ಬಹಳಷ್ಟು ಸಲ ನಾವು `ಭಕ್ತ’ರನ್ನು ವಿಪರೀತ ಅಂಡರ್ಎಸ್ಟಿಮೇಟ್ ಮಾಡ್ತೀವಿ. ಇನ್ಫ್ಯಾಕ್ಟ್ ಅಂತಹ ಅಂಡರ್ಎಸ್ಟಿಮೇಷನ್ಗೆ ಅವರು ಅರ್ಹರೂ ಹೌದು ಅನ್ನೋದು ಬೇರೆ ಸಂಗತಿ. ಆದ್ರೆ, ಈ ಒಂದು ವಿಚಾರದಲ್ಲಿ ಭಕ್ತರು ವಾದಿಸ್ತಿರೋದನ್ನು ನಾನಂತೂ ವೈಯಕ್ತಿಕವಾಗಿ ಒಪ್ಪುತ್ತೇನೆ.
- ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಫೇಕುಗಳ ಕಾಟ!
- ಇತಿಹಾಸದಲ್ಲೇ ದಾಖಲೆ ಬರೆಯುವಂತೆ ಬಸ್ ಟಿಕೆಟ್ ದರ ಏರಿಕೆ: ಆರ್ ಅಶೋಕ್
- ನವೆಂಬರ್ 07 ರಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನ
- ಆ್ಯಕ್ಸಿಡೆಂಟಲ್ ಸಿಎಂ ಬೊಮ್ಮಾಯಿ ಅವರೇ ಹಾವೇರಿ ಕ್ಷೇತ್ರದ ಬಗ್ಗೆ ಗಮನ ಕೊಡಿ: ಬಿ ಕೆ ಹರಿಪ್ರಸಾದ್
- 40 ದಾಟಿದ ಪುರುಷರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ?
ಪೆಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ `ಆಪರೇಷನ್ ಸಿಂಧೂರ್’ ಮೂಲಕ ಖಡಕ್ ಪ್ರತ್ಯುತ್ತರ ಕೊಟ್ಟಿದೆ. ಇದು ಪ್ರತಿಯೊಬ್ಬ ಭಾರತೀಯನ ಹೆಮ್ಮೆ. ಈ ಪ್ರತೀಕಾರದ ಆಪರೇಷನ್ ನಂತರ ಇಡೀ ಸೇನಾ ಕಾರ್ಯಾಚರಣೆಯ ಮಾಹಿತಿ ನೀಡಲು ಇಂಡಿಯನ್ ಆರ್ಮಿ ನಡೆಸಿದ ಪತ್ರಿಕಾಗೋಷ್ಠಿ ಈಗ ಸಾಕಷ್ಟು ಚರ್ಚೆಗೆ ಕಾರಣವಾಗ್ತಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಜೊತೆಗೆ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಕಾರ್ಯಾಚರಣೆಯ ವಿವರ ನೀಡಿದರು. ಇಲ್ಲಿ ಸೋಫಿಯಾ ಮತ್ತು ವ್ಯೋಮಿಕಾ ಮಹಿಳಾ ಸೇನಾಧಿಕಾರಿಗಳು ಎನ್ನುವುದು ಎಷ್ಟು ಸತ್ಯವೋ ಸೋಫಿಯಾ ಮುಸ್ಲಿಂ ಮತ್ತು ವ್ಯೋಮಿಕಾ ಸಿಖ್ ಸಮುದಾಯಕ್ಕೆ ಸೇರಿದವರು ಅನ್ನೋದೂ ಅಷ್ಟೇ ಸತ್ಯ. ರೂಢಿಗತ ಸಂಪ್ರದಾಯಕ್ಕೆ ಭಿನ್ನವಾಗಿ ಪತ್ರಿಕಾಗೋಷ್ಠಿ ನಡೆಸಲು ಅಧಿಕಾರಿಗಳನ್ನು ಆಯ್ಕೆ ಮಾಡಿಕೊಂಡದ್ದು ಮತ್ತು ಆ ಆಯ್ಕೆಯಲ್ಲಿ ಹಿಂದೂ-ಮುಸ್ಲಿಂ-ಸಿಖ್-ಮಹಿಳಾ ಕಾಂಬಿನೇಷನ್ನ ಸಮತೋಲನಕ್ಕೆ ಒತ್ತು ಕೊಟ್ಟದ್ದು ಎದ್ದು ಕಾಣುತ್ತೆ. ಇಷ್ಟುದಿನ ಇಂಡಿಯಾದ ಇಂತಹ ಐಕ್ಯತೆಯನ್ನು ಯಾರಾದರೂ ಮಾತಾಡಿದರೆ ಅವರನ್ನು ದೇಶದ್ರೋಹಿಗಳು ಎಂದು ಕರೆಯುತ್ತಿದ್ದ ಭಕ್ತರು ಪಾಪಾ, ಈ ಅಪರೂಪದ ಕಾಂಬಿನೇಷನ್ನಿಂದ ಹೊಟ್ಟೆಯೊಳಗೆ ಅಲ್ಸರ್ ಆಗುವಷ್ಟು ಉರಿ ಬಿದ್ದಿದ್ದರೂ ಈ ಐಕ್ಯತೆಯ ಕ್ರೆಡಿಟ್ಟನ್ನು ತಮ್ಮ ಆರಾಧ್ಯದೈವ ಮೋದಿಯವರಿಗೆ ರವಾನಿಸಲು ಹರಸಾಹಸ ಪಡುತ್ತಿದ್ದಾರೆ.
