ಸೆಪ್ಟೆಂಬರ್ ಐದು: ನೆನೆವುದೆನ್ನ ಮನ ವಿಶ್ವಗುರುವಾದ ಬಸವಣ್ಣನ

3 years ago

#September5th #Our #mind #absorbed# #Vishwaguru #Basavanna #teachersday #gbpatil

ಒಂದಕ್ಷರ ಕಲಿಸಿದವನು ಸಹ ಗುರು ಎನ್ನುತ್ತದೆ ನಮ್ಮ ಸಂಸ್ಕಾರ. ಗುರು ಶಬ್ದದ ಆಳ, ಅಗಲ, ವಿಸ್ತಾರ ಬಹು ದೊಡ್ಡದು. ಕಲ್ಪನಾತೀತ.

ಜಗದಗಲ ಮುಗೀಲಗಲ ಮಿಗೆಯಗಲ ನಿಮ್ಮಅಗಲ… ಇಂತಹ ವಿಸ್ತಾರ ಉಳ್ಳವನು ಶಿವನೆಂದು ಅಣ್ಣ ಬಸವಣ್ಣ ಹೇಳಿದ್ದಾರೆ, ಈ ಉಕ್ತಿಯನ್ನು ಗುರುವಿಗೂ ಹೋಲಿಸಬಹುದು. ‘ಅರಿವೆ ಗುರು’. ಗುರು ಅಂದರೆ ಜ್ಞಾನ, ಜ್ಞಾನಕ್ಕೆ ಆಕಾರವಿಲ್ಲ, ಮಿತಿ ಇಲ್ಲ, ಅಂಕೆ ಇಲ್ಲ, ಕೊನೆ ಅಂತೂ ಇಲ್ಲವೇ ಇಲ್ಲ. ಇಂತಹ ಗುರುವು ಶಿವನಷ್ಟೇ ವಿಶಾಲ, ಅಪರಿಮಿತ, ಅಗಾಧ, ಅವನೇ ಗುರು ಬಸವಣ್ಣ.

ಜಗತ್ತಿನ ಮೊದಲ ಗುರು ಬುದ್ಧ. ‘ಆಸೇಯೇ ದುಃಖಕ್ಕೆ ಮೂಲ’ಎಂದು ಸಾರಿದ ಜಗತ್ತಿನ ಪ್ರಥಮ ಗುರು. ಬೌದ್ಧ ಧರ್ಮ ಸ್ಥಾಪಿಸಿದ ಗುರು, ಬೌದ್ಧದ ಮೂಲ ಉದ್ದೇಶ ಇಂದ್ರಿಯ ನಿಗ್ರಹ ಹಾಗು ಸಂಸ್ಕಾರಗಳ ಬಲದಿಂದ  ಸುರಕ್ಷಿತವಾದ ಸ್ವರ್ಗದಲ್ಲಿ ನೆಲೆನಿಂತು ಬದುಕಿನ ದುಃಖಗಳಿಂದ ಮುಕ್ತನಾಗುವದು. ಬೌದ್ಧ ದರ್ಮ ‘ಇಹ’ ದ ಕುರಿತು ಆಲೋಚಿಸುತ್ತದೆಯೇ ಹೊರತು ಸನಾತನ ಧರ್ಮದಂತೆ “ಪರ” ದ ಕುರಿತು ಆಲೋಚಿಸುವದಿಲ್ಲ. ಇನ್ನೊಂದು ಧರ್ಮ ಜೈನ. ಧರ್ಮ ನಾಸ್ತಿಕತೆಯನ್ನು ಅವಲಂಬಿಸಿದ ಕಾರಣ ಅದು ಹರಿಯುವ ನೀರಾಗಲಿಲ್ಲ, ನಿಂತ ನೀರಾಯಿತು. ಜೈನರು ನಿರ್ವಾಣಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಿದಾಗ ಅದರ ಪ್ರಭಾವ ಕಡಿಮೆಯಾಗುತ್ತ ಹೋಯಿತು.

ಅಂದಿನ ದಿನಗಳಲ್ಲಿ ಭಾರತದಲ್ಲಿ ಬಹು ಪ್ರಚಲಿತ ಧರ್ಮ ಬೌದ್ಧ ಧರ್ಮವಾಗಿತ್ತು. ಉಚ್ರಾಯ ಸ್ಥಿತಿ ತಲುಪಿ, ರಾಜಾಶ್ರಯ ಹೊಂದಿದ ಧರ್ಮವಾಗಿತ್ತು. ಬೌದ್ಧ ಧರ್ಮ ಬಸವಣ್ಣನವರ ಮೇಲುಪ್ರಭಾವ ಬೀರಿತ್ತು. ಬೌದ್ಧ ಧರ್ಮ, ಲಿಂಗಾಯತ ಧರ್ಮಗಳೆರಡರಲ್ಲೂ  ಸಾಮ್ಯತೆಗಳನ್ನು  ಕಾಣಬಹುದು. ಇವೆರಡೂ ಧರ್ಮಗಳ ಮೂಲ “ದಯ” ಆಗಿತ್ತು.

