ಜನ ಸಾಹಿತ್ಯ ಸಮ್ಮೇಳನ, ಬೆಂಗಳೂರಿನ ಕೆ ಆರ್ ಸರ್ಕಲ್ ಬಳಿಯಲ್ಲಿರುವ ಅಲ್ಯುಮ್ನಿ ಸಭಾಂಗಣ; ಬೆಳಗ್ಗೆ ೧೦ ಗಂಟೆಯಿಂದ, ಜನವರಿ ೮, ೨೦೨೨:
ಒಂದು ಕಾಲಕ್ಕೆ ಕನ್ನಡಿಗರ ಅಗತ್ಯಗಳನ್ನು ಈಡೇರಿಸಲು ಕನ್ನಡ ಸಾಹಿತ್ಯ ಪರಿಷತ್ತು ಕೆಲಸ ಮಾಡಿತ್ತು. ಕನ್ನಡದ ಧೀಮಂತ ಲೇಖಕರು ಅದರ ಅಧ್ಯಕ್ಷರೂ ಆಗಿದ್ದರು. ಆದರೆ ಈಗ ಪರಿಷತ್ತು ತನ್ನ ಸಾಧ್ಯತೆಗಳನ್ನು ತೀರಿಸಿಕೊಂಡು ಜಡವಾಗಿದೆ. ೧೯೯೨ರ ಆನಂತರ ಬೆಳೆದು ಬಂದ ಜಾಗತೀಕರಣ ಮತ್ತು ಕೋಮುವಾದವು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಮೇಲೆ ಬೀರುತ್ತಿರುವ ಪರಿಣಾಮಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕೆಂದು ಅದಕ್ಕೆ ಗೊತ್ತಿಲ್ಲ. ಅದೀಗ ಸರಕಾರದ ಅನುದಾನ ಪಡೆದು ವರ್ಷಕ್ಕೊಂದು ಸಮ್ಮೇಳನ ನಡೆಸುವ ʼಈವೆಂಟ್ ಮೆನೇಜ್ಮೆಂಟ್ ಸಂಸ್ಥೆʼಯಾಗಿಯಷ್ಟೇ ಉಳಿದಿದೆ. ಸಾಂಸ್ಥೀಕರಣಗೊಂಡ ಯಾವುದೇ ಸಂಸ್ಥೆಯ ಗತಿಯಾದರೂ ಇಷ್ಟೇ. ಅದಕ್ಕೆ ಬಸವಣ್ಣ ʼಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲʼ ಎಂಬ ಮಾತನ್ನು ಹೇಳಿದ್ದ.
ಸಾಹಿತ್ಯಿಕ ಸಂಸ್ಥೆಗಳು ಸರಕಾರದ ಅನುದಾನದಿಂದ ನಡೆದಾಗ ಅವು ತಮ್ಮ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತವೆ. ಚಂದ್ರಶೇಖರ ಪಾಟೀಲರಂಥ ಕೆಲವರು ಮಾತ್ರ ಅನುದಾನ ಪಡೆದೂ ಸೆಟೆದು ನಿಲ್ಲುವ ಧೈರ್ಯ ತೋರಿಸುತ್ತಾರೆ. ಅನುಪಯುಕ್ತ ಸಂಸ್ಥೆಗಳ ಮೇಲೆ ಕಣ್ಣಿಟ್ಟ ಲೇಖಕರು ತಮ್ಮ ಅವಕಾಶಕ್ಕಾಗಿ ಕಾಯುತ್ತಾ ಜೀವನವನ್ನೇ ನಿರುಪಯುಕ್ತಗೊಳಿಸಿಕೊಳ್ಳುತ್ತಾರೆ.
ಇವತ್ತಿನ ಲೇಖಕರು ನಿಜಕ್ಕೂ ಗಂಭೀರವಾದ ಸಮಸ್ಯೆಗಳನ್ನು ಇದಿರಿಸುತ್ತಿದ್ದಾರೆ. ಅದರಲ್ಲಿಯೂ ದಲಿತರು, ಅಲ್ಪ ಸಂಖ್ಯಾಕರು ಮತ್ತು ಮಹಿಳೆಯವರು ಅಮಾನುಷ ಕ್ರೌ ರ್ಯಗಳಿಗೆ ಬಲಿಯಾಗುತ್ತಿದ್ದಾರೆ. ಮೀಸಲಾತಿಯನ್ನು ಯಾರ್ಯಾರೋ ಅಪಹರಿಸುತ್ತಿದ್ದಾರೆ. ಕನ್ನಡದ ಮಾಹಿತಿಗಳ ಮೂಲಕವೇ ಕನ್ನಡವನ್ನು ಕಟ್ಟಿದ ಅಪ್ರತಿಮ ಸಂಶೋಧಕ ಡಾ. ಎಂ ಎಂ ಕಲಬುರ್ಗಿ ತಮ್ಮ ಸಂಶೋಧನೆಯ ಸತ್ಯಗಳಿಂದಾಗಿಯೇ ಕೊಲೆಯಾದರು. ಗೌರಿಯ ಹತ್ಯೆಯಾಯಿತು. ಗಂಭೀರ ಲೇಖಕರು ಸಮಕಾಲೀನ ಸಮಾಜ ಏನನ್ನು ನಿರೀಕ್ಷಿಸುತ್ತದೆಯೋ ಅದನ್ನೇ ಹೇಳಬೇಕಾಗಿರುವ ಒತ್ತಡದಲ್ಲಿ ಸಿಲುಕಿಕೊಂಡಿದ್ದಾರೆ.