ಮೋದಿಯವರಿಂದಾಗಿ ಈ ಭಕ್ತರು ದಿನಂಪ್ರತಿ ಎಂಥಾ ಕಾಂಟ್ರಾಡಿಕ್ಟರಿ ಸಿಚುಯೇಷನ್ಗಳಲ್ಲಿ ಬದುಕಬೇಕಾಗುತ್ತೆ ಎಂಬ ಅರಿವಿರದ ನಮ್ಮ ಒಂದಷ್ಟು ಪ್ರಗತಿಪರರು, ಬುದ್ದಿಜೀವಿಗಳು ‘ಇಂತಹದ್ದೊಂದು ಐಕ್ಯತೆಯ ಮತ್ತು ಇಂಕ್ಲುಷಿವಿಟಿಯ ಐಡಿಯಾ ಮೋದಿಯವರದ್ದಾಗಲು ಸಾಧ್ಯವೇ ಇಲ್ಲ; ಅದು ಸೇನೆಯ ಆಯ್ಕೆ’ ಎಂದು ತಕರಾರು ತೆಗೆದು ಭಕ್ತರನ್ನು ಗೋಳುಹೊಯ್ದುಕೊಳ್ಳುತ್ತಿದ್ದಾರೆ. ಅಲ್ಲಾರೀ, ಮಿಸ್ಟರ್ ಅಂಡ್ ಮಿಸೆಸ್ ಮಲ್ಟಿಪಲ್ ಬುದ್ದಿಜೀವಿಗಳೇ, ಭಕ್ತರು ಹೇಳ್ತಾ ಇರೋದ್ರಲ್ಲಿ ಏನು ತಪ್ಪಿದೆ? ಅಂತೀನಿ. ಈಗ ಈ ದೇಶದಲ್ಲಿ ಮೋದಿಯವರ ಆಣತಿಯಿಲ್ಲದೆ ಒಂದು ಹುಲ್ಲುಕಡ್ಡಿ ಅಲ್ಲಾಡಲು ಸಾಧ್ಯವೇ? ಅದು ಸಿಬಿಐ ಇರಬಹುದು, ಇಡಿ ಇರಬಹುದು, ಐಟಿ ಇರಬಹುದು, ಮೀಡಿಯಾಗಳಿರಬಹುದು, ಚುನಾವಣಾ ಆಯೋಗವೇ ಇರಬಹುದು ಮೋದಿಯವರ ಆಣತಿಯಿಲ್ಲದೆ ತಮ್ಮ ಸ್ವಾಯತ್ತ ಕಾರ್ಯಾಚರಣೆ ನಡೆಸುವ ಸ್ಥಿತಿಯಲ್ಲಿವೆಯೇ? ಕೆಲವರು ಇನ್ನೂ ಮುಂದುವರೆದು, ಸುಪ್ರೀಂ ಕೋರ್ಟನ್ನು ಕೂಡಾ ನಿಯಂತ್ರಿಸಲಾಗ್ತಿದೆ ಅನ್ನೋ ಆರೋಪ ಮಾಡ್ತಾರೆ. ಇದು ಕಂಟೆಂಪ್ಟ್ ಆಫ್ ಕೋರ್ಟ್ ವಿಚಾರವಾಗಿರೋದ್ರಿಂದ ನಮ್ಮ ಕಡೆಯಿಂದ ನೋ ಕಮೆಂಟ್. ಒಟ್ನಲ್ಲಿ ಸರ್ವಂ ಮೋದಿ ಮಯಂ; ಮೋದಿ ಭಯಂ!
ಹೀಗಿರುವಾಗ, ಮೋದಿಯವರ ಅನುಮತಿಯಿಲ್ಲದೆ ಸೇನಾ ಕಾರ್ಯಾಚರಣೆಯ ಪತ್ರಿಕಾಗೋಷ್ಠಿ ನಡೆಸಲು ಸಾಧ್ಯವೇ? ಆ ಪತ್ರಿಕಾಗೋಷ್ಠಿಯಲ್ಲಿ, ಮೋದಿ ಮತ್ತವರ ಭಕ್ತರು ನಖಶಿಖಾಂತ ವಿರೋಧಿಸುವ ಮುಸ್ಲಿಂ ಸಮುದಾಯಕ್ಕೆ ಸೇರಿದ ಮಹಿಳಾ ಸೇನಾಧಿಕಾರಿ ಭಾಗವಹಿಸಲು ಸಾಧ್ಯವೇ? ನೋ ಚಾನ್ಸ್! ಖಂಡಿತವಾಗಿಯೂ, ಅಲ್ಸರ್ ಗಡ್ಡೆಯ ಭಕ್ತರು ವಾದಿಸುತ್ತಿರುವಂತೆ ಹಿಂದು-ಮುಸ್ಲಿಂ-ಸಿಖ್-ಮಹಿಳಾ ಕಾಂಬಿನೇಷನ್ನ ಈ ಐಕ್ಯತೆಯ ಐಡಿಯಾ ಮೋದಿಜಿಯ ಮಾಸ್ಟರ್ ಸ್ಟ್ರೋಕ್! ಬುದ್ದಿಜೀವಿಗಳೆಲ್ಲ ಸೇರಿ ನನ್ನನ್ನು ಚೆಡ್ಡಿ ಎಂದು ಮೂದಲಿಸಿದರೂ ಚಿಂತೆಯಿಲ್ಲ, ಈ ಒಂದು ವಿಚಾರದಲ್ಲಿ ಐ ಸ್ಟ್ಯಾಂಡ್ ವಿತ್ ಮೈ ಡಿಯರ್ ಭಕ್ತ ಫೆಲೋಸ್!!!
ಆದ್ರೆ, ಈ ಮಾಸ್ಟರ್ಸ್ಟ್ರೋಕ್ ಮೂಲಕ ಮೋದೀಜಿ ರವಾನಿಸುತ್ತಿರುವ ಸಂದೇಶವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಮ್ಮ ಭಕ್ತರು ಎಡವುತ್ತಿದ್ದಾರೆ. ಪ್ರಜ್ಞಾವಂತರಾಗಿ ನಾವೀಗ ಮಾಡಬೇಕಿರುವ ಕೆಲಸ, ಅವರನ್ನು ಮತ್ತಷ್ಟು ಉರಿಸುವುದಲ್ಲ; ಮೋದೀಜಿಯ ಮಾಸ್ಟರ್ಸ್ಟ್ರೋಕ್ ಹಿಂದಿರುವ ಸಂದೇಶವನ್ನು ಭಕ್ತರಿಗೆ ಸರಿಯಾಗಿ ಅರ್ಥ ಮಾಡಿಸಿ, ಅನುಕಂಪ ತೋರುವುದು!
ಮೋದಿಯವರೇ ಇಂತಹದ್ದೊಂದು ಐಕ್ಯತೆಯ ಕಾಂಬಿನೇಷನ್ನ ಪತ್ರಿಕಾಗೋಷ್ಠಿಗೆ ಕಾರಣ ಎಂಬುದನ್ನು ನಾವು ಒಪ್ಪಿಕೊಂಡ ಮೇಲೆ, ಮೊದಲನೆಯದಾಗಿ ನಮಗೆ ಕಾಡಬೇಕಿರುವ ಪ್ರಶ್ನೆ, ಮೋದಿಜಿ ಯಾಕೆ ಹೀಗೆ ಮಾಡಿದ್ರು? ಇದು ಅವರ ಎಂಟೈರ್ ಪೊಲಿಟಿಕಲ್ ಸೈನ್ಸ್ ನ ಸಿಲಬಸ್ಗೆ ವಿರುದ್ಧವಾದುದು. ಮುಸ್ಲಿಮರನ್ನು ಗುಸ್ಬೈಟಿಯಾ (ನುಸುಳುಕೋರರು), ಹೆಚ್ಚು ಮಕ್ಕಳನ್ನು ಹೆರುವವರು, ಹಿಂದೂಗಳ ಆಸ್ತಿ ಕಿತ್ತುಕೊಳ್ಳಲು ಬಂದವರು, ಮಂಗಳಸೂತ್ರವನ್ನು ಕಿತ್ತೊಯ್ಯುವವರು ಎಂದು ಚುನಾವಣಾ ಆಯೋಗವನ್ನೂ ಕೇರ್ ಮಾಡದೆ ರಾಜಾರೋಷವಾಗಿ ಭಾಷಣಗೈದು ದ್ವೇಷಿಸುವ ಮೋದಿಯವರು ಒಬ್ಬ ಮುಸ್ಲಿಂ ಹೆಣ್ಣುಮಗಳನ್ನು ಸೇನಾ ಕಾರ್ಯಾಚರಣೆಯ ಮುಖವಾಣಿಯಲ್ಲಿ ಒಬ್ಬರಾಗಿ ಬಳಸುತ್ತಾರೆ ಎಂದರೆ ಏನರ್ಥ?
ಅರ್ಥ ಇಷ್ಟೆ….
ಚುನಾವಣೆಯಲ್ಲಿ ಓಟು ಕಬಳಿಸುವ ಸಲುವಾಗಿ ಹಿಂದೂ-ಮುಸ್ಲಿಂ ಎಂದು ಉದ್ರೇಕಿಸಿ, ಕಚ್ಚಾಡಿಸಿ, ಅಧಿಕಾರ ಪಡೆಯಬಹುದೇ ವಿನಾ? ದೇಶದ ಭದ್ರತೆ ಮತ್ತು ಪ್ರಗತಿಯ ವಿಚಾರ ಬಂದಾಗ ಇಂಥಾ ಒಡಕು ಅಪಾಯಕಾರಿ, ಒಗ್ಗಟ್ಟೇ ಅಂತಿಮ ಅನ್ನೋದು ಮೋದಿಯವರಿಗೂ ಗೊತ್ತು! ಭಾರತೀಯರಾದ ನಾವುಗಳು ಹಿಂದೂ-ಮುಸ್ಲಿಂ-ಸಿಖ್-ಕ್ರೈಸ್ತ ಎಂಬ ಬೇಧಭಾವ ಎಣಿಸದೆ ಆಂತರಿಕ ಒಗ್ಗಟ್ಟಿನ ಮಂತ್ರ ಪಠಿಸಿದಾಗ ಮಾತ್ರ ನಮ್ಮ ದೇಶವನ್ನು ದೇಶವಾಗಿ ಉಳಿಸಿಕೊಳ್ಳಬಹುದು. ಇಲ್ಲವಾದರೆ ದುರ್ಬಲ ವಿರೋಧಿಯ ಎದರೂ ನಾವು ಮುಂದೆ ಮಂಡಿಯೂರಬೇಕಾಗುತ್ತದೆ. ದೇಹದಲ್ಲಿ ಆರೋಗ್ಯ ಚೈತನ್ಯವಿದ್ದಾಗ ಮಾತ್ರ ತಾನೇ, ನಾವು ಎದುರಾಳಿಯ ಜೊತೆ ಕಾದಾಡಬಹುದು; ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ನಾವೇ ಅನಾರೋಗ್ಯದಿಂದ ಬಳಲುತ್ತಿದ್ದರೆ ಎದುರಾಳಿಗಳ ವಿರುದ್ಧ ಸೆಟೆದು ನಿಲ್ಲಲು ಸಾಧ್ಯವೇ? ಹಾಗಾಗಿ ಓಟಿಗಾಗಿ ಇಷ್ಟು ದಿನ ತಾವೇ ಹುಟ್ಟುಹಾಕಿದ್ದ ಅನಾರೋಗ್ಯಕರ ವಾತಾವರಣವನ್ನು ಸರಿಪಡಿಸಿಕೊಂಡು, ಇಂತಹ ಸಂದಿಗ್ಧ ಸಂದರ್ಭದಲ್ಲಿ ಒಗಟ್ಟಿನ ಆರೋಗ್ಯಕಾರಿ ವಾತಾವರಣ ನಿರ್ಮಿಸುವ ಸಲುವಾಗಿ ಮೋದಿಜಿ ಅನಿವಾರ್ಯವಾಗಿ ತನ್ನ ಪೊಲಿಟಿಕಲ್ ಸಿದ್ದಾಂತಕ್ಕೆ ವಿರುದ್ಧವಾದ ಈ ನಿರ್ಣಯ ಕೈಗೊಳ್ಳಬೇಕಾಗಿ ಬಂದಿದೆ. ಅಂದರೆ ಮೋದಿಯವರ ಕೋಮುವಿಭಜನೆಯ ಪೊಲಿಟಿಕಲ್ ಸಿದ್ದಾಂತ ಈ ದೇಶಕ್ಕೆ ಅಪಾಯಕಾರಿ ಅನ್ನೋದನ್ನ ಅವರೇ ಒಪ್ಪಿಕೊಂಡು, ಯುದ್ಧಕಾಲೇ ಈ ಮಾಸ್ಟರ್ಸ್ಟ್ರೋಕ್ ನಿರ್ಣಯಕ್ಕೆ ಬಂದಿದ್ದಾರೆ!
ಮೋದಿಯವರಿಗೇ ಅರ್ಥವಾದ ಈ ಸತ್ಯ, ಪಾಪಾ… ನಮ್ಮ ಅಲ್ಸರ್ ಗಡ್ಡೆಯ ಭಕ್ತರಿಗೆ ಇನ್ನೂ ಅರ್ಥವಾಗಿಲ್ಲವಲ್ಲಾ ಎಂಬ ಕನಿಕರಪೂರ್ಣ ಅಂತಃಕರಣದಿಂದ ಅವರಿಗೆ ಇದನ್ನು ಅರ್ಥ ಮಾಡಿಸಬೇಕೇ ವಿನಾ, ಅವಕಾಶ ಸಿಕ್ಕಿದೆಯೆಂದು ಎಂಡೋಸ್ಕೊಪಿ ಮೂಲಕ ಅವರ ಹೊಟ್ಟೆಯೊಳಗಿನ ಅಲ್ಸರ್ ಗಡ್ಡೆಗಳನ್ನು ಕೆರೆದು ನೋಯಿಸುವುದು ಯಾವ ನ್ಯಾಯ? ಇದನ್ನೇನಾ ಬುದ್ದ-ಗಾಂಧಿ ನಮಗೆ ಹೇಳಿಕೊಟ್ಟದ್ದು??
ಮೈ ಡಿಯರ್ ಭಕ್ತಾಸ್…. ನೀವು ನಿಜಕ್ಕೂ ಈ ದೇಶವನ್ನು ಒಂದಿಷ್ಟು ಪ್ರೀತಿಸುತ್ತಿರೋದು ನಿಜವೇ ಆದಲ್ಲಿ; ಮೋದಿಜಿಯನ್ನು ಸೀರಿಯಸ್ಸಾಗಿ ಫಾಲೋ ಮಾಡ್ತಾ ಇರೋದು ನಿಜವೇ ಆದಲ್ಲಿ, ಸಂಕಷ್ಟ ಸಮಯದಲ್ಲಿ ಈ ದೇಶವನ್ನು ಕಾಯುವ ಐಕ್ಯತೆ ಮಂತ್ರದ ಆರೋಗ್ಯಪೂರ್ಣ ಸಂದೇಶವನ್ನು ಅರ್ಥ ಮಾಡಿಕೊಂಡು ಧರ್ಮದ್ವೇಷದ ವಿಷಕಾರುವುದನ್ನು ನಿಲ್ಲಿಸಿ! ಧರ್ಮದ್ವೇಷದ ನಂಜು ಈ ದೇಶವನ್ನು ಬಲಪಡಿಸುವುದಾಗಿದ್ದರೆ, ಮೋದಿಯವರೇಕೆ ಐಕ್ಯತೆಯ-ಸಹಬಾಳ್ವೆಯ-ಒಗ್ಗಟ್ಟಿನ ಈ ಮಾಸ್ಟರ್ ಸ್ಟ್ರೋಕ್ಗೆ ಮಣೆ ಹಾಕುತ್ತಿದ್ದರು. ಒಡಕು ಅಪಾಯ; ಒಗ್ಗಟ್ಟೇ ಉಪಾಯ… ನಿಮ್ಮ ಮೋದಿಜಿ ರವಾನಿಸುತ್ತಿರುವ ಈ ಸುಪ್ತ ಸಂದೇಶವನ್ನು ಅರ್ಥ ಮಾಡ್ಕೊಂಡು ಮನುಷ್ಯರಾಗಿ ಭಕ್ತರೇ.
– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು




