ಹಿರಿಯ ನಟರೊಂದಿಗೆ ರೊಮ್ಯಾನ್ಸ್ ಮಾಡುವುದು ಅಹಿತಕರ: ಇಷಾ ಕೊಪ್ಪೀಕರ್

2 years ago

ತನಗಿಂತ ಹಿರಿಯ ನಟರೊಂದಿಗೆ ತೆರೆಯ ಮೇಲೆ ರೊಮ್ಯಾನ್ಸ್ ಮಾಡುವುದು ಅಹಿತಕರ ಮತ್ತು ಕ್ರೂರವಾದ ಅನುಭವವಾಗಿತ್ತು ಎಂದು ಬಾಲಿವುಡ್ ನಟಿ ಇಷಾ ಕೊಪ್ಪೀಕರ್ ಹೊಸ ಬಾಂಬ್ ಸಿಡಿಸಿದ್ದಾರೆ.

ಇಷಾ ಕೊಪ್ಪೀಕರ್ ಡರ್ನಾ ಮನ ಹೈ, ಪಿಂಜಾರ್, LOC ಕಾರ್ಗಿಲ್, ಕೃಷ್ಣಾ ಕಾಟೇಜ್ ಮತ್ತು ಡಾನ್ ಮುಂತಾದ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ಯಾರ್ ಇಷ್ಕ್ ಔರ್ ಮೊಹಬ್ಬತ್ ಮತ್ತು ಆಮ್ದಾನಿ ಅತ್ತನ್ನಿ ಖರ್ಚಾ ರುಪೈಯಾ ಮುಂತಾದ ಚಿತ್ರಗಳಲ್ಲಿ ಸುನೀಲ್ ಶೆಟ್ಟಿ ಮತ್ತು ಗೋವಿಂದ ಅವರೊಂದಿಗೆ ನಟಿಸಿದ್ದಾರೆ. ಕನ್ನಡದಲ್ಲಿ ವಿಷ್ಣುವರ್ಧನ್ ಅವರ ಸೂರ್ಯವಂಶ, ರವಿಚಂದ್ರನ್ ಅವರ ಓ ನನ್ನ ನಲ್ಲೆ, ರಮೇಶ್ ಅರವಿಂದ್ ಅವರ ಹೂಂ ಅಂತೀಯಾ ಊಹೂಂ ಅಂತೀಯಾ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ನಟರು ಇಷಾ ಕೊಪ್ಪೀಕರ್ ಅವರಿಗಿಂತ ಹಿರಿಯ ನಟರಾಗಿದ್ದರು. ಈ ನಟರೊಂದಿಗೆ ಬಾಲಿವುಡ್ ಗೆ ಪರಿಚಯವಾದ ಹೊಸದರಲ್ಲಿ ಇಷಾ ನಟಿಸಿದ್ದರು.

ಸಿದ್ಧಾರ್ಥ್ ಕಣ್ಣನ್‌ ಅವರೊಂದಿಗೆ ನಡೆಸಿದ ಮಾತುಕತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಇಷಾ, ನೀವು ನಿಮಗಿಂತ 30 ಅಥವಾ 20 ವರ್ಷ ಹಿರಿಯ ನಾಯಕರೊಂದಿಗೆ ಕೆಲಸ ಮಾಡುವಾಗ ಅನಾನುಕೂಲತೆದ ಪರಿಸ್ಥಿತಿಯನ್ನು ಅನುಭವಿಸುತ್ತೀರಿ. ನಾನು ಹಿರಿಯ ನಾಯಕ ನಟರ ಜೊತೆ ಕೆಲಸ ಮಾಡುವಾಗ ನನಗೆ ಅನಾನುಕೂಲಕರ ಪರಿಸ್ಥಿತಿ ಇತ್ತು. ನೀವು ನಿಮ್ಮ ಸಂಗಾತಿ ಅಥವಾ ಪ್ರೇಮಿಯನ್ನು ತಬ್ಬಿಕೊಳ್ಳುತ್ತಿರುವಂತಹ ಅನುಭವವನ್ನು ನೀವು ಪಡೆಯುವುದಿಲ್ಲ, ನೀವು ನಿಮ್ಮ ತಂದೆಯನ್ನು ತಬ್ಬಿಕೊಳ್ಳುತ್ತಿರುವಂತೆ ನಿಮಗೆ ಅನಿಸುತ್ತದೆ. ನನಗೆ ಹಿರಿಯ ನಟರೊಂದಿಗೆ ನಟಿಸುತ್ತಿರುವಾಗಿ ತಂದೆಯನ್ನ ತಬ್ಬಿಕೊಂಡಂತೆ ಭಾಸವಾಗುತ್ತಿತ್ತು. ನಾನು ಹೊಸಬಳಾಗಿದ್ದೆ, ಇದು ರೂಢಿ ಎಂದು ನಾನು ಭಾವಿಸಿದ್ದೆ ಎಂದು ಅವರು ತಮ್ಮ ಹಳೆಯ ನೆನಪುಗಳನ್ನು ಕೆದಕಿಕೊಂಡಿದ್ದಾರೆ.

