ನಮ್ಮದು ಎಂತಹ ರಾಷ್ಟ್ರ ಪ್ರೇಮ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು

8 months ago

ಬಹಳಷ್ಟು ಜನರು ವರ್ಷದಲ್ಲಿ ಒಂದು ಬಾರಿಯೂ, ರಾಷ್ಟ್ರಗೀತೆ ಹೇಳುವುದಿಲ್ಲ, ರಾಷ್ಟ್ರಧ್ವಜಕ್ಕೆ ನಮನವನ್ನು ಸಲ್ಲಿಸುವುದಿಲ್ಲ.

ಪ್ರತಿ ವರ್ಷ ಆಗಸ್ಟ್ 15 ಮತ್ತು ಜನವರಿ 26ರಂದು ರಾಷ್ಟ್ರಧ್ವಜವನ್ನ ಹಾರಿಸಿ, ಗೀತೆಯನ್ನ ಹಾಡುವುದರ ಮೂಲಕ ನಮ್ಮ ಗೌರವವನ್ನು ದೇಶಕ್ಕೆ ಅರ್ಪಿಸುವ ಸಂಪ್ರದಾಯ ಆರಂಭವಾಗಿ ಹಲವು ದಶಕಗಳು ಕಳೆದಿದೆ. ಆದರೆ ಇದರ ನಡುವೆ ಬಹಳಷ್ಟು ಮಂದಿ ವರ್ಷದಲ್ಲಿ ಒಂದು ದಿನವೂ ಸಹ ರಾಷ್ಟ್ರಧ್ವಜವನ್ನ ಹಾರಿಸಿ ,ರಾಷ್ಟ್ರಗೀತೆಯನ್ನು ಹೇಳಿ ತಮ್ಮ ದೇಶಭಕ್ತಿಯನ್ನು ಸಮರ್ಪಿಸುವ ಕಾರ್ಯವನ್ನು ಮಾಡಿರುವುದಿಲ್ಲ.

ಆಗಸ್ಟ್ 15 ಮತ್ತು ಜನವರಿ 26ರಂದು ಶಾಲೆಗಳಲ್ಲಿ ಮಕ್ಕಳಿಗೆ ನಮ್ಮ ರಾಷ್ಟ್ರದ ಪ್ರಮುಖ ದಿನದ ಆಚರಣೆ ನಡೆಸುತ್ತೇವೆ. ಇನ್ನು ರಾಜಕೀಯ ಪಕ್ಷಗಳು ತಮ್ಮ ಕಾರ್ಯಕರ್ತರ ಜೊತೆಗೂಡಿ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಸರ್ಕಾರಗಳು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಾರೆ .ಕೆಲವು ಸಂಘ-ಸಂಸ್ಥೆಯವರು ಇವುಗಳನ್ನ ಆಚರಿಸಿಕೊಂಡು ಬರುತ್ತಾರೆ. ಇದರ ಹೊರತಾಗಿ ಕೆಲವೊಂದಷ್ಟು ಜನ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ.  ರಾಷ್ಟ್ರಗೀತೆಯನ್ನು ಹೇಳಿ ತಮ್ಮ ಭಕ್ತಿಯನ್ನು ಮೆರೆಯುತ್ತಾರೆ.

ಎರಡು ದಿನಗಳು ಸರ್ಕಾರದ ರಜಾ ದಿನವಾಗಿರುತ್ತದೆ .ಇಲ್ಲಿ ಯಾವ ಸರ್ಕಾರಿ ಕಚೇರಿಯಲ್ಲಿಯೂ ಸರ್ಕಾರಿ ನೌಕರರು ಬಂದು ಅದು ಕೇಂದ್ರ ಅಥವಾ ರಾಜ್ಯ ಎರಡು ಇರಬಹುದು ರಾಷ್ಟ್ರಧ್ವಜವನ್ನ ಹಾರಿಸುವುದಿಲ್ಲ, ರಾಷ್ಟ್ರಗೀತೆ ಹೇಳುವುದಿಲ್ಲ. ಬದಲಿಗೆ ಯಾರಿಗೋ ಈ ಕೆಲಸವನ್ನು ವಹಿಸಿರುತ್ತಾರೆ. ಅವರು ಕಟ್ಟಡದ ಮೇಲೆ ರಾಷ್ಟ್ರಧ್ವಜವನ್ನ ಕಟ್ಟಿ ಸಂಜೆ ಮೇಲೆ ಅದನ್ನ ತೆಗೆಯುತ್ತಾರೆ.

ಕಾಲೇಜುಗಳಲ್ಲಿ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವದ ಕಾರ್ಯಕ್ರಮಗಳು ಬಹಳಷ್ಟು ಸ್ಥಳಗಳಲ್ಲಿ ನಡೆಯುವುದಿಲ್ಲ. ಕಾಲೇಜು ವಿದ್ಯಾರ್ಥಿಗಳು ವೈದ್ಯಕೀಯ ತಾಂತ್ರಿಕ ಮುಂತಾದಂತಹ ಶಿಕ್ಷಣ ಸಂಸ್ಥೆಗಳಲ್ಲೂ ಸಹ ಈ ಕಾರ್ಯಕ್ರಮಗಳು ನಡೆಯುವುದಿಲ್ಲ.

ಇನ್ನು ಖಾಸಗಿ ಕಂಪನಿಗಳ ನೌಕರರು ಸಹ ಕಚೇರಿ ಕಡೆ ತಿರುಗಿ ನೋಡುವುದಿಲ್ಲ. ದೊಡ್ಡ ದೊಡ್ಡ ಕಂಪನಿಗಳ ಮತ್ತು ಉದ್ಯಮಗಳ ನೌಕರರು ಸಹ ಇವುಗಳಲ್ಲಿ ಪಾಲ್ಗೊಳ್ಳುವುದಿಲ್ಲ.

ಇನ್ನು ವ್ಯಾಪಾರಸ್ಥರು ಅವರ ಪಾಡಿಗೆ ಅವರು ಇರುತ್ತಾರೆ. ಇನ್ನು ಬಹಳಷ್ಟು ಜನ ಸಾಮಾನ್ಯರು ಇವುಗಳ ಬಗ್ಗೆ ಆಸಕ್ತಿ ಇದ್ದರೂ ಅವರಿಗೆ  ಒಂದು ವ್ಯವಸ್ಥೆ ಇರುವುದಿಲ್ಲ.

ಇದರಿಂದಾಗಿ ಬಹಳಷ್ಟು ಮಂದಿ ಇಂತಹ ಕಾರ್ಯಕ್ರಮಗಳಿಂದ ದೂರವೇ ಇರುತ್ತಾರೆ. ಕೇವಲ ಶಾಲೆಗಳಲ್ಲಿ ಮಕ್ಕಳಿಗೆ ರಾಜಕೀಯ ಪಕ್ಷದ ಕಾರ್ಯಕರ್ತರಿಗೆ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಕಚೇರಿಯ ಸಿಬ್ಬಂದಿ ಇವರಿಗೆ ಮಾತ್ರ ರಾಷ್ಟ್ರಧ್ವಜವನ್ನು ಹಾರಿಸುವ ಮತ್ತು ರಾಷ್ಟ್ರಗೀತೆ ಹೇಳುವ ಕೆಲಸವನ್ನು ಮಾಡುವಂಥಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ದಿನವನ್ನು ರಜಾ ದಿನವೆಂದು ಘೋಷಿಸಿರುವುದು ಸರಿ ಅಷ್ಟೇ ಆದರೆ ಪ್ರತಿಯೊಬ್ಬ ನೌಕರರು ಅಂದು ಕಚೇರಿಗೆ ಕಟ್ಟುನಿಟ್ಟಾಗಿ ಬಂದು ರಾಷ್ಟ್ರಧ್ವಜದ ಹಾರಿಸುವ ಕಾರ್ಯದಲ್ಲಿ ಪಾಲ್ಗೊಂಡು ರಾಷ್ಟ್ರಗೀತೆ ಹೇಳಲೇಬೇಕು ಎಂಬಂತಹ ಆದೇಶವನ್ನು ಹೊರಡಿಸಬೇಕು. ಅದೇ ರೀತಿಯಲ್ಲಿ ಎಲ್ಲಾ ಖಾಸಗಿ ಕಂಪನಿಗಳು ದೊಡ್ಡದಾಗಿರಲಿ, ಚಿಕ್ಕವರಾಗಿರಲಿ ಎಲ್ಲರೂ ಸಹ ಈ ಎರಡು ದಿನಗಳಲ್ಲಿ ಸಾಮೂಹಿಕವಾಗಿ ರಾಷ್ಟ್ರಧ್ವಜವನ್ನ ಹಾರಿಸಿ ರಾಷ್ಟ್ರಗೀತೆ ಹೇಳಲೇಬೇಕು ಎಂಬ ಆದೇಶವನ್ನು ಹೊರಡಿಸಬೇಕು.

ಕಾಲೇಜುಗಳಲ್ಲಿ ಸಹ ಈ ಕಾರ್ಯಕ್ರಮ ನಡೆಯಲೇಬೇಕು. ಇಲ್ಲದಿದ್ದರೆ ಇದು ಕೇವಲ ಮಕ್ಕಳ ರಾಜಕೀಯ ಪಕ್ಷದ ಕಾರ್ಯಕರ್ತರ, ಅಧಿಕಾರಿಗಳ, ಕೆಲವು ಸಂಘ ಸಂಸ್ಥೆಯವರ ಕಾರ್ಯಕ್ರಮ ವಾಗುತ್ತದೆ. ಬಹಳಷ್ಟು ಮಂದಿ ಇಂತಹ ಕಾರ್ಯಗಳಿಂದ ದೂರವಿರುತ್ತಾರೆ.

ಈ ರಾಷ್ಟ್ರದ ಪ್ರಜೆಯಾಗಿ ಕನಿಷ್ಠ ವರ್ಷಕ್ಕೆ ಎರಡು ದಿನವಾದರೂ ರಾಷ್ಟ್ರಧ್ವಜಕ್ಕೆ ನಮಿಸಿ, ರಾಷ್ಟ್ರಗೀತೆಯನ್ನ ಹಾಡುವಂತಹ ಸೌಜನ್ಯವನ್ನು ಮೆರೆಯಬೇಕು. ಇಲ್ಲದಿದ್ದರೆ ಇದು ಒಂದು ರೀತಿಯ ಸಾಂಪ್ರದಾಯಿಕ ಆಚರಣೆಯಾಗಿ ಉಳಿದುಕೊಳ್ಳುತ್ತದೆ.

ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗಿಂತ ಯಾರು ದೊಡ್ಡವರಲ್ಲ ಎನ್ನುವುದನ್ನು ಸರ್ಕಾರಗಳು ಮತ್ತು ಕಂಪನಿಗಳು ಮತ್ತು ಎಲ್ಲ ಜನರು ಅರಿತುಕೊಳ್ಳಬೇಕು. ಈ ದೇಶಕ್ಕೆ ಸ್ವಾತಂತ್ರ್ಯವನ್ನ ತಂದುಕೊಡುವಲ್ಲಿ ಅಪಾರವಾದ ತ್ಯಾಗವನ್ನು ಮಾಡಿರುವ ತಮ್ಮ ಬದುಕನ್ನು ಸಮರ್ಪಿಸಿಕೊಂಡಿರುವ ಮಹಾನ್ ವ್ಯಕ್ತಿಗಳಿಗೆ ಕನಿಷ್ಠ ಒಂದು ಗೌರವವನ್ನು ನೀಡಲು ನಾವು ಸಾಧ್ಯವಾಗುವುದಿಲ್ಲ ಎನ್ನುವುದಾದರೆ ನಮ್ಮದು ಎಂತಹ ರಾಷ್ಟ್ರ ಪ್ರೇಮ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು.

ಯಾವುದು ಆಟದಲ್ಲಿ ಯಾರೋ ಗೆದ್ದಾಗ ಬಾವುಟವನ್ನು ಹಿಡಿದು ಸಂಭ್ರಮಿಸುವ ನಮಗೆ ಎರಡು ದಿನಗಳಲ್ಲಿ ಮಾತ್ರ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎನ್ನುವ ಭಾವನೆಗಳು ಏಕೆ ಬರುತ್ತಿಲ್ಲ.

ಸರ್ಕಾರಗಳು ಈ ನಿಟ್ಟಿನಲ್ಲಿ ಆಲೋಚಿಸಬೇಕು ಇಲ್ಲದಿದ್ದರೆ ಈ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಮಹತ್ವವನ್ನು ಕಳೆದುಕೊಳ್ಳುತ್ತದೆ. ಬಹಳಷ್ಟು ಮಾಹಿತಿ ತಂತ್ರಜ್ಞಾನದ ಕಚೇರಿಗಳಲ್ಲಿ ಅವರಿಗೆ ರಜವನ್ನು ಕೊಟ್ಟಿರುವುದಿಲ್ಲ, ಜೊತೆಗೆ ರಾಷ್ಟ್ರಧ್ವಜವನ್ನು ಹಾರಿಸಿ ರಾಷ್ಟ್ರಗೀತೆ ಹೇಳುವ ಕಾರ್ಯಕ್ರಮವನ್ನು ಮಾಡಿರುವುದಿಲ್ಲ. ಹೀಗೆಯೇ ಮುಂದುವರೆದರೆ ಶಾಲೆಗಳಲ್ಲಿ ಸಿಹಿ ತಿಂಡಿಯ ಆಸೆಗೆ ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವ್ಯವಸ್ಥೆ ಮುಂದುವರಿಯುತ್ತದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply