ದೇಶ ಕಂಡ ಶ್ರೇಷ್ಠ ನಾಟಕಕಾರ, ನಟ, ಬರಹಗಾರ ಗಿರೀಶ್ ಕಾರ್ನಾಡ್ ಜನ್ಮ ಜಯಂತಿ

2 years ago

ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟಂತಹ ಎಂಟು ಜನ ಮಹನೀಯರ ಸಾಲಿನಲ್ಲಿ ಗಿರೀಶ್ ಕಾರ್ನಾಡ್ ರವರು ಒಬ್ಬರಾಗಿರುತ್ತಾರೆ.

1938ರ ಮೇ 19 ರಂದು ಹುಟ್ಟಿದಂತಹ ಇವರು ಜೂನ್ ಹತ್ತನೇ ತಾರೀಕು 2019ರಲ್ಲಿ ತಮ್ಮ 81ನೇ ವಯಸ್ಸಿನಲ್ಲಿ ನಿಧನರಾಗಿರುತ್ತಾರೆ.

ವಿಶ್ವದ ಶ್ರೇಷ್ಠ ನಾಟಕಕಾರರಲ್ಲಿ ಒಬ್ಬರಾಗಿದ್ದ ಇವರು ತಮ್ಮ ಸಾವಿನಲ್ಲಿ ಅತ್ಯಂತ ಸರಳತೆಯನ್ನು ಮೆರೆದಿರುತ್ತಾರೆ. ಇವರ ಕುಟುಂಬದ ಸದಸ್ಯರು ಕಾರ್ನಾಡರ ಸಾವಿನ ಗಳಿಗೆಯಲ್ಲಿ ಸರ್ಕಾರದಿಂದ ಯಾವುದೇ ರೀತಿಯ ಸರ್ಕಾರಿ ಗೌರವಗಳನ್ನ ಪಡೆಯದೆ ಗಣ್ಯರು ಮತ್ತು ಅತಿ ಗಣ್ಯರುಗಳ ಅಂತಿಮ ದರ್ಶನಕ್ಕೆ ಅವಕಾಶಗಳನ್ನು ಕಲ್ಪಿಸದೆ ಅತ್ಯಂತ ಸರಳವಾಗಿ ಯಾವುದೇ ಶಾಸ್ತ್ರಗಳಿಲ್ಲದೆ ಗಿರೀಶ್ ಕಾರ್ನಾಡರ ಶವಸಂಸ್ಕಾರವನ್ನು ನೆರವೇರಿಸಿ ಸಂಸ್ಕಾರದಲ್ಲೂ ಸರಳತೆಯನ್ನು ಮೆರೆದಿರುತ್ತಾರೆ.

ಒಬ್ಬ ವ್ಯಕ್ತಿ ಎಷ್ಟು ಪ್ರಕಾರದಲ್ಲಿ ತನ್ನ ಸಾಧನೆಯನ್ನು ಮಾಡಬಹುದು ಎನ್ನುವುದಕ್ಕೆ ಗಿರೀಶ್ ಕಾರ್ನಾಡ್ ರವರ ಬದುಕು ದೊಡ್ಡ ಉದಾಹರಣೆಯಾಗಿದೆ. ಒಬ್ಬ ನಾಟಕಕಾರರಾಗಿ ಅವರು ಬರೆದಿರುವಂತಹ ನಾಟಕಗಳು ವಿಶ್ವದ ಅನೇಕ ಭಾಷೆಗಳಿಗೆ ಭಾಷಾಂತರವಾಗಿದೆ. ವಿಶ್ವದ ಅನೇಕ ನಾಟಕ ಉತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಇದಲ್ಲದೆ ಒಬ್ಬ ಸಂಭಾಷಣೆಗಾರರಾಗಿ ಚಲನಚಿತ್ರಗಳಿಗೆ ಇವರು ಬರೆದಿರುವಂತಹ ಸಾಹಿತ್ಯವೂ ಸಹ ಶ್ರೇಷ್ಠವಾಗಿದೆ.

ಒಬ್ಬ ನಿರ್ದೇಶಕರಾಗಿ ಇವರು ನಿರ್ದೇಶಸಿದ ಚಲನಚಿತ್ರಗಳು ಸದಾ ಕಾಲ ನೆನಪಿನಲ್ಲಿರುವಂಥದ್ದಾಗಿದೆ. ಜೊತೆಗೆ ಕನ್ನಡ ಹಿಂದಿ ತೆಲುಗು ಮಲಯಾಳಿ ತಮಿಳು ಮರಾಠಿ ಹೀಗೆ ಅನೇಕ ಭಾಷೆಯ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಬಹುತೇಕ ಚಲನಚಿತ್ರಗಳಲ್ಲಿ ಇವರ ಅಭಿನಯಕ್ಕೆ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳು ಬಂದಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದಿರುವ ಇವರು ಅನೇಕ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರದ ಪದ್ಮಶ್ರೀ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳು ಇವರಿಗೆ ಲಭಿಸಿದೆ. ಕಾಳಿದಾಸ ಸನ್ಮಾನ ಪ್ರಶಸ್ತಿ ಇವರ ಸಾಧನೆಗೆ ಸಂದಿದೆ. ಜ್ಞಾನಪೀಠ ಪ್ರಶಸ್ತಿಯನ್ನು ಪಡೆಯುವುದರ ಮೂಲಕ ಕನ್ನಡ ಸಾಹಿತ್ಯದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಇವರು ಬರೆದಂತಹ ಅನೇಕ ನಾಟಕಗಳು ಸದಾ ಕಾಲ ರಂಗಭೂಮಿಯ ಮೇಲೆ ಪ್ರದರ್ಶನಗೊಳ್ಳುತ್ತಲೇ ಇರುತ್ತವೆ. ತಲೆದಂಡ, ಹಯವದನ, ಯಯಾತಿ, ತುಘಲಕ್ ಮುಂತಾದಂತಹ ನಾಟಕಗಳು ಕನ್ನಡ ರಂಗಭೂಮಿಯನ್ನು ಶ್ರೀಮಂತಗೊಳಿಸಿದೆ‌

ಹಿಂದಿ ಮತ್ತು ವಿಶೇಷವಾಗಿ ಕನ್ನಡನ ಚಲನಚಿತ್ರದಲ್ಲಿ ನಟರಾಗಿ ನಟಿಸಿ ನಾಲ್ಕು ಬಾರಿ ಫಿಲಂ ಫೇರ್ ಪ್ರಶಸ್ತಿಯನ್ನು ಪಡೆದಂತಹ ಹೆಗ್ಗಳಿಕೆ ಇವರದಾಗಿದೆ. ಇವರು ನಟಿಸಿದಂತಹ ಸಂಸ್ಕಾರ ಚಲನಚಿತ್ರ ದೊಡ್ಡ ಸುದ್ದಿಯನ್ನು ಮಾಡಿದೆ ಯ. ಅದೇ ರೀತಿಯಲ್ಲಿ ಇವರು ನಿರ್ದೇಶಿಸಿದಂತಹ ಚಲನಚಿತ್ರಗಳು ಸಹ ಚಿತ್ರರಂಗದ ಗೌರವವನ್ನು ಹೆಚ್ಚಿಸಿದೆ. ತಬ್ಬಲಿಯು ನೀನಾದೆ ಮಗನೇ, ಕಾನೂನು ಹೆಗ್ಗಡತಿ ಮತ್ತು ಇವರು ನಟಿಸಿದ ಮತ್ತೊಂದು ಪ್ರಮುಖ ಚಿತ್ರ ಶಿವರಾಜ್ ಕುಮಾರ್ ರವರ ಏಕೆ 47 ಇದು ಸಹ ದೊಡ್ಡ ಹೆಸರನ್ನು ಮಾಡಿತು.

ಭೈರಪ್ಪನವರ ವಂಶವೃಕ್ಷ ಕಾದಂಬರಿ ಆಧಾರಿತ ಚಲನಚಿತ್ರವನ್ನು ಇವರು ನಿರ್ದೇಶಿಸಿರುತ್ತಾರೆ.

ಧಾರವಾಡದಲ್ಲಿ ಬಿಎ ಪದವಿಯನ್ನು ಪಡೆದವರು, ಮುಂದೆ ಲಂಡನ್ನಿನ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರ ಅರ್ಥಶಾಸ್ತ್ರ ರಾಜಕೀಯ ಶಾಸ್ತ್ರ ಇವುಗಳಲ್ಲಿ ಎಮ್ಎ ಪದವಿಯನ್ನು ಪಡೆದು, ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಮುದ್ರಣ ವಿಭಾಗದಲ್ಲಿ ಪ್ರಮುಖರಾಗಿ ಕರ್ತವ್ಯವನ್ನ ನಿರ್ವಹಿಸಿ, ತದನಂತರ ಪೂರ್ಣ ಪ್ರಮಾಣದಲ್ಲಿ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಭಾರತ ದೇಶದಲ್ಲಿ ತಮ್ಮ ಸಾಹಿತ್ಯ ಕೃಷಿಯನ್ನು ಮತ್ತು ರಂಗಭೂಮಿ ಚಟುವಟಿಕೆಯನ್ನ ನಡೆಸಿ ಕನ್ನಡ ನಾಡಿನ ಹೆಮ್ಮೆಯ ಸುಪುತ್ರರಾಗಿ ಮೆರೆದಿರುತ್ತಾರೆ.

ಇವರ ಮಾತುಗಳು ಮತ್ತು ಅಭಿಪ್ರಾಯಗಳು ಹಲವಾರು ಸಂದರ್ಭದಲ್ಲಿ ವಿವಾದಗಳಿಗೆ ಕಾರಣವಾಗಿತ್ತು. ಆದರೂ ಸಹ ಹೊಸ ವಿಚಾರದ ಚರ್ಚೆಗೆ ನಾಂದಿ ಆಗಿತ್ತು‌.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply