ನಮ್ಮ ದೇಶದ ಸಂವಿಧಾನದ ಹಿನ್ನೆಲೆ

2 years ago

ನಮ್ಮ ದೇಶದ ಪ್ರತಿಯೊಬ್ಬ ನಾಗರೀಕರಿಗೂ ಮತದಾನದ ಹಕ್ಕನ್ನು, ಬದುಕುವ ಹಕ್ಕನ್ನು, ಧಾರ್ಮಿಕ ಸ್ವಾತಂತ್ರ್ಯವನ್ನು, ಅನೇಕ ಸಾಮಾಜಿಕ ಭದ್ರತೆಗಳನ್ನು ನೀಡಿರುವುದು ನಮ್ಮ ದೇಶದ ಸಂವಿಧಾನ.

ಸಂವಿಧಾನವನ್ನು 1949ರ ನವಂಬರ್ 26ರಂದು ಒಪ್ಪಿಕೊಂಡಂತಹ ನಾವು 1950 ಜನವರಿ 26ರಂದು ಗಣರಾಜ್ಯೋತ್ಸವವನ್ನು ಆಚರಿಸುವುದರ ಮೂಲಕ ಸಂವಿಧಾನವನ್ನು ಅನುಷ್ಠಾನಗೊಳಿಸಿದಂತಹ ಪವಿತ್ರವಾದಂತಹ ದಿನವಾಗಿರುತ್ತದೆ.

ನಮ್ಮ ದೇಶದ ಸಂವಿಧಾನ ರಚನೆಯ ನಂತರ 1952ರಲ್ಲಿ ಪ್ರಥಮ ಬಾರಿಗೆ ಲೋಕಸಭೆ ಮತ್ತು ಅನೇಕ ರಾಜ್ಯಗಳ ವಿಧಾನಸಭಾ ಚುನಾವಣೆ ಪ್ರಥಮ ಬಾರಿಗೆ ನಡೆದು, ಮಹಿಳೆಯರು ಮತ್ತು ಈ ದೇಶದ 21 ವರ್ಷ ದಾಟಿದ ಕೂಲಿ ಮಾಡುವ ಜನರಿಂದ ಹಿಡಿದು ಮಹಾರಾಜರತನಕ ಮತದಾನದ ಹಕ್ಕನ್ನು ನೀಡಿದಂತಹ ಪವಿತ್ರವಾದದ್ದು ನಮ್ಮ ಸಂವಿಧಾನ. ಎಲ್ಲರಿಗೂ ಸಹ ಒಂದು ಮತವನ್ನು ಚಲಾಯಿಸುವಂತಹ ಅಧಿಕಾರವನ್ನು ಈ ಸಂವಿಧಾನ ನೀಡಿರುತ್ತದೆ.

ನಮ್ಮ ದೇಶದ ಸಂವಿಧಾನದ ಕಾರಣದಿಂದಾಗಿ, ದಲಿತರು ಮತ್ತು ಅನೇಕ ಹಿಂದೂ ವರ್ಗದ ಸಮಾಜದವರು ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ಪಡೆದು ಜನಪ್ರತಿನಿಧಿಗಳಾಗಲು ಸಾಧ್ಯವಾಗಿರುತ್ತದೆ.

ನಮ್ಮ ದೇಶದ ಸಂವಿಧಾನದ ಕಾರಣದಿಂದಾಗಿ ಈ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಶಿಕ್ಷಣವನ್ನು ಪಡೆಯಲು, ಗೌರವದಿಂದ ಬದುಕಲು, ದೇವಾಲಯಗಳ ಪ್ರವೇಶ, ಸಾರ್ವಜನಿಕ ಸ್ಥಳಗಳಲ್ಲಿ ಬೇದ ಭಾವವಿಲ್ಲದೆ ಬದುಕಲು ರಕ್ಷಣೆಯನ್ನು ಮತ್ತು ಭದ್ರತೆಯನ್ನು ಒದಗಿಸಿ ಕೊಟ್ಟಿರುತ್ತದೆ.

ನಮ್ಮ ದೇಶದ ಸಂವಿಧಾನವನ್ನು ರಚಿಸುವ ಸಲುವಾಗಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿರುತ್ತಾರೆ. ಈ ಸಮಿತಿಯಲ್ಲಿ ಸದಸ್ಯರಾಗಿ
ಕೆ ಎಮ್ ಮುನ್ಸಿ, ಮಹಮದ್ ಸದಾವುಲ್ಲ, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಗೋಪಾಲಸ್ವಾಮಿ ಅಯ್ಯಂಗಾರ್ ಮತ್ತು ಕೇತಾನ್.

