅಣ್ಣನಂತಹ ಬಂಧು, ಹಿತೈಷಿ, ಅಂತ ಹೇಳಿಕೊಳ್ಳುವ ಹೆಮ್ಮೆಗಾಗಿ ಈ ಬರಹ.
        
ಸತ್ಯನೊಡನೆ ನಾನು ಹಾಗು ನಮ್ಮ ಮನೆಯವರು ಕಳೆದ, ತಿಂದುಂಡ  ಸವಿರುಚಿಯ ಬಗ್ಗೆ ನಾನಿಂದು ಬರೆದೊಂದೆರಡು  ನೆನಪುಗಳ ಋಣಕ್ಕೆ ಚಿಕ್ಕಮಗೂರಿನಿಂದ, ಇಂದು ಸಂಜೆಯೆ  ನಮ್ಮ ಮನೆಗೋಡಿ ಬಂದು, ನಾವಂದು ಸವಿದ ಬಾಡೂಟದ ಸವಿಯನ್ನು ಉಣಬಡಿಸಿ, ನಗಿಸಿ, ತಾನು ಹೊರಡುವಾಗ ಮತ್ತೆ ಮನೆಮಗನ ಅಗಲಿಕೆಗೆ ಒಸರುವಂತೆ ನಮ್ಮ ಕಣ್ಣಂಚುಗಳನ್ನು  ತೇವ ಮಾಡಿ, ತನ್ನ ಗೂಡಿನೆಡೆಗೆ ಓಡಿದ ಈ ಮಾನವಪ್ರೇಮಿ, ಮಮತಾಮಯಿ ಸ್ನೇಹ ಜೀವಿ ಹೀಗೆ ಪ್ರೀತಿ ವಂಚಿತರ ಪಾಲಿನ ಮಾನವಪ್ರೇಮದ ನಿಧಿಯಾಗಿ ನೂರ್ಕಾಲ ಸುಖವಾಗಿರಲಿ ಎಂದಷ್ಟೇ ಹಾರೈಸುವೆ ನಾನೂ ಕೂಡಾ…
                                
ಪ್ರೊ.ಟಿ.ಯಲ್ಲಪ್ಪ, ಕವಿಗಳು

Leave a Reply