ಯಾರು ಹಿಂದೂ ಧರ್ಮದ ರಕ್ಷಕರು? ಪುಟಗಳ ತಿರುವಿ ನೋಡಿ

2 years ago

ಬೆವರು ಸುರಿಸಿ ದುಡಿವ ಜನರ, ಚಪ್ಪಲಿ ಹೊಲಿಯುವ ಜನರ, ಕಟ್ಟಡ ಕಟ್ಟುವ ಜನರ, ಹೊಲಗದ್ದೆಗಳಲ್ಲಿ ದುಡಿಯುವ ಜನರ, ಹೊಲಸು ಎತ್ತಿ ಸ್ವಚ್ಛ ಮಾಡುವ ಜನರ, ಯಾವ ಧರ್ಮ ರಕ್ಷಕರು ತಮ್ಮ ಆಲಯದಲ್ಲಿ ಕರೆದು ಹನಿ ನೀರು ಕೊಡಲಿಲ್ಲ, ಹಸಿದ ಹೊಟ್ಟೆಗೆ ಅನ್ನವ ನೀಡಲಿಲ್ಲ.

ಯಾರು ಬೆವರು ಸುರಿಸಿ  ದುಡಿಯುವ ಬಡತನದ ಬದುಕಿನ ಬಂಧುಗಳಿಗೆ ಆಲಯಗಳ ಬಾಗಿಲುಗಳು ತೆಗೆದು ದೇವರ ದರುಶನಕ್ಕೆ ಬನ್ನಿ ಎಂದು ಕರೆಯಲಿಲ್ಲ.

ಬೆವರು ಸುರಿಸಿ ದುಡಿವ ಬಡಜನರ ಯಾರೂ ಬಂದು ನಮ್ಮೊಂದಿಗೆ ಬದುಕಿ ಎಂದು ಹೇಳಲಿಲ್ಲ ನೀವು ನಮ್ಮವರೆ ಎಂದು ಅನ್ನಲೇ ಇಲ್ಲ.

ಸಂವಿಧಾನವೆಂಬ ರಕ್ಷಾ ಕವಚ ಸಿಕ್ಕ ನಂತರದಿ ಸ್ವಾಭಿಮಾನದ, ಗೌರವದ ಬದುಕಿಗೆ ಕಾನೂನಿನ ರಕ್ಷಣೆಯ ದೊರೆತ ನಂತರವಷ್ಟೇ ದೇವಾಲಯದ ಬಾಗಿಲು ತೆರೆದದ್ದು

ಬುದ್ಧ ಬರುವ ತನಕ ಯಾರೂ ಹೇಳಲಿಲ್ಲ ಎಲ್ಲರೂ ಮಾನವ ರೆಂದು ಎಲ್ಲರೂ ಸಮಾನರೆಂದು, ಬಸವಣ್ಣ ಬರುವತನಕ ಯಾರು ನುಡಿಯಲೇ ಇಲ್ಲ.

ದುಡಿಯುವವರೆಲ್ಲರೂ ಒಂದೇ ಎಂದು ಇಲ್ಲಿರುವವರು ನಾವೆಲ್ಲರೂ ಸಮಾನರೆಂದು ಹೆಣ್ಣು ಮಕ್ಕಳಿಗೂ ಗೌರವದ ಬದುಕು ಕೊಡಬೇಕೆಂದು ವಿವೇಕಾನಂದರು ಬರುವ ತನಕ ಯಾರು ಹೇಳಲೇ ಇಲ್ಲ, ಇಲ್ಲಿ ಚಪ್ಪಲಿ ಹೊಲಿಯುವವನು ಮತ್ತು ರಾಜ್ಯವನ್ನು ಆಳುವವನು ಎಲ್ಲರೂ ಸಮಾನರೆಂದು

ರಾಜಾರಾಮ ಮೋಹನ ರಾಯರು ಬರುವತನಕ ಯಾರೋ ತಡೆಯಲೇ ಇಲ್ಲ ಪತಿಯ ಶವದ ಚಟ್ಟದ ಮೇಲೆ ಜೀವಂತವಾಗಿ ಸುಟ್ಟು ಭಸ್ಮ ಮಾಡುತ್ತಿದ್ದ ಸತಿ ಸಹಗಮನ ಪದ್ಧತಿಯ,

