ಮಂಗಳೂರು: ಶಿಕ್ಷಣವು ಯಾವತ್ತಿಗೂ ಮೌಲ್ಯಾಧಾರಿತ ಶಿಕ್ಷಣ ಆಗಿರಬೇಕು. ಇಂದಿನ ಸಮಾಜವು ಮನುಷ್ಯ ಪ್ರೀತಿಯನ್ನು ಮರೆತಿದೆ. ಮಾನವೀಯ ಮೌಲ್ಯಗಳ ಕೊರತೆಯು ಆಧುನಿಕ ಸಮಾಜದಲ್ಲಿ ಎದ್ದು ಕಾಣುತ್ತಿದೆ ಎಂದು ಹಿರಿಯ ಜನಪದ ವಿದ್ವಾಂಸರೂ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯ ಕೆ.ಕೆ ಪೇಜಾವರ ಹೇಳಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಅವರು ಚಿಣ್ಣರ ಚಾವಡಿ ಮಂಗಳೂರು ಮತ್ತು ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಜೆಪ್ಪು ಸಂತ ಜೆರೋಸಾ ಶಾಲೆಯಲ್ಲಿ 5 ದಿನಗಳ ಕಾಲ ನಡೆಯಲಿರುವ ಚಿಣ್ಣರ ಕಲರವ-2024 ಮಕ್ಕಳ ಸಂತಸ ಕಲಿಕಾ ಕಾರ್ಯಾಗಾರವನ್ನು ಉದ್ಘಾಟಿಸುತ್ತಾ ಈ ಮಾತುಗಳನ್ನು ಹೇಳಿದರು.

ಮಕ್ಕಳು ಹಲವು ಸನ್ನಿವೇಶಗಳಲ್ಲಿ ತಪ್ಪಿತಸ್ಥರಂತೆ ಕಂಡರೂ ಅದು ಮಕ್ಕಳ ತಪ್ಪಾಗಿರದೆ ಹೆತ್ತವರೇ ಅದಕ್ಕೆ ಹೊಣೆಯಾಗಿರುತ್ತಾರೆ. ಈ ಸಮಾಜವು ಅಸ್ವಸ್ಥಗೊಂಡ ಪರಿಣಾಮ ಪ್ರೀತಿಯ ಕುಸುಮಗಳಂತಿರುವ ಮಕ್ಕಳು ಕೂಡ ಬದಲಾಗುತ್ತಾರೆ. ಹಾಗಾಗಿ ಮರೆತ ಮಾನವೀಯ ಗುಣಗಳನ್ನು ಮರು ನೆನಪಿಸುವುದು ಈಗಿನ ಶಿಕ್ಷಣದ ಪ್ರಮುಖ ಕೆಲಸವಾಗಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸುವುದೇ ನಿಜವಾದ ಶಿಕ್ಷಣ ಎಂದರು.

ಸೈಂಟ್ ಜೆರೋಸಾ ಶಾಲೆಯ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಅರ್ಪಿತಾ ಮಾತನಾಡಿ, ಮಕ್ಕಳು ಸಾಧನೆಯ ಗುರಿಯನ್ನು ಇಟ್ಟುಕೊಂಡಿರಬೇಕು. ಆಸಕ್ತಿ ಇರುವ ವಲಯಗಳ ಕುರಿತು ಗಮನ ಹರಿಸಿ ನಿರಂತರ ಬೆನ್ನು ಬಿದ್ದು ಅಭ್ಯಾಸಿಸಿ ಆ ಗುರಿಯತ್ತ ಮುನ್ನಡೆಯಬೇಕು ನಿರಂತರ ಅಭ್ಯಾಸ ಮಾತ್ರ ಮಕ್ಕಳನ್ನು ಬೆಳೆಸಬಲ್ಲದು ಎಂದು ಹೇಳಿದರು.

ಪ್ರಗತಿಪರ ಚಿಂತಕರಾದ ಮಾಕ್ಸಿಂ ಡಿ’ಸೋಜ ಬೋಂದೆಲ್ ಮಾತನಾಡಿ, ವಿಜ್ಞಾನವು ಮಕ್ಕಳ ನಿತ್ಯದ ಪಾಠವಾಗಬೇಕು. ಸಂವಿಧಾನದ ಅರಿವು ಮಕ್ಕಳಿಗಿರಬೇಕು. ಭಾರತದ ಸಂವಿಧಾನದ ಘನತೆಯು ಮಕ್ಕಳಿಗೆ ತಿಳಿದಿರಬೇಕು ಎಂದರು.

ಸಮುದಾಯ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಮನೋಜ್ ವಾಮಂಜೂರು ಮಾತನಾಡಿ, ಮಕ್ಕಳನ್ನು ಮೊಬೈಲ್ ಗಳಿಂದ ದೂರವಿರಿಸಿ ಮಕ್ಕಳಿಗೆ ಪುಸ್ತಕದ ಪ್ರೀತಿಯನ್ನು ಹೆಚ್ಚಿಸಿ,ಓದುವ ಹವ್ಯಾಸ ಮಕ್ಕಳಿಗೆ ಹೊಸ ಜಗತ್ತನ್ನು ನೀಡಬಲ್ಲದು ಎಂದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಕೋಶಾಧಿಕಾರಿಯಾದ ಡೊಲ್ಫಿ ಡಿ’ಸೋಜ ವಹಿಸಿದ್ದರು. ವೇದಿಕೆಯಲ್ಲಿ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋ, ಮಾಜಿ ಜಿಲ್ಲಾ ವಿಧ್ಯಾರ್ಥಿ ನಾಯಕರಾದ ಮೆಲ್ವಿನ್ ಪಾಯಸ್, ಪ್ರಗತಿಪರ ಚಿಂತಕರಾದ ಬಿ.ಎನ್ ದೇವಾಡಿಗ, ವಸಂತ ಕುಮಾರ್, ಜಿಲ್ಲಾ ಯುವ ನಾಯಕರಾದ ಸ್ಟ್ಯಾನಿ ಲೋಬೋ, ಸಾಮಾಜಿಕ ಚಿಂತಕರಾದ ಮರ್ಲಿನ್ ರೇಗೋ ಮೊದಲಾದವರು ಉಪಸ್ಥಿತರಿದ್ದರು.

ಈ ಶಿಬಿರದಲ್ಲಿ ಒಟ್ಟು 150 ವಿದ್ಯಾರ್ಥಿಗಳು ಭಾಗಿಗಳಾಗಿ ಮುಂದಿನ ಐದು ದಿನಗಳ ಕಾಲ ವಿವಿಧ ತರಬೇತಿಯನ್ನು ಪಡೆಯಲಿದ್ದಾರೆ ಎಂದು ಶಿಬಿರದ ನಿರ್ದೇಶಕ ಪ್ರವೀಣ್ ವಿಸ್ಮಯ ಬಜಾಲ್ ರವರು ತಿಳಿಸಿದರು.
ಚಿಣ್ಣರ ಚಾವಡಿ ಸಂಚಾಲಕ ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರೆ, ಕೊನೆಯಲ್ಲಿ ಚಿಣ್ಣರ ಚಾವಡಿಯ ಯೋಗಿತಾ ಉಳ್ಳಾಲರವರು ವಂದಿಸಿದರು.




