ಎಂ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜನ್ಮದಿನದ ಶುಭಾಶಯಗಳು
ಇದು ಸರಿಸುಮಾರು ಒಂಬತ್ತು ದಶಕಗಳ ಹಿಂದಿನ ಕಥೆ. ಮಾಪಣ್ಣ ಮತ್ತು ಸೈಬವ್ವಾ ಕೂಲಿ ದಂಪತಿಗಳು. ಇವರು ತಮ್ಮ ನಾಲ್ಕು ಮಕ್ಕಳೊಂದಿಗೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲ್ಲೂಕಿನ ವರವಟ್ಟಿ ಗ್ರಾಮದಲ್ಲಿ ತಮ್ಮ ಜೋಪಡಿಯಲ್ಲಿ ಬದುಕಿದ್ದರು. ಅದೊಂದು ದಿನ ಆ ಗ್ರಾಮದ ಮೇಲೆ ರಜಾಕಾರರ ದಾಳಿ ನಡೆದಿತ್ತು. ಆ ಅಮಾನುಷ ದಾಳಿಯಲ್ಲಿ ಗುಡಿಸಲಿನಲ್ಲಿದ್ದ ಸೈಬವ್ವಾ ಮತ್ತು ತನ್ನ ಮೂರು ಮಕ್ಕಳು ಸುಟ್ಟು ಕರಕಲಾದರು. ಕೂಲಿಗೆಂದು ಹೊರಗೆ ಹೋಗಿದ್ದ ಮಾಪಣ್ಣ ಬಂದು ನೋಡಿ ರೋಧಿಸುತ್ತಾ ಹೊರಗೆ ಜೋಲಿಯಲ್ಲಿ ಮಲಗಿದ್ದ ಕಾರಣ ಬದುಕುಳಿದಿದ್ದ ತನ್ನ ಮಗುವನ್ನು ಎತ್ತಿಕೊಂಡು ಪಕ್ಕದ ಗುಲ್ಬರ್ಗಕ್ಕೆ ಭಾರದ ಮನಸ್ಸಿನಿಂದ ಗುಳೆಹೋದರು. ಅಲ್ಲಿ ಎಂ ಎಸ್ ಕೆ ಮಿಲ್ ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾ ಉಳಿದ ಮಗನನ್ನು ಜತನದಿಂದ ಕಾಪಾಡಿದರು. ಅದೇ ಮಗು ಮುಂದೆ ಡಿಗ್ರಿ ಕಲಿತು ಲಾ ಕಲಿತು ಕಾಲೇಜು ದಿನಗಳಲ್ಲಿಯೇ ವಿದ್ಯಾರ್ಥಿ ನಾಯಕನಾಗಿ ಬೆಳೆದು ಮುಂದೆ ಕಾರ್ಖಾನೆಯ ಕಾನೂನು ಸಲಹೆಗಾರ ಆಗಿದ್ದಲ್ಲದೆ ಸಂಯುಕ್ತ ಮಜದೂರ್ ಸಂಘಟನೆಯ ನೇತೃತ್ವವಹಿಸಿಕೊಂಡು ಸೂರಿಲ್ಲದ ನೂರಾರು ಕಾರ್ಮಿಕರಿಗೆ ಸೂರು ಕಟ್ಟಿಕೊಟ್ಟಿತು. ಆ ಮಗುವಿನ ಹೆಸರು ಎಂ. ಮಲ್ಲಿಕಾರ್ಜುನ ಖರ್ಗೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜನಸೇವೆ ಮಾಡಬೇಕೆಂಬ ಬಯಕೆ ಮತ್ತು ತನ್ನೊಳಗಿದ್ದ ಜನನಾಯಕ ಜಾಗೃತನಾದ ಕಾಲವದು. ಯಾವ ಅಗ್ನಿ ತನ್ನ ಕುಟುಂಬವನ್ನು ಸುಟ್ಟು ಭಸ್ಮ ಮಾಡಿತ್ತೋ ಅದೇ ಅಗ್ನಿ ಜ್ವಾಲೆಯನ್ನು ಮನೆಮನಗಳು ಬೆಳಗುವ ಜ್ಯೋತಿಯನ್ನಾಗಿ ಪರಿವರ್ತಿಸಲು ಬುದ್ಧ ಮಾರ್ಗದಿ ನಡೆದರು ಖರ್ಗೆ.
ಅವರ ರಾಜಕೀಯ ಜೀವನದ ಪಯಣ ಮೇಲ್ಮುಖವಾಗಿಯೇ ಚಲಿಸಿದ್ದಕ್ಕೆ ಕಾರಣ ಅವರ ನಿಷ್ಕಪಟ ಜನಸೇವೆಯೇ ಎಂದು ಮತ್ತೊಮ್ಮೆ ಹೇಳಬೇಕಿಲ್ಲ.
