ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಾದ ಪ್ರೊ.ಬಿ.ಕೃಷ್ಣಪ್ಪನವರನ್ನು ಕುರಿತು ಮಾಳವ ನಾರಾಯಣ್ ಬರೆದಿರುವ ‘ಕರ್ನಾಟಕದ ಅಂಬೇಡ್ಕರ್ ಪ್ರೊ.ಬಿ.ಕೃಷ್ಣಪ್ಪ’ ಕೃತಿ ಬಿಡುಗಡೆ ಸಮಾರಂಭವನ್ನು ನಾಳೆ 23-07-2023 ರ ಭಾನುವಾರ ಬೆಳಗ್ಗೆ 10-30 ಕ್ಕೆ ಬೆಂಗಳೂರು ಮಹಾನಗರ, ರವೀಂದ್ರ ಕಲಾಕ್ಷೇತ್ರದ ಸಮೀಪದಲ್ಲಿರುವ ಜೈಭೀಮ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ನೀವು ಬಿಡುವು ಮಾಡಿಕೊಂಡು ಕಾರ್ಯಕ್ರಮಕ್ಕೆ ಬರಬೇಕಾಗಿ ವಿನಂತಿ.
ಅಂಬೇಡ್ಕರೋತ್ತರ ಭಾರತದಲ್ಲಿ ಕರ್ನಾಟಕದ ಮಟ್ಟಿಗೆ ಅಂಬೇಡ್ಕರ್ ಅವರ ಹೋರಾಟದ ರಥವನ್ನು ಮುಂದಕ್ಕೆಳೆದ ಹೋರಾಟಗಾರರ ಸಾಲಿನಲ್ಲಿ ಪ್ರೊ.ಬಿ.ಕೃಷ್ಣಪ್ಪನವರಿಗೆ ಅಗ್ರ ಸ್ಥಾನವಿದೆ. ಪ್ರೊ.ಬೀಕೆಯವರ ನಾಯಕತ್ವದಲ್ಲಿ ದಲಿತರು ಸಾಂಘಿಕವಾಗಿ ಧ್ರುವೀಕರಣಗೊಂಡು ಜಾತಿ ಮತ್ತು ಭೂಮಾಲಿಕ ಉತ್ಪಾದನಾ ರಚನೆಗಳ ವಿರುದ್ಧ ನಡೆಸಿದ ಕ್ರಾಂತಿಕಾರಿ ಸಾಮಾಜಿಕ ದಂಗೆಯ ಚಾರಿತ್ರಿಕ ನೆನಪುಗಳನ್ನು “ಕರ್ನಾಟಕದ ಅಂಬೇಡ್ಕರ್ ಪ್ರೊ.ಬಿ.ಕೃಷ್ಣಪ್ಪ” ಎಂಬ ಈ ಕೃತಿಯಲ್ಲಿ ಮಾಳವ ನಾರಾಯಣ್ ದಾಖಲಿಸಿದ್ದಾರೆ. ದಲಿತ ಚಳವಳಿಯ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳಲ್ಲಿ ಒಂದು ನದಿಯಾಗಿ ಹರಿದುಬಂದ ದಲಿತ ವಿಮೋಚನಾ ಸೇನೆ ಈ ಮಹತ್ವದ ಪುಸ್ತಕವನ್ನು ಪ್ರಕಟಿಸುತ್ತಿರುವುದು ಅದರ ಸಾಂಸ್ಕೃತಿಕ ರಾಜಕಾರಣದ ದ್ಯೋತಕವಾಗಿದೆ.
ಪ್ರೊ.ಬೀಕೆಯವರ ಬಾಲ್ಯದ ಜೀವನ, ವೃತ್ತಿ ಜೀವನ, ದಲಿತ ಸಂಘರ್ಷ ಸಮಿತಿಯನ್ನು ರೂಪಿಸಿದ ಬಗೆ, ದಲಿತ ಚಳವಳಿಯ ಸ್ವರೂಪ, ಶಾಮಸುಂದರ್ ರವರ ಭೀಮಸೇನೆ ಮತ್ತು ತಿಮ್ಮರಾಯಪ್ಪನವರ ದಲಿತ ಕ್ರಿಯಾ ಸಮಿತಿ, ಬೂಸಾ ಚಳವಳಿ, ಬೀಕೆ ಸಂಘಟಿಸಿದ ಪ್ರಮುಖ ಹೋರಾಟಗಳು, ಜಾಥಾಗಳು, ದಲಿತರ ಭೂಮಿಯ ಪ್ರಶ್ನೆ ಮತ್ತು ಭೂಹೋರಾಟಗಳು, ದಸಂಸಕ್ಕೆ ರೈತ ಚಳವಳಿಯೊಂದಿಗಿದ್ದ ಭಿನ್ನಮತ, ದಲಿತ ವಿದ್ಯಾರ್ಥಿ ಒಕ್ಕೂಟ, ದಲಿತ ಕಲಾಮಂಡಲಿ, ಹೋರಾಟದ ಹಾಡುಗಳು, ಬೀಕೆಯವರ ಸಾಹಿತ್ಯ, ರಾಜಕೀಯ ಪ್ರವೇಶ, ಪರ್ಯಾಯ ಸಾಂಸ್ಕೃತಿಕ ರಾಜಕಾರಣದ ಚರ್ಚೆ, ದಸಂಸ ವಿಘಟನೆ ಇನ್ನೂ ಮುಂತಾದ ಮಹತ್ವದ ವಿಷಯಗಳನ್ನು ಕುರಿತು ಮಾಳವ ನಾರಾಯಣ್ ಈ ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ. ಪ್ರೊ.ಬೀಕೆ ಅವರ ಪತ್ನಿಯವರಾದ ಶ್ರೀಮತಿ ಇಂದಿರಾ ಕೃಷ್ಣಪ್ಪನವರು ಬರೆದಿರುವ ಮುನ್ನುಡಿ ಈ ಕೃತಿಯ ಮೌಲಿಕತೆಯನ್ನು ಮತ್ತಷ್ಟು ಹೆಚ್ಚಿಸಿದೆ.
– ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿ




