ಬೆಂಗಳೂರು: ನಿರುದ್ಯೋಗಿ ಅರ್ಹ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಬಹುತೇಕ ರಾಜ್ಯದ ಎಲ್ಲಾ ಭಾಗಗಳಲ್ಲಿ ಉದ್ಯೋಗ ಮೇಳ ಆಯೋಜಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಉದ್ಯೋಗ ಮೇಳ ಆಯೋಜಿಸುವ ಸಂಬಂಧ ಕೌಶಲ್ಯಾಭಿವೃದ್ಧಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ನೇತೃತ್ವದಲ್ಲಿ ರಾಜ್ಯ ಸರ್ಕಾರ ಉನ್ನತ ಸಮಿತಿಯನ್ನು ರಚಿಸಿದೆ.
ಈ ಸಮಿತಿಯು ರಾಜ್ಯ, ಪ್ರಾದೇಶಿಕ ಹಾಗೂ ಜಿಲ್ಲಾ ಮಟ್ಟದಲ್ಲಿ ಬೃಹತ್, ಸಣ್ಣ ಕೈಗಾರಿಕೆಗಳು
ಸಾಫ್ಟ್ ವೇರ್ ಉದ್ಯಮಿಗಳ ಸಹಯೋಗದೊಂದಿಗೆ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಿದೆ. ಸ್ಥಳೀಯ ಬೇಡಿಕೆಗೆ ಅನುಗುಣವಾಗಿ ಯುವ ಜನತೆಗೆ ಉದ್ಯೋಗಗಳನ್ನು ನೀಡಿ ಸ್ವಾವಲಂಬಿಯನ್ನಾಗಿ ಮಾಡುವ ಸದುದ್ದೇಶದಿಂದ ರಾಜ್ಯ ಸರ್ಕಾರ ಉದ್ಯೋಗ ಮೇಳವನ್ನು ಆಯೋಜಿಸಲು ಮುಂದಾಗಿದೆ. ಸರ್ಕಾರಿ, ಖಾಸಗಿ ಕ್ಷೇತ್ರಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮತ್ತು ಉದ್ಯೋಗ ಸೃಷ್ಟಿಯ ಬಗ್ಗೆ ಈಗಾಗಲೇ ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಇಲಾಖೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟವರ ಜೊತೆ ಚರ್ಚೆ ನಡೆಸಿದ್ದಾರೆ.
ಉದ್ಯೋಗ ಮೇಳ ನಡೆಸುವುದರಿಂದ ಐಟಿ- ಬಿಟಿ, ಹೋಟೆಲ್, ಉತ್ಪಾದನಾ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ಯುವಕ- ಯುವತಿಯರಿಗೆ ಹೆಚ್ಚಿನ ಅವಕಾಶ ಸಿಗಲಿದೆ.
ಡಾ.ಶರಣಪ್ರಕಾಶ್ ಪಾಟೀಲ್ ನೇತೃತ್ವದ ಸಮಿತಿಯಲ್ಲಿ ಸಚಿವರಾದ ಎಂ.ಬಿ.ಪಾಟೀಲ್,
ಎಚ್.ಕೆ.ಪಾಟೀಲ್, ಡಾ.ಎಂ.ಸಿ.ಸುಧಾಕರ್, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ,
ಸಂತೋಷ್ ಲಾಡ್ ಮತ್ತು ಬಿ.ನಾಗೇಂದ್ರ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಇದ್ದಾರೆ.