ನಮ್ಮ ಚರಿತ್ರೆ ನಮಗೆ ಸಹನೆಯನ್ನು ಹೇಳಿಕೊಟ್ಟಿದೆ. ಈ ನೆಲದಲ್ಲಿ ನಡೆದ ಬಹುದೊಡ್ಡ ವಾಗ್ವಾದಗಳು ಇಂದು ನಮ್ಮ ಪ್ರಜಾಪ್ರಭುತ್ವದ ತಳಹದಿಯಾಗಿ ಕೆಲಸ ನಿರ್ವಹಿಸುತ್ತಿವೆ. ಆದರೆ ಈಗ ಏನನ್ನು ಹೇಳಿದರೆ ನಾನು ಅಪಾಯದಿಂದ ಪಾರಾಗಬಹುದು ಎಂದು ಯೋಚಿಸಿ ಬರೆಯಬೇಕಾದ ವಾತಾವರಣ ನಿರ್ಮಾಣವಾಗುತ್ತಿರುವಾಗ ನಮ್ಮ ಬರೆಹಗಳು ಪೇಲವವಾಗುವುದರಲ್ಲಿ ಅನುಮಾನವಿಲ್ಲ. ಬಹುಶ: ಕನ್ನಡ ಎಂದೂ ಇಂಥ ಪರಿಸ್ಥಿತಿಯನ್ನು ಇದಿರಿಸಿಲ್ಲ. ಅರಿಕೇಸರಿಯ ಆಸ್ಥಾನ ಕವಿಯಾಗಿದ್ದ ಪಂಪನಿಗೆ ‘ಓಲಗಿಸಿ ಬಾಳ್ವುದು ಕಷ್ಟಂ ಇಳಾಧಿನಾಥರಾ’ ಎಂದು ಹೇಳುವ ಧೈರ್ಯವಿತ್ತು. ವಿಜಯನಗರದ ಅರಸೊತ್ತಿಗೆಯನ್ನು ಕಣ್ಣಾರೆ ಕಂಡ ಕುಮಾರವ್ಯಾಸನು ‘ಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿ, ಬಡವರ ಬಿನ್ನಪವನಿನ್ನಾರು ಕೇಳುವರು, ಉರಿವುರಿವುತಿದೆ ದೇಶ, ನಾವಿನ್ನಿರಲು ಬಾರದು’ ಎಂದು ಗುಡುಗಿದ್ದ. ಹಂಪಿಯ ಅಪಾರ ಸಂಪತ್ತನ್ನು ತಾತ್ವಿಕವಾಗಿ ನಿರಾಕರಿಸುವ ಪುರಂದರದಾಸ – ʼಲೊಳಲೊಟ್ಟೆ, ಎಲ್ಲಾ ಲೊಳಲೊಟ್ಟೆ, ಆನೆಕುದುರೆ ಎಲ್ಲ ಲೊಳಲೊಟ್ಟೆ, ಸೇನೆ ಭಂಡಾರವು ಲೊಳಲೊಟ್ಟೆ, ಮುತ್ತು ಮಾಣಿಕ್ಯ ಲೊಳಲೊಟ್ಟೆ, ಛತ್ರಚಾಮರ ಧ್ವಜ ಲೊಳಲೊಟ್ಟೆ’ ಎಂದು ಹಾಡಿಕೊಂಡು ಬರಿ ಲಂಗೋಟಿಯಲ್ಲಿಯೇ ಮುತ್ತು ರತ್ನ ಮಾರುವ ವಿಜಯನಗರದ ಬೀದಿಗಳಲ್ಲಿ ಓಡಾಡಿದ. ಸಾಲಗುಂದ ಗುರು ಖಾದರಿ ಪೀರನು ‘ಮಸೀದಿ ಎಂಬುದು ಹಾಳಾದ ಜಾಗ, ಅದರ ಗೊಡವಿ ನಿನಗ್ಯಾಕಂತೆ ? ಎಂದು ಸಡ್ಡು ಹೊಡೆಯುತ್ತಾನೆ. ಆದರೆ ಈಗ ಕನ್ನಡದ ಹಾದಿ ಬದಲಿದಂತಿದೆ. ಈ ಕುರಿತು ನಾವೆಲ್ಲ ಅರೆಕ್ಷಣ ನಿಂತು, ಯೋಚಿಸಿ, ಮುಂದುವರೆಯಬೇಕಾಗಿದೆ.
ಗೆಳೆಯರೆಲ್ಲ ಸೇರಿ ಬೆಂಗಳೂರಲ್ಲಿ ಈ ಬಗ್ಗೆ ಚರ್ಚಿಸಲಿದ್ದಾರೆ. Expiry date ಆದ ನನ್ನಂಥವರು ಹಿಂದೆ ನಿಂತು ಹೊಸ ತಲೆಮಾರಿನ ಜನರು ಹೆಚ್ಚು ಮಾತಾಡಬೇಕು. ಈ ಕ್ರಿಯಾಶೀಲತೆಯನ್ನು ಮತ್ತಷ್ಟು ಹಿಗ್ಗಲಿಸುವ ಬಗ್ಗೆ ಅಲ್ಲಿಯೇ ಮಾತಾಡೋಣ. ಯಾವುದಕ್ಕೂ ಜನವರಿ ೮ಕ್ಕೆ ಬನ್ನಿ.
– ಪ್ರೊ. ಪುರುಷೋತ್ತಮ ಬಿಳಿಮಲೆ, ಹಿರಿಯ ಜಾನಪದ ವಿದ್ವಾಂಸರು
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಕಾವ್ಯ ಅಚ್ಚುತ್: ೯೫೯೧೯೬೭೫೫೭/ ಅಬ್ಬಾಸ್ ಕಿಗ್ಗ: ೯೨೪೨೪೬೧೩೩೨/ ವಿಕಾಸ್ ಪೂಜಾರಿ: ೮೦೮೮೫೨೨೭೪೦




