ಬೆಂಗಳೂರು: ಅಧಿಕಾರ ಹಸ್ತಾಂತರ ವಿಚಾರವಾಗಿ ರಾಜ್ಯ ಕಾಂಗ್ರೆಸ್ಸಿನಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳು ಸ್ಥಗಿತಗೊಂಡಿವೆ ಎಂದು ಹೇಳುತ್ತಿರುವಾಗಲೇ ಮತ್ತೆ ಚಟುವಟಿಕೆಗಳು ಚುರುಕು ಪಡೆದುಕೊಂಡಿದ್ದು ಕುತೂಹಲ ಮೂಡಿಸಿದೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಸಿ ಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಡಿ ಕೆ ಶಿವಕುಮಾರ್ ಮತ್ತು ಅವರ ಸೋದರ ಡಿ ಕೆ ಸುರೇಶ್ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ.
ಮೊನ್ನೆಯಷ್ಟೇ ಸಿದ್ದರಾಮಯ್ಯ ಅಧಿಕಾರ ತ್ಯಜಿಸುವುದು ನಿಶ್ಚಿತ ಎಂದು ಹೇಳಿದ್ದ ಸತೀಶ್ ಜಾರಕಿಹೊಳಿ ಅವರು ಇದೀಗ ಡಿ ಕೆ ಶಿವಕುಮಾರ್ ಜೊತೆಗೆ ಸಮಾಲೋಚನೆ ನಡೆಸುತ್ತಿರುವುದು ಕುತೂಹಲ ಮೂಡಿಸಿದೆ.
ಅಧಿಕಾರ ಹಂಚಿಕೆ ವಿಚಾರವಾಗಿ ಕಳೆದ ಕೆಲ ದಿನಗಳಿಂದ ಬಿರುಸಿನ ಚಟುವಟಿಕೆ ನಡೆಸುತ್ತಿದ್ದ ಡಿ ಕೆ ಶಿವಕುಮಾರ್ ಅವರು ಖಾಸಗಿ ಹೋಟೆಲ್ ನಲ್ಲಿ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದಾದ ನಂತರ ಇದೀಗ ಖುದ್ದು ಜಾರಕಿಹೊಳಿ ಅವರೇ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಮುಖ್ಯಮಂತ್ರಿಯಾಗಲು ನನಗೆ ತಮ್ಮ ಸಹಕಾರದ ಅಗತ್ಯವಿದೆ ಎಂದು ಕಳೆದ ವಾರ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಮಾಡಿದ್ದ ಡಿ ಕೆ ಶಿವಕುಮಾರ್, ತಮ್ಮ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿ ಮುಂದುವರೆಯುವ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಬೇಕು ಎಂದು ಹೇಳಿದ್ದರು ಎಂದು ಗೊತ್ತಾಗಿದೆ.
ಅದೇ ವಿಚಾರವಾಗಿ ಈಗ ಸತೀಶ್ ಜಾರಕಿಹೊಳಿ ಅವರು ಡಿ ಕೆ ಶಿವಕುಮಾರ್ ಮತ್ತು ಡಿ ಕೆ ಸುರೇಶ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಗ್ರಾಮೀಣಾಭಿವೃದ್ಧಿ ಮಂತ್ರಿ ಪ್ರಿಯಾಂಕ್ ಖರ್ಗೆ ಕೂಡ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕಳೆದ ವಾರವಷ್ಟೆ ಪ್ರಿಯಾಂಕ್ ಖರ್ಗೆ ದೆಹಲಿಗೆ ತೆರಳಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದೀಗ ಅವರು ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಸುಮಾರು ಒಂದು ಗಂಟೆಗಳು ಕಾಲ ಚರ್ಚೆ ನಡೆಸಿದ್ದಾರೆ.
ಇನ್ನು ಈ ಮಾತುಕತೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿ ಕೆ ಶಿವಕುಮಾರ್ ಮಂತ್ರಿಗಳನ್ನು ಸಚಿವ ಸಂಪುಟ ಸಭೆಯಲ್ಲಿ ಅಥವಾ ಅದಾದ ನಂತರ ಆಗಿಂದಾಗ್ಗೆ ಭೇಟಿ ಮಾಡುತ್ತಿರುತ್ತೇನೆ. ಅದರಲ್ಲಿ ವಿಶೇಷವೇನು ಇಲ್ಲ ಎಂದರು.
ಸತೀಶ್ ಜಾರಕಿಹೊಳಿ ನನ್ನ ಆತ್ಮೀಯ ಸ್ನೇಹಿತರು, ನನ್ನೊಂದಿಗೆ ಪಕ್ಷದ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಆತ್ಮೀಯತೆಯಿಂದ ಹಲವು ವಿಚಾರಗಳನ್ನು ಚರ್ಚೆ ಮಾಡಿದ್ದೇವೆ. ವಿಧಾನಮಂಡಲದ ಅಧಿವೇಶನ ಎದುರಿಸುವ ವಿಚಾರ ಮತ್ತು ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಮಾತುಕತೆ ನಡೆಸಿದ್ದೇವೆ ಎಂದರು.