ದಯವಿಲ್ಲದ ಧರ್ಮವದೇವುದಯ್ಯಾ?
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ
ದಯವೇ ಧರ್ಮದ ಮೂಲವಯ್ಯಾ
ಕೂಡಲಸಂಗಯ್ಯನಂತೊಲ್ಲದಲ್ಲಯ್ಯಾ
– ಬಸವಣ್ಣ

ಲಿಂಗಾಯತ ಧರ್ಮದಲ್ಲಿ ತರ್ಕ ಮತ್ತು ನಂಬಿಕೆಗಮೂಲವಾಗಿವೆ. ತರ್ಕಬದ್ಧ ಆಲೋಚನೆಗಳಿಂದ ಶರಣರು ಕಂದಾಚಾರಗಳಿಂದ ಕೂಡಿದ ಧರ್ಮಗಳನ್ನು ವಿಶ್ಲೇಷಿಸಿ, ಶಾಸ್ತ್ರ, ವೇದ, ಪೂರಾಣ, ಸ್ಮ್ರತಿ, ಆಗಮಗಳನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಿ ಅವುಗಳನ್ನು ತ್ಯಜಿಸಿದರು, ಖಂಡಿಸಿದರು. ಮಾನವನನ್ನು ಮಾನವನನ್ನಾಗಿ ನೋಡಿದರು. ಶಾಸ್ತ್ರ ಹೇಳುವವನು ಹಾಗೂ ಕೇಳುವವನು ಇಬ್ಬರು ಮಾನವರಲ್ಲವೆ? ಎಂದರು. ‘ಹುಟ್ಟು’ ಮಾನವನ  ಅಂತಸ್ತಿನ ಮಾನದಂಡವಾಗಲಾರದು, ಜ್ಞಾನ ಅಂತಸ್ತಿನ ಮಾನದಂಡವಾಗುತ್ತದೆಂದು ಸಾರಿದರು.

ಅನುಭಾವದ ಅನುಭವ ಮಂಟಪ ಕಟ್ಟಿದರು, ಅದರಲ್ಲಿ ಸೂಳೆ ಸಂಕವ್ವೆ, ಕಸಗುಡಿಸುವ ಸತ್ಯಕ್ಕ, ಡೋಹರ ಕಕಯ್ಯನವರು, ಪ್ರಚಂಡ ಜ್ಞಾನಿ, ಮಾನವತಾವಾದಿ ಅಲ್ಲಮಪ್ರಭು ಹಾಗು ಕಲ್ಯಾಣ ದೇಶದ ಪ್ರಧಾನಿ ಜಗತ್ತಿನ ಪ್ರಥಮ ಗುರು ಅಣ್ಣ ಬಸವಣ್ಣ ನೊಂದಿಗೆ ವೇದಿಕೆ ಹಂಚಿಕೊಂಡರು.

ದೇವಭಾಷೆಯಾದ ಸಂಸ್ಕೃತವನ್ನು ಕಲಿತರು. ಮನುವಾದವನ್ನು ಓದಿದರು, ಅದನ್ನು ಅರಗಿಸಿಕೊಂಡು ಅದರಲ್ಲಿ ಹುರುಳಿಲ್ಲ ಎಂದರು, ಖಂಡಿಸಿದರು. ಲಿಂಗಾಯತ ಎಂಬ ಹೊಸ ಧರ್ಮಕ್ಕೆ ವಾಕ್ಯ ಬರೆದರು. ಲಿಂಗಾಯತ ಧರ್ಮ ಸ್ಥಾಪಿಸಿದರು.

‘ಸೆಪ್ಟೆಂಬರ ಐದು’ ಗುರುವಿನ ದಿನ. ಸುವರ್ಣದಿನದಂದು ನಾನು ಜ್ಞಾಪಿಸಿಕೊಳ್ಳಲು ಇಷ್ಟಪಡುವ ಗುರು ಬಸವಣ್ಣ. ಅವರು ನನಗೆ ಮಾತ್ರ ಗುರುವಲ್ಲ, ವಿಶ್ವಕ್ಕೆ ಗುರುಬಸವಣ್ಣ.

– ಜಿ.ಬಿ.ಪಾಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ

Leave a Reply