ಸಂವಿಧಾನ ಸಮಿತಿಯಲ್ಲಿ ಮೊದಲು 389 ಜನ ಸದಸ್ಯರಿದ್ದರು. ಪಾಕಿಸ್ತಾನದ ವಿಭಜನೆ ನಂತರ ಇದರ ಸಂಖ್ಯೆ 299ಕೆ ಸೀಮಿತವಾಯಿತು.

ನಮ್ಮ ದೇಶದ ಸಂವಿಧಾನ ಸಮಿತಿಯ ಸಭೆ ಡಿಸೆಂಬರ್ 6, 1946ರಲ್ಲಿ ಪ್ರಥಮ ಬಾರಿಗೆ ನಡೆಯುತ್ತದೆ. ಅಂದು ಜೆ ಬಿ ಕೃಪಾಲಾನಿ ರವರು ಮೊದಲು ಮಾತನಾಡುತ್ತಾರೆ. ಸಚ್ಚಿದಾನಂದ ಸಿನ್ಹರವರು ಹಂಗಾಮಿ ಅಧ್ಯಕ್ಷರಾಗುತ್ತಾರೆ. 11 ಡಿಸೆಂಬರ್ 1946ರಲ್ಲಿ ಇದರ ಅಧಿಕೃತ ಸಭೆಯಲ್ಲಿ ಡಾಕ್ಟರ್ ರಾಜೇಂದ್ರ ಪ್ರಸಾದ್ ರವರನ್ನು ಅಧ್ಯಕ್ಷರನ್ನಾಗಿ ಸಂವಿಧಾನ ಸಮಿತಿಗೆ ನೇಮಕ ಮಾಡಲಾಗುತ್ತದೆ.

ನಮ್ಮ ದೇಶದ ಸಂವಿಧಾನವನ್ನು ರಚಿಸಿ ಅನುಮೋದನೆ ಪಡೆಯುವ ಸಲುವಾಗಿ ಸಂವಿಧಾನ ಸಮಿತಿಯು ಎರಡು ವರ್ಷ 11 ತಿಂಗಳ ಕಾಲ 165 ದಿನಗಳ ಚರ್ಚೆಗಳನ್ನ ನಡೆಸಿ
ನವಂಬರ್ 26,1949 ರಲ್ಲಿ ಸಮಿತಿ ಅನುಮೋದನೆಯನ್ನು ಪಡೆಯುತ್ತದೆ. 1949ರ ನವಂಬರ್ 25ರಂದು ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನದ ವಿಚಾರದಲ್ಲಿ ಮಾಡಿದಂತಹ ಸಮಾರೋಪದ ಮಾತುಗಳು ಈ ದೇಶದ ಅತ್ಯಂತ ಪವಿತ್ರವಾದಂತಹ ದಾಖಲೆಯಾಗಿರುತ್ತದೆ.

ನಮ್ಮ ದೇಶದ ಸಂವಿಧಾನದಲ್ಲಿ 395 ಆರ್ಟಿಕಲ್ ಗಳು 22 ಭಾಗ ಒಳಗೊಂಡ ಒಂದು ಲಕ್ಷದ 45,000 ಪದಗಳು ಒಳಗೊಂಡಿರುವ ಪವಿತ್ರ ಗ್ರಂಥ ವಾಗಿರುತ್ತದೆ.

ನಮ್ಮ ದೇಶದ ಸಂವಿಧಾನದ ಕರಡು ಪ್ರತಿಯನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ನೆರವಾದವರು ಕರ್ನಾಟಕ ದವರಾದ ಎಂ ಎನ್ ರಾವ್ ರವರು.

ನಮ್ಮ ದೇಶದ ಸಂವಿಧಾನವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಕಾರಣದಿಂದಾಗಿ ಅನೇಕ ರೀತಿಯ ಸಾಮಾಜಿಕ ಸಮಾನತೆ ಹಕ್ಕುಗಳು ದೊರೆಯಲು ಸಾಧ್ಯವಾಗಿರುತ್ತದೆ. ಸ್ವತಹ ಶೋಷಣೆಗೆ ಗುರಿಯಾಗಿದ್ದ ಇವರಿಗೆ ಸಮಾಜದ ಪರಿಸ್ಥಿತಿ ಅರಿತಿದ್ದ ಕಾರಣದಿಂದಾಗಿ ಈ ಸಂವಿಧಾನದಲ್ಲಿ ಮಾನವೀಯ ಮೌಲ್ಯಗಳು ಹೆಚ್ಚು ಕಾಣಲು ಸಾಧ್ಯವಾಗಿರುತ್ತದೆ.

ನಮ್ಮ ದೇಶದ ಸಂವಿಧಾನ ಪ್ರಪಂಚದ ಎಲ್ಲ ದೇಶಗಳ ಸಂವಿಧಾನಕ್ಕಿಂತ ಅತ್ಯಂತ ಶ್ರೇಷ್ಠವಾದದ್ದು. ನಮ್ಮ ಹೆಮ್ಮೆಯ ಸಂವಿಧಾನದ ಆಚರಣೆಯ ದಿನವನ್ನು ಆಚರಿಸುವ ಸಂದರ್ಭದಲ್ಲಿ ಅಂದರೆ ಗಣರಾಜ್ಯೋತ್ಸವದ ದಿನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಕಡ್ಡಾಯವಾಗಿ ಇಟ್ಟು ಗೌರವವನ್ನು ಸಲ್ಲಿಸಬೇಕೆಂಬ ಕನಿಷ್ಠವಾದಂತಹ ಆಲೋಚನೆಯೂ ಬಹಳಷ್ಟು ನಾಗರಿಕರಿಗೆ ಇಲ್ಲದಿರುವುದು ಬೇಸರದ ಸಂಗತಿ ಆಗಿರುತ್ತದೆ.

ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ದಿನಗಳಲ್ಲಿ ಶಾಲಾ ಮಕ್ಕಳು, ಕೆಲವು ಸಂಘ ಸಂಸ್ಥೆಯವರು, ರಾಜಕೀಯ ಪಕ್ಷದವರು ಧ್ವಜ ಹಾರಿಸಿ ರಾಷ್ಟ್ರಗೀತೆಯನ್ನು ಹಾಡೋದರ ಮೂಲಕ ಗೌರವವನ್ನು ಸಲ್ಲಿಸುತ್ತಾರೆ. ಆದರೆ ಬಹಳಷ್ಟು ನಾಗರಿಕರು ರಾಷ್ಟ್ರಧ್ವಜವನ್ನ ಹಾರಿಸುವುದಿಲ್ಲ. ಅದಕ್ಕೆ ಒಂದನೆಯನ್ನೂ ಸಲ್ಲಿಸುವುದಿಲ್ಲ. ಇನ್ನು ರಾಷ್ಟ್ರಗೀತೆಯನ್ನು ಹೇಳುವುದೂ ಇಲ್ಲ. ಸರ್ಕಾರಿ ಕಚೇರಿಗಳಲ್ಲಿ ಈ ಎರಡು ದಿನಗಳಲ್ಲಿ ಕಡ್ಡಾಯವಾಗಿ ಹಾಜರಾಗಿ ರಾಷ್ಟ್ರ ಧ್ವಜವನ್ನು ಹಾರಿಸಿ ರಾಷ್ಟ್ರಗೀತೆಯನ್ನು ಹಾಡಬೇಕೆಂಬ ಆದೇಶವನ್ನು ಹೊರಡಿಸಬೇಕಾಗಿದೆ. ಕೆಲವು ಶಾಲಾ ಕಾಲೇಜುಗಳಲ್ಲಿ ಈ ದಿನಗಳನ್ನು ಆಚರಿಸುವುದೇ ಇಲ್ಲ. ಇನ್ನು ವ್ಯಾಪಾರಸ್ಥರು ತಮಗೇನು ಸಂಬಂಧವಿಲ್ಲ ಎಂಬಂತೆ ಅವರ ಪಾಡಿಗೆ ಅವರು ಇರುತ್ತಾರೆ. ಆದುದರಿಂದ ಕೇಂದ್ರ ಸರ್ಕಾರ ಆಗಸ್ಟ್ 15 ಮತ್ತು ಜನವರಿ 26ರಂದು ಕಡ್ಡಾಯವಾಗಿ ಪ್ರತಿಯೊಬ್ಬರು ತಮ್ಮ ವ್ಯಾಪಾರದ ಸ್ಥಳದಲ್ಲಿ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ರಾಷ್ಟ್ರಗೀತೆಯನ್ನು ಹಾಡಬೇಕೆಂಬ ಆದೇಶವನ್ನು ಹೊರಡಿಸದಿದ್ದರೆ ಎರಡು ದಿನಗಳು ಕೆಲವರ ಪಾಲಿಗೆ ಪವಿತ್ರವಾದ ದಿನವಾಗುತ್ತದೆ, ಮತ್ತೆ ಕೆಲವರ ಪಾಲಿಗೆ ಕೇವಲ ರಜಾದಿನವಾಗುತ್ತದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply