ಚಾರಿತ್ರಿಕ ಅವಶೇಷಗಳಾಗುತ್ತಿರುವ ನೀರು ಸೇದುವ ಬಾವಿಗಳು

2 years ago

ಸಿರಿವಂತರು ತಮ್ಮ ಮನೆಯ ಬಳಕೆಗಷ್ಟೇ ಈಗಿನ ಕಾಲದಲ್ಲಿ ಬೋರ್ ವೆಲ್ ಕೊರೆಸುವಂತೆ ಹಿಂದಿನ ಕಾಲದಲ್ಲಿಯೂ ಧನಿಕರು ತಮ್ಮ ಮನೆಗಷ್ಟೇ ಪ್ರತ್ಯೇಕವಾದ ಸೇದುವ ಬಾವಿಯನ್ನು ತೋಡಿಸುತ್ತಿದ್ದರು. ಅನೇಕ ಸಿರಿವಂತರ ಮನೆಗಳಲ್ಲಿ ಈಗಲೂ ಹಳೆ ಕಾಲದ ಬಾವಿಗಳಿರುವುದನ್ನು ನಾನು ಕಂಡಿದ್ದೇನೆ. ಅಂತಹ ಬಹುಪಾಲು ಬಾವಿಗಳು ನೀರಿಲ್ಲದೆ ತಳ ಒಣಗಿ ಜೀವ ಬಿಟ್ಟಿರುವುದನ್ನೂ ನಾನು ನೋಡಿದ್ದೇನೆ. ಇತ್ತೀಚೆಗೆ ಗೌರಿಬಿದನೂರು ತಾಲ್ಲೂಕಿನ ರಮಾಪುರ ಗ್ರಾಮದಲ್ಲಿ ಕ್ವಾಮಟಿಗ ಶೆಟ್ಟರ ಮನೆಯೊಳಗಿರುವ ಬಾವಿಯೊಂದು ತಳ ಒಣಗಿ ಜೀವ ಬಿಟ್ಟಿರುವುದನ್ನು ನೋಡಿದೆ. ನನ್ನ ಆತ್ಮೀಯ ಸಾಮಾಜಿಕ ಹೋರಾಟದ ಗೆಳೆಯರಾದ ಶ್ರೀರಂಗಾಚಾರ್ Srirangachari Ramapura ಅವರ ಹುಟ್ಟೂರು ಇದು.

ರಮಾಪುರದ ಶೆಟ್ಟರ ಬಾವಿಯ ತೊಲೆಗಂಬಕ್ಕೆ ಕಟ್ಟಿರುವ ರಾಟೆಯು (Pulley wheel) ನೀರು ಸೇದುವ ಹೆಣ್ಣುಮಕ್ಕಳ ಕೈಬಳೆಯ ನಾದ ಕೇಳದೆ ಅತ್ತೂ ಅತ್ತೂ ನಿರ್ಜೀವವಾಗಿ ನೇತು ಬಿದ್ದಿದೆ. ಎಷ್ಟು ಹೆಣ್ಣುಮಕ್ಕಳ ಗೋಳುಸಿರಿಗೂ, ನಿಟ್ಟುಸಿರಿಗೂ, ಕಿಲಕಿಲ ನಗುವಿಗೂ, ಮನದ ಬೇಗುದಿಗೂ, ಕೋಪತಾಪಕ್ಕೂ, ಸಾಂತ್ವನಕ್ಕೂ, ಹತಾಶೆಗೂ, ಸೋಲು-ಗೆಲುವಿಗೂ ಸಾಕ್ಷಿಯಾಗಿತ್ತೋ ಈ ಸೇದು ಬಾವಿ !

