ಶ್!!! ಇದು ಮಕ್ಕಳ ವಿಷ್ಯಾ!!!
ಬಿಜೆಪಿ ಒಳಜಗಳ ತಾರಕಕ್ಕೇರಿದ ಹೊತ್ತಲ್ಲೇ, ಮೊನ್ನೆ ರೇಣುಕಾಚಾರ್ಯ ಒಂದು ಹೊಸಬಾಂಬ್ ಸಿಡಿಸಿದ್ರು. ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿ ಹಿರಿಯ ನಾಯಕರ ಮಟ್ಟದಲ್ಲೇ ದೊಡ್ಡ ಷಡ್ಯಂತ್ರ ನಡೆದಿದ್ದು, ಯಡಿಯೂರಪ್ಪನವರಿಂದಾಗಿ ಅಧಿಕಾರ ಪಡೆದವರೇ ಇವತ್ತು ವಿಜಯೇಂದ್ರ ವಿರುದ್ಧ ಮಸಲತ್ತು ಮಾಡುತ್ತಿದ್ದಾರೆ ಎಂಬುದು ರೇಣುಕಾಚಾರ್ಯ ಮಾತಿನ ಸಾರಾಂಶ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಬಿ ಎಲ್ ಸಂತೋಷ್, ಪ್ರಹ್ಲಾದ್ ಜೋಷಿ, ಯತ್ನಾಳ್, ಸಿ ಟಿ ರವಿ ತರಹದ ಘಟಾನುಘಟಿ ನಾಯಕರೇ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಮಸಲತ್ತು ನಡೆಸಿರೋದು ರಹಸ್ಯವಾಗೇನೂ ಉಳಿದಿಲ್ಲ. ಆದರೆ ಇವರ್‍ಯಾರೂ ಯಡಿಯೂರಪ್ಪನವರಿಂದಾಗಿ ಅಧಿಕಾರ ಪಡೆದವರಲ್ಲ. ಯಡಿಯೂರಪ್ಪನವರಿಗೆ ಕಾಲಕಾಲಕ್ಕೆ ತೊಡರುಗಾಲು ಹಾಕಿಕೊಂಡು ಬಂದವರು. ಹಾಗಾದ್ರೆ, ಯಡಿಯೂರಪ್ಪನವರಿಂದ ಅಧಿಕಾರ ಪಡೆದು, ಈಗ ವಿಜಯೇಂದ್ರರ ಬೆನ್ನಿಗೆ ಚೂರಿ ಹಾಕ್ತಾ ಇರೋರು ಯಾರು? ಈ ಪ್ರಶ್ನೆಗೆ ಬಿಜೆಪಿ ಮೂಲಗಳು ಬಸವರಾಜ ಬೊಮ್ಮಾಯಿಯವರನ್ನು ಉತ್ತರವಾಗಿ ತೋರಿಸುತ್ತಿವೆ!
ಅದಕ್ಕೆ ತಕ್ಕಂತೆ, ಬೊಮ್ಮಾಯಿ ಇತ್ತೀಚೆಗೆ ಪ್ರತ್ಯೇಕವಾಗಿ ಸಭೆ ನಡೆಸುತ್ತಾ, ಗುಂಪುಗಾರಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗ್ತಾ ಇದೆ, ಎರಡೂ ಬಣಗಳನ್ನು ನಿಯಂತ್ರಿಸಿ ಎಂಬ ತಟಸ್ಥ ಮಾತುಗಳನ್ನು ಹೇಳುತ್ತಲೇ, ಯತ್ನಾಳ್ ಬಣಕ್ಕೆ ಹತ್ತಿರವಾಗಲಾರಂಭಿಸಿದ್ದಾರೆ. ಬೊಮ್ಮಾಯಿಯವರ ಈ ನಡೆಗೆ ಒಂದು ರೋಚಕ ಕಾರಣವಿದೆ…
ಹಾಗೆ ನೋಡಿದ್ರೆ, ಯಾವ ಆಯಾಮದಿಂದಲೂ ಬಸವರಾಜ ಬೊಮ್ಮಾಯಿಯವರಿಗೆ ಸಿಎಂ ಆಗುವ ಅವಕಾಶವೇ ಇರಲಿಲ್ಲ. ಆರೆಸ್ಸೆಸ್ ಹಿನ್ನೆಲೆಯೂ ಇಲ್ಲದ, ಮೂಲ ಬಿಜೆಪಿಗನೂ ಅಲ್ಲದ ಬೊಮ್ಮಾಯಿ ಬಿಜೆಪಿಯಂತಹ ಕರ್ಮಠ ಪಕ್ಷದಲ್ಲಿ ಆಯಕಟ್ಟಿನ ಮಂತ್ರಿಗಿರಿ, ಗೃಹಮಂತ್ರಿ, ಕೊನೆಗೆ ಮುಖ್ಯಮಂತ್ರಿ ಹುದ್ದೆಯನ್ನು ಗಿಟ್ಟಿಸಿಕೊಂಡದ್ದು ಯಡಿಯೂರಪ್ಪನವರ ಕೃಪಾಕಟಾಕ್ಷದಿಂದ. ಅದರಲ್ಲಿ ಅನುಮಾನವೇ ಇಲ್ಲ.
ಇನ್‌ಫ್ಯಾಕ್ಟ್ ಕರ್ನಾಟಕದ ಬಿಜೆಪಿಯಲ್ಲಿ ಯಾರೆಲ್ಲಾ ಟಾಪ್ ಪೊಸೀಷನ್‌ಗಳನ್ನು ಪಡೆದಿದ್ದಾರೋ ಅವರೆಲ್ಲ ಹೆಚ್ಚೂಕಡಿಮೆ ಯಡಿಯೂರಪ್ಪನವರ ಮರ್ಜಿಯಿಂದಲೇ ಆ ಹುದ್ದೆಗಳಿಗೆ ಏರಿದವರು. ಸದಾನಂದಗೌಡ, ಶೆಟ್ಟರ್, ಬೊಮ್ಮಾಯಿ ಸಿಎಂ ಆಗಿದ್ದು ಯಡಿಯೂರಪ್ಪನವರ ಕೃಪೆಯಿಂದ. ಆದರೆ ಹೀಗೆ ಹುದ್ದೆಗೇರಿದವರು ತದನಂತರ ಯಡಿಯೂರಪ್ಪನವರ ಬೆನ್ನಿಗೆ ಚೂರಿ ಹಾಕುತ್ತಾ ಬಂದದ್ದು ಕೂಡಾ ಕರ್ನಾಟಕದ ಮಟ್ಟಿಗೆ ಕಾಮನ್ ಪೊಲಿಟಿಕಲ್ ಫೆನಾಮೆನನ್ ರೀತಿ ಆಗಿದೆ.
2011ರಲ್ಲಿ ತಮ್ಮದೇ ಪಕ್ಷದವರ ಚಿತಾವಣೆಯಿಂದ ಗಣಿ ಹಗರಣದಲ್ಲಿ ಸಿಲುಕಿ, ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿವ ಅನಿವಾರ್ಯತೆ ಯಡಿಯೂರಪ್ಪನವರಿಗೆ ನಿರ್ಮಾಣವಾದಾಗ ಜಗದೀಶ್ ಶೆಟ್ಟರ್ ಸಿಎಂ ಆಗಲು ಸಾಕಷ್ಟು ಹೆಣಗಾಡಿದರು. ಆದರೆ, ಯಡಿಯೂರಪ್ಪ ಹೈಕಮಾಂಡ್‌ಗೆ ಬೆದರಿಕೆ ಹಾಕಿ, ಆ ಕುರ್ಚಿಯಲ್ಲಿ ಕೂರಿಸಿದ್ದು ಸದಾನಂದ ಗೌಡರನ್ನು. ರಾಜ್ಯಾಧ್ಯಕ್ಷರಾಗಿ ತನ್ನ ಮೂಗಿನ ನೇರಕ್ಕೇ ನಡೆಯುತ್ತಾ ಬಂದಿದ್ದ ಗೌಡರು, ಸಿಎಂ ಆದಮೇಲೂ ತನ್ನ ಮುಷ್ಠಿಯಲ್ಲೇ ಇರುತ್ತಾರೆನ್ನುವುದು ಯಡಿಯೂರಪ್ಪನವರ ಲೆಕ್ಕಾಚಾರವಾಗಿತ್ತು. ಆದರೆ ಕೆಲವೇ ತಿಂಗಳಿಗೆ ಸದಾನಂದ ಗೌಡರು ತಿರುಗಿಬಿದ್ದರು. ಒಂದು ವರ್ಷ ಪೂರೈಸುವುದರೊಳಗೆ, ಗೌಡರನ್ನು ಕೆಳಗಿಳಿಸಿದ ಯಡಿಯೂರಪ್ಪನವರು ಈ ಹಿಂದೆ ತಾವೇ ವಿರೋಧಿಸಿದ್ದ ಶೆಟ್ಟರ್‍ಗೆ ಆ ಪಟ್ಟ ಕಟ್ಟಿದರು. ಆದರೆ ಶೆಟ್ಟರ್ ಕೂಡಾ ಯಡಿಯೂರಪ್ಪನವರಿಗೆ ತಿರುಗಿಬಿದ್ದು, ಅವರು ಪಕ್ಷವನ್ನೇ ತೊರೆಯುವಂತೆ ಮಾಡಿದರು.
