ದೇಶದಲ್ಲಿ ಬಿಜೆಪಿಯ ಅವನತಿ ಕರ್ನಾಟಕದಿಂದ ಶುರುವಾಗಿದೆ: ಸಿದ್ದರಾಮಯ್ಯ

3 years ago

#BJP #downfall #country #started #Karnataka #Siddaramaiah

ಬೆಂಗಳೂರು: ಅಚ್ಚೆದಿನ್ ಹೆಸರಲ್ಲಿ ದೇಶದ ಜನರ‌ ಜೇಬಿನಲ್ಲಿದ್ದ ಹಣವನ್ನು ಕಸಿದುಕೊಂಡ ಪರಿಣಾಮ ಪ್ರಧಾನಿ ಮೋದಿ ವಿರುದ್ಧ ಜನಾಭಿಪ್ರಾಯ ವ್ಯಕ್ತವಾಗಿದ್ದು, ಬಿಜೆಪಿ ಅವನತಿಯ ಹಾದಿ ಹಿಡಿದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನ ಮಂಡಲದ ಉಭಯ ಸದನಗಳನ್ನುದ್ದೇಶಿಸಿ, ರಾಜ್ಯಪಾಲರು ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಅವರು, ದೇಶದಲ್ಲಿ ಬಿಜೆಪಿಯ ಅವನತಿ ಕರ್ನಾಟಕದಿಂದ ಶುರುವಾಗಿದೆ. ಪ್ರಧಾನಿ ಮೋದಿ ಪ್ರಭಾವ ಮಂಕಾಗಿದೆ. ಮೋದಿಯವರು ರಾಜ್ಯದಲ್ಲಿ ಪ್ರಚಾರ ಮಾಡಿದ ಎಲ್ಲಾ ಕಡೆ ಬಿಜೆಪಿ ಹೀನಾಯವಾಗಿ ಸೋತಿರುವುದು ಇದಕ್ಕೆ ಸಾಕ್ಷಿ ಎಂದು  ನುಡಿದರು.

ತಮ್ಮದೇ ಆದ ಶೈಲಿಯಲ್ಲಿ ಬಿಜೆಪಿ ಮತ್ತು ನರೇಂದ್ರ ಮೋದಿಯವರು ಹೇಗೆ ಜನರಿಂದ ದೂರವಾಗುತ್ತಿದೆ, ಜನ ವಿರೋಧಿ ಆಗುತ್ತಿದೆ ಎನ್ನುವುದನ್ನು ಬಿಡಿ ಬಿಡಿಯಾಗಿ ಬಿಚ್ಚಿಟ್ಟರು.

ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 28 ಬಾರಿ ಬಂದರು. ಹಿಂದಿನ ಯಾವ ಪ್ರಧಾನಿಗಳೂ ರಾಜ್ಯಗಳ ಚುನಾವಣೆ ವೇಳೆ ಹೀಗೆ ವರ್ತಿಸಿರಲಿಲ್ಲ. ಉಳಿದ ಪ್ರಧಾನಿಗಳಿಗೆ ದೇಶವನ್ನು ಮುನ್ನಡೆಸುವುದು ಪ್ರಥಮ ಆಧ್ಯತೆ ಆಗಿರುತ್ತಿತ್ತು. ಬರೀ ಚುನಾವಣೆಗಳನ್ನು ಮಾಡುತ್ತಾ ಓಡಾಡುತ್ತಿರಲಿಲ್ಲ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ಮೋದಿ ಅವರು ರೋಡ್ ಶೋ ನಡೆಸಿದ, ಪ್ರಚಾರ ನಡೆಸಿದ ಕ್ಷೇತ್ರಗಳಲ್ಲಿ ಮತ್ತು ಸುತ್ತಮುತ್ತಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅತ್ಯಂತ ಬಹುಮತದಿಂದ ಗೆದ್ದಿದೆ. ಹೀಗಾಗಿ ಮೋದಿ ಅವರ ಪ್ರಭಾವ ಮಂಕಾಗುತ್ತಿರುವುದನ್ನು ನೀವು ಒಪ್ಪಿಕೊಳ್ಳಿ. ಇನ್ಮೇಲೆ ಮೋದಿ ಅವರ ಮೇಲೆ ಅವಲಂಬಿತರಾಗಬೇಡಿ ಎಂದು ಬಿಜೆಪಿ ಸದಸ್ಯರಿಗೆ ಕಿವಿಮಾತು ಹೇಳಿದರು.

ಕಾಂಗ್ರೆಸ್ ಗೆಲುವಿಗೆ ಕಾರಣವಾದ ಸಂಗತಿಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಮುಖ್ಯಮಂತ್ರಿ ಕಾಂಗ್ರೆಸ್ ಜನರ ಜೇಬಿನಲ್ಲಿ ಹಣ ಇರಬೇಕು ಎನ್ನುವ ಉದ್ದೇಶದಿಂದ ಐದು ಗ್ಯಾರಂಟಿಗಳನ್ಮು ಘೋಷಿಸಿ ಜಾರಿ ಮಾಡಿತು. ಬಡವರು-ಮಧ್ಯಮ ವರ್ಗದವರ ಜೇಬಿನಲ್ಲಿ ಹಣ ಇದ್ದರೆ ನಾಡಿನ ಆರ್ಥಿಕತೆ ಬೆಳೆಯುತ್ತದೆ ಎನ್ನುವುದು ಕಾಂಗ್ರೆಸ್ ನ ಬದ್ಧತೆ ಮತ್ತು ಸಿದ್ಧಾಂತ. ಆದರೆ ಬಿಜೆಪಿ ಜನರ ಜೇಬಿನಲ್ಲಿರುವ ಹಣ ಕಿತ್ತುಕೊಳ್ಳುವ ಮನಸ್ಥಿತಿ ಹೊಂದಿರುವ ಕಾರಣದಿಂದ ಹೀನಾಯವಾಗಿ ಸೋಲು ಕಾಣಬೇಕಾಯಿತು ಎಂದರು.

ಕನ್ನಡ ಮಣ್ಣಿನ ಸೌಹಾರ್ದ ಪರಂಪರೆಯ 2000 ವರ್ಷಗಳ ಮೌಲ್ಯವನ್ಮು ವಿವರಿಸಿದ ಮುಖ್ಯಮಂತ್ರಿಗಳು, ಪಂಪ “ಮನುಷ್ಯ ಜಾತಿ ತಾನೊಂದೇ ವಲಂ” ಎನ್ನುವ ಮೌಲ್ಯದಿಂದ ಕನ್ನಡ ಸಂಸ್ಕೃತಿಯನ್ನು ಅರಳಿಸಿದರು. ಹೀಗೆ ಪಂಪನಿಂದ ಹಿಡಿದು ಬಸವಣ್ಣನವರನ್ನು ಪ್ರಸ್ತಾಪಿಸಿ ಇವರೆಲ್ಲರ ಆಶಯಗಳೇ ನಮ್ಮ ಸಂವಿಧಾನದಲ್ಲಿದೆ. ಆದರೆ ತಾನು ಮಾತ್ರ ಶ್ರೇಷ್ಠ ಎನ್ನುವ ಹಿಟ್ಲರ್ ಒಬ್ಬ ಮತಾಂಧ. ಆತ ಮನುಷ್ಯ ವಿರೋಧಿ ಎಂದರು.

ಹಿಟ್ಲರ್ ತನ್ನ ತಿಕ್ಕಲುತನದಿಂದ ಹೇಗೆ ಮನುಷ್ಯರ ಮಾರಣಹೋಮಕ್ಕೆ ಕಾರಣನಾದ ಎಂದು ವಿವರಿಸುತ್ತಿದ್ದಾಗ ಬಿಜೆಪಿ ಸದಸ್ಯರು ಮುಖ್ಯಮಂತ್ರಿಗಳ ಮಾತಿಗೆ ಅಡ್ಡಿಪಡಿಸಿದರು. ಈ ವೇಳೆ ಮುಖ್ಯಮಂತ್ರಿಗಳು, ‘ಹಿಟ್ಲರ್ ಗೆ ಬೈದರೆ ನಿಮಗೇಕೆ ಸಿಟ್ಟು ?” ಎಂದು ಪ್ರಶ್ನಿಸಿದರು.

ನಾವು ಸಂವಿಧಾನಕ್ಕೆ ತಲೆಬಾಗುತ್ತೇವೆಯೇ ಹೊರತು ಬೇರೆ ಯಾವುದಕ್ಕೂ ತಲೆಬಾಗುವುದಿಲ್ಲ. ಇದು ನಮ್ಮ ಬದ್ಧತೆಯೂ ಹೌದು. ಇದರಲ್ಲಿ ಯಾವುದೇ ಬದಲಾವಣೆ ಇಲ್ಲೆ. ಇದನ್ನೇ ಸಂವಿಧಾನದಲ್ಲಿ ಜಾತ್ಯಾತೀತತೆ ಎಂದು ಕರೆದಿರುವುದು. ಭಾರತ 142 ಕೋಟಿ ಜನಸಂಖ್ಯೆ ಹೊಂದಿದೆ. ಅಷ್ಟೂ ಜನರು ಕೂಡ ಒಂದೇ ಕೆಲವು ವರ್ಷಗಳ ಹಿಂದೆ ಸ್ವಾರ್ಥಕ್ಕಾಗಿ ಜಾತಿ ಮಾಡಿದರು. ವೃತ್ತಿ ಆಧಾರಿತ ಜಾತಿ ಮೇಲೂ ಅಲ್ಲ. ಕೀಳೂ ಅಲ್ಲ. ಬಿಜೆಪಿಯವರಿಗೆ ನಾನು ನೀವು ನಂಬಿರುವ ಧರ್ಮವೇ ಶ್ರೇಷ್ಠ ಎಂಬುದನ್ನು ಬಿಡಿ ಎಂದು ಹೇಳಿದ್ದೇನೆ. ಆದರೆ, ಅವರು ಬಿಡುತ್ತಿಲ್ಲ. ಜನ ಹೀಗಾಗಿ ಅವರಿಗೆ ಎಲ್ಲಿ ಕೂರಿಸಬೇಕೋ ಅಲ್ಲಿ ಕೂರಿಸಿದ್ದಾರೆ ಎಂದು ಎಚ್ಚರಿಕೆ ಕೊಟ್ಟರು.

Leave a Reply