ಹಸಿವಿಗೂ ಲೈಂಗಿಕತೆಗೂ ವ್ಯತ್ಯಾಸವಿದೆಯೇ?: ಉತ್ತರಕ್ಕೆ ಲೇಖನ ಓದಿ

4 years ago

ಕಾಮಾತುರಾಣಾಂ…

ಮಗಳನ್ನು ಬಿಡಲು ಬಸ್ ಸ್ಟಾಂಡಿಗೆ ಹೋಗುತ್ತಿದ್ದೆ. ಬಸ್ಸಿಗೆಂದು ಕಾಯುತ್ತಿದ್ದ ಐವತ್ತೈದು ಅರವತ್ತರ ವಯಸ್ಸಿನ ಓರ್ವ ಸಂನ್ಯಾಸಿ ತಟ್ಟನೆ ನನ್ನ ಮಗಳ ಕಡೆಗೆ ತಿರುಗಿ ನೋಡಿದರು. ಅವರ ದೃಷ್ಟಿ ಹರಿದಿದ್ದು ಹೇಗೆಂದರೆ ಅಯಸ್ಕಾಂತಕ್ಕೆ ಸಿಕ್ಕು ತಟ್ಟನೆ ಸೆಳೆಯಲ್ಪಟ್ಟಂತೆ. ಹಾಗೆ ನೋಡಿದ್ದೇ ಅಲ್ಲದೇ ಒಂದೇ ಸಮನೆ ಅವಳಲ್ಲೇ ದೃಷ್ಟಿಯನ್ನು ನೆಟ್ಟಿದ್ದರು. ಬಹುಶಃ ಅವರಿಗೆ ಅವಳಿಂದ ದೃಷ್ಟಿಯನ್ನು ಕೀಳಲು ಆಗಲೇ ಇಲ್ಲ. ಇನ್ನೊಂದು ವಿಷಯವೆಂದರೆ ಅವಳ ಪಕ್ಕದಲ್ಲಿಯೇ ಇದ್ದ ನನ್ನ ಕಡೆಗೆ ಅವರ ದೃಷ್ಟಿ ಹರಿಯಲೇ ಇಲ್ಲ. ನಾನು ನೇರವಾಗಿ ಅವರನ್ನು ನೋಡುತ್ತಿದ್ದೇನಾದರೂ ನಾನು ಅವರನ್ನು ನೋಡುತ್ತಲಿರುವುದು ಅವರ ಅರಿವಿಗೇ ಬರಲಿಲ್ಲ. ನನ್ನ ನೇರ ದೃಷ್ಟಿ ಅವರನ್ನು ವಿಚಲಿತರನ್ನಾಗಿ ಮಾಡಲೇ ಇಲ್ಲ. ಅವರಿಗೆ ನಾನು ಅಲ್ಲಿರುವುದರ ಅರಿವೇ ಅವರಿಗಾಗಲಿಲ್ಲ. ಸುಮಾರು ನಿಮಿಷಗಳ ಕಾಲ ಹಾಗೆಯೇ ನೋಡುತ್ತಿದ್ದ ಅವರು ತಮ್ಮ ದೃಷ್ಟಿಯನ್ನು ಅವಳಿಂದ ತೆಗೆದದ್ದು ಅವಳೇ ಅವರನ್ನು ನೇರವಾಗಿ ನೋಡಿದಾಗ. ಅವಳದೋ ದೊಡ್ಡ ಮತ್ತು ಬಟ್ಟಲ ಕಣ್ಣುಗಳು. ಬಹುಶಃ ತೀಕ್ಷ್ಣವೆನಿಸಿತೇನೋ ಅವರಿಗೆ. ಅಥವಾ ಸಿಕ್ಕಿಬಿದ್ದಂತಾಯಿತೇನೋ! ತಬ್ಬಿಬ್ಬಾದವರಂತೆ ಪಕ್ಕಕ್ಕೆ ತಿರುಗಿದರು. ಅಲ್ಲಿಂದ ಹೊರಟೇ ಬಿಟ್ಟರು. ಇವಳು ಕಣ್ಣಿಂದ ಮರೆಯಾಗುವಷ್ಟರ ಮಟ್ಟಿಗೆ ಬಸ್ ಸ್ಟ್ಯಾಂಡಿನ ಮತ್ತೊಂದು ಮಗ್ಗುಲಿಗೇ ಹೊರಟು ಹೋದರು.
ಅಶ್ಲೀಲ ಬಟ್ಟೆಗಳನ್ನು ಹಾಕಿದ್ದರೆ ಅದು ಅತ್ಯಾಚಾರಕ್ಕೆ ಕಾರಣವಾಗುತ್ತದೆ ಎಂದು ಓರ್ವ ಸಂನ್ಯಾಸಿ ಹೆಣ್ಣು ಮಕ್ಕಳ ಬಟ್ಟೆಯ ಅಭಿರುಚಿಯನ್ನು ದೂರಿದ್ದರು. ಆದರೆ ನನ್ನ ಪಕ್ಕದಲ್ಲಿ ಬರುತ್ತಿದ್ದ ನನ್ನ ಮಗಳು ಮೈ ತುಂಬಾ ಬಟ್ಟೆ ಹಾಕಿದ್ದಳು. ಆದರೆ ಆ ಸಂನ್ಯಾಸಿಯ ಕಣ್ಣುಗಳಲ್ಲಿದ್ದ ಹಸಿಬಿಸಿಯ ಹಸಿವಿನ ತೀವ್ರತೆ ಈಗಲೇ ಕಬಳಿಸಲು ಸಾಧ್ಯವೇ ಎಂದು ನೋಡುವಂತಿತ್ತು. ಅದನ್ನು ನಾವಿಬ್ಬರೂ ಗಮನಿಸಿ, ಒಬ್ಬರನ್ನೊಬ್ಬರು ನೋಡಿಕೊಂಡು ಮುಗುಳ್ನಕ್ಕಿದ್ದೂ ಕೂಡಾ ಅವರ ಗಮನಕ್ಕೆ ಬರಲೇ ಇಲ್ಲ.

ಅವರ ವರ್ತನೆಯನ್ನು ಖಂಡಿಸುವುದಕ್ಕೆ ಈ ಪ್ರಸಂಗವನ್ನು ಬರೆದಿದ್ದಲ್ಲ. ಬರಿಯ ಒಂದು ಜೀವಂತ ಉದಾಹರಣೆಯನ್ನು ಕೊಡಲು ಮಾತ್ರವೇ ಈ ಉಲ್ಲೇಖ. ಅವರು ಹಾಗೆ ಪರವಶವಾಗಿ ಸೆಳೆತಕ್ಕೊಳಗಾದಂತೆ ನೋಡುವುದು ಅವರ ಉದ್ದೇಶಪೂರ್ವಕವಾದ ನಡವಳಿಕೆ ಅಲ್ಲ. ಅವರಿಗೇ ಅರಿವಿಲ್ಲದಂತೆ ಸೆಳೆತಕ್ಕೊಳಗಾಗಿ ಪರವಶವಾಗಿ ಆಕರ್ಶಿತರಾಗಿರುತ್ತಾರೆ. ಅವರ ಮೈಯಲ್ಲಿ ಬಿಸಿಯೇರಿದ್ದು ಒಂದು ರೀತಿಯ ಉನ್ಮತ್ತತೆಗೆ ಹಾತೊರೆಯುವಂತಾಗುತ್ತದೆ. ಆ ಸೆಳೆತವು ಈ ಹೊತ್ತಿನಲ್ಲಿ ಈ ಹೆಣ್ಣುಮಗುವೊಂದು ತನ್ನ ಮುಂದೆ ಹಾದು ಹೋದ ಕಾರಣಕ್ಕೆ ಅಲ್ಲ. ಅದು ಪ್ರಾಯಶಃ ಬಾಲ್ಯದಿಂದಲೂ ಇದ್ದಿರಬಹುದು ಅಥವಾ ಹದಿಹರೆಯದ ಸಮಯದಲ್ಲಿ ಉಲ್ಬಣಗೊಂಡಿದ್ದಿರಬಹುದು.
ಲಿಬಿಡೋ ಅಥವಾ ಲೈಂಗಿಕಾಸಕ್ತಿಯು ಹಸಿವು ಮತ್ತು ಬಾಯಾರಿಕೆಗಳಷ್ಟೇ ತೀರಾ ಸಹಜವಾಗಿದ್ದು, ಅದು ಅತಿರೇಕಕ್ಕೆ ಹೋದಾಗ ಮಾತ್ರವೇ ಸಮಸ್ಯೆಯಾಗಿ ಕಾಡುವುದು. ಹಸಿವಿಗೆ ಮತ್ತು ದೇಹ ಪೋಷಣೆಗೆ ಊಟ ಮಾಡುವುದು ಸಹಜ. ಆದರೆ ಈ ತಿನ್ನುವುದು ಅತಿಯಾದರೆ ಅಥವಾ ನಿಯಂತ್ರಿಸಿಕೊಳ್ಳಲು ಸಾಧ್ಯವಾಗದೇ ಹೋದರೆ ಅದು ಕೂಡಾ ಸಮಸ್ಯೆಯೇ ಆಗುತ್ತದೆ. ಇದನ್ನು ಬೈಂಜ್ – ಈಟಿಂಗ್ ಡಿಸಾರ್ಡರ್ ಎಂದೇ ಗುರುತಿಸುತ್ತಾರೆ. ಅದೇ ರೀತಿಯಲ್ಲಿ ಅತಿಕಾಮ (ಹೈಪರ್’ಸೆಕ್ಸ್’ಶ್ಯಾಲಿಟಿ), ಕಾಮುಕತನ (ಕಂಪಲ್ಸಿವ್ ಸೆಕ್ಸ್’ಶ್ಯುವಲ್ ಬಿಹೇವಿಯರ್), ಗೀಳಿನ ಲೈಂಗಿಕತೆ (ಸೆಕ್ಸ್’ಶ್ಯುವಲ್ ಅಬ್ಸೆಶನ್ಸ್) ಮತ್ತು ವಿವಿಧ ರೀತಿಯಲ್ಲಿ ಪ್ಯಾರಾಫೀಲಿಯಾದಂತಹ ಲೈಂಗಿಕ ಸಮಸ್ಯೆಗಳೂ ಇವೆ.
ಅದರಲ್ಲೂ ಲೈಂಗಿಕತೆಯ ಇಚ್ಛೆಯು ರಸಿಕತನದಿಂದಲೂ ಮತ್ತು ಸಮ್ಮತದಿಂದಲೂ ಪೂರೈಸಿಕೊಳ್ಳುತ್ತಿರಲು ಸಾಧ್ಯವಾಗುತ್ತಿದ್ದರೆ ಆ ವ್ಯಕ್ತಿಯು ಅತಿಕಾಮಿಯೋ, ಲೈಂಗಿಕತೆಯ ವ್ಯಸನಿಯೋ ಸಾಮಾನ್ಯವಾಗಿ ಆಗುವುದಿಲ್ಲ. ಹೊಟ್ಟೆ ಹಸಿವಿನ ರೀತಿಯದೇ ಈ ಲೈಂಗಿಕ ಪ್ರವೃತ್ತಿಯೂ ಎಂದೇನೋ ಸುಲಭದಲ್ಲಿ ಹೇಳಿಬಿಡುತ್ತಾರೆ. ಆದರೆ ಹೊಟ್ಟೆ ಹಸಿವನ್ನು ತೃಪ್ತಿಪಡಿಸಿಕೊಳ್ಳುವಷ್ಟು ಮುಕ್ತವಾಗಿ ಲೈಂಗಿಕ ಹಸಿವನ್ನು ಪೂರೈಸಿಕೊಳ್ಳುವಂತಹ ಅವಕಾಶಗಳು ಈ ಸಮಾಜದಲ್ಲಿ ಇಲ್ಲ. ಹಸಿವೆಂದ ಕೂಡಲೇ ಎಲ್ಲಿಯಾದರೂ ಕೇಳಿಯೋ, ಕೊಂಡೋ, ಸಾಮೂಹಿಕ ಪಂಕ್ತಿಯ ವ್ಯವಸ್ಥೆಯಲ್ಲೋ ತಿಂದು ಬರುವಂತೆ ಲೈಂಗಿಕತೆಯ ಹಸಿವನ್ನು ನೀಗಿಸಿಕೊಳ್ಳುವ ಬಗ್ಗೆ ನಾವು ಕಲ್ಪನೆಯನ್ನು ಕೂಡಾ ಮಾಡಿಕೊಳ್ಳಲಾಗದು. ಲೈಂಗಿಕತೆಯನ್ನು ಹೊಟ್ಟೆ ಹಸಿವಿಗೆ ಸಮೀಕರಿಸುವುದು ಅನುಚಿತ. ಲೈಂಗಿಕತೆಯನ್ನು ಅಷ್ಟು ಸರಳೀಕರಿಸಿ ನೋಡಲು ನಮ್ಮ ಸಮಾಜದಲ್ಲಿ ಸಾಧ್ಯವೇ ಇಲ್ಲ. ಮೊಟ್ಟ ಮೊದಲು ಲೈಂಗಿಕತೆಯನ್ನು ಹಸಿವು ಮತ್ತು ದಾಹದ ಸಾಲಿಗೆ ಸೇರಿಸದೇ ಪ್ರತ್ಯೇಕಿಸಿಯೇ ನೋಡಬೇಕು. ಇದರಲ್ಲಿ ಗೋಪ್ಯತೆಯೂ, ಖಾಸಗೀತನವೂ ಮತ್ತು ಪರಿಣಾಮಗಳನ್ನು ಪರಿಗಣಿಸಬೇಕಾದಂತಹ ಅಗತ್ಯವೂ ಇರುತ್ತದೆ.
ಒಂದು ಮಗುವಿನ ಹೊಟ್ಟೆ ಹಸಿವನ್ನು ಅದರ ಪಾಲಕರು ಕಾಲ ಕಾಲಕ್ಕೆ ತೃಪ್ತಿಪಡಿಸಲು ವ್ಯವಸ್ಥೆ ಮಾಡಿಕೊಳ್ಳುವಂತೆ, ಒಂದು ಮಗುವಿನ ಲೈಂಗಿಕ ಸಂವೇದನೆಯನ್ನು ಗಮನಿಸಿಕೊಳ್ಳಲಾಗದು. ಸರಿಯಪ್ಪಾ, ಹೊಟ್ಟೆ ಹಸಿವಾದರೆ ಆ ಹೋಟೆಲ್ಲಿನಿಂದ ಅದನ್ನು ತರಿಸಿಕೊಂಡು ತಿನ್ನು ಅಥವಾ ಅಲ್ಲಿಗೆ ಹೋಗಿ ತಿಂದು ಬಾ ಎನ್ನುವಂತೆ ನಮ್ಮ ಹುಡುಗನಿಗೆ ಅಥವಾ ಹುಡುಗಿಗೆ ಲೈಂಗಿಕತೆಯ ಇಚ್ಛೆ ಉಂಟಾಗಿದೆ, ಹೋಗಿ ಪೂರೈಸಿಕೊಂಡು ಬನ್ನಿ ಎಂದೋ ಅಥವಾ ಅದನ್ನು ಹೀಗೆಂತೋ ಪೂರೈಸಿಕೊಳ್ಳಲು ಸಾಧ್ಯವೆಂದೂ ಎಂದಿಗೂ ಮಾತನಾಡರು. ಅಂತಹ ಕೌಟುಂಬಿಕ ವಾತಾವರಣವೇ ನಮ್ಮ ಕಲ್ಪನೆಗೆ ಮೀರಿದ್ದು.
ಆದರೆ ಒಂದು ನೆನಪಿನಲ್ಲಿರಲೇ ಬೇಕು. ಅದೇನೆಂದರೆ, ಲೈಂಗಿಕತೆಯ ಭಾವನೆಯು ಸಣ್ಣ ವಯಸ್ಸಿನ ಮಗುವಿಗೇ ಮೂಡುವುದು ಮತ್ತು ಲೈಂಗಿಕತೆಯ ಬಗ್ಗೆ ಅದಕ್ಕೆ ಸ್ಪಷ್ಟತೆ ಇಲ್ಲದೇ ಇದ್ದರೂ ಲೈಂಗಿಕತೆಗೆ ಸಂಬಂಧಿಸಿದಂತೆ ಜೈವಿಕವಾದ ಮತ್ತು ಭಾವನಾತ್ಮಕವಾದ ಸಂವೇದನೆಗಳು ಅದರ ಮನಸ್ಸಿನ ಮೇಲೆ ಪರಿಣಾಮವನ್ನು ಬೀರಿಯೇ ತೀರುತ್ತದೆ. ಹಾಗಾಗಿ ಲೈಂಗಿಕತೆಯ ಸಂವೇದನೆಯು ಸೂಕ್ಷ್ಮರೂಪದಲ್ಲಿ ವ್ಯಕ್ತಿಯ ಮನಸ್ಸಿನ ಮೇಲೆ ಬಾಲ್ಯದಿಂದಲೂ ಪ್ರಭಾವ ಬೀರುತ್ತಲೇ ಬರುತ್ತದೆ. ಸಮಾಜ ಮತ್ತು ಅದರ ಅಧೀನದಲ್ಲಿರುವ ಕುಟುಂಬವು ಲೈಂಗಿಕತೆಯ ಖಾಸಗಿತನವನ್ನು ಅತ್ಯಂತ ಗೋಪ್ಯವಾಗಿಡುವುದಲ್ಲದೇ ಅದರ ಬಗ್ಗೆ ಪ್ರಶ್ನೆ ಎತ್ತದಿರುವಂತಹ ಗುಪ್ತಮೌನದ ವಾತಾವರಣವನ್ನು ನಿರ್ಮಿಸಿರುತ್ತದೆ. ಸಾಲದಕ್ಕೆ ಶೀಲ ಮತ್ತು ಅಶ್ಲೀಲದಂತಹ ಪರಿಕಲ್ಪನೆಗಳು ಕೂಡಾ ಅಪರಾಧಿ ಭಾವಕ್ಕೆ ಆಸ್ಪದ ಮಾಡಿಕೊಡುವಂತಹ ಮನೋವಲಯವನ್ನು ಸೃಷ್ಟಿಸಿರುತ್ತದೆ. ಹೀಗಾಗಿ ಲೈಂಗಿಕತೆಯ ಎಲ್ಲಾ ಪ್ರಶ್ನೆಗಳೂ, ಸಂವೇದನೆಗಳೂ, ಆಸೆಗಳೂ, ಸೂಕ್ಷ್ಮತೆಗಳೂ ಒಳಗೊಳಗೇ ಮುಚ್ಚಟೆಯಾಗುತ್ತಾ ವ್ಯಕ್ತಿಯು ತನ್ನದೇ ಕಾಮಾಸಕ್ತಿಯನ್ನು ಬೆಳೆಸಿಕೊಳ್ಳುತ್ತಿರುತ್ತಾನೆ. ಅದು ಅವನದೇ ಮನೋಲೋಕದ ಭ್ರಾಮಕ ಚಿತ್ರಣಗಳಾದ ಕಾರಣದಿಂದ ಅದರೊಳಗೆ ಹೊಕ್ಕು ನೋಡಲೂ ಆಗದು, ಅವನೂ ಅದನ್ನು ಹೊರಗೆಡವಲು ಕುಟುಂಬದಲ್ಲಾಗಲಿ, ಸಮಾಜದಲ್ಲಾಗಲಿ ಮುಕ್ತ ಅವಕಾಶವಿರದು. ಹೀಗಾಗಿಯೇ ವ್ಯಕ್ತಿಗಳು ಎಷ್ಟೋ ಬಗೆಯ ಲೈಂಗಿಕತೆಯಲ್ಲಿ ವಿಕೃತಿಯನ್ನು ಬೆಳೆಸಿಕೊಳ್ಳುವುದೂ ಕೂಡಾ. ಹಸ್ತಮೈಥುನ ಎಂಬುದು ಒಂದು ಸಾಧಾರಣ ಮತ್ತು ತಾತ್ಕಾಲಿಕ ಉಪಶಮನ. ಅತಿರೇಕಕ್ಕೆ ಹೋಗದ ಹಸ್ತಮೈಥುನವನ್ನು ವಿಕೃತಿ ಎಂದು ಪರಿಗಣಿಸಲಾಗದು. ಆದರೆ ಸೈಬರ್ ಸೆಕ್ಸ್, ಸೆಕ್ಸ್ ಚಾಟ್, ಪೆÇೀರ್ನೋಗ್ರಫಿ, ಫ್ಯಾಂಟಸಿಯ ಲೈಂಗಿಕತೆಯ ಆಸೆಗಳನ್ನು ಪೂರೈಸಿಕೊಳ್ಳಲು ಗುಂಪುಗಳಾಗುವುದು; ಇತ್ಯಾದಿಗಳೆಲ್ಲಾ ವ್ಯಸನಗಳಾಗಿ ಪರಿಣಮಿಸುತ್ತವೆ. ಲೈಂಗಿಕ ವ್ಯಸನಗಳನ್ನು ಗುರುತಿಸಿಕೊಂಡು ಅದಕ್ಕೆ ಬೇಕಾದಂತಹ ಚಿಕಿತ್ಸೆ (ಸ್ವಯಂ ಚಿಕಿತ್ಸೆ ಅಥವಾ ತರಬೇತಿ) ಪಡೆಯದೇ ಇದ್ದಲ್ಲಿ ಅವುಗಳು ವಿಪರೀತಕ್ಕೆ ಹೋಗುವುದರಲ್ಲಿ ಸಂಶಯವಿಲ್ಲ. ಮದುವೆಯಾದರೂ ಕೂಡಾ ಅವರ ಈ ಕಾಮುಕತೆಯ ವ್ಯಸನಗಳನ್ನು ಬಿಡಲಾಗುವುದಿಲ್ಲ. ಮದುವೆಯಾಗಿರುವ ಸಂಗಾತಿಯ ಮುಂದೆಯೂ ಇದು ಮುಜುಗರವೆನಿಸುವಂತಹ ವಿಷಯವೆನಿಸುವುದರಿಂದ ಅಥವಾ ಸಮಾಜವು ಆ ರೀತಿಯಲ್ಲಿ ನಿರ್ಬಂಧಿಸಿರುವುದರಿಂದ ಆತ ಅಥವಾ ಆಕೆ ಅದನ್ನು ಸಂಗಾತಿಯಿಂದಲೂ ಗುಟ್ಟಾಗಿಟ್ಟು ವ್ಯಸನದಲ್ಲಿ ಮುಂದುವರಿದಿರುತ್ತಾರೆ. ಅವರು ಈ ವ್ಯಸನದಲ್ಲಿ ಬೇಕೆಂದೇ ಮುಂದುವರಿಯುತ್ತಾರೆಂದಲ್ಲ, ನಾನು ಆಗಲೇ ಹೇಳಿದಂತೆ ಅವರಿಗೇ ಅರಿವಿಲ್ಲದಂತೆ ಸೆಳೆತಕ್ಕೆ ಒಳಗಾಗಿರುತ್ತಾರೆ. ಆ ಸಮಯದಲ್ಲಿ ಅದರ ಕಡೆಗೆ ವಾಲಿ ತಮ್ಮ ಗೀಳಿನ ಅಥವಾ ಚಟವನ್ನು ತೃಪ್ತಿಪಡಿಸಿಕೊಳ್ಳಲು ಮುಂದಾಗುತ್ತಾರೆ. ಅದಾದ ನಂತರ ಕೆಲವೊಂದು ಚಟುವಟಿಕೆಗಳು ಅವರಿಗೇ ಜಿಗುಪ್ಸೆಯನ್ನು ಹುಟ್ಟಿಸುತ್ತವೆ. ಮತ್ತೊಮ್ಮೆ ಹೀಗೆ ಎಂದಿಗೂ ಮಾಡಬಾರದು. ಇದೇ ಕಡೇ ಸಲ ಅಂತಾನೂ ಅಂದುಕೊಳ್ಳುತ್ತಾರೆ. ಆದರೆ ಮುಂದಿನ ಸಲ ಸೆಳೆತಕ್ಕೆ ಸಿಕ್ಕಾಗ ಹಿಂದಿನ ಸಲ ಮಾಡಿಕೊಂಡಿದ್ದ ಸಂಕಲ್ಪ ಅಥವಾ ಪ್ರತಿಜ್ಞೆ ಮರೆತು ಹೋಗಿರುತ್ತದೆ. ಒಂದು ಅವರ ಸಂಗಾತಿಯೋ ಅಥವಾ ಇನ್ನಾರಾದರೂ ಇದನ್ನು ಗಮನಿಸಿ ಖಂಡಿಸಿದರೆ, ಅದನ್ನು ಅವರಿಂದ ದೂರಾಗಿ ಗುಟ್ಟಾಗಿ ಮಾಡಬಹುದು ಅಥವಾ ನನ್ನ ಇಷ್ಟ, ನನಗೆ ಬೇಕಾದಂತೆ ಮಾಡಿಕೊಳ್ಳುತ್ತೇನೆ ಎನ್ನುವಂತಹ ಹಟಮಾರಿತನದಲ್ಲಿಯೂ ಕೂಡಾ ಮುಂದುವರಿಸಬಹುದು. ಆಗ ಅವರಿಗೆ ತಮ್ಮ ವ್ಯಸನ ಅಥವಾ ಗೀಳಿನ ನಿವಾರಣೆಯ ಕಡೆಗೆ ಗಮನ ಹರಿಸುವುದಕ್ಕಿಂತ ತಮ್ಮನ್ನು ಖಂಡಿಸುವ ಅಥವಾ ವಿರೋಧಿಸುವ ಅಥವಾ ನಿಯಂತ್ರಿಸಲು ಯತ್ನಿಸುವ ವ್ಯಕ್ತಿಯ ಕಡೆಗೆ ಹೆಚ್ಚು ಗಮನ ಕೊಡುತ್ತಾ, ಇದರಿಂದ ಹೊರಗೆ ಬರುವ ಸಂಗತಿಯನ್ನೇ ಮರೆತು ತಮ್ಮ ಲೈಂಗಿಕ ವ್ಯಸನವನ್ನು ಗಾಢಗೊಳಿಸಿಕೊಳ್ಳುತ್ತಾ ಹೋಗುತ್ತಾರೆ. ಇದರಿಂದಾಗಿ ಪರಸ್ಪರ ಸಂಬಂಧಗಳಲ್ಲಿ, ಕುಟುಂಬದಲ್ಲಿ, ಕೆಲಸ ಮಾಡುವ ಕಡೆಗಳಲ್ಲಿ ನಕಾರಾತ್ಮಕವಾದ ಪರಿಣಾಮವೇ ಕಾಣುತ್ತದೆ.
“ಕಾಮಾತುರಾಣಾಂ ನ ಭಯಂ, ನ ಲಜ್ಜಾ” ಕಾಮಾತುರನಾದವನಿಗೆ ಭಯವೂ ಇರದು, ಲಜ್ಜೆಯೂ ಇರದು ಎಂದು ಹೇಳುವಾಗ ನಾವು ಗಮನಿಸಬೇಕಾದ್ದು ಅದು ಅತಿಕಾಮದ ಸಮಸ್ಯೆ ಇರುವನಿಗೆಂದೇ. ಅವನಿಗೆ ಅವನ ಜಾಗೃತ ಮನಸ್ಸು ಭಯವನ್ನು ಮತ್ತು ಸಂಕೋಚವನ್ನು ಹೊಂದಲು ಬಿಡದಷ್ಟು ಅವನ ಒಳಗಿನ ವ್ಯಸನಗ್ರಸ್ತ ಮನಸ್ಸು ತನ್ನ ಚಟುವಟಿಕೆಯನ್ನು ತೀವ್ರಗೊಳಿಸುತ್ತಿರುತ್ತದೆ. ಅದೂ ತಂತಾನೇ.
ಯಾವ ವ್ಯಕ್ತಿಗೆ ತಾನು ಬಿಡಿಸಿಕೊಳ್ಳಲು ಆಗದ ವಿಷಯವನ್ನು ಎಲ್ಲರೂ ವಿರೋಧಿಸುತ್ತಿದ್ದಾರೆ, ಅದರಿಂದಾಗಿ ನನ್ನ ಖಂಡಿಸುತ್ತಿದ್ದಾರೆ, ತನ್ನನ್ನು ತಪ್ಪಿತಸ್ಥ ಅಥವಾ ಅಪರಾಧಿಯನ್ನಾಗಿ ಕಾಣುತ್ತಿದ್ದಾರೆ ಎಂಬ ಭಾವ ಮೂಡಲಾರಂಭಿಸಿದರೆ ಮತ್ತು ತಿರಸ್ಕಾರ, ಅಪಹಾಸ್ಯ, ನಿಂದನೆಗಳಿಗೆ ಗುರಿಯಾಗುವ ಅನುಭವವಾಗತೊಡಗಿದರೆ, ಆತ ಎಲ್ಲರಿಂದ ದೂರವಾಗಿರಲು ಇಚ್ಛಿಸತೊಡಗುತ್ತಾನೆ. ಏಕಾಂಗಿಯಾಗಿರಲು ಪ್ರಾರಂಭಿಸುತ್ತಾನೆ. ಇದರಿಂದ ಅವನ ಮಾನಸಿಕ ಸಮಸ್ಯೆಗಳು ಮತ್ತಷ್ಟು ತೀವ್ರಗೊಳ್ಳುತ್ತದೆ. ಅವನ ಕೌಟುಂಬಿಕ ಮತ್ತು ಸಾಮಾಜಿಕ ಪರಿಸರವನ್ನು ಅವನು ಮೆಚ್ಚಿಕೊಳ್ಳುವ ಕಾರಣವೇ ಕಾಣುವುದಿಲ್ಲ. ಆದ್ದರಿಂದ ವ್ಯಕ್ತಿಯ ಲೈಂಗಿಕ ವ್ಯಸನವೇ ಆಗಲಿ ಅಥವಾ ಯಾವುದೇ ಚಟವಾಗಲಿ ಗಾಢವಾಗುತ್ತಿದೆ ಎಂದಾಗ ಆತನ ಅಥವಾ ಆಕೆಯ ವಿಷಯದಲ್ಲಿ ಸಹಾನುಭೂತಿಯನ್ನು ತಾಳಬೇಕು. ಅವರಿಗೆ ಅದರಿಂದ ಹೊರಗೆ ಬರುವ ಮನಸ್ಸಿದ್ದರೂ, ಹೊರಗೆ ಬರಲು ಆಗದೇ ಇರುವಂತಹ ದೌರ್ಬಲ್ಯವನ್ನು ಪರಿಗಣಿಸಬೇಕು. ಆತನ ಅಥವಾ ಆಕೆಯ ಜೊತೆಗಿರುವವರು, ಕುಟುಂಬದವರು ತಮ್ಮ ಆಪ್ತತೆಯನ್ನು ಮತ್ತು ಆತ್ಮೀಯತೆಯನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ಪ್ರದರ್ಶಿಸಬೇಕು. ಅಷ್ಟೇ ಅಲ್ಲ, ಇವರ ಪ್ರೀತಿ ಮತ್ತು ವಾತ್ಸಲ್ಯದ ಮುಂದೆ ಈ ತನ್ನ ಚಟ ಅಥವಾ ಗೀಳು ಕ್ಷುಲ್ಲಕ, ಇದರಿಂದಾಗಿ ಅವರನ್ನು ಕಳೆದುಕೊಳ್ಳಬಾರದು ಎಂಬ ಮನೋಭಾವ ಉಂಟಾಗುವಂತಹ ಅನುಭವ ಪಡೆಯಲು ವಾತಾವರಣ ಕಲ್ಪಿಸಬೇಕು.
ಬಹಳಷ್ಟು ಸಲ ಲೈಂಗಿಕತೆಯ ಗೀಳಾಗಲಿ, ಅಥವಾ ಯಾವುದೇ ಚಟವಾಗಲಿ, ಜೊತೆಯಲ್ಲಿರುವವರು ಅದೆಷ್ಟು ತಪ್ಪು, ನೀನೆಂತಹ ತಪ್ಪು ಮಾಡುತ್ತಿದ್ದೀಯ, ನೀನಿಂದ ಹೊರಗೆ ಬರಲೇ ಬೇಕು, ಯಾಕೆ ಬರಲಾರೆ, ನೀನು ಮನಸ್ಸು ಮಾಡಿದರೆ ಸಾಧ್ಯ, ಪ್ರಮಾಣ ಮಾಡು, ಆಣೆ ಮಾಡು; ಇತ್ಯಾದಿಗಳೆಲ್ಲಾ ಆಗುತ್ತವೆ. ಇವು ಏನೇನೂ ಕೆಲಸಕ್ಕೆ ಬಾರವು.
ಮನೋಹಿತಾವರಣವನ್ನು ಸಮರ್ಪಕವಾಗಿ ರೂಪಿಸದೇ ಹೋದಲ್ಲಿ ನಿಮ್ಮೆಲ್ಲಾ ಪ್ರಯತ್ನಗಳೂ ವ್ಯರ್ಥ.
ಮೊದಲು ಅವರನ್ನು ಅಪರಾಧಿಯಂತೆ ಕಾಣುವುದನ್ನೂ, ಆರೋಪಿಸುವುದನ್ನೂ, ಆಕ್ಷೇಪಿಸುವುದನ್ನೂ ನಿಲ್ಲಿಸಬೇಕು. ಅವರಿಗೆ ಕೀಳರಿಮೆಯನ್ನು ಮತ್ತು ಅಪರಾಧಿ ಪ್ರಜ್ಞೆಯನ್ನು ಹುಟ್ಟಿಸುವ ಬದಲು “ನಾನು ನಿನ್ನೊಡನೆ ಇದ್ದೇವೆ, ನಿನ್ನನ್ನು ಪ್ರೀತಿಸುತ್ತೇವೆ, ನಿನ್ನನ್ನು ಸ್ವೀಕರಿಸುತ್ತೇವೆ” ಎಂಬ ಆತ್ಮೀಯತೆಯ ಸ್ಪರ್ಶ ಅವರಿಗಾಗಬೇಕು. ನೋಡಿ, ಒಂದು ವಿಷಯವಂತೂ ಸತ್ಯ. ಅವರಿಗೆ ನಮ್ಮ ಮನೆಯವರು, ನನ್ನ ಆಪ್ತರೇ ನನ್ನನ್ನು ತಿರಸ್ಕರಿಸುತ್ತಾರೆ, ನಿರಾಕರಿಸುತ್ತಾರೆ ಎಂಬ ಭಾವ ಮೂಡಿ ಒಬ್ಬೊಂಟಿತನ ಆವರಿಸಿದರೆ ಅವರ ಚಟ, ವ್ಯಸನ ಮತ್ತಷ್ಟು ಗಾಢವಾಗುತ್ತದೆ. ಅದರಿಂದ ಸುಖ ಕಾಣದೇ ಇದ್ದರೂ ಸಮಾಧಾನ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ನಂತರ ಮುಂದೆ ಅದು ಸಾಮಾಜಿಕವಾಗಿ ಅಪರಾಧವೆಂದು ಗುರುತಿಸಲ್ಪಡುವಷ್ಟರ ಮಟ್ಟಿಗಾಗುತ್ತದೆ. ಸಮಾಜದಲ್ಲಿ ಇನ್ಯಾರೋ ಇವರ ಚಟಕ್ಕೆ, ವ್ಯಸನಕ್ಕೆ ಬಲಿಪಶುವಾಗುತ್ತಾರೆ ಮತ್ತು ಕಾನೂನಾತ್ಮಕವಾಗಿ ಇವರನ್ನು ಶಿಕ್ಷೆಗೆ ಮತ್ತು ದಂಡನೆಗೆ ಗುರಿ ಮಾಡುವಂತಹ ಪ್ರಸಂಗವು ಕೂಡ ಒದಗಬಹುದು.
ನಮ್ಮ ಕುಟುಂಬದಲ್ಲಿ ಅಥವಾ ಸ್ನೇಹಿತರ ವಲಯದಲ್ಲಿ ಯಾರೇ ಲೈಂಗಿಕ ವ್ಯಸನ ಅಥವಾ ಗೀಳಿಗೆ ಒಳಗಾಗಿದ್ದಾರೆಂದರೆ ನಾವು ಬಹಳ ಮುಖ್ಯವಾಗಿ ಲಜ್ಜೆಗೆಟ್ಟವನು ಅವನು ಅಥವಾ ಅವಳು ಎಂಬಂತಹ ವಾತಾವರಣವನ್ನು ನಿರ್ಮಿಸಬಾರದು. ನಂತರ ಈ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಿರುವವನು ನೀನೊಬ್ಬನೇ ಅಥವಾ ನೀನೊಬ್ಬಳೇ ಅಲ್ಲ, ಇದರಿಂದ ಹೊರಗೆ ಬರುವ ದಾರಿ ಖಂಡಿತ ಇದೆ ಎನ್ನುವ ಭರವಸೆ ಮೂಡಿಸಬೇಕು. ಸೂಕ್ತ ಮನೋವೈದ್ಯರ / ಮಾನಸಿಕ ತಜ್ಞರ ಅಥವಾ ಆಪ್ತ ಸಮಾಲೋಚರನ್ನು ಕಂಡು ಮುಕ್ತವಾಗಿ ಮಾತಾಡಿಸುವಂತಹ ಅವಕಾಶವನ್ನು ಕಲ್ಪಿಸಬೇಕು.
ಸಂನ್ಯಾಸಿ ಆಗುವ ಮುನ್ನವೂ ಇರುವಂತಹ ಇಂತಹ ಲೈಂಗಿಕ ಇಚ್ಛೆಯನ್ನು ತಾನು ಸಂನ್ಯಾಸಿ ಆದ ಮೇಲೆ ಮುಂದುವರಿಸಬಾರದು. ಅದು ಹೊಸ ಬಾಳು. ತಾನು ಸದ್ಗುರುವಿಗೆ, ಮಠಕ್ಕೆ ಅಥವಾ ಯಾವುದೋ ಗುರುಪರಂಪರೆಗೆ ಸಮರ್ಪಿಸಿಕೊಂಡಿದ್ದೇನೆ, ತಾನು ತನ್ನಲ್ಲಿರುವ ಕಾಮುಕತನಕ್ಕೆ ಅವಕಾಶವನ್ನು ಕೊಡುವುದಿಲ್ಲ. ಅಲ್ಲಿನ ಸಾಧನೆ, ಯೋಗ ಮತ್ತಿತರ ಧಾರ್ಮಿಕ ಚಟುವಟಿಕೆಗಳು ತಮ್ಮನ್ನು ಅಂತಹ ವ್ಯಸನದಿಂದ ಮುಕ್ತರನ್ನಾಗಿಸುತ್ತವೆ ಎಂದು ಅವರು ಅಂದುಕೊಂಡಿರುತ್ತಾರೆ. ಆದರೆ ಯಾವುದೇ ವ್ಯಸನವು, ಗೀಳು ಮನಸ್ಸಿನಲ್ಲಿ ಬೇರು ಬಿಟ್ಟಿದ್ದು ಆ ಮನಸ್ಸನ್ನು ಆತ ಕಿತ್ತೆಸೆಯಲು ಆಗಿರುವುದಿಲ್ಲ. ರೂಢಿಗತವಾಗಿರುವಂತಹ ಸೆಳೆತಗಳಿಗೆ ಮತ್ತೆ ಮತ್ತೆ ಒಳಗಾಗುತ್ತಾನೆ. ಅದಕ್ಕೆ ತಮ್ಮ ಕಾರ್ಯಸಾಧನೆಗೆ ಒಳಗೊಳಗೇ ಪ್ರೋತ್ಸಾಹಿಸಿ ಗಟ್ಟಿಗೊಳಿಸಿರಲಿಕ್ಕೂ ಸಾಧ್ಯ. ಅವರ ಜೀವನ ಕ್ರಮದ ಬಗ್ಗೆ ಸಮಾಜ ಬೇರೆಯೇ ನಿರೀಕ್ಷೆಯನ್ನು ಇಟ್ಟುಕೊಂಡು, ಅವರನ್ನು ತಮ್ಮಂತಲ್ಲ ಎಂಬ ಕಾರಣಕ್ಕೆ ಗೌರವಿಸುತ್ತಿದ್ದು, ಅವರು ಕೂಡಾ ನಮ್ಮಂತೆಯೇ ವ್ಯಸನದ ದಾಸರಾಗಿದ್ದಾರೆ ಎಂದಾಗ ನಿರೀಕ್ಷೆ ಹುಸಿಯಾಗಿದ್ದಕ್ಕೆ ವ್ಯಗ್ರರಾಗುತ್ತಾರೆ, ಉಗ್ರರಾಗಿ ಖಂಡಿಸುತ್ತಾರೆ. ಆದರೆ ಅಷ್ಟರಲ್ಲಾಗಲೇ ಯಾರ್ಯಾರೋ ಬಲಿಪಶುಗಳೂ ಇದಕ್ಕೆ ಗುರಿಯಾಗಿರುತ್ತಾರೆ. ಇದಕ್ಕೆಲ್ಲಾ ನಿದರ್ಶನಗಳು ನಮ್ಮ ಮುಂದೆ ಸ್ಪಷ್ಟವಾಗಿ ಬೇಕಾದಷ್ಟಿವೆ. ಆದರೂ ಸಮಾಜವು ತನ್ನ ಹುಸಿ ನಿರೀಕ್ಷೆಯನ್ನೇ ಅಪೇಕ್ಷಿಸುತ್ತಾ ವ್ಯಕ್ತಿಗಳು ತಮ್ಮ ಕಪಟತನವನ್ನು ಹೊರಕ್ಕೆ ತೋರದಿರಲು ಎಷ್ಟು ಸಮರ್ಥವಾಗಿರಬೇಕು ಎಂಬುದಕ್ಕೇ ಹೆಣಗಾಡುತ್ತಿರುತ್ತಾರೆ.
ಇದಕ್ಕೆ ಪರಿಹಾರ ಇಲ್ಲವೇ? ಖಂಡಿತ ಇದೆ. ಲೈಂಗಿಕ ವ್ಯಸನಕ್ಕಾಗಲಿ, ಯಾವುದೇ ವ್ಯಸನಕ್ಕಾಗಲಿ ಮನಸ್ಸಿನ ಚಲನೆಯ ದಿಕ್ಕನ್ನು ಬದಲಿಸುವಂತಹ ತರಬೇತಿಯನ್ನು ನೀಡುವುದರ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು. ಮತ್ತೆ ಅದೇ ಮನೋಹಿತಾವರಣ ಅಂದರೆ ಅವರಿಗೆ ಅವರ ಸಮಸ್ಯೆಯಿಂದ ಮುಕ್ತವಾಗುವಂತಹ ವಾತಾವರಣವನ್ನು ಕುಟುಂಬವೂ, ಸಹೋದ್ಯೋಗಿಗಳೂ, ಸ್ನೇಹಿತರೂ ನಿರ್ಮಿಸಬೇಕು. ಆತನ ಅಥವಾ ಆಕೆಯ ಸಕಾರಾತ್ಮಕವಾದ ಅಂಶಗಳನ್ನು ಪುಷ್ಟೀಕರಿಸುತ್ತಾ, ದೌರ್ಬಲ್ಯಗಳನ್ನು ತೆಳುಗೊಳಿಸುತ್ತಾ, ಕ್ರಮೇಣ ಇಲ್ಲವಾಗಿಸುವಂತಹ ವಾತಾವರಣವನ್ನು ನಮ್ಮ ನಡೆ, ನುಡಿ, ವರ್ತನೆ, ಅವರನ್ನು ನಡೆಸಿಕೊಳ್ಳುವ ರೀತಿ; ಈ ಎಲ್ಲದರ ಮೂಲಕ ನಿರ್ಮಾಣ ಮಾಡಬೇಕು. ಪದೇ ಪದೇ ಆತನ ಅಥವಾ ಆಕೆಯ ದೌರ್ಬಲ್ಯದ ಕುರಿತು ಮಾತಾಡುತ್ತಾ, ಮಾರುದ್ದ ಬೋಧನೆಗಳನ್ನು, ಬೇಡದ ಪ್ರವಚನಗಳನ್ನು ಕೊಡುತ್ತಾ, ಇತರರ ಮುಂದೆ ಅವಮಾನ ಮಾಡುತ್ತಾ ಹೋದರೆ ಅವರ ನಕಾರಾತ್ಮಕವಾದ ಮನಸ್ಥಿತಿಗೇ ಪುಷ್ಟಿ ಸಿಕ್ಕು ಇನ್ನೂ ಅಧೋಗತಿಗಿಳಿಯುತ್ತಾರೆ. ತಮ್ಮ ನರಳಾಟದ ಸವಿಯನ್ನು ನಿಮಗುಣ್ಣಿಸದೇ ಖಂಡಿತ ಬಿಡುವುದಿಲ್ಲ.

– ಯೋಗೇಶ್ ಮಾಸ್ಟರ್, ಬರಹಗಾರರು

Leave a Reply