ಮತ್ತೆ ದೆಹಲಿಯತ್ತ ಸಿದ್ದರಾಮಯ್ಯ

5 months ago

ಬೆಂಗಳೂರು: ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ರಾಜ್ಯದಲ್ಲೂ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಸಿಎಂ ಸಿದ್ದರಾಮಯ್ಯ ನಾಳೆ ಮತ್ತೆ ದೆಹಲಿಗೆ ತೆರಳುತ್ತಿದ್ದಾರೆ.

ಕಬ್ಬಿಗೆ ನ್ಯಾಯ ಸಮ್ಮತವಾದ ಬೆಲೆ ನಿಗದಿ ಮತ್ತು ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಎಥೆನಾಲ್ ಸಂಗ್ರಹಣೆಯ ಮಿತಿ ಹೆಚ್ಚಳ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಲು ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅವಕಾಶ ನೀಡಿದ್ದಾರೆ. ರಾಜ್ಯದಲ್ಲಿ ಕಬ್ಬಿಗೆ ಮಹಾರಾಷ್ಟ್ರ ಮಾದರಿಯಲ್ಲಿ ಬೆಲೆ ನಿಗದಿಪಡಿಸಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ. ಇದರ ಜೊತೆಯಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಎಥೆನಾಲ್ ಮಿತಿಯನ್ನು ಹೆಚ್ಚಳ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಆಗಮಿಸಿದೆ. ಈ ಸಂಬಂಧ ಹಲವು ವಿಚಾರಗಳ ಬಗ್ಗೆ ಚರ್ಚಿಸಲು ಅವಕಾಶ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ನಾಳೆ ತಮ್ಮ ಭೇಟಿಗೆ ಬರುವಂತೆ ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತೆ ದೆಹಲಿಗೆ ತೆರಳುತ್ತಿದ್ದಾರೆ.

ಕಳೆದ ರಾತ್ರಿಯಷ್ಟೇ ದೆಹಲಿ ಪ್ರವಾಸದಿಂದ ಹಿಂತಿರುಗಿದ್ದ ಸಿಎಂ ಇದೀಗ ರಾಜ್ಯದ ಹಲವು ಯೋಜನೆಗಳ ಕುರಿತಂತೆ ಪ್ರಧಾನಿ ಜೊತೆ ಚರ್ಚಿಸಲು ಮನವಿ ಪತ್ರಗಳೊಂದಿಗೆ ಸಜ್ಜುಗೊಂಡಿದ್ದಾರೆ.

ಕೃಷ್ಣ ನ್ಯಾಯ ಮಂಡಳಿಯ ಐತೀರ್ಪನ್ನು ಅಧಿಸೂಚನೆಯ ಮೂಲಕ ಪ್ರಕಟಿಸಬೇಕು, ಕಳಸಾ ಬಂಡೂರಿ ಯೋಜನೆಗೆ ಇರುವ ಅಡ್ಡಿ ನಿವಾರಿಸಬೇಕು ಮತ್ತು ಮೇಕೆದಾಟು ಯೋಜನೆ ಕಾಮಗಾರಿ ಆರಂಭಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಮನವಿ ಸಲ್ಲಿಸಲಿದ್ದಾರೆ.

Leave a Reply