ಅಲ್ಲೊಬ್ಬರು, ಇನ್ನೊಬ್ಬರು, ಕುದ್ಮುಲ್ ರಂಗರಾಯರು, ಗೋಪಾಲಸ್ವಾಮಿ ಅಯ್ಯರ್ ಬರುವ ತನಕ, ಗಾಂಧಿ, ಅಂಬೇಡ್ಕರ್ ಬರುವ ತನಕ, ನಾರಾಯಣ ಗುರುಗಳು ಹೇಳುವ ತನಕ, ನದಿಯ ನೀರು ಬಳಸಿಕೊಂಡು, ಕೆರೆಯ ನೀರು ನಿಮ್ಮದೆಂದು, ಬಾವಿ ನೀರು ಕುಡಿದು ದಣಿವು ಆರಿಸಿಕೊಳ್ಳಿ ಎಂದು, ಶಾಲೆಗೆ ಬಂದು ವಿದ್ಯ ಕಲಿಯಿರೆಂದು, ಗುಡಿಗೆ ಬಂದು ದೇವರ ದರುಶನವ ಮಾಡಿರೆಂದು, ಯಾರೂ ಹೇಳಲಿಲ್ಲ, ಗಂಡನನ್ನು ಕಳೆದುಕೊಂಡ ಹೆಣ್ಣಿಗೂ ಧಾರ್ಮಿಕ ಆಚರಣೆಯಲ್ಲಿ ಹಕ್ಕಿದೆಯೆಂದು

ನಾಲ್ವಡಿ ಕೃಷ್ಣರಾಜ ಒಡೆಯರ್ ರವರು, ಶಾಹು ಮಹಾರಾಜರು ಮಾನವೀಯ ನೆಲೆಯಲ್ಲಿ ಶೋಷಿತರಿಗೆ ಸೌಲತ್ತುಗಳನ್ನು , ಸೌಲಭ್ಯಗಳನ್ನು, ಅವಕಾಶಗಳನ್ನು ಕಲ್ಪಿಸಿ ಕೊಡುವ ತನಕ ಯಾರು ಇವರತ್ತ ತಿರುಗಿ ನೋಡಿರಲಿಲ್ಲ

ಪಡಬಾರದ ಪಾಡು ಪಟ್ಟು ಸಾವಿತ್ರಿ ಫುಲೆ ಹೆಣ್ಣುಮಕ್ಕಳಿಗೆ ಶಿಕ್ಷಣದ ದೇಗುಲಕ್ಕೆ ಬರಮಾಡಿಕೊಳ್ಳುವ ತನಕ, ಜ್ಯೋತಿ ಫುಲೆರವರು ದನಿಯೆತ್ತಿ ಎಚ್ಚೆಸಿರುವ ತನಕ ಯಾರೂ ಮಾತನಾಡಲಿಲ್ಲ

ಅಸ್ಪೃಶ್ಯತೆಯ ಜಾಡ್ಯವನ್ನು ಮನದಲ್ಲಿ ತುಂಬಿಕೊಂಡಿರುವವರು, ಮೇಲೆಂಬ ಪ್ರತಿಷ್ಠೆಯ ಅಹಂಕಾರದಿಂದ ಮೆರೆಯುವವರು, ಮೇಲು ಕೀಳೆಂದು ಊಟದಲಿ ನೋಟದಲಿ ಪ್ರತಿ ಕ್ಷಣದಲ್ಲು ಬೇದ ಭಾವ ಎಣಿಸುವರು ಅದೆಷ್ಟೋ ಮಂದಿ ಈಗಲೂ ಹೇಳುತ್ತಲೇ ಇದ್ದಾರೆ ನಾವು ಹಿಂದೂ ಧರ್ಮದ ರಕ್ಷಕರೆಂದು

  • ಕೆ ಎಸ್ ನಾಗರಾಜ್, ಬೆಂಗಳೂರು

Leave a Reply