ಮೊನ್ನೆ ಬೆಳಿಗ್ಗೆ ಬೆಳಗಾವಿ ಜಿಲ್ಲೆಯ ರಾಮದುರ್ಗದಿಂದ ಚಿಕ್ಕ ನರಗುಂದ ಎಂಬುವವರು ಕರೆ ಮಾಡಿ ಮಾತನಾಡುತ್ತಾ, ನಿಮ್ಮ ನಂಬರ್ ಅನ್ನು ಸುರಕೋಡ್ ಬಳಿ ತೆಗೆದುಕೊಂಡೆ ಎಂದರು. ಅವರ ಜೊತೆ ಸುರಕೋಡ್ ಅವರ ಹೋರಾಟದ ಬದುಕು, ಸಾಹಿತ್ಯದ ಸೇವೆ ಕುರಿತಾಗಿ ಇಪ್ಪತ್ತು ನಿಮಿಷ ಮಾತನಾಡಿದೆ.
ಎಂಬತ್ತರ ದಶಕದಲ್ಲಿ ಲೋಹಿಯಾ ಬರಹಗಳನ್ನು, ಕಿಶನ್ ಪಟ್ನಾಯಕ್ , ಜೆ.ಪಿ.ಚಿಂತನೆಗಳನ್ನು ಕನ್ನಡಕ್ಕೆ ಪರಿಚಯಿಸುವುದರ ಜೊತೆಗೆ ಅಮೃತಾ ಪ್ರೀತಂ, ಸಾಹಿರ್ ಲೂಧ್ವಿಯಾನಿ ಅವರ ಬದುಕನ್ನು ಹಾಗೂ ಸಾದತ್ ಹಸನ್ ಮಾಂಟೋ ಕಥೆಗಳನ್ನು ಕನ್ನಡಿಗರಿಗೆ ಉಣಬಡಿಸಿದ ಹಸನ್ ನಯಿಂ ಅವರು ಜೀವನ ಪೂರ್ತಿ ಬಡತನವನ್ನು ಹಾಸಿ ಹೊದ್ದು ಮಲಗಿದವರು.
ತನ್ನ ಕುಟುಂಬ, ಸಹೋದರರ ಕುಟುಂಬವನ್ನು ಸಾಕಿ ಸಲುಹಿದ ಇವರು ಕೈ ಮಗ್ಗದ ನೇಕಾರಿಕೆ, ಪತ್ರಿಕೆ ಏಜೆನ್ಸಿ, ಜೀವ ವಿಮಾ ನಿಗಮದ ಏಜೆಂಟ್ ಆಗಿ ಎಲ್ಲಾ ಮಕ್ಕಳನ್ನು ದಡ ದಾಟಿಸಿದ ಹೃದಯವಂತರು. ಬಡತನದ ನಡುವೆಯೂ ಸಾಹಿತ್ಯದಲ್ಲಿ ಕೃಷಿ ಮಾಡಿದ ಅಪರೂಪದ ಚಿಂತಕರು.
ತಮ್ಮ ಸಹೋದರನ ಮಕ್ಕಳ ಜೊತೆ ವ್ಯವಹಾರದ ನಿಮಿತ್ತ ಹುಬ್ಬಳ್ಳಿಗೆ ಬಂದಾಗಲೆಲ್ಲಾ ತಪ್ಪದೇ ಕರೆ ಮಾಡಿ ಭೇಟಿ ಮಾಡುತ್ತಿದ್ದರು. ಸಾಮಾನ್ಯವಾಗಿ ಧಾರವಾಡದ ಮನೆಗೆ ಬಂದು ಹೋಗುತ್ತಿದ್ದರು.