ನೀವು ನಟರು, ನೀವು ನಿಮ್ಮ ಕೆಲಸದ ಕಡೆ ಗಮನ ಹರಿಸಿ ಮತ್ತು ಅವರು ವಯಸ್ಸಾದವರು ಎಂಬುದನ್ನು ಮರೆತುಬಿಡಿ. ನೀವು ಎಲ್ಲರೊಂದಿಗೆ ಅನಾನುಕೂಲಕರ ವಾತಾವರಣವನ್ನು ಅನುಭವಿಸುವುದಿಲ್ಲ, ಅವರಲ್ಲಿ ಕೆಲವರು ತಮ್ಮ ಅಂಗಸೌಷ್ಠವವನ್ನು ತಾವು ಚೆನ್ನಾಗಿ ಕಾಯ್ದುಕೊಂಡಿದ್ದಾರೆ ಮತ್ತು ಅವರ ವಯಸ್ಸು ಕಾಣುವುದಿಲ್ಲ. ಆದರೆ ಕೆಲವರು ವಯಸ್ಸು ಮತ್ತು ಉದ್ಯಮದಲ್ಲಿನ ಅನುಭವದ ಕಾರಣದಿಂದಾಗಿ ನಿಸ್ಸಂಶಯವಾಗಿ ಹಿರಿಯರ ಆ ಹವಾ ಮತ್ತು ನಡವಳಿಕೆಯನ್ನು ಹೊಂದಿದ್ದರು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಚಿತ್ರರಂಗದಲ್ಲಿ ನಾಯಕ ನಟರು ಮತ್ತು ನಾಯಕಿಯರ ವಯಸ್ಸಿನ ನಡುವೆ ಅಂತರ ಇನ್ನೂ ಇದೆ. ನಟಿಯೊಬ್ಬರು 35 ವರ್ಷ ದಾಟಿದ ನಂತರ 50 ವರ್ಷದ ನಾಯಕನ ತಾಯಿಯಾಗಿ ನಟಿಸುತ್ತಾರೆ. ಆದರೆ ಅವರು (ನಾಯಕ ನಟರು) ಇನ್ನೂ 25 ವರ್ಷ ರೊಮ್ಯಾನ್ಸ್ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವರು ತೆರೆಯ ಮೇಲೆ ಹೇಗೆ ಕಾಣುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅದಕ್ಕೆ ಅನುಗುಣವಾಗಿ ಪಾತ್ರಗಳನ್ನು ನಿರ್ವಹಿಸಬೇಕು. ಇದು ಬದಲಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಪ್ರೇಕ್ಷಕರು ಮೂರ್ಖರಲ್ಲ ಎಂದಿರುವ ಅವರು, ಚಿತ್ರಮಂದಿರಗಳಲ್ಲಿ, ಇವನಿಗೆ ಇಷ್ಟೊಂದು ವಯಸ್ಸಾಗಿದೆ. ಮನೆಯಲ್ಲಿ ಕುಳಿತುಕೊಳ್ಳುವುದನ್ನು ಬಿಟ್ಟು, ತನ್ನ ಮಗಳ ವಯಸ್ಸಿನ ಹುಡುಗಿಯೊಂದಿಗೆ ರೊಮ್ಯಾನ್ಸ್ ಮಾಡುತ್ತಿದ್ದಾನೆ ಎಂದು ಜನ ಮಾತಾಡುವುದನ್ನು ನಾನು ಕೇಳಿದ್ದೇನೆ. ಇದನ್ನು ಅವರು (ಪ್ರೇಕ್ಷಕರು) ನೇರವಾಗಿ ಹೇಳುತ್ತಾರೆ. ಇದು ಸತ್ಯ. ಸಾಮಾಜಿಕ ಮಾಧ್ಯಮದಿಂದಾಗಿ, ಇದು ಎಲ್ಲರಿಗೂ ತಿಳಿದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಕಾಸ್ಟಿಂಗ್ ಕೌಚ್ ಅನುಭವವನ್ನೂ ಕೂಡ ಮೆಲುಕು ಹಾಕಿರುವ ಇಷಾ ಕೊಪ್ಪೀಕರ್, ನನಗೆ 18 ವರ್ಷ ವಯಸ್ಸಾಗಿದ್ದಾಗ ಒಬ್ಬ ಸೆಕ್ರೆಟರಿ ಮತ್ತು ನಟರೊಬ್ಬರು ಕಾಸ್ಟಿಂಗ್ ಕೌಚ್‌ಗಾಗಿ ನನ್ನನ್ನು ಸಂಪರ್ಕಿಸಿದರು. ಕೆಲಸ ಸಿಗಬೇಕಾದರೆ ನಟರ ಜೊತೆ ‘ಫ್ರೆಂಡ್ಲಿ’ ಆಗಬೇಕು ಅಂತ ಹೇಳಿದರು. ನಾನು ತುಂಬಾ ಸ್ನೇಹಜೀವಿ, ಆದರೆ ‘ಫ್ರೆಂಡ್ಲಿ’ ಎಂದರೆ ಏನು? ನಾನು ತುಂಬಾ ಸ್ನೇಹಜೀವಿಯಾಗಿದ್ದೇನೆ ಎಂದರೆ ಏಕ್ತಾ ಕಪೂರ್ ಒಮ್ಮೆ ನನಗೆ ಕೆಲವು ಆಟಿಟ್ಯೂಡ್ ಬೆಳೆಸಿಕೊಳ್ಳುವಂತೆ ಹೇಳಿದ್ದರು ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಅಶ್ಲೀಲ ಚಿತ್ರಗಳಲ್ಲಿ ನಟಿಸುವ ನಟನೊಬ್ಬ ತನ್ನನ್ನು ಒಬ್ಬಂಟಿಯಾಗಿ ಭೇಟಿಯಾಗುವಂತೆ ಕೇಳಿಕೊಂಡ ಘಟನೆಯನ್ನು ನೆನಪಿಸಿಕೊಂಡ ಇಷಾ ಕೊಪ್ಪೀಕರ್, ನಾನು 23 ವರ್ಷದವಳಿದ್ದಾಗ, ಒಬ್ಬ ನಟ ನನ್ನ ಚಾಲಕ ಅಥವಾ ಬೇರೆ ಯಾರೂ ಇಲ್ಲದೆ ಅವರನ್ನು ಒಬ್ಬಂಟಿಯಾಗಿ ಭೇಟಿಯಾಗಲು ಕೇಳಿದರು. ಏಕೆಂದರೆ ಅವರು ಇತರ ನಟಿಯರೊಂದಿಗೆ ಓಡಾಡಿಕೊಂಡಿದ್ದಾರೆ ಎಂಬ ವದಂತಿಗಳಿದ್ದವು. ‘ನನ್ನ ಬಗ್ಗೆ ಈಗಾಗಲೇ ವಿವಾದಗಳಿವೆ, ಸಿಬ್ಬಂದಿ ವದಂತಿಗಳನ್ನು ಹಬ್ಬಿಸುತ್ತಾರೆ’ ಎಂದು ಅವರು ನನಗೆ ಹೇಳಿದರು. ಆದರೆ ನಾನು ಒಬ್ಬಂಟಿಯಾಗಿ ಬರಲು ಸಾಧ್ಯವಿಲ್ಲ ಎಂದು ಹೇಳಿ ಭೇಟಿಗೆ ನಿರಾಕರಿಸಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದದ್ದಾರೆ.

Leave a Reply