ಸಿರಿವಂತರ ಮನೆಗಳ ಒಂದೊಂದು ಸೇದುವ ಬಾವಿಯ ಎದೆಯೊಳಗೆ ಎಷ್ಟೊಂದು ಜನರ ಬಾಳಿನ ಸತ್ಯ ಕಥೆಗಳು ಅಡಗಿರಬಹುದು ?! ತಮ್ಮ ಸಿರಿತನಕ್ಕೆ ತಕ್ಕಂತೆ ಮಗಳಿಗೆ ಸುಂದರವಾದ ಗಂಡು ಸಿಕ್ಕಿದನೆಂದು ನಗುವ ತಾಯಿಯ ಆನಂದ, ತನ್ನ ಅಣ್ಣನಿಗೆ ಉತ್ತಮ ಪಗಾರ ತೆಗೆಯುವ ಸರ್ಕಾರಿ ನೌಕರಿ ಸಿಕ್ಕಿತೆಂದು ಸಂತೋಷಪಡುವ ತಂಗಿಯ ಖುಶಿ, ತನ್ನ ಅಪ್ಪ ಆಸ್ಪತ್ರೆಯಿಂದ ಹುಷಾರಾಗಿ ಮನೆಗೆ ಬರಲೆಂಬ ಮಗಳ ಪ್ರಾರ್ಥನೆ, ಗಂಡು ಸಿಗದೆ ಪ್ರಾಯ ಮೀರಿದ ಹೆಣ್ಣುಮಗಳ ಯಾತನೆ, ಕದ್ದು ಕಳ್ಳ ಬಸಿರಾಗಿ ಅದೇ ಬಾವಿಗೆ ಹಾರಿ ಪ್ರಾಣಬಿಡಲು ಬಯಸಿದಾಗಿನ ಉಮ್ಮಳಿಕೆ, ಅತ್ತೆಯ ವಿರುದ್ಧ ನೇರವಾಗಿ ಸಿಟ್ಟು ವ್ಯಕ್ತಪಡಿಸಲಾಗದಿರುವ ಸೊಸೆಯ ಸಾಪಳಿಕೆ, ಸಣ್ಣ ಸಣ್ಣ ವಿಷಯಗಳಿಗೂ ದೊಡ್ಡ ರಂಪ-ರಾದ್ದಾಂತ ಮಾಡುತ್ತಿದ್ದ ಗಂಡನ ಜೊತೆಯಲ್ಲಿ ಬದುಕಲಾರದೆ ತವರಿಗೆ ಬಂದ ಹೆಣ್ಣಿನ ಬಿಸಿಯುಸಿರು, ಕರಿಮಣಿ ಹರಿದು ಮಸಣದ ಗುಂಡಿಗೆ ಗಂಡನನ್ನಿರಿಸಿ ಬಂದು ಬಿಕ್ಕಿ ಬಿಕ್ಕಿ ಅತ್ತವಳ ದುಃಖ, ತನ್ನ ಗಂಡನನ್ನು ಒಲಿಸಿಕೊಂಡು ಸಂಸಾರಕ್ಕೆ ಹುಳಿ ಹಿಂಡಿದ ನೆರೆ ಸವತಿಯ ವಿರುದ್ಧದ ಕೋಪ, ತಮ್ಮ ಮನೆಯಲ್ಲಿ ಜೀತಕ್ಕಿರುವ ಹುಡುಗನ ಪ್ರೀತಿಗಾಗಿಯೇ ಬಡಿದುಕೊಳ್ಳುವ ಮನೆಯೊಡತಿಯ ಹೃದಯದ ಬಡಿತ ಹೀಗೆಯೇ ಎಷ್ಟೆಲ್ಲಾ ಹೃದಯಗಳ ಬಾಳಕತೆ ಈ ಸೇದುವ ಬಾವಿಗಳ ಎದೆಯಲ್ಲಿ ಅಡಗಿರಬಹುದು?

ಮನೆಗಳಲ್ಲಿಯೇ ಸೇದುವ ಬಾವಿಗಳನ್ನು ತೋಡಿಸಿಕೊಂಡ ಸಿರಿವಂತರ ಮನೆಗಳ ಹೆಣ್ಣುಮಕ್ಕಳು ಯಾರ ಬಳಿ ತಮ್ಮ ಅಂತರಂಗವನ್ನು ಮುಕ್ತವಾಗಿ ಬಿಚ್ಚಿಡಲು ಸಾಧ್ಯ? ಅಂತಹ ಹೆಣ್ಣುಮಕ್ಕಳಿಗೆ ಅಪ್ಪ- ಅಮ್ಮನ ಫೋಟೋ, ಮನೆಯ ಕಂಬದ ಮೇಲೆ ಕೊರೆದಿರುವ ಗೊಂಬೆ, ಕೊಟ್ಟಿಗೆಯ ಹಸು- ಎಮ್ಮೆ, ಮಂಚದ ಮೇಲಿನ ಹಾಸಿಗೆ ತಲೆದಿಂಬು, ಮದ್ದು ನಾಯಿಮರಿ ಆಸರೆಯಾಗಿ ಇಂಥವುಗಳ ಹತ್ತಿರ ಮಾತ್ರ ತಮ್ಮ ಅಂತರಂಗವನ್ನು ತೆರೆದಿಡಬಲ್ಲರು. ಇವು ಆ ಹೆಣ್ಣುಮಕ್ಕಳ ಆಸರಿಕೆ ಬೇಸರಿಕೆಯನ್ನಾಗಲೀ ಕಳವಳವನ್ನಾಗಲೀ ಅರ್ಥಮಾಡಿಕೊಳ್ಳಲು ಅಥವಾ ಸಮಸ್ಯೆಯನ್ನು ನೀಗಲು ಸಾಧ್ಯವೇ?

