ಸಾವಯವ ಉತ್ಪನ್ನಗಳ ಗ್ರಾಹಕರೇ ಬೆಂಗಳೂರಿನ ಲಾಲ್‌ ಬಾಗ್‌ ಗೆ ಬನ್ನಿ

2 months ago

ಜೈವಿಕ ಕೃಷಿಕ ಸೊಸೈಟಿ (ರಿ)ಯಿಂದ ಕೃಷಿ ಉತ್ಪನ್ನಗಳ ನೇರ ಮಾರುಕಟ್ಟೆ

ಬೆಂಗಳೂರು: ಜೈವಿಕ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಜೈವಿಕ ಕರ್ನಾಟಕದ ಅಂಗಸಂಸ್ಥೆಯಾದ ಜೈವಿಕ ಕೃಷಿಕ ಸೊಸೈಟಿ (ರಿ), ಲಾಲ್‌ಬಾಗ್, ಬೆಂಗಳೂರು ರೈತರಿಗೆ ಮತ್ತೊಂದು ಮಹತ್ವದ ಅವಕಾಶ ಕಲ್ಪಿಸಿದೆ. ಸಾವಯವ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ “ಜೈವಿಕ ಸಂತೆ”ಯನ್ನು ಜೈವಿಕ ಕೃಷಿಕರಿಂದ ಗ್ರಾಹಕರಿಗೆ ನೇರ ಸಂಪರ್ಕ ಕಲ್ಪಿಸುವ ವೇದಿಕೆಯಾಗಿ ಆರಂಭಿಸಲಾಗುತ್ತಿದೆ.

ಈ ವಿಶೇಷ ಸಂತೆಯಲ್ಲಿ ಸಾವಯವ, ಪಾರಂಪರಿಕ ಹಾಗೂ ವಿಷಮುಕ್ತ ಕೃಷಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ರೈತರು ತಮ್ಮ ಉತ್ಪನ್ನಗಳನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ತಲುಪಿಸಬಹುದಾದ ವ್ಯವಸ್ಥೆ ಇದಾಗಿದೆ. ಇದರಿಂದ ರೈತರಿಗೆ ನ್ಯಾಯಯುತ ಬೆಲೆ ದೊರೆಯುವುದರ ಜೊತೆಗೆ, ಗ್ರಾಹಕರಿಗೆ ಗುಣಮಟ್ಟದ ಮತ್ತು ಸುರಕ್ಷಿತ ಆಹಾರ ಪದಾರ್ಥಗಳು ಲಭ್ಯವಾಗಲಿವೆ.

ಜೈವಿಕ ಸಂತೆಯ ಉದ್ಘಾಟನಾ ಸಮಾರಂಭವು ಆಗಸ್ಟ್ 8, 2026 (ಶನಿವಾರ) ಬೆಳಿಗ್ಗೆ 7 ಗಂಟೆಗೆ ನಡೆಯಲಿದ್ದು, ಡಾ. ಎ. ಎನ್. ಯಲ್ಲಪ್ಪ ರೆಡ್ಡಿ, ಖ್ಯಾತ ಪರಿಸರವಾದಿಗಳು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಂತರ ಪ್ರತಿ ಶನಿವಾರ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಂತೆ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ.

ಸಾವಯವ ಕೃಷಿಯನ್ನು ಅಳವಡಿಸಿಕೊಂಡಿರುವ ರೈತರು, ಮಹಿಳಾ ಸ್ವಸಹಾಯ ಸಂಘಗಳು, ರೈತ ಉತ್ಪಾದಕರ ಸಂಸ್ಥೆಗಳು (FPO), ಕೃಷಿ ಉದ್ಯಮಿಗಳು ಹಾಗೂ ವಿಷಮುಕ್ತ ಆಹಾರದ ಬಗ್ಗೆ ಆಸಕ್ತಿ ಹೊಂದಿರುವ ಸಾರ್ವಜನಿಕರು ಈ ಜೈವಿಕ ಸಂತೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆಯುವಂತೆ ಸಂಘಟಕರು ಮನವಿ ಮಾಡಿದ್ದಾರೆ.

ಜೈವಿಕ ಕೃಷಿಕರಿಂದ ಗ್ರಾಹಕರಿಗೆ ನೇರ ಸಂಪರ್ಕ ಕಲ್ಪಿಸುವ ಈ “ಜೈವಿಕ ಸಂತೆ” ಸಾವಯವ ಕೃಷಿ ಮತ್ತು ಆರೋಗ್ಯಕರ ಆಹಾರ ಸಂಸ್ಕೃತಿಗೆ ಹೊಸ ಮೈಲಿಗಲ್ಲಾಗುವ ನಿರೀಕ್ಷೆ ಇದೆ.

ಹೆಚ್ಚಿನ ಮಾಹಿತಿಗಾಗಿ: 94497 88135 ವೆಬ್‌ಸೈಟ್: jaivikkarnataka.com

Leave a Reply