ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಹಲವಾರು ಅಕಾಡೆಮಿಗಳು ಕಾರ್ಯ ನಿರ್ವಹಿಸುತ್ತಿವೆ. ಅದೇ ರೀತಿಯಲ್ಲಿ ವಾರ್ತಾ ಇಲಾಖೆಯ ಅಡಿಯಲ್ಲಿ ಕರ್ನಾಟಕ ಚಲನಚಿತ್ರ ಉದ್ಯಮಕ್ಕೆ ಸಂಬಂಧಪಟ್ಟ ಅಕಾಡೆಮಿ ಕಾರ್ಯ ನಿರ್ವಹಿಸುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಬರುವ ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ, ಸಂಗೀತ-ನೃತ್ಯ ಅಕಾಡೆಮಿ, ಹೀಗೆ ಹಲವಾರು ಅಕಾಡೆಮಿಗಳಿಗೆ ಸರಿಯಾದಂತಹ ಅನುದಾನವನ್ನೂ ನೀಡುವುದಿಲ್ಲ.
ಸರ್ಕಾರಗಳು ನೀಡುವ ಅನುದಾನ ಅಲ್ಲಿನ ಸಿಬ್ಬಂದಿಯ ಸಂಬಳಕ್ಕೂ ಸಾಲುವುದಿಲ್ಲ. ಕೆಲವು ಅಕಾಡೆಮಿಗಳಿಗೆ ಸಿಬ್ಬಂದಿಯೇ ಇರುವುದಿಲ್ಲ. ಅಧ್ಯಕ್ಷರಿಗೆ ಒಂದಷ್ಟು ಸಂಬಳ ಸಿಗಬಹುದು. ಇನ್ನು ಇವರು ಘೋಷಿಸುವ ಪ್ರಶಸ್ತಿಗಳನ್ನು ನೀಡಲು ಹಣವೂ ಇರುವುದಿಲ್ಲ, ಕಾರ್ಯಕ್ರಮಗಳನ್ನು ರೂಪಿಸಲು ಇವರಿಂದ ಸಾಧ್ಯವೇ ಇರುವುದಿಲ್ಲ.
ಹೀಗಾಗಿ ಪ್ರತೀ ವರ್ಷವೂ ಕೊಡಬೇಕಾದ ಪ್ರಶಸ್ತಿಗಳನ್ನು 3-4 ವರ್ಷಗಳಿಗೊಮ್ಮೆ ಘೋಷಿಸುತ್ತಾರೆ. ಇವರು ಕೊಟ್ಟ ಪ್ರಶಸ್ತಿಗಳನ್ನು ಸ್ವೀಕರಿಸಲು ಪ್ರಶಸ್ತಿ ಪಡೆದವರು ಅದೆಷ್ಟೋ ಬಾರಿ ನಿಧನರಾಗಿರುತ್ತಾರೆ. ಇನ್ನು ಚಲನಚಿತ್ರ ಅಕಾಡೆಮಿಯ ಪ್ರಶಸ್ತಿಯ ಸ್ಥಿತಿಯೂ ಇದೇ ಆಗಿದೆ. ಆದುದರಿಂದ ಇಂತಹ ಅಕಾಡೆಮಿಗಳಿಗೆ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಿ ಪ್ರತೀ ವರ್ಷವೂ ತಪ್ಪದೇ ಪ್ರಶಸ್ತಿ ಕೊಡುವಂತಹ ವ್ಯವಸ್ಥೆಯನ್ನೂ ಮಾಡಿ.
ಬೇರೆ ಬೇರೆ ಪ್ರಶಸ್ತಿಗಳನ್ನು ಮಾತ್ರ ತಪ್ಪದೇ ಪ್ರತೀ ವರ್ಷವೂ ನೀಡುತ್ತೀರಿ. ಆದರೆ, ಅಕಾಡೆಮಿಗಳ ಪ್ರಶಸ್ತಿ ಮಾತ್ರ ಕಾಲಕಾಲಕ್ಕೆ ನೀಡುವುದಿಲ್ಲ. ಇನ್ನು ಕರ್ನಾಟಕ ರಾಜ್ಯ ಸರ್ಕಾರ 1991 ರಲ್ಲಿ ನೀಡಿದ ಕರ್ನಾಟಕ ರತ್ನ ಪ್ರಶಸ್ತಿ ಪ್ರತೀ ವರ್ಷವೂ ನೀಡುವ ಪರಿಪಾಠವೇ ಇಲ್ಲ. ಆಗೊಮ್ಮೆ ಈಗೊಮ್ಮೆ ಸರ್ಕಾರಗಳು ಪ್ರಶಸ್ತಿಯನ್ನು ಕೊಡುವಂತಹ ವ್ಯವಸ್ಥೆಯನ್ನು ಮಾಡುತ್ತಾರೆ. ಇದರ ಬದಲಿಗೆ ಪ್ರತೀ ವರ್ಷವೂ ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಜ್ಯೋತ್ಸವದ ದಿನದಂದೇ ಅದೇ ವೇದಿಕೆಯಲ್ಲಿ ಕೊಡುವಂತಹ ರೀತಿಯಲ್ಲಿ ಆಡಳಿತಾತ್ಮಕವಾದಂತಹ ಕ್ರಮಗಳನ್ನು ಕೈಗೊಳ್ಳಿ.
- ಕೆ.ಎಸ್.ನಾಗರಾಜ್, ಬೆಂಗಳೂರು




