ಅಂಬೇಡ್ಕರ್ ಇಲ್ಲದ ಗಾಂಧೀಜಿ, ಗಾಂಧೀಜಿಯಿಲ್ಲದ ಅಂಬೇಡ್ಕರ್ ಅಪೂರ್ಣ

2 years ago

#Ambedkar #Gandhi #incomplete

ನನಗೆ ಗಾಂಧೀಜಿಯವರಾಗಿರಲಿ, ಅಂಬೇಡ್ಕರವರಾಗಿರಲಿ, ಇಬ್ಬರೂ ಪ್ರಶ್ನಾತೀತರಲ್ಲ. ಆದರೆ ಒಬ್ಬರನ್ನು ಬೆಂಬಲಿಸುತ್ತಾ, ಇವರೀರ್ವರಲ್ಲಿ ಒಬ್ಬರನ್ನು ಹಿಂಬಾಲಿಸುತ್ತಾ, ಇನ್ನೋರ್ವರನ್ನು ಹೀಯಾಳಿಸಲಾರೆ.

ಭಾರತ ನಿರ್ಮಾಣದಲ್ಲಿ ಇವರಿಬ್ಬರ ಪಾತ್ರ ಬಹಳ ಮುಖ್ಯವಾದದ್ದು. ಅಂಬೇಡ್ಕರ್ ಇಲ್ಲದ ಗಾಂಧೀಜಿ, ಗಾಂಧೀಜಿಯಿಲ್ಲದ ಅಂಬೇಡ್ಕರ್ ಇಬ್ಬರೂ ಅಪೂರ್ಣರೆಂದು ನನ್ನ ಭಾವನೆ. ಗಾಂಧೀಜಿಗಾಗಿ ಅಂಬೇಡ್ಕರ್ ಅವರನ್ನು ಬಿಟ್ಟುಕೊಡುವ ಪ್ರಶ್ನೆಯಿಲ್ಲ. ಹಾಗೆಯೇ ಅಂಬೇಡ್ಕರಿಗಾಗಿ, ಗಾಂಧೀಜಿಯವರನ್ನೂ ಬಿಟ್ಟುಕೊಡುವ ಪ್ರಶ್ನೆಯಿಲ್ಲ.

ಹಾಗಾಗಿ ಗಾಂಧೀಜಿಯವರನ್ನು ಹಿಂಬಾಲಿಸುತ್ತಾ, ಅಂಬೇಡ್ಕರ್ ಅವರನ್ನು ನಿಂದಿಸುವವರು, ಹೀಯಾಳಿಸುವವರು, ಅಂಬೇಡ್ಕರ್ ಅವರನ್ನು ಹಿಂಬಾಲಿಸುತ್ತಾ, ಗಾಂಧೀಜಿಯವರನ್ನು ನಿಂದಿಸುವವರು, ತೆಗಳುವವರು ಪ್ರಗತಿಪರರೂ ಅಲ್ಲ, ಸಿದ್ಧಾಂತವಾದಿಗಳೂ ಅಲ್ಲ. ಅಂಥವರು ಕೇವಲ ಜಾತಿವಾದಿ ಎಡಬಿಡಂಗಿಗಳು.

ಅಂಬೇಡ್ಕರ್ ಬರಹಗಳನ್ನು ಸಂಪೂರ್ಣವಾಗಿ ಓದಿದ ಮಾತ್ರಕ್ಕೆ ಅಂಥವರು ಅಂಬೇಡ್ಕರ್ ಅವರ ಸಿದ್ಧಾಂತದ ವಾರಸುದಾರರಾಗಲ್ಲ. ಹಾಗೆಯೇ ಗಾಂಧೀಜಿಯವರನ್ನು ಓದಿಕೊಂಡ ಮಾತ್ರಕ್ಕೆ ಯಾರೇ ಆಗಲಿ ಗಾಂಧೀವಾದಿ ಇಲ್ಲ ಗಾಂಧೀಜಿಯ ಸಿದ್ಧಾಂತದ ವಾರಸುದಾರರಾಗಲ್ಲ.

ಇವರಿಬ್ಬರನ್ನೂ ಓದದೇ ಅವರನ್ನು ಹಿಂಬಾಲಿಸುವವರೂ ಅಪೂರ್ಣರೂ ಅಲ್ಲ. ಗಾಂಧೀಜಿಯಾಗಲಿ ಇಲ್ಲ ಅಂಬೇಡ್ಕರೇ ಆಗಿರಲಿ, ಅವರನ್ನು, ಅವರ ಸಿದ್ಧಾಂತವನ್ನು ಅರ್ಥೈಸಿಕೊಳ್ಳಬೇಕಾಗಿರುವುದು ಅವರ ಬರಹದ ಸಾಲುಗಳ ಮಧ್ಯವಿರುವ ನಿರ್ವಾತದಲ್ಲಿ. ಅವರಿಬ್ಬರಲ್ಲಿದ್ದದ್ದು ವೈಚಾರಿಕ ಭಿನ್ನತೆಯೇ ಹೊರತು ದ್ವೇಷ, ವೈಷಮ್ಯ ಅಲ್ಲವೆನ್ನುವುದು ಅವರಿಬ್ಬರ ಬರಹಳಗಳನ್ನು ಓದಿದ ನಂತರ ಅರ್ಥವಾಗಿಲ್ಲ ಅಂದರೆ ಅಂಥ ಓದು ಬದನೆಕಾಯಿಯಷ್ಟೆ.

  • Gladson Almeida

Leave a Reply