2021ರಲ್ಲಿ ಬಿಜೆಪಿಯು ಯಡಿಯೂರಪ್ಪನವರ ಜೊತೆ ಹಳೆಯ ರೀತಿಯಲ್ಲೇ ವರ್ತಿಸಿ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಿತು. ಈ ಸಲ ಅದು ಕೊಟ್ಟ ಕಾರಣ, ಅವರಿಗೆ ವಯಸ್ಸಾಗಿಹೋಯ್ತು ಅನ್ನೋದು. ಆದರೆ ಹಾಗೆ ಹುದ್ದೆ ತೊರೆಯುವಾಗ, ತಾನು ಹೇಳಿದವರನ್ನೇ ಸಿಎಂ ಮಾಡಬೇಕೆಂಬ ಷರತ್ತು ಹಾಕಿದ್ದ ಯಡಿಯೂರಪ್ಪ, ಈ ಬಾರಿ ಆಯ್ಕೆ ಮಾಡಿದ್ದು ಬಸವರಾಜ ಬೊಮ್ಮಾಯಿಯವರನ್ನು. ಅದಕ್ಕೆ ಎರಡು ಕಾರಣಗಳಿದ್ದವು. ಮೊದಲನೆಯದು, ಬೊಮ್ಮಾಯಿ ಲಿಂಗಾಯತ ವ್ಯಕ್ತಿ ಅನ್ನೋದು. ತನ್ನ ಹಾಗೂ ತಮ್ಮ ಮಕ್ಕಳ ಏಳಿಗೆಗಾಗಿ ಯಡಿಯೂರಪ್ಪ ಬೇರೆ ಲಿಂಗಾಯತ ಲೀಡರುಗಳನ್ನು ಬೆಳೆಯಲು ಬಿಡುತ್ತಿಲ್ಲ ಎಂಬ ಆರೋಪವನ್ನು ಯತ್ನಾಳ್ ತರಹದ ನಾಯಕರು ಮಾಡಿಕೊಂಡು ಬಂದಿದ್ದರು. 2011ರಲ್ಲಿ ಲಿಂಗಾಯತ ಸಮುದಾಯದ ಶೆಟ್ಟರ್‍ಗೆ ಅಡ್ಡಗಾಲು ಹಾಕಿ ಒಕ್ಕಲಿಗ ಸಮುದಾಯದ ಸದಾನಂದ ಗೌಡರಿಗೆ ಸಿಎಂ ಪಟ್ಟ ಕಟ್ಟಿದ್ದ ಯಡಿಯೂರಪ್ಪನವರ ನಡೆ ಇಂಥಾ ಆರೋಪಕ್ಕೆ ಪುಷ್ಠಿ ನೀಡುವಂತಿತ್ತು. ಈ ಸಲವೂ ಅದೇ ತಪ್ಪು ಮಾಡಲು ಸಿದ್ಧರಿಲ್ಲದ ಯಡಿಯೂರಪ್ಪ ಆ ಆರೋಪವನ್ನು ಸುಳ್ಳು ಮಾಡುವುದರ ಸಲುವಾಗಿ ಲಿಂಗಾಯತ ಬ್ಯ್ರಾಂಡಿನ ಬೊಮ್ಮಾಯಿಯವರನ್ನು ಆಯ್ಕೆ ಮಾಡಿಕೊಂಡರು. ಇನ್ನು ಎರಡನೇ ಕಾರಣ, ಬಸವರಾಜ ಬೊಮ್ಮಾಯಿಯವರ ಮೆತ್ತನೆಯ ಗುಣ. ಬೇರೆಯವರಂತೆ ಬೊಮ್ಮಾಯಿಗೆ ತನ್ನನ್ನು ಎದುರುಹಾಕಿಕೊಳ್ಳುವ ಸಾಮರ್ಥ್ಯವಿಲ್ಲ ಅನ್ನೋದು ಯಡಿಯೂರಪ್ಪನವರ ಎಣಿಕೆಯಾಗಿತ್ತು.
ಆದರೆ ಈ ಹಿಂದೆ ಸದಾನಂದ ಗೌಡ, ಶೆಟ್ಟರ್ ಮಾಡಿದಂತೆಯೇ ಬೊಮ್ಮಾಯಿ ನಿಧಾನಕ್ಕೆ ಯಡಿಯೂರಪ್ಪನವರ ವಿರುದ್ಧ ತಿರುಗಿಬೀಳಲಾರಂಭಿಸಿದ್ದರು. ಆದರೂ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸುವ ಪ್ರಯತ್ನಕ್ಕೆ ಯಡಿಯೂರಪ್ಪ ಮುಂದಾಗಲಿಲ್ಲ. ಯಾಕೆಂದರೆ, ಬೊಮ್ಮಾಯಿಗಿಂತ ಬೇರೆ ಬೆಟರ್ ಆಪ್ಷನ್ ಅವರ ಬಳಿ ಇರಲಿಲ್ಲ. ಅದೂ ಅಲ್ಲದೇ, ಕಳೆದ ಸಲ ಎರಡೇ ವರ್ಷದ ಅವಧಿಯಲ್ಲಿ ಇಬ್ಬಿಬ್ಬರು ಸಿಎಂ ಬದಲಾಯಿಸಿ, ಪಕ್ಷಕ್ಕೆ ಆಗಿದ್ದ ಡ್ಯಾಮೇಜ್‌ನ ನೆಪ ಹೇಳಿ ಹೈಕಮಾಂಡ್ ಕೂಡಾ ಯಡಿಯೂರಪ್ಪನವರ ಆಶಯಕ್ಕೆ ತಣ್ಣೀರು ಎರಚುತ್ತಲೇ ಬಂತು. ಇದೆಲ್ಲದರ ಪರಿಣಾಮ, 2023ರ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರು ಸಕ್ರಿಯವಾಗಿ ಭಾಗವಹಿಸದೆ ಪಕ್ಷದಿಂದ ಅಂತರ ಕಾಯ್ದುಕೊಂಡರು. ಧಮ್ಮು-ತಾಕತ್ತು ಖ್ಯಾತಿಯ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋದ ಬಿಜೆಪಿ ಮಕಾಡೆ ಮಲಗಿತು. ಅಷ್ಟಾದರೂ ಬೊಮ್ಮಾಯಿ ಮತ್ತು ಯಡಿಯೂರಪ್ಪ ನಡುವಿನ ವೈಮನಸ್ಸು ಬಹಿರಂಗಗೊಳ್ಳದೆ, ಬೂದಿಮುಚ್ಚಿದ ಕೆಂಡದಂತಿತ್ತು.
ಅದೆಲ್ಲವೂ ಸ್ಪೋಟಿಸಿದ್ದು ಮೊನ್ನೆ ನಡೆದ ಉಪಚುನಾವಣೆಗಳ ಸಮಯದಲ್ಲಿ. ತಾವು ಎಂಪಿಯಾಗಿ ಆಯ್ಕೆಯಾದ ನಂತರ ತೆರವಾಗಿದ್ದ ಶಿಗ್ಗಾಂವಿಯಿಂದ ತಮ್ಮ ಮಗ ಭರತ್‌ನನ್ನು ಬೊಮ್ಮಾಯಿ ಕಣಕ್ಕಳಿಸಿದ್ದರು. ಆದರೆ ಇದು ಯಡಿಯೂರಪ್ಪನವರಿಗೆ ಸುತಾರಾಂ ಇಷ್ಟವಿರಲಿಲ್ಲ. ಕಾರಣವಿಷ್ಟೇ, ಬೊಮ್ಮಾಯಿಯ ಮಗ ಅಕಸ್ಮಾತ್ ಗೆದ್ದು ರಾಜಕಾರಣದಲ್ಲಿ ಛಾಪು ಮೂಡಿಸಿದರೆ, ಮುಂದೆ ತನ್ನ ಮಕ್ಕಳಿಗೆ ಲಿಂಗಾಯತ ಲೀಡರಿಕೆಯ ವಾರಸುದಾರಿಕೆಗೆ ಕಂಟಕವಾಗಿ ಬೆಳೆಯಬಹುದೆನ್ನುವುದು ಅವರ ಆತಂಕ. ಹಾಗಾಗಿ, ಆತನಿಗೆ ಟಿಕೆಟ್ ತಪ್ಪಿಸಲು ಯತ್ನಿಸಿದರು. ಅದೇಗೋ, ಬೊಮ್ಮಾಯಿ ಟಿಕೆಟ್ ಗಿಟ್ಟಿಸಿಕೊಂಡರು. ಇದೇ ಕಾರಣಕ್ಕೆ ಯಡಿಯೂರಪ್ಪನವರ ಬಣ ಶಿಗ್ಗಾಂವಿಯ ಚುನಾವಣಾ ಅಖಾಡದಿಂದ ಅಂತರ ಕಾಯ್ದುಕೊಂಡಿತು. ನೆಪಕ್ಕೆಂಬಂತೆ ಪ್ರಚಾರ ಮಾಡಿದ್ದು ಬಿಟ್ಟರೆ, ಪೂರ್ಣ ಮನಸ್ಸಿನಿಂದ ಕೆಲಸ ಮಾಡಲಿಲ್ಲ. ಹಾಗಾಗಿ ಭರತ್ ಬೊಮ್ಮಾಯಿ ಸೋಲಬೇಕಾಯ್ತು.
ಯಾವಾಗ ಮಗ ಸೋತನೋ, ಆಗ ಬೊಮ್ಮಾಯಿಯವರ ಹಳೆಯ ಮುನಿಸುಗಳೆಲ್ಲ ಮುನ್ನೆಲೆಗೆ ಬಂದು, ವಿಜಯೇಂದ್ರನ ವಿರುದ್ಧ ಮಸಲತ್ತು ಮಾಡಲು ಮುಂದಾಗಿದ್ದಾರೆ ಅನ್ನೋದು ಲೇಟೆಸ್ಟ್ ವರ್ತಮಾನ. ಇತ್ತೀಚೆಗೆ ಬಣ ಜಗಳಕ್ಕೆ ಬ್ರೇಕ್ ಹಾಕುವ ಸಲುವಾಗಿ ಹೈಕಮಾಂಡ್ ವರಿಷ್ಠ ರಾಧಾಮೋಹನ್ ಅಗರ್‍ವಾಲ್ ನೇತೃತ್ವದಲ್ಲಿ ನಡೆದ ಸಂಘಟನಾ ಸಭೆಗೂ ಬೊಮ್ಮಾಯಿ ಗೈರು ಹಾಜರಾದದ್ದು ಇದಕ್ಕೆ ಪುಷ್ಠಿ ನೀಡುತ್ತೆ. ಕೇವಲ ಯತ್ನಾಳ್, ರಮೇಶ್ ಜಾರಕಿಹೊಳಿ ತರಹದ ಎರಡನೇ ಶ್ರೇಣಿಯ ನಾಯಕರಲ್ಲದೆ ಬಿ ಎಲ್ ಸಂತೋಷ್, ಪ್ರಹ್ಲಾದ್ ಜೋಷಿ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಆರ್ ಅಶೋಕ್, ವಿ ಸೋಮಣ್ಣ ತರಹದ ಹಿರಿಯ ನಾಯಕರು ಕೂಡಾ ವಿಜಯೇಂದ್ರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರೋದರಿಂದಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಇತಿಹಾಸದಲ್ಲೆ ಇದೇ ಮೊದಲ ಬಾರಿಗೆ ಚುನಾವಣೆ ನಡೆಸುವ ಸಾಹಸಕ್ಕೆ ಹೈಕಮಾಂಡ್ ಮುಂದಾಗಿದೆ ಎನ್ನುತ್ತಿವೆ ಬಿಜೆಪಿ ಮೂಲಗಳು.
ಅದೇನೆ ಇರಲಿ, ಸದಾನಂದ ಗೌಡ-ಶೆಟ್ಟರ್ ರೀತಿಯಲ್ಲೆ ಬಸವರಾಜ ಬೊಮ್ಮಾಯಿ ಕೂಡಾ ಯಡಿಯೂರಪ್ಪನವರ ಬೆನ್ನಿಗೆ ಚೂರಿ ಹಾಕಿರೋದು ಯಡಿಯೂರಪ್ಪನವರ ಸರಣಿ ವಿಪರ್ಯಾಸವೋ, ಅಥವಾ ಬಿಜೆಪಿಯೊಳಗಿನ ಸಂಪ್ರದಾಯವೋ ಗೊತ್ತಿಲ್ಲ. ಒಟ್ಟಿನಲ್ಲಿ ಯತ್ನಾಳ್ ಬಣಕ್ಕೆ ಬೆಂಗಾವಲಾಗಿ ನಿಂತಿರುವ ಬೊಮ್ಮಾಯಿ ಬಿರುದ್ಧ ವಿಜಯೇಂದ್ರ ಬಣ ಕಿಡಿಕಾರುತ್ತಿರುವುದು ಮಾತ್ರ ಸತ್ಯ.
– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು




