ವೀಲಿಂಗ್ ಹಾವಳಿ ತಡೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಿ

2 years ago

ಬೆಂಗಳೂರು ನಗರದ ಹೈಸ್ಕೂಲ್‌ಗಳ ಮುಂಭಾಗ, ಕಾಲೇಜುಗಳ ಮುಂಭಾಗ, ಬಡಾವಣೆಗಳ ರಸ್ತೆಗಳು ಜೊತೆಗೆ ಪ್ರಮುಖ ಬೀದಿಗಳಲ್ಲಿ ಯಾವುದೇ ಆತಂಕವಿಲ್ಲದೆ ದ್ವಿಚಕ್ರ ವಾಹನ ಸವಾರರು ವೀಲಿಂಗ್ ಮಾಡುವಂತಹ ದುಷ್ಟ ಚಟವನ್ನು ಮುಂದುವರಿಸುತ್ತಲೇ ಇದ್ದಾರೆ.

ಇವರ ಈ ಕೃತ್ಯದಿಂದ ಅಮಾಯಕರು ಅಪಘಾತಗಳಿಗೆ ಗುರಿಯಾಗುತ್ತಿದ್ದಾರೆ. ಇದಲ್ಲದೆ ಹೈಸ್ಕೂಲ್‌ಗಳು ಮತ್ತು ಕಾಲೇಜುಗಳ ಮುಂಭಾಗದಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳಲ್ಲದ ಗುಂಪು ಸೇರಿರುತ್ತದೆ. ಬೆಂಗಳೂರು ನಗರದಲ್ಲಿ ಸಹಸ್ರಾರು ಕ್ಯಾಮರಾಗಳಿವೆ.

ದ್ವಿಚಕ್ರ ವಾಹನ ಸವಾರರು ಮತ್ತು ಕಾರು ಚಲಾಯಿಸುವವರು ಕಾನೂನು ಉಲ್ಲಂಘನೆ ಮಾಡಿದರೆ ಅವುಗಳನ್ನು ದಾಖಲಿಸಿಕೊಂಡು ದಂಡ ವಿಧಿಸಿ ಮಾಹಿತಿ ನೀಡುವ ಆಧುನಿಕ ತಂತ್ರಜ್ಞಾನವಿದೆ. ಆದರೆ ಈ ಕ್ಯಾಮರಾಗಳಿಗೆ ವೀಲಿಂಗ್ ಮಾಡುವ ಹಾವಳಿಗಾರರ ವಾಹನಗಳ ಸಂಖ್ಯೆ ಮತ್ತು ಅವರ ಗುರುತಿಸುವಿಕೆ ಸಾಧ್ಯವಾಗುತ್ತಿಲ್ಲವೇ?

ಈ ವಿಚಾರದಲ್ಲಿ ಗಮನವನ್ನು ಹರಿಸಿ. ಜೊತೆಗೆ ಬೆಂಗಳೂರು ನಗರದಲ್ಲಿ ಪ್ರತಿಯೊಂದು ಠಾಣೆಯವರು ತಮ್ಮ ಸರಹದ್ದಿನಲ್ಲಿ ಬರುವ ಶಾಲಾ ಕಾಲೇಜುಗಳ ಬಗ್ಗೆ ನಿಗಾ ವಹಿಸಿ ದಿನಕ್ಕೆ ಒಂದೆರಡು ಬಾರಿಯಾದರೂ ಅಲ್ಲಿ ಇರುವ ಅನಾವಶ್ಯಕ, ಸಂಬಂಧವಿಲ್ಲದ ಯುವಕರನ್ನು ಗುರುತಿಸಿ ಎಚ್ಚರಿಸುವ ಕೆಲಸವನ್ನು ಮಾಡಬೇಕು.

ವೀಲಿಂಗ್ ಮಾಡುವ ವಾಹನಗಳನ್ನು ಸ್ವಾಧೀನಪಡಿಸಿಕೊಂಡು ಹತ್ತಾರು ಸಾವಿರ ರೂಪಾಯಿಗಳ ದಂಡವನ್ನು ವಿಧಿಸಬೇಕು, ಸವಾರರ ವಾಹನ ಚಲಾವಣೆ ಪರವಾನಿಗೆಯನ್ನು ರದ್ದು ಮಾಡಬೇಕು, ಅವರುಗಳ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಿ ಜೈಲಿಗೆ ಅಟ್ಟುವ ಕೆಲಸವನ್ನು ಮಾಡಬೇಕು.

ಇಂತಹ ಕಠಿಣವಾದ, ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಳ್ಳದಿದ್ದರೆ ಇವರ ಹುಚ್ಚಾಟಕ್ಕೆ ಮುಗ್ಧ ನಾಗರಿಕರು ತಮ್ಮ ಕೈ ಕಾಲುಗಳನ್ನು ಮುರಿದುಕೊಳ್ಳುತ್ತಾರೆ. ತಮ್ಮದಲ್ಲದ ತಪ್ಪಿಗೆ ಹಿಂಸೆಯನ್ನು ಅನುಭವಿಸುತ್ತಾರೆ. ವಿಶೇಷವಾಗಿ ಹೈಸ್ಕೂಲ್ ಮತ್ತು ಕಾಲೇಜುಗಳ ಬಳಿಯಲ್ಲಿ ಹೊಯ್ಸಳ ವಾಹನಗಳು ಗಸ್ತು ದೊಡೆಯುವುದು ಹೆಚ್ಚು ಅವಶ್ಯವಿದೆ.

ಕೆ.ಎಸ್. ನಾಗರಾಜ್, ಬೆಂಗಳೂರು

Leave a Reply