ನನಗೆ ಮತ್ತು ನನ್ನಂಥ ಹಲವರಿಗೆ ಇಂಥದ್ದೊಂದು ಗೆಲುವಿನ ಅಗತ್ಯವಿತ್ತು. ರಾಜಕೀಯಕ್ಕೆ ಅಷ್ಟೇನೂ ಅಂಟಿಕೊಳ್ಳದೆ, ತಮ್ಮ ಪಾಡಿಗೆ ಕೆಲಸ ಮಾಡುತ್ತಿದ್ದ ಅನೇಕರನ್ನು ಬೈದು, ಭಂಗಿಸಿ, ಸುಳ್ಳುಗಳನ್ನು ಹಬ್ಬಿಸಿ, ವಿನಾಕಾರಣ ಅವಮಾನಿಸಿದವರಿಗೆ ಇಂಥದ್ದೊಂದು ಪಾಠ ಕಲಿಸಬೇಕಾಗಿತ್ತು.
ಬಿಜೆಪಿಯು ʼ ಹಿಂದುತ್ವದʼ ಹೆಸರಲ್ಲಿ ಕರ್ನಾಟಕವನ್ನು ಕಟ್ಟಬಯಸಿತು. ಇದೊಂದು ಸತ್ವ ಇಲ್ಲದ ರಾಜಕೀಯ ಅಜೆಂಡಾವೇ ಹೊರತು ಎಲ್ಲ ಹಿಂದುಗಳ ಒಳಿತಿಗಾಗಿ ಮಾಡುವ ಕೆಲಸ ಅಲ್ಲವೆಂಬುದನ್ನು ನಾವು ಒಳ್ಳೆಯ ಭಾಷೆಯಲ್ಲಿ ಹೇಳುತ್ತಾ ಬಂದೆವು. ʼ ಸರ್ವೇ ಜನಾಃ ಸುಖಿನೋ ಭವಂತುʼ ಎಂದು ಹೇಳಿದ ಹಿರಿಯರ ಬಗ್ಗೆ ನಮಗೂ ಗೌರವವಿದೆ. ಆದರೆ ʼಬಿಜೆಪಿಗೆ ವೋಟ್ ಮಾಡಿದವರು ಮಾತ್ರ ಹಿಂದುಗಳುʼ ಎಂಬಲ್ಲಿಗೆ ಅದು ಬಂದು ನಿಂತರೆ ಆಗ ಬಿಜೆಪಿಯ ಎಲ್ಲ ಕಳಂಕಗಳನ್ನು ಹಿಂದುಗಳು ಹೊತ್ತುಕೊಳ್ಳಬೇಕಾಗುತ್ತದೆ. ಅದು ಎಂದಿಗೂ ಸಾಧ್ಯವಿಲ್ಲದ ಸಂಗತಿ. ಬಡ ಮುಸಲ್ಮಾನರನ್ನು ಜಾತ್ರೆಗಳಿಂದ ಹೊರಗಟ್ಟಿದಾಗ ಹೊಮ್ಮುವ ನಿಟ್ಟುಸಿರಿಗೆ ಯಾವ ಹಿಂದೂ ಕೂಡಾ ಬಲಿಯಾಗಬಾರೆದೆಂದು ಆಶಿಸುವವ ನಾನು. ಏಕೆಂದರೆ ಇದು ʼಸರ್ವ ಜನಾಂಗದ ಶಾಂತಿಯ ತೋಟʼ.
ಭಾರತದ ಇತರ ರಾಜ್ಯಗಳಿಗಿಂತ ಕರ್ನಾಟಕ ಸಾಂಸ್ಕೃತಿಕವಾಗಿ ಭಿನ್ನ ಎಂಬುದನ್ನು ಮೋದಿ, ಯೋಗಿ, ಶಾ, ನಡ್ಡಾ, ಮೊದಲಾದ ರಾಷ್ಟ್ರೀಯ ನಾಯಕರು ತಿಳಿದುಕೊಂಡಿಲ್ಲವೆಂಬುದು ಈ ಚುನಾವಣೆಯಲ್ಲಿ ಸ್ಪಷ್ಟವಾಗಿದೆ. ಅವರ ಬಾಯಲ್ಲಿ ಒಂದೆರಡು ಕನ್ನಡ ಪದಗಳು ಬಂದಾಗ ರೋಮಾಂಚಿತಗೊಂಡವರು ಇದ್ದದ್ದು ಹೌದಾದರೂ ಅದು ಮತ್ತೆ ಚುನಾವಣಾ ನಾಟಕ ಎಂಬುದನ್ನು ಅರ್ಥಮಾಡಿಕೊಳ್ಳದಷ್ಟು ದಡ್ಡರು ಕರ್ನಾಟಕದವರಲ್ಲ. ಇಲ್ಲಿಯ ಬಹುಭಾಷಿಕತೆ, ಬಹು ಧಾರ್ಮಿಕತೆ, ಬಹು ಸಮುದಾಯಿಕತೆ, ಪ್ರಾದೇಶಿಕ ವ್ಯತ್ಯಾಸ ಇತ್ಯಾದಿಗಳನ್ನು ಒಂದು ಉಸಿರಿನಲ್ಲಿ ಬುಲ್ಡೋಜ್ ಮಾಡಲಾಗುವುದಿಲ್ಲ. ಇವುಗಳ ಬಗೆಗೆ ಆಳವಾದ ತಿಳಿವಳಿಕೆಯುಳ್ಳವರು ಬಿಜೆಪಿಯಲ್ಲಿ ಬಹಳ ಕಡಿಮೆ ಜನ ಇದ್ದಾರೆ ಎಂಬುದು ಅಚ್ಚರಿಯ ಸಂಗತಿಯಾಗಿದೆ. ಜೊತೆಗೆ ಕೇಂದ್ರ ನಾಯಕರ ಆಕ್ರಮಣಕಾರೀ ಪ್ರವಾಸದಲ್ಲಿ ಸ್ಥಳೀಯ ಬಿಜೆಪಿ ನಾಯಕರೆಲ್ಲ ಹೇಳ ಹೆಸರಿಲ್ಲದಂತೆ ತೇಲಿ ಹೋಗಿಬಿಟ್ಟರು. ೪೦ ಟನ್ ಹೂವನ್ನು ತನ್ನ ಮೇಲೇ ಎರಚಿಸಿಕೊಂಡು ಸಂತೋಷಿಸುವ ʼಸ್ವಮೋಹಿ ನಾಯಕನಿಗಿಂತʼ ʼಇದಾವ ಪರಿಯಲ್ಲಿ ಕಾಡಿತ್ತು ಮಾಯೆ ʼ ಎಂದು ತನ್ನನ್ನೇ ಸಂಶಯಿಸಿಕೊಂಡ ಬಸವಣ್ಣ, ʼ ಲಂಗೋಟಿ ಬಲು ಒಳ್ಳೇದಣ್ಣ,ʼ ಎಂದು ಹಾಡಿದ ಪುರಂದರದಾಸ ನಮ್ಮ ಅಸ್ಮಿತೆಯ ನೈಜ ಸಂಕೇತಗಳು.
ಕಳೆದ ನಾಲ್ಕೂವರೆ ವರ್ಷಗಳಲ್ಲಿ ಬಿಜೆಪಿಯು ಕರ್ನಾಟಕ ಸಂಸ್ಕೃತಿಯ ಮೇಲೆ ಆಳವಾದ ಗಾಯ ಮಾಡಿದೆ. ಬಿವಿ ಕಾರಂತರಂತವರು ಕಟ್ಟಿದ ರಾಷ್ಟ್ರೀಯ ಖ್ಯಾತಿಯ ರಂಗಾಯಣ ಕೊನೆಗೆ ಎಲ್ಲಿಗೆ ತಲುಪಿತು? ಪಠ್ಯ ಪುಸ್ತಕ ಪರಿಷ್ಖರಣೆ, ಹೊಸ ಶಿಕ್ಷಣ ನೀತಿಗಳು ಹಾಸ್ಯಾಸ್ಪದವಾದುವು. ಇತಿಹಾಸವೆಂದು ಉರಿಗೌಡ, ನಂಜೇಗೌಡರು ಮುಂದೆ ಬಂದರು. ಸರಿಯಾದ ಜಾಗದಲ್ಲಿ ಸರಿಯಾದವರನ್ನು ಕುಳ್ಳಿರಿಸಬೇಕೆಂಬ ಕನಿಷ್ಠ ಪ್ರಜ್ಞೆಯೂ ಮಂತ್ರಿಗಳಲ್ಲಿ ಇಲ್ಲವಾದರೆ ಇಂಥದ್ದು ಸಂಭವಿಸುತ್ತಲೇ ಇರುತ್ತದೆ.
ಬೆಲೆ ಏರಿಕೆ ಮತ್ತು ಭ್ರಷ್ಟಾಚಾರಗಳು ಜನರನ್ನು ಕಾಡಿದ ನಿಜವಾದ ಸಮಸ್ಯೆಗಳು. ಬಿಜೆಪಿಯ ಭಕ್ತರು ಇವನ್ನು ಕೂಡಾ ಸಮರ್ಥಿಸಿಕೊಂಡು ಜನರಿಗೆ ಹಂಚಿದರು. ಕನಿಷ್ಟ ಇಲ್ಲಿ ತಪ್ಪಾಗಿದೆ ಎಂದು ಹೇಳುವ ಎದೆಗಾರಿಕೆಯನ್ನಾದರೂ ಟ್ರೋಲ್ ಪಡೆಗಳು ತೋರಿದ್ದರೆ ಬಿಜೆಪಿ ಇಷ್ಟೊಂದು ಹೀನಾಯ ಸ್ಥಿತಿಗೆ ತಲುಪುತ್ತಿರಲಿಲ್ಲ.
ಹೇಳುವುದು ಬಹಳ ಇದೆ. ಆದರೆ ಸದ್ಯಕ್ಕೆ ಇಷ್ಟು ಸಾಕು!ಗೆದ್ದವರಿಗೆ ಶುಭಾಶಯಗಳು. ಕಳೆದ ಎರಡು ತಿಂಗಳುಗಳಿಂದ ನಿಸ್ವಾರ್ಥವಾಗಿ ದುಡಿದ ಎದ್ದೇಳು ಕರ್ನಾಟಕ ಬಳಗಕ್ಕೆ ನಾಡು ಕೃತಜ್ಞವಾಗಿದೆ. ಬಿಜೆಪಿ ಸೋತದ್ದರಿಂದ ನನಗೆ ನಿಜಕ್ಕೂ ಸಂತೋಷವಾಗಿದೆ. ನಾಡನುಳಿಸುವ ದಿಕ್ಕಿನಲ್ಲಿ ಇದೊಂದು ಮಹತ್ವದ ಹೆಜ್ಜೆ.
-ಪುರುಷೋತ್ತಮ ಬಿಳಿಮಲೆ, ವಿಮರ್ಶಕರು


