ಹವಾ ನಿಯಂತ್ರಿತ ಕೊಠಡಿಗಳಲ್ಲಿ ಕುಳಿತವರಿಂದ ದುಡಿಮೆಯ ಮಾತು

1 year ago

ಕೆಲವು ಉದ್ಯಮಿಗಳಿಗೆ ಬಿಟ್ಟಿ ಉಪದೇಶ ಮಾಡುವ ಚಟ ಆರಂಭವಾಗಿದೆ. ಒಬ್ಬರು ವಾರಕ್ಕೆ 70 ಗಂಟೆ ಕೆಲಸ ಮಾಡಿ ಎಂದರೆ ಮತ್ತೊಬ್ಬರು 90 ಗಂಟೆ ಕೆಲಸ ಮಾಡಿ ಎನ್ನುತ್ತಾರೆ. ಹೀಗೆ ಹೇಳುತ್ತಿರುವವರೆಲ್ಲರೂ ಹವಾ ನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಉದ್ಯಮಿಗಳಾಗಿರುವವರಷ್ಟೇ. ಇದರ ಜೊತೆಗೆ ಇವರ ಇನ್ನೂ ಅಂಬೆಗಾಲಿಡಲು ಸಾಧ್ಯವಾಗದ ಮಕ್ಕಳು ಮರಿ ಮೊಮ್ಮಕ್ಕಳಿಗೆ ನೂರಾರು ಕೋಟಿ ರೂಪಾಯಿಗಳ ಆಸ್ತಿಯನ್ನು ಮೀಸಲಿಟ್ಟವರು. ಬೆವರು ಸುರಿಸಿ ದುಡಿಯುವ ಜನರಿಗೆ ಮಾತ್ರವೇ ಗೊತ್ತಿರುತ್ತದೆ ದುಡಿಮೆಯ ಬೆಲೆ.

ರಸ್ತೆಗಳನ್ನು ನಿರ್ಮಾಣ ಮಾಡುವ, ಕಟ್ಟಡಗಳನ್ನು ಕಟ್ಟುವ, ಮಂಡಿಪೇಟೆಯಲ್ಲಿ ಮೂಟೆ ಹೊತ್ತು ಕೂಲಿ ಮಾಡುವ, ಕಾರ್ಖಾನೆಗಳಲ್ಲಿ ದುಡಿಯುವ, ಹತ್ತಾರು ಮನೆಗಳಲ್ಲಿ ಮನೆ ಕೆಲಸ ಮಾಡುವ ಮಹಿಳೆಯರ, ಲಾರಿ ಚಾಲಕರ, ಆಟೋ ಚಾಲಕರ, ಬಾಡಿಗೆ ಕಾರು ಓಡಿಸುವವರ ದುಡಿಮೆಯ ಅವಧಿ ಎಷ್ಟು ಎನ್ನುವುದು ಬಹುಶಃ ಇವರೆಲ್ಲ ತಿಳಿದೇ ಇರುವುದಿಲ್ಲ.

ಬೆವರು ಸುರಿಸಿ ಬಯಲಿನಲ್ಲಿ ದುಡಿಯುವ ಜನರಿಗೆ ವಾರಕ್ಕೆ 70 ಗಂಟೆ ಇಲ್ಲವೇ 90 ಗಂಟೆ ಇವುಗಳೆಲ್ಲವೂ ಲೆಕ್ಕವೇ ಅಲ್ಲ. ದಿನದ 24 ಗಂಟೆಯಲ್ಲಿ ಇವರಿಗೆ ವಿಶ್ರಾಂತಿ ಎನ್ನುವುದು ಕೆಲವೇ ಕೆಲವು ಗಂಟೆಗಳಲ್ಲಿ ಮಾತ್ರ ದೊರೆಯುತ್ತದೆ. ಉಳಿದಂತೆ ಇವರು ಬದುಕು ಕಟ್ಟಿಕೊಳ್ಳಲು ದುಡಿಯಲೇಬೇಕು. ಕಾಯಿಲೆ ಬಂದರೂ ವಿಶ್ರಾಂತಿ ಪಡೆಯುವ ಹಾಗಿಲ್ಲ. ಕೈಯಲ್ಲಿ ಆಗದಿದ್ದರೂ ಮನೆಯಲ್ಲಿ ಕುಳಿತು ಬದುಕುವ ಹಾಗಿರುವುದಿಲ್ಲ. ದುಡಿಮೆ ಎನ್ನುವುದು ಇವರಿಗೆ ಅನಿವಾರ್ಯ ಮತ್ತು ಅತ್ಯಂತ ಅವಶ್ಯ ಸಂಗತಿ ಆಗಿರುತ್ತದೆ.

