ಉಚಿತ ಕೊಡುಗೆಗಳ ಬಗ್ಗೆ ಇಷ್ಟೊಂದು ತಿರಸ್ಕಾರ ಬೇಡ

3 years ago

ಕಳೆದ ಕೆಲವು ದಿನಗಳಿಂದ ಬಡವರ ಬದುಕಿನಲ್ಲಿ ಒಂದಷ್ಟು ನೆರವಾಗಲೆಂದು ಸರ್ಕಾರಗಳು ಆದರಲ್ಲಿಯೂ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಕೆಲವು ಗ್ಯಾರಂಟಿಗಳನ್ನು ನೀಡಿದ ಹಿನ್ನೆಲೆಯಲ್ಲಿ ಅನೇಕ ಮಂದಿ ಉಚಿತವಾದ ಕೊಡುಗೆಗಳನ್ನು ಪಡೆಯುವವರ ಬಗ್ಗೆ ತೀರ ಕೆಳಮಟ್ಟದಲ್ಲಿ ಮಾತುಗಳನ್ನಾಡಿ ಅವರ ಸ್ವಾಭಿಮಾನವನ್ನು ಪ್ರಶ್ನಿಸುವ ಮಟ್ಟಕ್ಕೂ ಹೋಗಿದ್ದಾರೆ.

ತೆರಿಗೆ ಕಟ್ಟುವವರು ಮಾತ್ರವೇ ದೇವಲೋಕದಿಂದ ಇಳಿದು ಬಂದವರು ದೇಶ ನಡೆಯುತ್ತಿರುವುದು ತೆರಿಗೆ ಕಟ್ಟುವವರಿಂದ ಮಾತ್ರವೇ ಎಂಬ ಅಹಂಕಾರದ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿದೆ.

ರಸ್ತೆಯ ಮೇಲೆ ಪ್ರತಿದಿನವು ಕಸವನ್ನು ಗುಡಿಸುವ ಪೌರಕಾರ್ಮಿಕರು, ‘ಚಪ್ಪಲಿ ಹೊಲೆಯುವ ಚಮ್ಮಾರ, ಮಾರುಕಟ್ಟೆಯಲ್ಲಿ ಮೂಟೆಗಳನ್ನು ಹೊತ್ತು ಬೆವರು ಸುರಿಸಿ ಬದುಕುವ ಶ್ರಮಿಕ, ರಿಕ್ಷಾ ಚಾಲಕ, ದಿನಗೂಲಿ ನೌಕರ ಇವರೆಲ್ಲರೂ ಸಹ ಪರೋಕ್ಷವಾಗಿ ತೆರಿಗೆಯನ್ನು ಕಟ್ಟುತ್ತಲೇ ಇದ್ದಾರೆ. ಇವರು ಖರೀದಿಸುವ ಎಲ್ಲಾ ಪದಾರ್ಥಗಳ ಮೇಲೆ ಜಿ.ಎಸ್‌.ಟಿ. ತೆರಿಗೆ ವಿಧಿಸಿರುವುದು ನೆನಪಿಲ್ಲವೇ.

ಸಾಮಾನ್ಯ ನಾಗರಿಕರು ಕಾಫಿ ಕುಡಿದರು, ಎರಡು ಇಡ್ಲಿ ತಿಂದರು, ಅಂಗಡಿಯಲ್ಲಿ ಚಾಕೊಲೇಟ್, ಪೆಪ್ಪರ್ ಮೆಂಟ್, ಬಿಸ್ಕತ್ ಖರೀದಿಸಿದರು. ಅವರು ಸಹ ತೆರಿಗೆಯನ್ನು ಪಾವತಿಸಿರುತ್ತಾರೆ. ಕೇವಲ ಆದಾಯ ತೆರಿಗೆ ಪಾವತಿಸುವವರು ಮಾತ್ರವೇ ದೊಡ್ಡವರು’ ಎಂಬ ಭ್ರಮ ಬೇಡ.

ಆದಾಯ ತೆರಿಗೆ ಕಟ್ಟುವ ಮಟ್ಟಕ್ಕೆ ಲಕ್ಷಾಂತರ ಮಂದಿಯ ಮಾಲೀಕರುಗಳನ್ನು ಬೆಳೆಸುವುದು ಬೆವರು ಸುರಿಸಿ ದುಡಿವ ಕೋಟಿ ಕೋಟಿ ಕಾರ್ಮಿಕ ಎಂಬುದು ನೆನಪಿರಲಿ, ಅವರ ಬೆವರು ನಿಮ್ಮ ಆರ್ಥಿಕ ಪ್ರಗತಿಗೆ ಪರೋಕ್ಷವಾಗಿ ಕಾರಣವಾಗಿದೆ.

ಸರ್ಕಾರಿ ನೌಕರರಿಗೆ, ಅರೆಸರ್ಕಾರಿ ನೌಕರರಿಗೆ, ಸಾರ್ವಜನಿಕ ಉದ್ಯಮಗಳಲ್ಲಿ ಕೆಲಸ ಮಾಡುವವರಿಗೆ, ಬ್ಯಾಂಕಿನಲ್ಲಿ ದುಡಿಯುವವರಿಗೆ ಮೇಲಿಂದ ಮೇಲೆ ಸಂಬಳ ಮತ್ತಿತ್ತರೆ ಸೌಲಭ್ಯಗಳು ಕನಿಷ್ಠ ಐದು ವರ್ಷಕ್ಕೊಮ್ಮೆಯಾದರೂ ಹೆಚ್ಚಾಗುತ್ತದೆ.

ಮಾರುಕಟ್ಟೆಯಲ್ಲಿ ಕೂಲಿ ಮಾಡುವವರಿಗೆ, ರಸ್ತೆ ಬದಿಯಲ್ಲಿ ಚಪ್ಪಲಿ ಹೊಲಿಯುವವರಿಗೆ, ರಸ್ತೆಯ ಮೇಲೆ ಸಣ್ಣಪುಟ್ಟ ವ್ಯಾಪಾರ ಮಾಡುವವರಿಗೆ ಕಸಗುಡಿಸುವವರಿಗೆ, ಅಸಂಘಟಿತ ಕಾರ್ಮಿಕರಿಗೆ, ಚಾಲಕರಿಗೆ ಯಾರು ದಿನಗೂಲಿಯನ್ನು ಹೆಚ್ಚಿಸುತ್ತೀರಿ. ವೈಜ್ಞಾನಿಕವಾಗಿ ಅವರ ಕೂಲಿಯನ್ನು ನಿರ್ಧರಿಸುವಂತಹ ಚಿಂತನೆ ನಡೆಸಿದ್ದೀರಾ, ಬೆವರಿಗೆ ಬೆಲೆಯನ್ನು ಕಟ್ಟಲಾಗದು, ಬೆವರು ಸುರಿಸಿ ದುಡಿವ ಜನರಿಗೆ ನಮ್ಮ ಅನ್ನದಾತರಿಗೂ ಸೇರಿಸಿಕೊಂಡು ಒಂದಷ್ಟು ಸೌಲಭ್ಯ, ಸೌಕರ್ಯಗಳು ಕೊಡಬೇಕಾದದ್ದು ಸರ್ಕಾರಗಳ ಕೆಲಸ.

ಸರ್ಕಾರವೆಂದರೆ ಕೇವಲ ಒಂದು ವರ್ಗದ ಜನರ ಬದುಕನ್ನು ಚಿಂತಿಸುವುದಲ್ಲ. ಹಸಿದವರ ಬಗ್ಗೆ, ನೊಂದವರ ಬಗ್ಗೆ, ಅಸಹಾಯಕರ ಬಗ್ಗೆ ತಾಯಿಯ ಹೃದಯದಿಂದ ಆಲೋಚಿಸಲೇ ಬೇಕು. ಇವರಿಗಾಗಿ ಯೋಜನೆಗಳು ರೂಪವಾಗಲೇ ಬೇಕು. ಈ ದೇಶವನ್ನು ಕಟ್ಟುವಲ್ಲಿ ಅವರ ಬೆವರು ಇದೆ. ಅವರ ಶ್ರಮವೂ ಇದೆ. ಪದೇಪದೆ ಉಚಿತ ಕೊಡುಗೆ ಪಡೆಯುವವರು ನಿಮಗಿಂತ ಕೀಳೆಂದು ಭಾವಿಸಬೇಡಿ.