ಸುರಕೋಡ್ ಮುಂಗಾರು ಪತ್ರಿಕೆಯಲ್ಲಿ ಸ್ವಲ್ಪ ದಿನಗಳ ಕಾಲ ದುಡಿದರು. ಎನ್.ಎಸ್. ಶಂಕರ್ ಮತ್ತು ಇವರ ಗೆಳೆತನ ಮತ್ತು ಹಾಸ್ಯ ಅಪರೂಪದ್ದು. ಇಬ್ಬರು ಒಟ್ಟಿಗೆ ಸೇರಿಬಿಟ್ಟರೆ ನಾವು ಕರುಳು ಬಾಯಿಗೆ ಬರುವಂತೆ ನಗುವುದೊಂದೇ ಬಾಕಿ.
ಸುರಕೋಡ್ ಅವರನ್ನು ಶಂಕರ್ ಹೊಸಬರಿಗೆ ಪರಿಚಯ ಮಾಡಿಕೊಡುವಾಗ, ಇವರು ಸುರಕೋಡೆ ಎಂಬ ನನ್ನ ಗೆಳೆಯರು. ಬೆಂಗಳೂರಿನ ಮದ್ಯದ ಉದ್ಯಮಿ ಶ್ರೀ ಹರಿಖೋಡೆ ಅವರ ಬೀಗರು. ಹರಿಖೋಡೆ ಮಗಳನ್ನು ಇವರ ಮಗನಿಗೆ ತಂದುಕೊಂಡಿದ್ದಾರೆ ಎಂದು ಹೇಳುವಾಗ, ಸುರಕೋಡ್ ಹೊಸಗೆಳೆಯರಿಗೆ ಕೈ ಕೊಟ್ಟು ಕುಲುಕುವ ಬದಲಾಗಿ, ಕೈಯಿಂದ ಬಾಯಿ ಮುಚ್ಚುಕೊಂಡು ನಗು ತಡೆಯಲಾಗದೆ ಒದ್ದಾಡುತ್ತಿದ್ದರು.
ಒಮ್ಮೆ ಧಾರವಾಡದ ವಿದ್ಯಾವರ್ಧಕ ಸಂಘ ಎನ್.ಎಸ್. ಶಂಕರ್ ಅವರನ್ನು ವಿಶೇಷ ಉಪನ್ಯಾಸಕ್ಕೆ ಆಹ್ವಾನಿಸಿತ್ತು. ಆ ದಿನ ರಾಮದುರ್ಗದಿಂದ ಸುರಕೋಡ್ ಬಂದಿದ್ದರು. ಕಾರ್ಯಕ್ರಮ ಮುಗಿದ ನಂತರ ಹೋಟೆಲ್ ಧಾರವಾಡದ ರೂಂ ನಲ್ಲಿ ರಾತ್ರಿ ಒಂಬತ್ತು ಗಂಟೆಯಿಂದ ಬೆಳಗಿನ ಜಾವ ಮೂರು ಗಂಟೆಯವರೆಗೆ ಇಬ್ಬರ ನಡುವಿನ ಮಾತುಕತೆ ಮತ್ತು ಜೋಕುಗಳಿಗೆ ನಾನು ಸಾಕ್ಷಿಯಾಗಿದ್ದೆ.
ಸುರಕೋಡ್ ಅವರಂತಹ ಹಿರಿಯ ಚಿಂತಕರನ್ನು ಈ ಸರ್ಕಾರ ಸೂಕ್ತವಾಗಿ ಬಳಸಿಕೊಳ್ಳುವ ಅವಶ್ಯಕತೆ ಇದೆ. ಲೋಹಿಯಾ, ಅಂಬೇಡ್ಕರ್ ಸಂಪುಟಗಳನ್ನುವ ಪರಿಷ್ಕರಣೆ ಮಾಡಿ ಮರು ಮುದ್ರಣ ಮಾಡುವಾಗ, ಸುರಕೋಡ್ ಅವುಗಳ ನೇತೃತ್ವ ವಹಿಸಲು ಸಮರ್ಥರಾಗಿದ್ದಾರೆ.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