ಇವರ ಉಪದೇಶಗಳೆಲ್ಲವೂ ಮೊದಲು ಹವಾ ನಿಯಂತ್ರಿತ ಕೊಠಡಿಗಳಲ್ಲಿ ಉಳಿದು ಕೆಲಸ ಮಾಡುವ ಮಂದಿ ಕೇಳಬಹುದು. ಏಕೆಂದರೆ ಬಯಲಲ್ಲಿ ದುಡಿಯುವವರಿಗೆ ಮಾತ್ರವೇ ದುಡಿಮೆಯ ಬೆಲೆಯ ಅರಿವಿರುತ್ತದೆ. ಶ್ರಮದ ಕೆಲಸ ಮಾಡುವವರಿಗೆ ಎಷ್ಟು ಕಷ್ಟ ಎಂಬ ಅರಿವಿರುತ್ತದೆ. ಆದರೆ ಶ್ರಮದ ಕೆಲಸ ಮಾಡದವರಿಗೆ ಇದರ ಅರಿವಿರುವುದಿಲ್ಲ.

ಎಲ್ಲರೂ 70 ಗಂಟೆ ಇಲ್ಲವೇ 90 ಗಂಟೆ ದುಡಿಯಬೇಕು ದೇಶಕ್ಕೆ ಒಳ್ಳೆಯದಾಗುತ್ತದೆ ಎನ್ನುವ ಇವರ ಮಾತು ಪೂರ್ಣ ಸತ್ಯವಲ್ಲ. ಕಾರ್ಮಿಕರು ನೌಕರರು ಹೆಚ್ಚು ಹೆಚ್ಚು ಗಂಟೆಯ ಕಾಲ ದುಡಿದರೆ ಇದರಿಂದ ಉದ್ಯಮಿಗಳ ಮತ್ತು ಮಾಲೀಕರ ಖಜಾನೆ ಹೆಚ್ಚು ತುಂಬುತ್ತದೆ. ಹೆಚ್ಚು ಹೆಚ್ಚು ಲಾಭ ಬಂದಿತೆಂದು ಕಾರ್ಮಿಕರಿಗೆ ಹೆಚ್ಚು ಸಂಬಳವನ್ನು ಯಾರು ಕೊಡುವುದಿಲ್ಲ.

ಪದೇ ಪದೇ ದುಡಿಮೆಯ ಉಪದೇಶವನ್ನು ಮಾಡುವ ಪ್ರಚಾರ ಪಡೆಯುವ ಮಾತುಗಳು ಬೇಕಾಗಿಲ್ಲ. ಬದಲಿಗೆ ನಿಮ್ಮ ನಿಮ್ಮ ಕಂಪನಿಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ಬೆವರು ಸುರಿಸಿ ದುಡಿವ ಕಾರ್ಮಿಕರಿಗೆ ಎಷ್ಟರಮಟ್ಟಿಗೆ ಸೌಕರ್ಯ ಸೌಲಭ್ಯವನ್ನು ಕಲ್ಪಿಸಿ ಕೊಟ್ಟಿದ್ದೀರಿ ಹಾಗೂ ಅವರ ದುಡಿಮೆಗೆ ತಕ್ಕಹಾಗೆ ಸಂಬಳವನ್ನು ನೀಡುತ್ತಿದ್ದೀರಾ ಎಂಬ ಪ್ರಶ್ನೆಗಳನ್ನ ತಾವು ನಿಮ್ಮನ್ನೇ ಕೇಳಿಕೊಂಡು ಅದಕ್ಕೆ ಉತ್ತರಗಳು ದೊರೆತ ನಂತರ ಉಪದೇಶ ಮಾಡಿ.

