ವಾಲ್ಮೀಕಿ ನಿಗಮ ಹಗರಣ: ಎಸ್ಟಿ ಶಾಸಕರು, ಸಂಸದರು, ಸಚಿವರು ಕೂಡಲೇ ರಾಜೀನಾಮೆ ಕೊಡಲಿ: ಚಿ.ನಾ.ರಾಮು

2 years ago

ಧ್ವನಿಯಿಲ್ಲದವರ ಹಣ ಕದ್ದ ಕಾಂಗ್ರೆಸ್ ಸರ್ಕಾರ ತೊಲಗಲಿ

ಸರ್ಕಾರದ ಯೋಜನೆಗಳ ನೆಪದಲ್ಲಿ ಜನರ ಹಣ ಲೂಟಿ ಮಾಡುವುದು ಕಾಂಗ್ರೆಸ್ ಪಕ್ಷದ ಡಿಎನ್ಎಯಲ್ಲೇ ಇದೆ. ಆ ಪಕ್ಷದಲ್ಲಿ ಪ್ರಧಾನಿಯಾಗಿ ಅಧಿಕಾರದಲ್ಲಿದ್ದಾಗಲೇ ರಾಜೀವ್ ಗಾಂಧಿಯವರು, “ಸರ್ಕಾರವು ಕಲ್ಯಾಣ ಮತ್ತು ಬಡತನ ನಿವಾರಣೆಗೆ ಖರ್ಚು ಮಾಡುವ ಪ್ರತಿ ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಉದ್ದೇಶಿತ ಫಲಾನುಭವಿಗೆ ತಲುಪುತ್ತದೆ” ಎಂದು ಹೇಳುವ ಮೂಲಕ ಕಾಂಗ್ರೆಸ್ ಭ್ರಷ್ಟಾಚಾರವನ್ನು ತಾವೇ ತೆರೆದಿಟ್ಟಿದ್ದರು. ಈಗ ಅವರ ಸುಪುತ್ರನ ಕಾಲದಲ್ಲಿ ಕಾಂಗ್ರೆಸ್ ಆ 15 ಪೈಸೆಯೂ ತಲುಪದಂತೆ ಸ್ವಾಹ ಮಾಡುವುದರ ಜೊತೆಗೆ ದಲಿತರ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಬ್ಯಾಂಕ್ ಖಾತೆಗಳಿಂದಲೇ ನೆರವಾಗಿ ಹಗಲು ದರೋಡೆ ಮಾಡುವ ಮಟ್ಟವನ್ನು ಮುಟ್ಟಿದೆ. ಇದು ನಾಚಿಕೆಗೇಡು. ದಲಿತರ ಶಾಪ ಕಾಂಗ್ರೆಸ್ ಪಕ್ಷವನ್ನು ಸುಟ್ಟು ಬೂದಿ ಮಾಡದೇ ಬಿಡುವುದಿಲ್ಲ.

ದಲಿತರ ಹಣ ಲೂಟಿ ಮಾಡುವುದು ಆ ಮೂಲಕ ಅವರನ್ನು ಅಭಿವೃದ್ಧಿ, ಮುಖ್ಯವಾಹಿನಿಯಿಂದ ದೂರವಿಡುವ ಆಟವನ್ನು ಕಾಂಗ್ರೆಸ್ ಸ್ವಾತಂತ್ರ್ಯ ಬಂದಾಗಿನಿಂದಲೂ ವ್ಯವಸ್ಥಿತವಾಗಿ ಆಡುತ್ತಲೇ ಬಂದಿದೆ. ಇದಕ್ಕೆ ಸದ್ಯದ ಉದಾಹರಣೆ ವಾಲ್ಮೀಕಿ ನಿಗಮ ಹಗರಣ.

