“ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” —ಬಸವಣ್ಣ
ಕನ್ನಡ ಚಿತ್ರರಂಗದ ಅಭಿಜಾತ ಕಲಾವಿದ ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಪುನೀತ್ ರಾಜ್ಕುಚಮಾರ್ ಅವರ ಹೆಸರಿನಲ್ಲಿ ಕರ್ನಾಟಕ ಸರ್ಕಾರ ಸ್ಮಾರಕಗಳನ್ನು ನಿರ್ಮಿಸಿದೆ. ಈಗ ನಮ್ಮನ್ನು ಅಗಲಿರುವ ಅಭಿಜಾತ ಕಲಾವಿದೆ ಎಂ.ಲೀಲಾವತಿ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸುವ ಆಲೋಚನೆ ಸರ್ಕಾರದ ಮುಂದಿದೆ.
ಕನ್ನಡದ ಶ್ರೇಷ್ಠ ಕಲಾವಿದೆಯರ ಹೆಸರುಗಳಲ್ಲಿಯೂ ಸ್ಮಾರಕಗಳನ್ನು ನಿರ್ಮಿಸಲಿ. ನಮ್ಮ ಯಾರ ಆಕ್ಷೇಪವೂ ಇರುವುದಿಲ್ಲ. ಆದರೆ ಕನ್ನಡ ನಾಡುನುಡಿಯಯನ್ನು ಕಟ್ಟುವಲ್ಲಿ ಸಿನಿಮಾ ತಾರೆಯರಿಗಿಂತಲೂ ಕವಿ – ಸಾಹಿತಿಗಳ, ಹೋರಾಟಗಾರರ, ರಾಜಕಾರಣಿಗಳ ಪಾತ್ರ ಬಲು ದೊಡ್ಡದು ಎಂಬುದನ್ನು ಮರೆಯದಿರೋಣ. ಅವರಿಗೆ ನ್ಯಾಯ ಸಲ್ಲಿಸುವ ಬಗೆ ಹೇಗೆ?
ಸಿನಿಮಾ ತಾರೆಯರು ಮಾತ್ರ ಸ್ಮಾರಕಗಳ ಗೌರವಕ್ಕೆ ಪಾತ್ರರಾಗಬೇಕೆ? ಹಾಗೆ ನೋಡಿದರೆ ಜನಪ್ರಿಯ ಸಿನಿಮಾ ತಾರೆಯರು ನಟನೆಗಾಗಿ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಾರೆ. ಈವೆಂಟ್ ಪ್ರೋಗ್ರಾಮುಗಳು ಮತ್ತು ಜಾಹಿರಾತುಗಳಿಂದಲೂ ಕೋಟ್ಯಾಂತರ ರೂಪಾಯಿ ಸಂಪಾದಿಸುತ್ತಾರೆ. ಹಣ ಆಸ್ತಿಪಾಸ್ತಿ ಸಂಪಾದಿಸಿ ಅಭಿಮಾನಿಗಳ ಪಡೆಗಳನ್ನು ಕಟ್ಟಿಕೊಂಡು ಐಶಾರಾಮಿ ಜೀವನ ನಡೆಸುತ್ತಾರೆ.
ಕವಿ ಸಾಹಿತಿ ಹೋರಾಟಗಾರರ ಬದುಕು ಹೀಗಿರುವುದಿಲ್ಲ. ಎಷ್ಟೋ ಸಲ ಕವಿಗಳು ಪ್ರಕಟಿಸುವ ಪುಸ್ತಕಗಳ ಕಾಗದದ ಖರ್ಚು ಕೂಡಾ ಹಿಂತಿರುಗುವುದಿಲ್ಲ. ಇದೇ ಲೇಖಕರ ಕೃತಿಗಳು ಸಿನಿಮಾ ಆಗಿ ಬೆಳ್ಳಿತೆರೆಯ ಮೇಲೆ ಹಿಟ್ ಆದಾಗಲೂ ಲೇಖಕರಿಗೆ ಸಿನಿಮಾ ಸಂಪಾದನೆಯ ಒಂದಂಶದ ಹಣದ ಪಾಲು ಕೂಡಾ ಸಿಕ್ಕುವುದಿಲ್ಲ.
ರಕ್ತಪಾತ ಹಿಂಸೆ ಪಾತಕತನ ಅಶ್ಲೀಲತೆಯೇ ತುಂಬಿಕೊಂಡಿರುವ ಸಿನಿಮಾಗಳು ಕೋಟೆಗಳಲ್ಲಿ ಬಾಚಿಕೊಳ್ಳುತ್ತಿದ್ದರೆ ಸದಭಿರುಚಿಯ ಸಾಹಿತ್ಯ ಪ್ರಧಾನ ಮತ್ತು ಸಾಮಾಜಿಕ ಕಾಳಜಿಯ ಕಥಾವಸ್ತುವಿರುವ ಸಿನಿಮಾಗಳು ಎಷ್ಟೋ ಬಾರಿ ಬಿಡುಗಡೆಗೆ ಥಿಯೇಟರ್ ಕೂಡಾ ಸಿಗದೆ ತೋಪೆದ್ದು ಹೋಗುತ್ತಿವೆ. ಕನ್ನಡ ಭಾಷೆಯ ಶ್ರೀಮಂತಿಕೆಗೆ ಮತ್ತು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ತುಡಿಯುವ ಇಂತಹ ಮನಸ್ಸುಗಳನ್ನು ಕೇಳುವವರಾರು?
ಇಂತಹ ಕವಿ ಸಾಹಿತಿಗಳ ಹೆಸರುಗಳಲ್ಲಿ ಸ್ಮಾರಕಗಳ ನಿರ್ಮಾಣದ ಮಾತಿರಲಿ, ಬದುಕಿರುವಾಗ ವಾಸಕ್ಕೊಂದು ಸ್ವಂತ ಮನೆ ಇದೆಯಾ ಎಂದು ಯಾರೊಬ್ಬರೂ ಕೇಳುವುದಿಲ್ಲ.
ಕನ್ನಡ ಪ್ರಜ್ಞೆಯನ್ನು ರೂಪಿಸುವ ಕಾರ್ಯದಲ್ಲಿ ಪಿ.ಲಂಕೇಶ್ ಅವರು ಪತ್ರಿಕೆ ಮತ್ತು ಬರವಣಿಗೆ ಮೂಲಕ ಒಂದು ವಿಶ್ವವಿದ್ಯಾಲಯದಂತೆ ದುಡಿದಿದ್ದಾರೆ. ಅವರ ಹೆಸರಿನಲ್ಲಿ ಯಾವ ಸ್ಮಾರಕವಿದೆ ? ಅವರ ಸಮಾಧಿಯ ಸ್ಥಳವನ್ನು ಸೇರಿದಂತೆ ಇಡೀ ತೋಟವನ್ನು ಸ್ವಂತ ಮಗನೇ ಇನ್ನೊಬ್ಬರಿಗೆ ಮಾರಾಟ ಮಾಡಿ ನುಂಗಿ ನೀರು ಕುಡಿದ. ಗೌರಿ ಲಂಕೇಶ್ ಮತ್ತು ಕವಿತಾ ಲಂಕೇಶ್ ತಮ್ಮ ತಂದೆಯ ಸಮಾಧಿಯಷ್ಟಗಲದ ಜಾಗವನ್ನು ಲಕ್ಷಾಂತರ ರೂಪಾಯಿ ಕೊಟ್ಟು ವಾಪಸ್ ಕೊಂಡುಕೊಂಡರು. ಲಂಕೇಶರ ಸಮಾಧಿ ಕೇಳೋರೇ ದಿಕ್ಕಿಲ್ಲದಂತೆ ಶೋಚನೀಯವಾಗಿದೆ.
ಬೆಂವಿವಿ ಆವರಣದ ಕುವೆಂಪು ಕಲಾಗ್ರಾಮದಲ್ಲಿರುವ ಡಾ.ಯು.ಆರ್.ಅನಂತಮೂರ್ತಿ, ಪ್ರೊ.ಜಿ.ಎಸ್.ಶಿವರುದ್ರಪ್ಪ, ಡಾ.ಸಿದ್ದಲಿಂಗಯ್ಯನವರ ಸಮಾಧಿ ಕಟ್ಟೆಗಳ ಸ್ಥಿತಿಯನ್ನು ಕೇಳುವವರಾರು?
ಕನ್ನಡಕ್ಕಾಗಿ ದೊಡ್ಡ ಪ್ರಮಾಣದ ಕೊಡುಗೆ ನೀಡುತ್ತಿರುವ ಈಗಿನ ಲೇಖಕರ ಬದುಕಿನ ಪಾಡು ಹೇಗಿದೆ ಎಂಬುದನ್ನು ಕೇಳುವವರಾರು? ಕೋಟಿಗಟ್ಟಲೆ ಸಂಪಾದಿಸಿದ ಸಿನಿಮಾ ಕಲಾವಿದರು ಸತ್ತಾಗ ಸ್ಮಾರಕ ನಿರ್ಮಿಸುವುದಕ್ಕಿಂತಲೂ ಕೋಟಿ ಆರೋಗ್ಯಕರ ಮನಸ್ಸುಗಳನ್ನು ರೂಪಿಸಲು ಅಕ್ಷರಗಳ ಮೂಲಕ ಶ್ರಮಿಸುತ್ತಾ ಬರಿಗೈಲಿ ಬದುಕುತ್ತಿರುವ ಲೇಖಕರನ್ನು ಮತ್ತು ಅವರ ಕುಟುಂಬಗಳನ್ನು ಕುರಿತು ಯೋಚಿಸುವವರಾರು?
- ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿ



