ಕಾಂಗ್ರೆಸ್ ಪಕ್ಷದಲ್ಲಿ ಯಾವ ಸಮಸ್ಯೆಯೂ ಇಲ್ಲ, ಗೊಂದಲವೂ ಇಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

2 years ago

#noproblem #confusion #Congress #party #LakshmiHebbalkar

ಬೆಂಗಳೂರು: ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಯಾವ ಸಮಸ್ಯೆಯೂ ಇಲ್ಲ, ಗೊಂದಲವೂ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ  ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಳಗಾವಿ ರಾಜಕೀಯ ಸಮಸ್ಯೆಗಳು ಮುಗಿಯಲ್ಲ ಎಂದು ಸತೀಶ್ ಜಾರಕಿಹೊಳಿ  ಹೇಳಿದ್ದಾರೆ ಎಂದು ಮಾಧ್ಯಮದವರು ಕೇಳಿದಾಗ, ಸತೀಶ್ ಜಾರಕಿಹೊಳಿ ಅವರು ಹಾಗೆ ಹೇಳೋಕೆ ಸಾದ್ಯವೇ ಇಲ್ಲ. ಕಥೆಯೇ ಇಲ್ಲ ಮುಗಿಯೋದು ಏನಿದೆ? ಎಂದು ಪ್ರಶ್ನಿಸಿದರು.

ಸಚಿವ ಸತೀಶ್ ಜಾರಕಿಹೊಳಿ ಅವರ ಹೇಳಿಕೆಯನ್ನು ನಾನು ಗಮನಿಸಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯವಾಗಿ ಯಾವುದೇ ಸಮಸ್ಯೆಯೂ ಇಲ್ಲ. ನನ್ನ ಜೊತೆಯೂ ಯಾವ ಸಮಸ್ಯೆ ಇಲ್ಲ ಎಂದು  ಸ್ಪಷ್ಟ ಪಡಿಸಿದರು.

ನಾನು ‌ಮನೆಯ ಮುಖ್ಯಸ್ಥ: ಮತ್ತೊಂದೆಡೆ ದೆಹಲಿಯಲ್ಲಿ ಬೆಳಗಾವಿ ವಿದ್ಯಮಾನಗಳ ಕುರಿತು ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲ, ಬಿಕ್ಕಟ್ಟು ಇಲ್ಲ ಎಂದು ಹೇಳಿದರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮನೆಗೆ ನಿನ್ನೆ ದಿಡೀರ್ ಭೇಟಿ ನೀಡಿದ ಬಗ್ಗೆ ಪತಿಕ್ರಿಯಿಸಿದ ಅವರು, ನಾನು ಮನೆಯ ಮುಖ್ಯಸ್ಥ, ಎಲ್ಲರ ಮನೆಗೂ ಹೋಗುತ್ತೇನೆ. ಕೆಲವರನ್ನು ನಮ್ಮ ಮನೆಗೆ ಕರೆಸಿಕೊಳ್ಳುತ್ತೇನೆ. ಅದರಲ್ಲಿ ವಿಶೇಷವೇನು ಇಲ್ಲ. ರಾಮಲಿಂಗಾರೆಡ್ಡಿ ಮನೆಗೆ ಹೋಗಿದ್ದೇನೆ, ಪರಮೇಶ್ವರ್ ನಮ್ಮ ಮನೆಗೆ ಬರುತ್ತೇನೆ ಎಂದಿದ್ದರು ನಾನೇ ಬರುತ್ತೇನೆ ಎಂದು ಹೇಳಿದ್ದೇನೆ. ಸತೀಶ್ ಜಾರಕಿಹೊಳಿ ನಮ್ಮ ಮನೆಗೆ ಬರುವುದಾಗಿ ಹೇಳಿದರು, ಬೇಡ ನಾನೇ ಬರುತ್ತೇನೆ ಎಂದು ಹೋಗಿದ್ದೆ ಎಂದರು.

ನಮ್ಮ ಮನೆಯಲ್ಲಿ ಜಾಗವೇ ಇರುವುದಿಲ್ಲ. ಜನ ಒಬ್ಬರ ಮೇಲೆ ಒಬ್ಬರು ನುಗ್ಗುತ್ತಿರುತ್ತಾರೆ. ಮನೆಯಲ್ಲಿ ಸಮಯವೂ ಇರುವುದಿಲ್ಲ, ಜಾಗವೂ ಇಲ್ಲ. ನಮ್ಮ ಪಕ್ಷದ ಕಾರ್ಯಕರ್ತರಿಗೆ ಸಮಯವನ್ನೇ ನೀಡಲಾಗುತ್ತಿಲ್ಲ, ಇದಕ್ಕಾಗಿ ಕ್ಷಮೆ ಕೇಳುತ್ತೇನೆ ಎಂದರು.

ಕಾಂಗ್ರೆಸ್‍ನಲ್ಲಿ  ಸತೀಶ್ ಜಾರಕಿಹೊಳಿ ಮೂರನೇ ಶಕ್ತಿ ಕೇಂದ್ರವಾಗುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಒಬ್ಬರೆ ಕೆಪಿಸಿಸಿ ಅಧ್ಯಕ್ಷ ಹಾಗೂ ಒಬ್ಬರೆ ಮುಖ್ಯಮಂತ್ರಿ ಮಾತ್ರ. ಮೂರನೇ ಶಕ್ತಿ ಕೇಂದ್ರ ಇಲ್ಲ. ರಾಜ್ಯದ ಐದು ವರ್ಷ ಆಡಳಿತ ನಡೆಸಲು ಅವಕಾಶ ನೀಡಿದ್ದಾರೆ, ಅದು ಮುಗಿದ ಬಳಿಕ 2028ಕ್ಕೆ ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂಬ ವಿಶ್ವಾಸ ಇದೆಯಲ್ಲಾ ಅದೇ ಸಂತೋಷ ಎಂದರು.

ಪಂಚರಾಜ್ಯಗಳ ಚುನಾವಣೆಯ ನಂತರ ರಾಜ್ಯ ಸಚಿವ ಸಂಪುಟ ಪುನಃರಚನೆಯಾಗಲಿದೆ ಎಂಬುದು ಆಧಾರ ರಹಿತ. ಸದ್ಯಕ್ಕೆ ಅಂತಹ ಯಾವ ಬದಲಾವಣೆಗಳು ಇಲ್ಲ. ನಿಗಮ ಮಂಡಳಿಗೆ ನೇಮಕಾತಿ ಕುರಿತು ಚರ್ಚೆ ನಡೆಸಲು ನವೆಂಬರ್ 15ರ ಬಳಿಕ ಎಐಸಿಸಿ ನಾಯಕರು ರಾಜ್ಯಕ್ಕೆ ಬರುತ್ತಾರೆ ಎಂದರು.

Leave a Reply