೧೯೪೨ ಜುಲೈ ೨೧ ರಂದು ಜನಿಸಿದ ಮಲ್ಲಿಕಾರ್ಜುನ ಖರ್ಗೆ ತಮ್ಮ ೨೭ ನೇ ವಯಸ್ಸಿನಲ್ಲಿ ಅಂದರೆ ೧೯೬೯ ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. ಇದೀಗ ತಮ್ಮ ೮೧ ನೇ ವಯಸ್ಸಿನಲ್ಲಿ ಕಾಂಗ್ರೆಸ್ ನ ರಾಷ್ಟೀಯ ಅಧ್ಯಕ್ಷರಾಗಿದ್ದಾರೆ.
೧೯೭೨ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ೯ ಬಾರಿ ವಿಧಾನಸಭೆಗೆ, ೨ ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದವರು.
ರಾಜ್ಯದಲ್ಲಿ ಗೃಹ, ಕಂದಾಯ, ಪ್ರಾಥಮಿಕ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿವಿಧ ಖಾತೆ ನಿಭಾಯಿಸಿದ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗಲಿಲ್ಲ ಎಂಬುದು ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿರುವುದು ಸುಳ್ಳಲ್ಲ.
ಕೇಂದ್ರದ ಯುಪಿಎ ಸರ್ಕಾರದ ಅವಧಿಯಲ್ಲಿ ರೈಲ್ವೆ ಖಾತೆ ಸಚಿವರಾಗಿದ್ದಾಗ ಅವರ ಕಲ್ಪನೆಯಲ್ಲಿ ರೈಲ್ವೇ ಇಲಾಖೆ ಹೊಸ ಎತ್ತರಕ್ಕೆ ಬೆಳೆದದ್ದು ಇತಿಹಾಸ. ಕಾರ್ಮಿಕ ಮತ್ತು ಉದ್ಯೋಗ ಸಚಿವರಾಗಿಯೂ ಸೇವೆ ಮಾಡಿದ್ದಾರೆ.
೨೦೦೫ ರಲ್ಲಿ ಖರ್ಗೆಯವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ (ಕೆಪಿಸಿಸಿ) ಅಧ್ಯಕ್ಷರಾದರು. ಇವರು ಅಧ್ಯಕ್ಷರಾಗಿ ಕೆಲವೇ ತಿಂಗಳಲ್ಲಿ ನಡೆದ ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಎದುರಾಳಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗಿಂತಲೂ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿತು. ಈ ಜಯದಿಂದ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಮತ್ತೆ ಚೇತರಿಸಿಕೊಳ್ಳಲು ಸಹಕಾರಿಯಾಯಿತು.
೨೦೨೨ ಅಕ್ಟೋಬರ್ ೧೯ರಂದು ಕಾಂಗ್ರೆಸ್ ಅಧ್ಯಕೀಯ ಚುನಾವಣೆ ಫಲಿತಾಂಶ ಪ್ರಕಟವಾಯಿತು. ಮಲ್ಲಿಕಾರ್ಜುನ ಖರ್ಗೆ ೭೮೯೭ ಮತಗಳನ್ನು ಪಡೆದು ಜಯಗಳಿಸಿದರು. ನಿಜಲಿಂಗಪ್ಪ ಅವರ ನಂತರ ಎ ಐ ಸಿ ಸಿ ಅಧ್ಯಕ್ಷರಾದ ಎರಡನೆಯ ಕನ್ನಡಿಗ ಎಂ. ಮಲ್ಲಿಕಾರ್ಜುನ ಖರ್ಗೆ ಅವರು.
ಇಷ್ಟು ಸುದೀರ್ಘ ರಾಜಕೀಯ ಇತಿಹಾಸವಿರುವ ೮೩ ರ ಹರೆಯದ ಮಾನ್ಯ ಎಂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇನ್ನೂ ಹೆಚ್ಚಿನ ಸ್ಥಾನಮಾನಗಳ ದೊರಕಲಿ ಹೆಚ್ಚು ಕಾಲ ಆರೋಗ್ಯದಿಂದ ನಮ್ಮೊಂದಿಗಿದ್ದು ಜನಸೇವೆಯಲ್ಲಿ ತೊಡಗಿರಲಿ ಎಂದು ಹಾರೈಸುತ್ತೇವೆ.
– ನಾಗೇಶ್ ಕಾಳೇನಹಳ್ಳಿ, ಹಿರಿಯ ಪತ್ರಕರ್ತರು