ತೆರಿಗೆ ಪಾವತಿಸುವವರು ಬಹಳ ದೊಡ್ಡವರೆಂದು ಭ್ರಮಿಸಲು ಬೇಡಿ. ಸ್ಟಾಲರ್‌ ಶೀಪ್‌ಗಳನ್ನು ಪಡೆದು ಉನ್ನತ ವ್ಯಾಸಂಗ ಪಡೆದು, ವಿದೇಶಗಳಲ್ಲಿ ನೆಲೆಸಿ ದೇಶವನ್ನು ಮರೆಯುವ ಜನರ ಬಗ್ಗೆ ನಿಮಗೆ ಏನು ಅನಿಸುವುದಿಲ್ಲವೇ, ಸರ್ಕಾರದ ಸೌಲಭ್ಯಗಳ ಅಡಿಯಲ್ಲಿ ಖಜಾನೆಯ ಹಣದಿಂದ ವೈದ್ಯಕೀಯ, ತಾಂತ್ರಿಕ ಶಿಕ್ಷಣವನ್ನು ಪಡೆದು ವಿದೇಶಗಳಲ್ಲಿ ನೆಲೆಸಿ ದೇಶವನ್ನು ಅಸಡ್ಡೆಯಿಂದ ನೋಡುವವರ ಬಗ್ಗೆ ನಿಮಗೆ ಏನು ಅನ್ನಿಸುವುದಿಲ್ಲ. ಅವರ ವಿದ್ಯೆ, ಅವರ ಪಾಂಡಿತ್ಯಕ್ಕಿಂತ ಅತಿ ಹೆಚ್ಚು ಸಂಬಳವನ್ನು ಪಡೆಯುವ ಲಕ್ಷಾಂತರ ಮಂದಿಯ ಬಗ್ಗೆ ಯಾರಿಗೂ ಏನೂ ಅನಿಸುವುದಿಲ್ಲ.

ಬೆವರು ಸುರಿಸದೆ ವಾಮಮಾರ್ಗಗಳಿಂದ ಮೂಢನಂಬಿಕೆ, ಮೌಡ್ಯಗಳ ಬೆಳೆಸುತ್ತಾ ಜನರಲ್ಲಿ ಹಣವನ್ನು ಕಿತ್ತುಕೊಳ್ಳುವ ಜನಗಳ ಬಗ್ಗೆ ಏನೂ ಅನ್ನಿಸುವುದಿಲ್ಲ. ಒಂದಷ್ಟು ಅಕ್ಕಿ ಕೊಟ್ಟರೆ ಅದಕ್ಕೆ ನೂರೆಂಟು ಮಾತು ಇವೆಲ್ಲವೂ ಮಾನವೀಯತೆಯ ನೆಲೆಯಲ್ಲಿಯೇ ವಿಮರ್ಶಿಸಬೇಕಾದಂತಹ ಸಂಗತಿಗಳೇ ಹೊರತು ಕೇವಲ ಭಾವನಾತ್ಮಕವಾಗಿ, ಆವೇಶಭರಿತವಾಗಿ, ಉದ್ವೇಗದಿಂದ ಆಡುವ ಮಾತುಗಳಲ್ಲ, ಟೀಕೆಗೂ ಮಿತಿ ಇರಲಿ, ಸೌಲಭ್ಯ ಬೇಡ ಎನ್ನುವವರು ತಿರಸ್ಕರಿಸಿ, ಸೌಲಭ್ಯ ಪಡೆಯುವವರ ಸಾಮಾಜಿಕ ಸ್ಥಿತಿಗತಿಯನ್ನು ಪರಾಮರ್ಶಿಸಿ.

– ಕೆ.ಎಸ್‌. ನಾಗರಾಜ್, ಬೆಂಗಳೂರು

Leave a Reply