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಅವರ ಆತ್ಮಹತ್ಯೆಯ ನಂತರ ಬೆಳಕಿಗೆ ಬಂದ ಹಗರಣದಲ್ಲಿ ಸಚಿವ ನಾಗೇಂದ್ರ ಹಾಗೂ ನಿಗಮದ ಅಧಿಕಾರಿಗಳು ಬಂಧನಕ್ಕೊಳಗಾಗಿದ್ದಾರೆ‌. ಮತ್ತೊಬ್ಬ ಶಾಸಕ ಬಸನಗೌಡ ದದ್ದಲ್ ಶೀಘ್ರವೇ ಬಂಧನಕ್ಕೊಳಗಾಗಲಿದ್ದಾರೆ.‌ ಆದರೆ ಹಗರಣದ ಪ್ರಮುಖ ಸೂತ್ರದಾರರು ‘ಕೋತಿ ತಿಂದು ಮೇಕೆ ಮೂತಿಗೆ ಒರೆಸಿದಂತೆ’ ಆರಾಮವಾಗಿ ಕೂತಿದ್ದಾರೆ.

ಈ ಹಗರಣ ಪೂರ್ವ ನಿಯೋಜಿತವಾಗಿದ್ದು ಹಣವನ್ನು ನಿಗಮದ ಖಾತೆಯಿಂದ ನೇರ ಲೂಟಿ ಮಾಡಲಾಗಿದೆ. 2024-25 ನೇ ಸಾಲಿನ ಯೋಜನೆಗಳಿಗೆ ಮೀಸಲಿಟ್ಟ 187 ಕೋಟಿ ಮೊತ್ತದಲ್ಲಿ 88 ಕೋಟಿ ಹಣವನ್ನು ನಿಗಮದ ಅಧ್ಯಕ್ಷರ ಗಮನಕ್ಕೂ ಬಾರದೇ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಂ.ಜಿ ರಸ್ತೆಯ ಶಾಖೆಯಿಂದ ಅನಧಿಕೃತ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಬ್ಯಾಂಕ್‌ನವರು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಲೆಕ್ಕಾಧಿಕಾರಿಗಳ ಸಹಿ ಪಡೆದು ನಿಗಮದ ಖಾತೆಯಿಂದ ಬೇರೆ ಬೇರೆ ಖಾತೆಗಳಿಗೆ ಹಂತ-ಹಂತವಾಗಿ 187.33 ಕೋಟಿ ರೂ. ವರ್ಗಾವಣೆ ಮಾಡಿದ್ದರು. ಮಾ.4ರಂದು 25 ಕೋಟಿ ರೂ., ಮಾ.6ರಂದು 25 ಕೋಟಿ ರೂ., ಮಾ.21ರಂದು 44 ಕೋಟಿ ರೂ., ಮಾ.22ರಂದು 43.33 ಕೋಟಿ ರೂ. ಹಾಗೂ ಮೇ 21ರಂದು 50 ಕೋಟಿ ರೂ. ವರ್ಗಾವಣೆಯಾಗಿದೆ. ಈ ಹಣ ಹೈದರಾಬಾದ್ ರತ್ನಾಕರ ಬ್ಯಾಂಕ್ ಲಿಮಿಟೆಡ್ ನಲ್ಲಿ ಖಾತೆ ಹೊಂದಿರುವ 10 ಖಾಸಗಿ ಕಂಪನಿಗಳಿಗೆ ಅಲ್ಲಿಂದ ಬೇರೆ ಬೇರೆ ಕಡೆಗೆ ಹೋಗಿ ಲೋಕಸಭಾ ಚುನಾವಣೆಗೆ ಬಳಕೆಯಾಗಿದೆ.

ಕರ್ನಾಟಕ ರಾಜ್ಯವನ್ನು ಕಾಂಗ್ರೆಸ್ ಪಕ್ಷ ಎಟಿಎಂನಂತೆ ಬಳಸುತ್ತಿದೆ ಎಂದು ನಾವು ಹೇಳುತ್ತಲೇ ಬಂದಿದ್ದೆವು. ದಲಿತರ ಹಣ ಕದ್ದು ಚುನಾವಣೆಗೆ ಹಣ ರವಾನೆ ಮಾಡುವ ಕಾಂಗ್ರೆಸ್ ಪಕ್ಷ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದೆ. ಹಣಕಾಸು ಸಚಿವರೂ ಆಗಿರುವ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇಷಾರೆಯಿಲ್ಲದೆ ಇಷ್ಟು ದೊಡ್ಡ ಮೊತ್ತದ ಹಣ ನಿಗಮದ ಬ್ಯಾಂಕ್ ಖಾತೆಯಿಂದ ವರ್ಗಾವಣೆಯಾಗಲು ಸಾಧ್ಯವೇ ಇಲ್ಲ. ಏಕೆಂದರೆ ಹಣಕಾಸು ಇಲಾಖೆಯ ಗಮನಕ್ಕೆ ಬಾರದೆ ಸರ್ಕಾರದ ಯಾವುದೇ ಇಲಾಖೆಯ 3 ಕೋಟಿ ರೂ. ಹೆಚ್ಚಿನ ಹಣ ಬಿಡುಗಡೆ, ವರ್ಗಾವಣೆಯಾಗಲು ಸಾಧ್ಯವೇ ಇಲ್ಲದ ತಾಂತ್ರಿಕ‌ ಸುಧಾರಣೆ ಜಾರಿಯಲ್ಲಿದೆ. ಹೀಗಾಗಿ ಮುಖ್ಯಮಂತ್ರಿಗಳು ಹಗರಣದ ನೇರ ಹೊಣೆಗಾರರು.

ಮಾನ್ಯ ಸಿದ್ದರಾಮಯ್ಯನವರು ಇತ್ತೀಚಿನ ವರ್ಷಗಳಲ್ಲಿ  ವಿತಂಡವಾದ ಪ್ರವೀಣರಾಗಿದ್ದು ಈ ಹಗರಣದಲ್ಲೂ ವಿತಂಡ ಮಾಡುತ್ತಾ ಹಗಲು ದರೋಡೆ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇದು ಸಿಕ್ಕಿಹಾಕಿಕೊಂಡ ಮೇಲೂ ಕಳ್ಳ ನಾ ಕದ್ದಿಲ್ಲ ಎಂದು ಜೋರು ಬಾಯಿ ಮಾಡಿದಂತೆ ಆಗುತ್ತಿದೆ. ಅವರು ಹಗರಣದ ಬಗ್ಗೆ ಪ್ರಶ್ನೆ ಮಾಡುವ ಪತ್ರಕರ್ತರನ್ನು ಏಕವಚನದಲ್ಲಿ ಬೆದರಿಸುವುದು, ಅಟ್ಟಹಾಸದ ಶೈಲಿಯಲ್ಲಿ ಧಮಕಿ ಹಾಕುವುದರ ಬಗ್ಗೆ ಇತ್ತೀಚೆಗೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಸಹಾಯಕ ಸಂಪಾದಕರಾದ ಶಿವಶಂಕರ್ ಅವರೇ ಬಹಿರಂಗವಾಗಿ ಖಂಡಿಸಿರುವುದು ಸಿದ್ದರಾಮಯ್ಯ ಸಿಕ್ಕಿಬಿದ್ದ ನಂತರ ಹತಾಶೆಗೊಳಗಾಗಿರುವುದನ್ನು ರುಜುವಾತು ಮಾಡುತ್ತಿದೆ. ಮುಖ್ಯಮಂತ್ರಿಯವರು ಕೂಡಲೇ ರಾಜೀನಾಮೆ ನೀಡಿ ಇರುವ ಅಲ್ಪ ಸ್ವಲ್ಪ ಗೌರವ ಉಳಿಸಿಕೊಳ್ಳಬೇಕು.

ಇನ್ನು ವಾಲ್ಮೀಕಿ ನಿಗಮದ ಹಗರಣದ ಕುರಿತು ರಾಜ್ಯದ 15 ಎಸ್ಟಿ ಮೀಸಲು ಕ್ಷೇತ್ರಗಳ ಪೈಕಿ ಗೆದ್ದಿರುವ 14 ಕಾಂಗ್ರೆಸ್ ಶಾಸಕರು, ಮೂವರು ಸಂಸದರು, ಸಚಿವ ಸತೀಶ್ ಜಾರಕಿಹೊಳಿ, ಕೆ‌.ಎನ್.ರಾಜಣ್ಣ ಮತ್ತಿತರರು ಪರಿಶಿಷ್ಟ ಪಂಗಡಗಳ ಜನರ ಹಣ ಕೊಳ್ಳೆ ಹೊಡೆದ ತಮ್ಮ ಪಕ್ಷದ ನಾಯಕರ ಬೆಂಬಲಕ್ಕೆ ನಿಂತಿರುವುದು ಅವರ ಗುಲಾಮಗಿರಿತನವನ್ನು ತೋರಿಸುತ್ತಿದೆ‌.

ಸತೀಶ್ ಜಾರಕಿಹೊಳಿ (ಯಮಕನಮರಡಿ), ಕೆ.ಎನ್.ರಾಜಣ್ಣ (ಮಧುಗಿರಿ), ರಾಜಾ ವೇಣುಗೋಪಾಲ ನಾಯಕ (ಸುರಪುರ), ಹಗರಣದ ರೂವಾರಿಗಳಾದ ನಾಗೇಂದ್ರ ( ಬಳ್ಳಾರಿ), ಬಸನಗೌಡ ದದ್ದಲ್ (ರಾಯಚೂರು ಗ್ರಾಮಾಂತರ), ಜಿ. ಹಂಪಯ್ಯ ನಾಯಕ್ (ಮಾನ್ವಿ), ಬಸನಗೌಡ ತುರುವಿಹಾಳ್ (ಮಸ್ಕಿ), ಡಾ.ಶ್ರೀನಿವಾಸ್ ವಿ.ಟಿ (ಕೂಡ್ಲಿಗಿ), ಜೆ.ಎನ್‌.ಗಣೇಶ್ (ಕಂಪ್ಲಿ), ಬಿ.ಎಂ. ನಾಗರಾಜ್ (ಸಿರಗುಪ್ಪ), ಎನ್.ವೈ. ಗೋಪಾಲಕೃಷ್ಣ (ಮೊಳಕಾಲ್ಮೂರು), ಟಿ.ರಘುಮೂರ್ತಿ (ಚಳ್ಳಕೆರೆ), ಬಿ.ದೇವೇಂದ್ರಪ್ಪ (ಜಗಳೂರು), ಅನಿಲ್ ಚಿಕ್ಕಮಾದು (ಹೆಗ್ಗಡದೇವನಕೋಟೆ), ಸಂಸದರಾದ ಕುಮಾರನಾಯಕ್  (ರಾಯಚೂರು), ತುಕಾರಾಂ (ಬಳ್ಳಾರಿ), ಪ್ರಿಯಾಂಕ ಜಾರಕಿಹೊಳಿ (ಚಿಕ್ಕೋಡಿ) – ಇಷ್ಟು ಮಂದಿ ಕಿಂಚಿತ್ತೂ ಗೌರವ ಇದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪರಿಶಿಷ್ಟ ಪಂಗಡಗಳ ಜನರ ಪರ ನಿಲ್ಲಲಿ.

ಎಸ್ಟಿ ಮೀಸಲು ಕ್ಷೇತ್ರಗಳಿಂದ ಒಂದೇ ಸಮುದಾಯದ ‘ನಾಯಕ’ ಜಾತಿಯವರು ಮಾತ್ರ ಆಯ್ಕೆಯಾಗುತ್ತಾ 15 ಕ್ಷೇತ್ರಗಳಲ್ಲಿ ಜೆಂಡಾ ಊರಿದ್ದಾರೆ. ರಾಜಕೀಯವಾಗಿ ಪ್ರಬಲವಾಗಿರುವ ಇವರು ಸಣ್ಣ ಅತಿಸಣ್ಣ ಸಮುದಾಯಗಳನ್ನು ತುಳಿಯುತ್ತಿದ್ದಾರೆ‌.  ವಾಲ್ಮೀಕಿ ಅಭಿವೃದ್ಧಿ ನಿಗಮ ಪರಿಶಿಷ್ಟ ಪಂಗಡದ 56 ಜಾತಿಗಳಿಗೂ ಸೇರಿದ ನಿಗಮವಾಗಿದ್ದು ಈ ‘ನಾಯಕ’, ‘ಬೇಡ’ ರಲ್ಲದೆ 49 ಸಣ್ಣ ಅತಿಸಣ್ಣ ಸಮುದಾಯಗಳೂ ಈ ನಿಗಮದ ಫಲಾನುಭವಿಗಳು. ಹಕ್ಕಿಪಿಕ್ಕಿ, ಇರುಳಿಗ, ಸೋಲಿಗ, ಮಲೆಕುಡಿಯ, ಕೊರಗ, ಮೇದಾರ, ಸಿದ್ದಿಯಂತಹ ಧ್ವನಿಯಿಲ್ಲದವರ ಹಣವನ್ನು ಕೊಳ್ಳೆ ಹೊಡೆದಿರುವವರು ನಮ್ಮ ವಾಲ್ಮೀಕಿ (ನಾಯಕ) ಸಮುದಾಯದವರು ಎಂಬ ಕಾರಣಕ್ಕೆ ಇಷ್ಟೂ ಜನಪ್ರತಿನಿಧಿಗಳು ಮೌನವಾಗಿದ್ದಾರಾ ಉತ್ತರಿಸಬೇಕು.

ಸಣ್ಣ ಅತಿಸಣ್ಣ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯವಂತೂ ಇಲ್ಲ. ಅವರ ಸಾಮಾಜಿಕ ಏಳಿಗೆಗೆ ತೆಗೆದಿಟ್ಟ ಹಣವನ್ನೂ ಲೂಟಿ ಮಾಡಿದರೆ ಆ ಅಶಕ್ತ ಸಮುದಾಯಗಳು ಏನು ಮಾಡಬೇಕು?

ಕಾಂಗ್ರೆಸ್ ಪಕ್ಷದವರು ಶ್ರೀರಾಮನ ವಿರೋಧಿಗಳು. ಅವರು ರಾಮಾಯಣ ಬರೆದ ವಾಲ್ಮೀಕಿ ಹೆಸರಿನ ನಿಗಮದಲ್ಲೂ ದೋಚುವ ಮೂಲಕ ಮಹರ್ಷಿ ವಾಲ್ಮೀಕಿ ಅವರಿಗೂ ಅಗೌರವ ತಂದಿದ್ದಾರೆ. ಈ ಮುಖ್ಯಮಂತ್ರಿ, ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ಯಾವುದೇ ನೈತಿಕತೆ ಇಲ್ಲ.

ಬಡವರ ಹಣ ತಿಂದು ಮುಕ್ಕಿದವರು ಉದ್ಧಾರವಾದ ಉದಾಹರಣೆ ಚರಿತ್ರೆಯಲ್ಲೇ ಇಲ್ಲ. ಈಗ ದುರ್ಬಲ ವರ್ಗಗಳ ಶಾಪ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟಿಯೇ ತಟ್ಟುತ್ತದೆ. ಪ್ರಾಯಶ್ಚಿತಾರ್ಥವಾಗಿ ಇವರು ಅಧಿಕಾರದಿಂದ ತೊಲಗಲಿ. ಇಲ್ಲದಿದ್ದರೆ ಜನ ಲೋಕಸಭಾ ಚುನಾವಣೆಯಲ್ಲಿ ಕಲಿಸಿದ ಪಾಠಕ್ಕಿಂತಲೂ ಕಠಿಣ ಪಾಠವನ್ನು ಇವರಿಗೆ ಬೋಧಿಸಿ ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮ ಮಾಡಲಿದ್ದಾರೆ.

ಡಾ.ಚಿ.ನಾ.ರಾಮು, ರಾಷ್ಟ್ರೀಯ ಅಧ್ಯಕ್ಷ, ಅಖಿಲ ಭಾರತ ದಲಿತ ಕ್ರಿಯಾ ಸಮಿತಿ

Leave a Reply