“ಊರಿಗೆ ಬಂದವಳು ನೀರಿಗೆ ಬರದೇ ಇರುತ್ತಾಳಾ?!” ಎಂಬ ಗಾದೆ ಮಾತಿನಂತೆ ಊರಿಗೆ ಸೊಸೆಯಾಗಿ ಬಂದವಳಾಗಲೀ ಅಥವಾ ಗಂಡನನ್ನು ಬಿಟ್ಟು ತವರುಮನೆ ಸೇರಿದವಳಾಗಲೀ ಅಂತೂ ಹೆಣ್ಣುಮಕ್ಕಳು ಸೇದುವ ಬಾವಿಗೆ ನೀರು ಸೇದಲು ಹೋಗಲೇಬೇಕಿತ್ತು. ಆಗಿನ ಕಾಲದಲ್ಲಿ ಹಳ್ಳಿಗಳಾಗಲೀ ಅಥವಾ ಪಟ್ಟಣಗಳಾಗಲೀ ಜನಸಾಮಾನ್ಯರು ಹೊಳೆ, ಹಳ್ಳ, ಕೆರೆ, ಬಾವಿ, ಕಲ್ಯಾಣಿ, ಗೋಕಟ್ಟೆ ಇಂತಹ ಜಲಮೂಲಗಳ ಬಳಿಗೆ ಬಟ್ಟೆ ತೊಳೆಯಲು, ಪಾತ್ರೆಗಳನ್ನು ಬೆಳಗಲು, ದನಕರುಗಳಿಗೆ ನೀರು ಕುಡಿಸಲು ಇನ್ನೂ ಮುಂತಾದ ಕೆಲಸಗಳಿಗೆ ಇದೇ ನೀರಿನ ಮೂಲಗಳನ್ನು ಆಶ್ರಯಿಸಲೇಬೇಕಿತ್ತು. ಅವರೆಲ್ಲರೂ ಕುಡಿಯುವ ನೀರಿಗಾಗಿ ಆಶ್ರಯಿಸುತ್ತಿದ್ದದ್ದು ಸೇದುವ ಬಾವಿಗಳೇ ಆಗಿದ್ದವು. ಹೆಣ್ಣುಮಕ್ಕಳು ಸೇದುವ ಬಾವಿಯ ಬಳಿಗೆ ನೀರು ತರಲೆಂದು ಸಾಲಾಗಿ ಹೋಗುತ್ತಿದ್ದರು. ಗುಟ್ಟು ಗುಮಾನಿ ಹಂಚಿಕೊಳ್ಳಲು ತನಗಿಷ್ಟದ ನಂಬಿಕಸ್ಥ ಜೀವವೊಂದನ್ನು ಹೆಣ್ಣುಮಗಳು ನೀರು ಸೇದುವಾಗ ಇದೇ ಸೇದು ಬಾವಿಯ ಬಳಿಯೋ, ಬಟ್ಟೆ ಒಗೆಯುವಾಗ ಕೆರೆಯ ಬಳಿಯೋ ಹೀಗೆಯೇ ಗುರುತಿಸಿಕೊಂಡು ಸ್ನೇಹ ಬೆಳೆಸುತ್ತಿದ್ದಳು. ‘ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ ತಾರೆ ಬಿಂದಿಗೆಯಾ’ ‘ಎತ್ತಿಗಂತಾ ನಾನು ಬರ್ತೀನಿ ಎಮ್ಮೆಗಂತಾ ನೀನು ಬಾರೆ ಕುಂತು ನಿಂತು ಮಾತನಾಡೋಣ’ ಎಂದು ಜನಸಾಮಾನ್ಯರ ಹೆಣ್ಣುಮಕ್ಕಳಿಗಿದ್ದ ಬಂಧುತ್ವ ಬೆಸೆಯುವ ಅವಕಾಶಗಳು, ತಮ್ಮ ಮನೆಗೆಂದೇ ಪ್ರತ್ಯೇಕವಾದ ಸೇದು ಬಾವಿ ತೋಡಿಸಿಕೊಂಡ ಸಿರಿವಂತರ ಮನೆಗಳ ಹೆಣ್ಣುಮಕ್ಕಳಿಗಿರಲಿಲ್ಲ.