ದುಡಿಯುವ ಜನ ದುಡಿಯುತ್ತಲೇ ಇದ್ದಾರೆ. ದುಡಿದು ಬದುಕುತ್ತಲೇ ಇದ್ದಾರೆ. ದುಡಿಮೆಯ ನಡುವೆಯೂ ಆನಂದದ ಬದುಕನ್ನು ಸಾಗಿಸಲು ಸಾಧ್ಯವಾಗಿಲ್ಲ. ಆದರೆ ದುಡಿಯದೇ ಒಂದಷ್ಟು ಮಂದಿ ಬದುಕುತ್ತಲೇ ಇದ್ದಾರೆ. ಬದುಕುವುದರ ಜೊತೆಗೆ ಸಂಭ್ರಮದಿಂದಲೂ ಇದ್ದಾರೆ. ಯಾರದೋ ಬೆವರಿನ ಫಲವನ್ನು ಅನುಭವಿಸುತ್ತಿದ್ದಾರೆ. ಇವರುಗಳ ಮನೆಯ ಶ್ವಾನಕ್ಕೂ ಪ್ರತ್ಯೇಕವಾದ ಕೊಠಡಿಯಿದೆ. ಓಡಾಡಲು ದುಬಾರಿ ವಾಹನಗಳಿಗೆ ಆರೈಕೆ ಮಾಡಲು ಮಂದಿ ಇದ್ದಾರೆ. ಆದರೆ ಬಹಳಷ್ಟು ಮಾಲೀಕರು ತಮ್ಮ ಕಾರ್ಮಿಕರಿಗೆ ಕನಿಷ್ಠ ಸೌಕರ್ಯ ಸೌಲಭ್ಯವನ್ನು ಕಲ್ಪಿಸಿ ಕೊಡುವಂತಹ ದೊಡ್ಡತನವನ್ನು ತೋರಿರುವುದಿಲ್ಲ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದುಡಿಯುತ್ತಿರುವ ಯುವ ಜನಾಂಗ ಯಾವ ರೀತಿಯಲ್ಲಿ ಆರೋಗ್ಯದ ಮೇಲೆ ಪರಿಣಾಮವನ್ನು ಎದುರಿಸುತ್ತಿದ್ದಾರೆ ಎನ್ನುವುದನ್ನು ಇತ್ತೀಚಿನ ದಿನಗಳಲ್ಲಿ ಹಲವಾರು ವ್ಯಕ್ತಿಗಳ ವಿಚಾರದಲ್ಲಿ ಗಮನಿಸಿದಾಗ ಆತಂಕವಾಗುತ್ತದೆ. ಇವರು ವಾರದಲ್ಲಿ 70 ಗಂಟೆಯಲ್ಲ 90 ಗಂಟೆಯೂ ಅಲ್ಲ ನೂರು ಗಂಟೆಗೂ ಹೆಚ್ಚು ಕಾಲ ದುಡಿಯುತ್ತಿದ್ದಾರೆ. ಹೆಚ್ಚಿನ ಅವಧಿಯಲ್ಲಿ ಕೆಲಸ ಮಾಡುವುದರಿಂದ ಇವರ ಕಣ್ಣಿನ ಮೇಲೆ ಪರಿಣಾಮ ಬೀರಿದೆ. ಮಾನಸಿಕ ಒತ್ತಡ ಹೆಚ್ಚಾಗಿದೆ. ಇದರಿಂದಾಗಿ ಈ ವರ್ಗದ ಯುವಜನರು ಆರೋಗ್ಯದ ವಿಚಾರದಲ್ಲಿ ಎಷ್ಟೆಲ್ಲಾ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ ಎನ್ನುವುದನ್ನು ಗಮನಿಸಿದಾಗ ಯಾವ ರೀತಿಯಲ್ಲಿ ಇವರನ್ನು ದುಡಿಸಿಕೊಳ್ಳುತ್ತಿದ್ದೀರಿ ಎಂದು ಎಂದಾದರೂ ಕಲ್ಪಿಸಿಕೊಂಡಿದ್ದೀರಾ?

ಯಾವುದೇ ರೀತಿಯ ಉದ್ಯೋಗದ ಭದ್ರತೆಯು ಇವರಿಗೆ ಇರುವುದಿಲ್ಲ. ಯಾವ ಮುನ್ಸೂಚನೆಯನ್ನು ನೀಡದೆ ಕೆಲಸದಿಂದ ತೆಗೆದು ಹಾಕುತ್ತೀರಿ. ಇದರಿಂದಾಗಿ ಇವರುಗಳ ಮನಸ್ಸಿನ ಮೇಲೆ ಆಗುತ್ತಿರುವ ಪರಿಣಾಮಗಳೇನು ಎನ್ನುವ ಕಲ್ಪನೆಯಾದರೂ ಇದೆಯೇ? ಎಪ್ಪತ್ತು ಗಂಟೆ 90 ಗಂಟೆ ದುಡಿಯುವ ಉಪದೇಶ ಮಾಡುವ ನೀವು ನಿಮ್ಮ ಸಂಸ್ಥೆಗಳಲ್ಲಿ ದುಡಿಯುವ ಯುವಜನರ ಆರೋಗ್ಯ, ಮಾನಸಿಕ ಒತ್ತಡದ ವಿಚಾರದಲ್ಲಿ ಮೊದಲು ಸೂಕ್ತವಾದಂತಹ ಗಮನವನ್ನು ಹರಿಸಿ ನಂತರ ಉಪದೇಶದ ಮಾತುಗಳನ್ನಾಡಿ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply