ಕರ್ನಾಟಕದ ಸಾಕ್ಷಿ ಪ್ರಜ್ಞೆಯಾಗಿದ್ದ ಶಾಂತರಸರು

1 year ago

ಚಾಮರಾಜನಗರ: ಕರ್ನಾಟಕದ ಸಾಕ್ಷಿ ಪ್ರಜ್ಞೆಯಾಗಿದ್ದ ಶಾಂತರಸರು ಕನ್ನಡ ಸಾಹಿತ್ಯ ಲೋಕದ ಅಪರೂಪದ ಸಾಹಿತಿ. ಇವರ ಸಾಹಿತ್ಯವನ್ನು ಇಂದಿನ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು ಎಂದು ಖ್ಯಾತ ಸಾಹಿತಿ ಡಾ. ರಾಜಶೇಖರ ಜಮದಂಡಿ ಹೇಳಿದರು.

ರಂಗವಾಹಿನಿ(ರಿ), ರಂಗ ದೀವಿಗೆ ಮತ್ತು ಸಂಸ ಥಿಯೇಟರ್ ಸಹಯೋಗದಲ್ಲಿ ತಾಲೂಕು ಭೋಗಾಪುರ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಶಾಂತರಸರ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಶಾಂತರಸರು ವೈಚಾರಿಕತೆ ಹಾಗೂ ಮಾನವೀಯ ಮೌಲ್ಯಗಳ ನೆಲಗಟ್ಟಿನ ಸಾಹಿತಿಯಾಗಿದ್ದರು. ಕರ್ನಾಟಕದ ಹೆಸರಾಂತ ಗಜಲ್ ಗಾರುಡಿಗ ಎಂದೇ ಹೆಸರಾಗಿದ್ದ ಶಾಂತರಸರು, ರಾಯಚೂರು ಜಿಲ್ಲೆಯ ಹೆಂಬೆರಾಳ ಗ್ರಾಮದಲ್ಲಿ ಚನ್ನಬಸವಯ್ಯ ಹಿರೇಮಠ ಮತ್ತು ಸಿದ್ದಲಿಂಗಮ್ಮ ಅವರ ಸುಪುತ್ರರಾಗಿ ಏಪ್ರಿಲ್ 4, 1924 ರಂದು ಜನಿಸಿದರು ಎಂದರು.

ಶಾಂತರಸರು ಕನ್ನಡ ಮತ್ತು ಉರ್ದು ಭಾಷೆಯಲ್ಲಿ ಗಜಲ್ ಗಳನ್ನು ಬರೆದು ಪ್ರಕಟಿಸಿದರು. ಶಾಂತರಸರು ತಾವಷ್ಟೇ ಬೆಳೆಯದೆ ಸಾಹಿತ್ಯದ ಗೆಳೆಯರ ಬಳಗವನ್ನೇ ಬೆಳೆಸಿದರು. ಶಾಂತರಸರ ಸಾಹಿತ್ಯ ಸಂಶೋಧನೆ, ಹೋರಾಟ ಮನೋಭಾವ ಎಲ್ಲವೂ ವಿಭಿನ್ನವಾಗಿತ್ತು. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ, ಅನ್ಯಾಯದ ವಿರುದ್ದ ಪ್ರತಿರೋಧವನ್ನು ಒಡ್ಡುತ್ತಿದ್ದರು. ಶಾಂತರಸರು ಕನ್ನಡ ಸಾಹಿತ್ಯದ ಅಪರೂಪದ ಸಾಹಿತಿ ಎಂದರು.

ಪ್ರಾಸ್ತಾವಿಕ ಭಾಷಣ ಮಾಡಿದ ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ಲೋಕದ ದಿಗ್ಗಜರ ಸಾಹಿತ್ಯವನ್ನು ಓದಬೇಕು. ಆ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭೋಗಾಪುರ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಪಿ. ದೇವರಾಜು ಮಾತನಾಡಿ, ಪುಸ್ತಕಗಳನ್ನು ಓದುವುದರಿಂದ ಶಾಂತಿ ನೆಮ್ಮದಿ ದೊರೆಯುತ್ತದೆ. ಹೆಚ್ಚಿನ ಜ್ಞಾನ ಲಭಿಸುತ್ತದೆ. ವಿದ್ಯಾರ್ಥಿಗಳು ಹೆಚ್ಚು ಓದುವುದರ ಕಡೆ ಗಮನಹರಿಸಬೇಕು ಎಂದರು.

ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಸಿ ಕೆ ಮಂಜುನಾಥ, ರಂಗ ದೀವಿಗೆ ಅಧ್ಯಕ್ಷ ಕಲೆ ನಟರಾಜ್, ಎಸ್ ಪಿ ಬಾಲಸುಬ್ರಮಣ್ಯಂ ಗಾನ ಗಾರುಡಿಗ ಸಾಂಸ್ಕೃತಿಕ ಕಲಾ ವೇದಿಕೆ ಅಧ್ಯಕ್ಷ ಶಿವಣ್ಣ, ಆಂಗ್ಲ ಭಾಷೆಯ ಪ್ರಾಧ್ಯಾಪಕ ಮಹಾದೇವಸ್ವಾಮಿ ಮೊದಲಾದವರು ಹಾಜರಿದ್ದರು. ಇದೇ ಸಂದರ್ಭದಲ್ಲಿ ವಸಂತ ಮತ್ತು ಗಿರಿಜಾ ಎಂಬ ವಿದ್ಯಾರ್ಥಿನಿಯರು ಸ್ವರಚಿತ ಕವನವಾಚಿಸಿ ಬಹುಮಾನ ಪಡೆದುಕೊಂಡರು.

Leave a Reply