ಮೋದಿ ಅವರಂತೆ ಯುವಕರನ್ನು ಮೋಸಗೊಳಿಸುವ ಪ್ರಧಾನಿಯನ್ನು ಹಿಂದೆಂದೂ ನೋಡಿಲ್ಲ: ಮಲ್ಲಿಕಾರ್ಜುನ ಖರ್ಗೆ

1 year ago

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ರಾಜ್ಯ ಸಚಿವ ಸಂಪುಟ ಪುನಾರಚನೆ ಮುತ್ತು ವಿಸ್ತರಣೆಯ ಯಾವುದೇ ಪ್ರತಾಪ ಸದ್ಯಕ್ಕೆ ಹೈಕಮಾಂಡ್ ಮುಂದೆ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕಲಬುರಗಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟ ಪುನಾರಚನೆ ಅಥವಾ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡುವಾಗ ಎಲ್ಲರಿಗೂ ತಿಳಿಸುತ್ತೇವೆ. ಈಗ ಆ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದರು.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್  ನವದೆಹಲಿಯಲ್ಲಿ ತಮ್ಮನ್ನು ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾದಾಗ ಸಚಿವ ಸಂಪುಟ ಪುನಾರಚನೆ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಧಾನ ಬದಲಾವಣೆ ಕುರಿತು ಯಾವುದೇ ಮಾತುಕತೆ ನಡೆಸಿಲ್ಲ ಎಂದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣ ಹಾಗೂ ಜಾತಿ ಸಮೀಕ್ಷೆ ಕುರಿತು ಸಭೆಯಲ್ಲಿ ಚರ್ಚಿಸಿದೆವು. ಇದನ್ನು ಹೊರತುಪಡಿಸಿ ಬೇರೆ ಯಾವುದೇ ವಿಚಾರ ಚರ್ಚೆಗೆ ಬರಲಿಲ್ಲ. ಪಕ್ಷದ ಆಂತರಿಕ ವಿಷಯಗಳೂ ಪ್ರಸ್ತಾಪವಾಗಿವೆ. ಸಚಿವ ಸಂಪುಟದ ಬದಲಾವಣೆ ಸದ್ಯಕ್ಕೆ ಇಲ್ಲ. ಮುಂದೆ ಬರುವ ದಿನಗಳಲ್ಲಿ ನೋಡಬೇಕು ಎಂದರು.

ಕಾಲ್ತುಳಿತದಂತಹ ಘಟನೆ ನಡೆಯಬಾರದಿತ್ತು. ಮುಂದೆ ಇಂತಹದ್ದು ಮರುಕಳಿಸದಂತೆ ನೋಡಿಕೊಳ್ಳಬೇಕು. ಯಾವುದೇ ಕಾರ್ಯಕ್ರಮ ಮಾಡುವಾಗ ಎಲ್ಲರೂ ಸೇರಿ ಮಾಡಬೇಕು. ಕಾಲ್ತುಳಿತದಲ್ಲಿ ತಪ್ಪು ಯಾರಿಂದ ಆಗಿದೆ ಎಂಬುದನ್ನು ಪತ್ತೆಹಚ್ಚಿ ಅವರಿಗೆ ಶಿಕ್ಷೆ ಕೊಡಬೇಕು. ಸಂತ್ರಸ್ತರ ಕುಟುಂಬಗಳ ಬೆಂಬಲಕ್ಕೆ ನಿಂತು, ಅವರಿಗೆ ಸಹಾಯ ಮಾಡುವಂತೆ ರಾಹುಲ್‌ ಗಾಂಧಿ ಅವರು ಸ್ಪಷ್ಟವಾಗಿ ತಿಳಿ ಹೇಳಿದ್ದಾರೆ ಎಂದರು.

ಸಿಎಂ ಡಿಸಿಎಂ ಗೃಹ ಸಚಿವರ ರಾಜಿನಾಮೆಗೆ ಒತ್ತಾಯಿಸಿರುವ ಬಿಜೆಪಿಗರ ನಿಲುವು ಕುರಿತು ಪ್ರತಿಕ್ರಿಯಿಸಿದ ಅವರು, ಕುಂಭಮೇಳದಲ್ಲಿ ಲಕ್ಷಾಂತರ ಜನ ಸೇರಿ ಕಾಲ್ತುಳಿತವಾಗಿತ್ತು. ಆಗ ನಾನು ಮಾತಾಡಿದ್ದಕ್ಕೆ ನನಗೆಯೇ ಬೈದರು. ಆ ಮೇಲೆ ಒಂದೊಂದೆ ಹೆಣಗಳು ಹೊರಬಂದವು. ಆಗ ಉತ್ತರಪ್ರದೇಶದ ಸಿಎಂ ಆದಿತ್ಯನಾಥ್ ರಾಜೀನಾಮೆ ಕೊಟ್ಟರಾ? ಯಾವುದೇ ಒಂದು ಕೆಲಸ ಉದ್ದೇಶ ಪೂರ್ವಕವಾಗಿ ಮಾಡಿದ್ದರೆ ರಾಜೀನಾಮೆ ಕೊಡಬೇಕು. ಬೆಂಗಳೂರಿನಲ್ಲಿ ಆಕಸ್ಮಿಕವಾಗಿ ನಡೆದಿದೆ. ನಮ್ಮವರೂ ಕ್ಷಮೆ ಕೇಳಿದ್ದಾರೆ. ಮುಂದೆ ಇಂತಹ ಘಟನೆಗಳು ನಡೆಯಬಾರದು ಎಂದರು.

ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಮೊದಲಿನಿಂದಲೂ ಕಾಂಗ್ರೆಸ್ ಮೇಲೆ ಸಿಟ್ಟಿದೆ. ಕಾಂಗ್ರೆಸ್ ಶಾಸಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿ, ನಮ್ಮ ಪಕ್ಷದ ಶಾಸಕರನ್ನು ಒಡೆಯಲು ಸಂಚು ಮಾಡುತ್ತಿದ್ದಾರೆ. ಒಂದು ವರ್ಷದ ಹಿಂದಿನ ಚುನಾವಣೆಯಲ್ಲಿ ನಡೆದಿದ್ದನ್ನು ಈಗ ತೆಗೆದು ಕಿರುಕುಳ ಕೊಡುವುದು ಸರಿಯಲ್ಲ ಎಂದರು.

ಚುನಾವಣೆಯಲ್ಲಿ ಎಲ್ಲ ಪಕ್ಷದವರ ಸಾವಿರಾರು ಕೋಟಿ ರೂಪಾಯಿ ಹಣವನ್ನು ಜಪ್ತಿ ಮಾಡಿದ್ದಾರೆ. ಆ ಹಣ ಎಲ್ಲಿಂದ ಬಂತು? ಯಾರದು ಎಂಬುದು ಇಲ್ಲಿಯವರೆಗೂ ಹೊರಗೆ ಬಂದಿಲ್ಲ. ಒಂದೇ ಪಕ್ಷವನ್ನು ಗುರಿಯಾಗಿಸಿಕೊಂಡು ತೊಂದರೆ ಕೊಟ್ಟರೆ ಆ ಪಕ್ಷದಲ್ಲಿ ಬೇಧಭಾವ ಉಂಟಾಗಿ ಎದುರಿನವರಿಗೆ ಅನುಕೂಲ ಆಗುತ್ತದೆ ಎಂಬ ಲೆಕ್ಕಚಾರವಿದೆ. ಅವರು ಎಷ್ಟೇ ಕಿರುಕುಳ ಕೊಟ್ಟರೂ ನಾವು ಒಗ್ಗಟ್ಟಾಗಿ ಇದ್ದೇವೆ ಎಂದರು.

ಸ್ವಾತಂತ್ರ್ಯದ ಬಳಿಕ ಪ್ರಧಾನಿ ಮೋದಿ ಹೊರತುಪಡಿಸಿ ಯಾವುದೇ ಪ್ರಧಾನಿಯೂ ಲೋಕಸಭೆಯ ಉಪಾಧ್ಯಕ್ಷರ ಹುದ್ದೆಯನ್ನು ಖಾಲಿ ಇರಿಸಿರಲಿಲ್ಲ. ಮೋದಿಯ 3ನೇ ಅವಧಿಯಲ್ಲಿಯೂ ಉಪಾಧ್ಯಕ್ಷರ ಹುದ್ದೆ ಖಾಲಿ ಇರಿಸಿರುವುದು ಪ್ರಜಾಪ್ರಭುತ್ವ ವಿರೋಧಿ, ಕಾನೂನುಬಾಹಿರ ನಡೆ ಎಂದರು.

ಕಾಶ್ಮೀರ ಕಣಿವೆಯಲ್ಲಿ ರೈಲ್ವೆ ಸಂಪರ್ಕ ಜಾಲ ವಿಸ್ತರಿಸುವಲ್ಲಿ ಈ ಹಿಂದಿನ ಸರ್ಕಾರಗಳು ನೀಡಿದ್ದ ಕೊಡುಗೆಗಳನ್ನು ಸ್ಮರಿಸುವಲ್ಲಿ ಪ್ರಧಾನಿ ಮೋದಿ ಅವರು ವಿಫಲವಾಗಿದ್ದಾರೆ. ಕಣಿವೆ ರಾಜ್ಯದಲ್ಲಿ ರೈಲ್ವೆ ಯೋಜನೆಗಳನ್ನು ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಆರಂಭಿಸಿದರು. ಅಟಲ್ ಬಿಹಾರಿ ವಾಜಪೇಯಿ ಅವುಗಳನ್ನು ಇನ್ನಷ್ಟು ಮುಂದುವರಿಸಿಕೊಂಡು ಬಂದರು. ಡಾ.ಮನಮೋಹನ್‌ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ತನ್ನ 10 ವರ್ಷಗಳ ಅವಧಿಯಲ್ಲಿ ಹೆಚ್ಚಿನ ಆದ್ಯತೆ ನೀಡಿತ್ತು. ಮನಮೋಹನ್‌ ಸಿಂಗ್, ಸೋನಿಯಾ ಗಾಂಧಿ, ನಾನು ಸೇರಿದಂತೆ ಹಲವರು ಕಾಶ್ಮೀರಕ್ಕೆ ತೆರಳಿ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಿದ್ದೇವೆ ಎಂದು ಉದ್ಘಾಟನೆಗೆ ತೆರಳಿದ್ದ ಫೋಟೊಗಳನ್ನು ತೋರಿಸಿದರು.

ನಾನು ರೈಲ್ವೆ ಸಚಿವನಾಗಿದ್ದಾಗ ಕಾಶ್ಮೀರ ಮತ್ತು ಈಶಾನ್ಯ ಭಾಗದ ರಾಜ್ಯಗಳ ರೈಲ್ವೆ ಯೋಜನೆಗಳಿಗೆ ಸಾಕಷ್ಟು ಅನುದಾನ ಹಂಚಿಕೆ ಮಾಡಿದ್ದೆ. ಆದರೆ, ಮೋದಿ ಅವರು ನಾವು ಪ್ರಾರಂಭಿಸಿದ್ದ ಯೋಜನೆಗಳನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ. ಹಿಂದಿನ ಸರ್ಕಾರದ ಕೊಡುಗೆಗಳನ್ನೂ ಸ್ಮರಿಸುತ್ತಿಲ್ಲ ಎಂದರು.

ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 11 ವರ್ಷಗಳಲ್ಲಿ 36 ತಪ್ಪುಗಳನ್ನು ಮಾಡಿದೆ. ಮೋದಿ ಅವರಂತೆ ಪದೇ ಪದೇ ಸುಳ್ಳುಗಳನ್ನು ಹೇಳಿ, ಇಷ್ಟೊಂದು ತಪ್ಪುಗಳನ್ನು ಮಾಡಿ, ಜನರನ್ನು ದಾರಿ ತಪ್ಪಿಸಿ, ಯುವಕರನ್ನು ಮೋಸಗೊಳಿಸುವ ಪ್ರಧಾನಿಯನ್ನು ನಾನು ಹಿಂದೆಂದೂ ನೋಡಿಲ್ಲ. ನನ್ನ 65 ವರ್ಷಗಳ ರಾಜಕೀಯ ಮತ್ತು 55 ವರ್ಷಗಳ ಅಧಿಕಾರದಲ್ಲಿ ಅವರಂತಹ ಪ್ರಧಾನಿಯನ್ನು ಭೇಟಿಯಾಗಿಲ್ಲ. ತಾವು ಮಾಡಿದ್ದ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ, ಕ್ಷಮೆ ಸಹ ಯಾಚಿಸುವುದಿಲ್ಲ ಎಂದರು.

Leave a Reply