ತೀವ್ರ ಕುತೂಹಲ ಕೆರಳಿಸಿದ ಸತೀಶ್ ಜಾರಕಿಹೊಳಿ ದೆಹಲಿ ಪ್ರವಾಸ

1 year ago

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹನಿ ಟ್ರ್ಯಾಪ್ ಪ್ರಕರಣ ಕೋಲಾಹಲ ಸೃಷ್ಟಿಸಿರುವ ಬೆನ್ನಲ್ಲೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮತ್ತು ಅವರ ತಂದೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜ್ಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ಅಧಿಕಾರ ಹಂಚಿಕೆ ಕುರಿತಾಗಿ ಒಪ್ಪಂದ ಏರ್ಪಟ್ಟಿದ್ದು, ಎರಡು ವರ್ಷ ಅಧಿಕಾರ ಅವಧಿ ಪೂರ್ಣಗೊಳಿಸಿದ ನಂತರ ಸಿಎಂ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಮಾಡಬೇಕು ಎಂಬ ವಿಚಾರ ಚರ್ಚೆಯಲ್ಲಿರುವಾಗಲೇ ಈ ಭೇಟಿ ಮಹತ್ವ ಪಡೆದುಕೊಂಡಿದೆ.

ಯಾವುದೇ ಕಾರಣಕ್ಕೂ ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಬಾರದು ಎಂದು ಲಾಬಿ ಮಾಡುತ್ತಿರುವ ಸತೀಶ್ ಜಾರಕಿಹೊಳಿ, ಕುಮಾರಸ್ವಾಮಿ ಅವರೊಂದಿಗೆ ಈ ಕುರಿತಾಗಿಯೇ ಮಾತುಕತೆ ನಡೆದಿದ್ದಾರೆ ಎಂಬ ಊಹಾಪೋಹಗಳು ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರಾಡುತ್ತಿವೆ. 

ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇದರ ಹಿಂದಿರುವ ಸೂತ್ರಧಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿರುವ ಸತೀಶ್ ಜಾರಕಿಹೊಳಿ ಕಳೆದ ರಾತ್ರಿ ದೆಹಲಿಯಲ್ಲಿ ಹೈಕಮಾಂಡ್ ನಾಯಕರಾದ ಕೆ ಸಿ ವೇಣುಗೋಪಾಲ್ ಮತ್ತು ಆರ್  ಎಸ್ ಸುರ್ಜೆವಾಲಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಈ ವೇಳೆ ಹನಿಟ್ರ್ಯಾಪ್ ಪ್ರಕರಣ ಕುರಿತು ಅವರಿಗೆ ಸಂಪೂರ್ಣ ಮಾಹಿತಿ ನೀಡಿದ ಸತೀಶ್ ಜಾರಕಿಹೊಳಿ, ಇದರ ಹಿಂದೆ ರಾಜ್ಯ ಸರ್ಕಾರದ ಪೂರ್ವ ಪ್ರಭಾವಿ ಕಾಂಗ್ರೆಸ್ ಪಕ್ಷದ ಒಬ್ಬ ರಾಷ್ಟ್ರೀಯ ಮಟ್ಟದ ಹಿರಿಯ ನಾಯಕ ಹಾಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಆತಿಥ್ಯ ವಿಭಾಗದ ವ್ಯಕ್ತಿಯೊಬ್ಬರು ಶಾಮೀಲಾಗಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇದರಲ್ಲಿ ಶಾಮೀಲಾಗಿರುವ ಎಲ್ಲರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿರುವ ಅವರು, ಯಾವುದೇ ಕಾರಣಕ್ಕೂ ಅಧಿಕಾರ ಹಸ್ತಾಂತರದ ಪ್ರಕ್ರಿಯೆಗೆ ಕೈ ಹಾಕದಂತೆ ಸಲಹೆ ಮಾಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿದ ಕೆ ಸಿ ವೇಣುಗೋಪಾಲ್ ಈ ಕುರಿತಂತೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ತೀರ್ಮಾನ ಕೈಗೊಳ್ಳಲಿದ್ದಾರೆ. ಹೀಗಾಗಿ ಎಲ್ಲರೂ ಅವರ ನಿರ್ಧಾರಕ್ಕೆ ಕಾಯಬೇಕು ಎಂದು ತಿಳಿಸಿರುವುದಾಗಿ ಗೊತ್ತಾಗಿದೆ. 

ಹೈಕಮಾಂಡ್ ಅಧಿಕಾರ ಹಸ್ತಾಂತರ ಕುರಿತಾಗಿ ಯಾವುದೇ ಸ್ಪಷ್ಟ ಭರವಸೆ ನೀಡದ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಅವರು ಮತ್ತೊಮ್ಮೆ ಪ್ರಮುಖ ನಾಯಕರ ನಿಯೋಗದೊಂದಿಗೆ ದೆಹಲಿಗೆ ಬರುವುದಾಗಿ ತಿಳಿಸಿದ್ದು ರಾಹುಲ್ ಗಾಂಧಿ ಅವರ ಭೇಟಿಗೆ ಸಮಯ ಕೋರಿದ್ದಾರೆ. 

ಇದಾದ ಬಳಿಕ ಅವರು ನೇರವಾಗಿ ಕುಮಾರಸ್ವಾಮಿ ಅವರ ನಿವಾಸಕ್ಕೆ ಆಗಮಿಸಿದ್ದು, ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಈ ವೇಳೆ ದೇವೇಗೌಡ ಕೂಡ ಇವರ ಜೊತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದ್ದಾರೆ. ಮಾತುಕತೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಡಿ ಕೆ ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರವಾಗದಂತೆ ನೋಡಿಕೊಳ್ಳಿ. ಈ ವಿಷಯದಲ್ಲಿ ನೀವುಗಳು ತೆಗೆದುಕೊಳ್ಳುವ ತೀರ್ಮಾನದ ಜೊತೆ ನಾವಿದ್ದೇವೆ ಎಂದು ಉಭಯ ನಾಯಕರು, ಭರವಸೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಡಿ ಕೆ ಶಿವಕುಮಾರ್ ಅವರಿಗೆ ರಾಜ್ಯವನ್ನು ಮುನ್ನಡೆಸುವ ಮುತ್ಸದ್ದಿತನ ಇಲ್ಲ. ಎಲ್ಲವನ್ನು ಸಂಪೂರ್ಣ ಹಣದಲ್ಲೇ ಅಳೆದು ತೂಗುತ್ತಾರೆ, ಇವರು ಮುಖ್ಯಮಂತ್ರಿಯಾದರೆ ಯಾವುದೇ ಮಂತ್ರಿ ಮತ್ತು ಶಾಸಕರಿಗೆ ಸ್ವಾತಂತ್ರ್ಯ ಇರುವುದಿಲ್ಲ. ಎಲ್ಲೆಡೆ ದ್ವೇಷದ ರಾಜಕಾರಣ ಇಲ್ಲವೇ ಪಿತೂರಿ ಮಾಡಿ ಯಾವುದಾದರೂ ಬಲೆಯಲ್ಲಿ ಸಿಲುಕಿಸುವ ಪ್ರಯತ್ನಗಳು ನಡೆಯುತ್ತವೆ. ಹೀಗಾಗಿ ಎಚ್ಚರದಿಂದ ಇರುವಂತೆ ದೇವೇಗೌಡರು ಸಲಹೆ ಮಾಡಿರುವುದಾಗಿ ವರದಿಗಳು ಹರಿದಾಡುತ್ತಿವೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲಿ ನಮ್ಮದೇನೂ ತಕರಾರಿಲ್ಲ. ಈ ಅವಧಿಯಲ್ಲ ಮುಂದಿನ ಅವಧಿಗೂ ಅವರೇ ಮುಖ್ಯಮಂತ್ರಿ ಆಗಿರಲಿ. ಆದರೆ ಯಾವುದೇ ಕಾರಣಕ್ಕೂ ಡಿ ಕೆ ಶಿವಕುಮಾರ್ ಅವರಿಗೆ ಈ ಹುದ್ದೆ ಸಿಗಬಾರದು. ಅದಕ್ಕಾಗಿ ತಮ್ಮ ಪಕ್ಷ ಯಾವುದೇ ನಿರ್ಧಾರ ಬೇಕಾದರೂ ತೆಗೆದುಕೊಳ್ಳಲಿದೆ ಎಂದು ಮನವರಿಕೆ ಮಾಡಿಕೊಟ್ಟಿರುವುದಾಗಿ ಮೂಲಗಳು ತಿಳಿಸಿವೆ. 

ತಮ್ಮ ಪಕ್ಷದ ನಿರ್ಧಾರವನ್ನು ಸಿದ್ದರಾಮಯ್ಯ ಅವರಿಗೆ ರವಾನಿಸುವಂತೆ ಹೇಳಿರುವ ದೇವೇಗೌಡರು ಎಂತಹದೇ ಪ್ರಸಂಗ ಬಂದರೂ ಅಧಿಕಾರ ಹಸ್ತಾಂತರಿಸಬಾರದು ಸೂಚಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.

Leave a Reply