ನಗರಸಭೆ ಮಹಾನಗರ ಪಾಲಿಕೆಗಳಿಂದ ವಿಧಾನಸಭೆ, ಸಂಸತ್ತಿಗೆ ತೆರಳಿದ ನಾಯಕರು

5 months ago

ಬೆಂಗಳೂರು ನಗರದ ನಗರ ಪಾಲಿಕೆ ಸದಸ್ಯರಾಗಿ  ರಾಜ್ಯ ಮತ್ತು ರಾಷ್ಟ್ರ ರಾಜಕಾರಣದವರೆಗೆ ಬೆಳೆದಂತಹ ಅನೇಕರಿದ್ದಾರೆ. 1957ರ ಅವಧಿಯಲ್ಲಿ ಬೆಂಗಳೂರು ನಗರಸಭೆ ಸದಸ್ಯರಾಗಿದ್ದ ಶ್ರೀ ಟಿಆರ್ ಶಾಮಣ್ಣ ಮತ್ತು ವಿ ಎಸ್ ಕೃಷ್ಣ ಅಯ್ಯರ್ ಇವರು 1980ರಲ್ಲಿ ಶಾಮಣ್ಣನವರು ಮತ್ತು 1984ರಲ್ಲಿ ವಿ ಎಸ್ ಕೃಷ್ಣ ಅಯ್ಯರ್ ಇವರು ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. ಜೊತೆಗೆ ಶಾಮಣ್ಣನವರು ಮೂರು ಬಾರಿ ವಿಧಾನಸಭೆಗೆ, ಒಂದು ಬಾರಿ ವಿಧಾನಪರಿಷತ್ತಿಗೂ ಸಹ ಸದಸ್ಯರಾಗಿದ್ದರು. ಅದೇ ರೀತಿಯಲ್ಲಿ ವಿ ಎಸ್ ಕೃಷ್ಣ ಅಯ್ಯರ್ ಅವರು ಮೂರು ಬಾರಿ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿನ ಸದಸ್ಯರೂ ಆಗಿದ್ದರು. ಬೆಂಗಳೂರಿನ ಮಹಾಪೌರರು ಮತ್ತು ವಿಧಾನ ಪರಿಷತ್ತಿನ ಉಪ ಸಭಾಪತಿಯಾಗಿಯೂ ಹಲವಾರು ಹಂತದಲ್ಲಿ ರಾಜಕಾರಣದಲ್ಲಿ ಬೆಳೆದರು.

ಬೆಂಗಳೂರು ನಗರ ಪಾಲಿಕೆಯ ಸದಸ್ಯರಾಗಿದ್ದ ವಿ ಸೋಮಣ್ಣನವರು ಶಾಸಕರಾಗಿ, ರಾಜ್ಯದಲ್ಲಿ ಮಂತ್ರಿಯಾಗಿ, ಈಗ ತುಮಕೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಕೇಂದ್ರದ ಸಚಿವರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಕನ್ನಡ ಚಳುವಳಿಯ ಅಗ್ರಮಾನ್ಯ ನಾಯಕ ವಾಟಾಳ್ ನಾಗರಾಜ್ ಅವರು ಸಹ ಬೆಂಗಳೂರು ನಗರ  ಸಭೆಯ ಸದಸ್ಯರಾಗಿದ್ದವರು. ವಿಧಾನಸಭಾ ಸದಸ್ಯರಾಗಿ ಹಲವಾರು ಬಾರಿ ಆಯ್ಕೆಯಾಗಿದ್ದರು. ಅದೇ ರೀತಿಯಲ್ಲಿ ಜಿ ನಾರಾಯಣ ಕುಮಾರ್ ಇವರು ಸಹ ನಗರಸಭೆಯ ಸದಸ್ಯರಾಗಿ ನಂತರ ಎರಡು ಬಾರಿ ಶಾಸಕರಾಗಿಯೂ ಆಯ್ಕೆಯಾಗಿದ್ದರು.

ರಾಜ್ಯದಲ್ಲಿ ಪಟೇಲರ ಸಂಪುಟದಲ್ಲಿ ಸಚಿವರಾಗಿ ದುಡಿದಂತಹ ಲೀಲಾದೇವಿ ಆರ್ ಪ್ರಸಾದ್ ರವರು ಸಹ ಮೊದಲು ಬೆಂಗಳೂರು ನಗರಸಭೆಯ ಸದಸ್ಯರಾಗಿದ್ದರು. ತದನಂತರ ಶಾಸಕರಾಗಿಯೂ ರಾಜ್ಯದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಲು ಅವಕಾಶಗಳು ದೊರೆಯಿತು.

ಶ್ರೀರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ಕಾನೂನು ಸಚಿವರಾಗಿದ್ದ ಲಕ್ಷ್ಮಿ ಸಾಗರ್ ಅವರು ಸಹ ಬೆಂಗಳೂರಿನ ಸ್ಥಳೀಯ ಸಂಸ್ಥೆಗಳಲ್ಲಿ ಸದಸ್ಯರಾಗಿ ತದನಂತರ ಮೂರು ಬಾರಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ರಾಜ್ಯಸಭಾ ಸದಸ್ಯರಾಗಿಯು ಸೇವೆಯನ್ನು ಸಲ್ಲಿಸಿದ್ದಾರೆ.

ಸುರೇಶ್ ಕುಮಾರ್ ಅವರು ಮೊದಲು ಬೆಂಗಳೂರು ನಗರ ಪಾಲಿಕೆಯ ಸದಸ್ಯರಾಗಿ ತದನಂತರ ಶಾಸಕರಾಗಿ ರಾಜ್ಯದಲ್ಲಿ ಹಲವಾರು ಬಾರಿ ಸಚಿವರಾಗಿ ಸೇವೆ ಸಲ್ಲಿಸಿ ಇಂದಿಗೂ ಶಾಸಕರಾಗಿ ಮುಂದುವರೆದಿದ್ದಾರೆ.

ಬಿಜೆಪಿಯ ಹಿರಿಯ ನಾಯಕರಾದ ರಾಮಚಂದ್ರಗೌಡ ಸಹ ಮೊದಲು ಬೆಂಗಳೂರು ನಗರ ಪಾಲಿಕೆಯ ಸದಸ್ಯರಾಗಿದ್ದರು. ತದನಂತರ ಬೆಂಗಳೂರು ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಐದು ಬಾರಿ ಆಯ್ಕೆಯಾಗಿ ರಾಜ್ಯದಲ್ಲಿ ಸಚಿವರಾಗಿಯು ಸೇವೆ ಸಲ್ಲಿಸಿದ್ದಾರೆ.

ಹಾಲಿ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾಗಿರುವ ರಾಮಲಿಂಗಾರೆಡ್ಡಿ ಅವರು ಮೊದಲು ಬೆಂಗಳೂರು ನಗರ ಪಾಲಿಕೆಯ ಸದಸ್ಯರಾಗಿ ತದನಂತರ ಎಂಟು ಬಾರಿ ವಿಧಾನಸಭಾ ಸದಸ್ಯರಾಗಿ ಹಲವಾರು ಬಾರಿ ಸಚಿವರಾಗಿ ಈಗಲೂ ಶಾಸಕರಾಗಿ ಮಂತ್ರಿಯಾಗಿ ಮುಂದುವರೆದಿದ್ದಾರೆ.

ಮಹಾಲಕ್ಷ್ಮಿ ಲೇಔಟಿನ ಶಾಸಕರಾಗಿರುವ ಮಾಜಿ ಸಚಿವ ಗೋಪಾಲಯ್ಯ ಅವರು ಸಹ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾಗಿ ಮೊದಲು ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದಾರೆ. ಮಾಜಿ ಸಚಿವರು ಹಾಲಿ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರು ಸಹ ನಗರ ಪಾಲಿಕೆಯ ಮೂಲಕವೇ ರಾಜಕಾರಣವನ್ನು ಆರಂಭಿಸಿದವರು. ಜೆ ಹೆಚ್ ಪಟೇಲ್ ಸಂಪುಟದಲ್ಲಿ ವಯಸ್ಕರ ಶಿಕ್ಷಣ ಮತ್ತು ಗ್ರಂಥಾಲಯ ಸಚಿವರಾಗಿದ್ದ ಆರ್ ಕೃಷ್ಣಪ್ಪ ಇವರು ಸಹ ಮೊದಲು ಬೆಂಗಳೂರು ನಗರ ಪಾಲಿಕೆಯ ಸದಸ್ಯರಾಗಿದ್ದರು.

ನಗರ ಸಭೆ ಮತ್ತು ನಗರ ಪಾಲಿಕೆಯ ಸದಸ್ಯರಾಗಿ ನಂತರ ಬಿಬಿಎಂಪಿ ಸದಸ್ಯರಾಗಿ ರಾಜಕಾರಣದಲ್ಲಿ ಪ್ರವೇಶ ಮಾಡಿದ ಅನೇಕರು ಶಾಸಕರುಗಳಾದರು. ಇವರುಗಳಲ್ಲಿ ಕೆ ಚಂದ್ರಶೇಖರ್, ಬಸವನಗುಡಿಯಿಂದ ನರೇಂದ್ರಬಾಬು ರಾಜಾಜಿನಗರದಿಂದ ಶಾಸಕರಾಗಿದ್ದರು. ಪಿ ಆರ್ ರಮೇಶ್ ಇವರು ವಿಧಾನ ಪರಿಷತ್ತಿನ ಸದಸ್ಯರಾಗಿ ಪ್ರೇಮಾ ಕಾರಿಯಪ್ಪ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಹಾಲಿ ಜಯನಗರದ ಶಾಸಕರಾಗಿರುವ ರಾಮಮೂರ್ತಿ ಅವರು ಸಹ ಈ ಮೊದಲು ಬಿಬಿಎಂಪಿ ಸದಸ್ಯರಾಗಿದ್ದರು. ನಗರ ಪಾಲಿಕೆಯ ಸದಸ್ಯರಾಗಿದ್ದ ಪಿ ಎಸ್ ಪ್ರಕಾಶ್ ಇವರು ಸಹ ಚಿಕ್ಕಪೇಟೆಯಿಂದ ಶಾಸಕರಾಗಿದ್ದರು.

ಗಾಂಧಿನಗರದಿಂದ ನಗರಸಭಾ ಸದಸ್ಯರಾಗಿದ್ದ ಮುನಿಯಪ್ಪ ಒಂದು ಬಾರಿ ಶಾಸಕರಾಗಿದ್ದರು. ಪುಲಕೇಶಿ ನಗರ ಕ್ಷೇತ್ರದಿಂದ ಶ್ರೀನಿವಾಸ ಮೂರ್ತಿ ಶಾಸಕರಾಗಿದ್ದರು. ಅದೇ ರೀತಿಯಲ್ಲಿ ಈ ಹಿಂದೆ ಭಾರತಿ ನಗರ ಕ್ಷೇತ್ರದಿಂದ ಎನ್ ರಾಜಣ್ಣ ಶಾಸಕರಾಗಿದ್ದರು. ಈ ಹಿಂದೆ ನಗರಸಭಾ ಸದಸ್ಯರಾಗಿದ್ದ ಅನಂತ ಕೃಷ್ಣರವರು ಶಿವಾಜಿನಗರದ ಶಾಸಕರಾಗಿ ಆಯ್ಕೆಯಾಗಿದ್ದರು. ಬೆಂಗಳೂರು ನಗರದಲ್ಲಿ ಬಿಬಿಎಂಪಿ ಸದಸ್ಯರಾಗಿದ್ದ ಮುನಿಸ್ವಾಮಿ ರವರು ಕೋಲಾರದಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಬೆಂಗಳೂರಿನಲ್ಲಿ ಬಿಬಿಎಂಪಿ ಸದಸ್ಯರಾಗಿದ್ದ ಶಂಕರ್ ಇವರು ಹಾವೇರಿಯಲ್ಲಿ ಶಾಸಕರಾಗಿದ್ದರು.

ಸ್ಥಳೀಯ ಸಂಸ್ಥೆಗಳಲ್ಲಿ ಪುರಸಭೆ ನಗರಸಭೆ ಪಟ್ಟಣ ಪಂಚಾಯ್ತಿ ನಗರ ಪಾಲಿಕೆ ಮಹಾನಗರ ಪಾಲಿಕೆ ಮುಂತಾದ ಕಡೆಗಳಲ್ಲಿ ಹಾಗೆ ಜಿಲ್ಲಾ ಪರಿಷತ್ ತಾಲೂಕು ಪಂಚಾಯಿತಿಗಳಲ್ಲಿ ಹಾಗೂ ಮಂಡಲ ಪಂಚಾಯಿತಿಗಳಲ್ಲಿ ತಮ್ಮ ನಾಯಕತ್ವವನ್ನು ಗಟ್ಟಿಗೊಳಿಸಿಕೊಂಡವರು ಹಂತ ಹಂತವಾಗಿ ಅನೇಕ ಅವಕಾಶಗಳನ್ನ ಪಡೆದು, ಈ ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅದಕ್ಕೆ ಮಾಜಿ ಪ್ರಧಾನಿ ದೇವೇಗೌಡರೇ ಸಾಕ್ಷಿ. ಹೊಳೆನರಸೀಪುರದ ಸ್ಥಳೀಯ ಸಂಸ್ಥೆಯಿಂದ ಪಾರ್ಲಿಮೆಂಟಿನ ತನಕ ಪ್ರವೇಶಿಸಿ ಪ್ರಧಾನಮಂತ್ರಿಯಾಗಿ ಸೇವೆಯನ್ನು ಸಲ್ಲಿಸಲು ಅವಕಾಶ ದೊರೆಯಿತು.

ಸ್ಥಳೀಯ ಸಂಸ್ಥೆಗಳಲ್ಲಿ ಬೇರುಬಿಟ್ಟವರು ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ಆರ್ ಗುಂಡೂರಾಯರು, ಬಿಎಸ್ ಯಡಿಯೂರಪ್ಪನವರು ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಗಂಭೀರವಾಗಿ ತೆಗೆದುಕೊಂಡು ಜನರ ವಿಶ್ವಾಸವನ್ನ ಪಡೆದು ಪ್ರತಿನಿಧಿಗಳಾದವರು. ಆಯಾ ರಾಜಕೀಯ ಪಕ್ಷಗಳಲ್ಲಿ ವರಿಷ್ಠರ ಗಮನಕ್ಕೆ ಬಂದು ಮತ್ತಷ್ಟು ಸ್ಥಾನಮಾನಗಳನ್ನು ಪಡೆದುಕೊಳ್ಳಲು ಒಳ್ಳೆಯ ಮಾರ್ಗವಾಗಿರುತ್ತದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply