ಮೌಢ್ಯ, ಅಂಧಶ್ರದ್ದೆ ವಿರುದ್ಧ ಜಾಗೃತಿ ಮೂಡಿಸುವ ಸಾಹಿತ್ಯ ರಚಿಸಿದ ಭೂಪಾಳಂ: ಡಿ.ಮಂಜುನಾಥ್

4 years ago

ಶಿವಮೊಗ್ಗ: ವಸುದೇವ ಭೂಪಾಳಂ ಅವರು ಮೌಢ್ಯ, ಅಂಧಶ್ರದ್ಧೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಸಾಹಿತ್ಯ ರಚನೆ ಮಾಡಿದರು‌. ಭೂಪಾಳಂ ಅವರು ನಿಧನರಾಗುವ ಮುನ್ನ ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನೆಲ್ಲ ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡಿ ವಿಲ್ ಬರೆದಿದ್ದರು ಎಂದು ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್ ಹೇಳಿದರು.

ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿಶ್ವತೀರ್ಥ ಪ್ರೌಢಶಾಲೆ, ಕಮ್ಮರಡಿ ಇದರ ಸಹಯೋಗದಲ್ಲಿ ಕಮ್ಮರಡಿಯ ವಿಶ್ವತೀರ್ಥ ಪ್ರೌಢಶಾಲೆಯ ಸಭಾಂಗಣದಲ್ಲಿ ಜರಗಿದ ವಸುದೇವ ಭೂಪಾಳಂ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಸುದೇವ ಭೂಪಾಳಂ ಅವರು ಸಾಹಿತ್ಯ ಪರಿಷತ್ತಿಗೆ ಹಣ ನೀಡಿರುವುದು ಅವರ ಕುಟುಂಬಕ್ಕೆ ಸರಿ ಕಾಣದಿದ್ದರೂ, ವಿಲ್ ಬರೆದಿದ್ದರಿಂದ ಕಸಾಪ ಈ ಹಣದಿಂದ ಅವರ ಸಾಹಿತ್ಯದ ಕುರಿತಾಗಿ ಅವಲೋಕನ ಮಾಡುವ ದತ್ತಿ ನಿಧಿ ಕಾರ್ಯಕ್ರಮವಾಗಿ ರೂಪಿಸಿರುವುದರಿಂದ ಪ್ರತಿ ವರ್ಷವೂ ಅವರ ಹೆಸರಿನ ಸಾಹಿತ್ಯ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ತಮಗೆ ಪ್ರೀತಿ ಪಾತ್ರರಾದವರನ್ನು ಸ್ಮರಿಸಿಕೊಳ್ಳಲು ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿ ಇರಿಸುವ ಮೂಲಕ ಪ್ರತಿ ವರ್ಷ ಅವರ ಹೆಸರಿನಲ್ಲಿ ಸಾಹಿತ್ಯ ಕಾರ್ಯಕ್ರಮ ಮಾಡಬಹುದಾಗಿದೆ ಎಂದರು.

ದತ್ತಿ ಕಾರ್ಯಕ್ರಮದ ಕುರಿತ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಿ ವಿದ್ಯಾರ್ಥಿಗಳು ಕನ್ನಡವನ್ನು ಚೆನ್ನಾಗಿ ಓದುವ , ಬರೆಯುವ ಅಭ್ಯಾಸ ಮಾಡಿಕೊಂಡು ಕತೆ, ಕವನ, ಪ್ರಬಂಧಗಳನ್ನು ಬರೆಯುವಂತಾಗಬೇಕು ಎಂದರು.

ಕಾರ್ಯಕ್ರಮವನ್ನು ಕಮ್ಮರಡಿ ವಿಶ್ವತೀರ್ಥ ಟ್ರಸ್ಟ್ ನ ಅಧ್ಯಕ್ಷ ಎಚ್.ವಿ. ನೀಲಕಂಠಪ್ಪ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವಿಶ್ವತೀರ್ಥ ಟ್ರಸ್ಟ್ ನ ನಿರ್ದೇಶಕ ಮಂಜಪ್ಪ ಗೌಡ ಮತ್ತು ವೆಂಕಟೇಶ್ ನಡಬೂರು ಆಗಮಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೀರ್ಥಹಳ್ಳಿ ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ ಅವರು ವಹಿಸಿದ್ದರು.

ಜಿಲ್ಲಾ ಕಸಾಪ ಕೋಶಾಧ್ಯಕ್ಷ ನವೀನ್ ಕುಮಾರ್, ಜಿಲ್ಲಾ ಕಸಾಪದ ಸೋಮನಕಟ್ಟಿ, ತೀರ್ಥಹಳ್ಳಿ ಕಸಾಪ ಕಾರ್ಯದರ್ಶಿಗಳಾದ ಗಾಯತ್ರಿ ಶೇಷಗಿರಿ, ಸೌಳಿ ನಾಗರಾಜ್, ಕಸಾಪ ಕಾರ್ಯಕಾರಿ ಸಮತಿ ಸದಸ್ಯ ಆರ್.ಎಂ.ಧರ್ಮಕುಮಾರ್, ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

ವಿಶ್ವತೀರ್ಥ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎನ್.ಟಿ.ಸುರೇಶ್ ಸ್ವಾಗತಿಸಿ ಅತಿಥಿಗಳ ಪರಿಚಯ ಮಾಡಿದರು. ಇದೇ ಸಂದರ್ಭದಲ್ಲಿ ಶಾಲೆಯ ವತಿಯಿಂದ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

Leave a Reply