ಕೇವಲ ನಾಲ್ಕು ದಶಕಗಳ ಹಿಂದೆಯಷ್ಟೇ‌ ಗ್ರಾಮಿಣ ಮತ್ತು ಪಟ್ಟಣ ಪ್ರದೇಶಗಳ ಜನರ ಕುಡಿಯುವ ನೀರಿಗೆ ಆಸರೆಯಾಗಿದ್ದದ್ದು ಸೇದುವ ಬಾವಿಗಳೇ ಆಗಿದ್ದವು. ಎಲ್ಲರಿಗೂ ಸಾಕಷ್ಟು ನೀರುಣಿಸುವ ಶಕ್ತಿಯನ್ನು ಹೊಂದಿದ್ದ ಬಾವಿಗಳು ನಗರೀಕರಣ ಮತ್ತು ಕೈಗಾರೀಕರಣ ಪ್ರಕ್ರಿಯೆಗಳಿಂದಾಗಿ ಅಂತರ್ಜಲ ಮಟ್ಟದ ಕುಸಿತದಿಂದ ಕ್ರಮೇಣವಾಗಿ ಬತ್ತಿಹೋಗತೊಡಗಿದವು. ಆಗ ಬಂದದ್ದೇ ನೀರನ್ನು ಜಗ್ಗುವ ಬೋರ್ ವೆಲ್ ಅಥವಾ ಕೊಳವೆ ಬಾವಿ ! ಬೋರ್ ವೆಲ್ ಪರಿಚಯದೊಂದಿಗೆ ಸೇದುವ ಬಾವಿ, ಸೇದುವ ಹಗ್ಗ, ರಾಟೆ ನಿರ್ಲಕ್ಷ್ಯಕ್ಕೊಳಗಾದವು. ಕ್ರಮೇಣವಾಗಿ ನೀರೊತ್ತುವ ಕೊಳವೆ ಬಾವಿಗಳ ಬದಲಿಗೆ ನೀರಿನ ಕೊಳಾಯಿಗಳೇ ಮನೆ ಬಾಗಿಲುಗಳಿಗೂ ಬೆಡ್ ರೂಮುಗಳಿಗೂ  ಹರಿದು ಬಂದ ಪರಿಣಾಮವಾಗಿ ಸೇದುವ ಬಾವಿಗಳು ಚಾರಿತ್ರಿಕ ಅವಶೇಷಗಳಾಗಿ ಉಳಿದುಕೊಂಡಿವೆ. ನೀರಿಲ್ಲದೆ ತಳ ಒಣಗಿ ವಾಟೆಗರೆದು ನಿರ್ಜಿವ ಹೆಣಗಳಂತೆ ಮುಗಿಲಿಗೆ ಬಾಯಿ ತೆರೆದುಕೊಂಡಿವೆ. ಹೆಣಗಳಂತೆ ಕಾಣಿಸುತ್ತಿರುವ ಬಾವಿಗಳನ್ನು ಮತ್ತು ಕಲ್ಯಾಣಿಗಳನ್ನು ಮಳೆ ನೀರಿನ ಮರುಪೂರಣಕ್ಕೆ ಬಳಸಿಕೊಂಡ ಪಕ್ಕದಲ್ಲಿ ಅಂತರ್ಜಲ ವೃದ್ಧಿಸಿ ಸೇದುವ ಬಾವಿಗಳಿಗೆ ಮತ್ತೊಮ್ಮೆ ನೀರುಣಿಸುವ ಶಕ್ತಿ ಬರುತ್ತದೆ.

ಇಂದಿಗೂ ಸಾವಿರಾರು ಸೇದುವ ಬಾವಿಗಳು ನೀರು ಕೊಡುವ ಶಕ್ತಿಯನ್ನು ಉಳಿಸಿಕೊಂಡಿವೆ. ಅವುಗಳನ್ನು ನಾವಾಗಿಯೇ ಕೊಲ್ಲುವುದು ಬೇಡ. ಅಲಕ್ಷಿತ ಬಾವಿಗಳನ್ನು  ಸರ್ಕಾರ, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಾರ್ವಜನಿಕರು ಯೋಜನಾಬದ್ಧವಾಗಿ ಪುನರುಜ್ಜಿವನಗೊಳಿಸಲು ಮುಂದಾಗಬೇಕು. ಆಗ ಈ ಸೇದುವ ಬಾವಿಗಳಿಂದಲೂ ಶುದ್ಧ ನೀರನ್ನು ಕುಡಿಯಲು ಸಾಧ್ಯವಾಗುತ್ತದೆ. ಸೇದುವ ಬಾವಿಯು ಕೇವಲ ಭೌತರೂಪಿಯಾಗದೆ ಭಾವರೂಪಿಯೂ ಆಗುತ್ತದೆ.

– ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿ

Leave a Reply