ವಿಷ್ಣುವರ್ಧನ್ ಸ್ಮಾರಕ ಕುರಿತು ನಮ್ಮ ಕುಟುಂಬದಿಂದ ಯಾವುದೇ ಸ್ಪಷ್ಟನೆ ನಿರೀಕ್ಷೆ ಮಾಡಬೇಡಿ: ಅನಿರುದ್ಧ

2 hours ago

ಪುಣ್ಯಭೂಮಿಯ ಬಗ್ಗೆ ನನ್ನ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಕೇಳಿದ್ದಾರೆ. ಹಾಗಾಗಿ…

ಪುಣ್ಯಭೂಮಿಯ ಬಗ್ಗೆ ಈಗಾಗಲೇ ನಾವು ಮಾನ್ಯ ಮಂತ್ರಿರವರನ್ನು ಕೇಳಿದ್ದೇವೆ… ಕೆಲವು ಅಧಿಕಾರಿಗಳನ್ನೂ ಸಂಪರ್ಕಿಸಿ ಕೇಳಿದ್ದೇವೆ. ಆದರೆ ಅದು ಈಗ ಅರಣ್ಯ ಇಲಾಖೆಗೆ ಸೇರಿದೆ ಎಂದು ತಿಳಿಸಿದ್ದಾರೆ. ಅದರಿಂದಾಗಿ ಸಾಕಷ್ಟು ಅಡಚಣೆಗಳಿವೆ.

ಸ್ಮಾರಕ ಅಲ್ಲೇ ಆಗಬೇಕು ಅಂತ ನಾವು 6½ ವರ್ಷಗಳ ಕಾಲ ನಿರಂತರವಾಗಿ ಪ್ರಯತ್ನ ಪಟ್ಟಿದ್ದೇವೆ. “ಅಲ್ಲಿ ಸಾಧ್ಯವಿಲ್ಲ” ಅಂತ ಮಾನ್ಯ ಮುಖ್ಯಮಂತ್ರಿಗಳು ಹಲವಾರು ಬಾರಿ ಸೂಚಿಸಿದ್ದರೂ, ನಾವು ನಮ್ಮ ಪ್ರಯತ್ನವನ್ನು ಬಿಡಲಿಲ್ಲ. ಈಗಲೂ ಅದೇ ಪರಿಸ್ಥಿತಿ… ಆದರೂ ನಾವು ಅವರಿಗೆ ಕೇಳಿದ್ದೇವೆ.

ಹಾಗೆಯೇ ಅಧಿಕಾರಿಗಳು ಹೇಳಿರುವುದೇನೆಂದರೆ — ಸರ್ಕಾರ ಈಗಾಗಲೇ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಿದೆ. ಇನ್ನು ಮುಂದೆ ನಾವು, ಅಂದರೆ ಕುಟುಂಬದವರು, ಅಭಿಮಾನ ಸ್ಟೂಡಿಯೋ ಬಗ್ಗೆ ಮತ್ತೆ ಕೇಳುತ್ತಾ ಹೋದರೆ ಅದು ಒಳ್ಳೆಯದಾಗಿ ಕಾಣುವುದಿಲ್ಲ ಎಂದು.

ಹಾಗಾಗಿ, ಅಭಿಮಾನಿಗಳಾಗಿ ಇದರ ಸಂಪೂರ್ಣ ಜವಾಬ್ದಾರಿ ಈಗ ಕೇವಲ ತಮ್ಮದಾಗಿದೆ. ತಾವೆಲ್ಲರೂ ಕೂಡ ಪ್ರಯತ್ನ ಮಾಡಿ… ಅದು ಆದರೆ ನಾವೂ ಸಂತೋಷಪಡುತ್ತೇವೆ. ಜೊತೆಗೆ ಅಭಿಮಾನಿಗಳಿಂದ ಆಯಿತು ಅನ್ನೋ ಹೆಗ್ಗಳಿಕೆಗೂ ತಾವೆಲ್ಲರೂ ಪಾತ್ರರಾಗುತ್ತೀರಿ, ಮಾದರಿ ಆಗುತ್ತೀರಿ… ಈಗಾಗಲೇ ತಾವು ಅಪ್ಪ ಅವರ ಬಗ್ಗೆ ಇರುವ ತಮ್ಮ ಅಭಿಮಾನವನ್ನು ಬೇರೆ ಬೇರೆ ರೀತಿಯಲ್ಲಿ ತೋರಿಸಿ ಎಲ್ಲರಿಗೂ ಪ್ರೇರಣೆ ಆಗಿದ್ದೀರಿ, ದಾಖಲೆಗಳನ್ನೂ ಸೃಷ್ಟಿ ಮಾಡಿದ್ದೀರಿ… ಈ ಕೆಲಸವೂ ತಮ್ಮಿಂದ ಆಗಲಿ ಎಂದು ಆಶಿಸುತ್ತೇನೆ.

ತಮಗೆ ಗೊತ್ತಿರಲಿ, ಅಭಿಮಾನ ಸ್ಟೂಡಿಯೋದಲ್ಲಿ ಇದ್ದ ಮಂಟಪವನ್ನು ಭಾರತಿ ಅಮ್ಮ ಸ್ವಂತ ಖರ್ಚಿನಲ್ಲೇ ಕಟ್ಟಿಸಿದ್ದರು. ನಾವು ಕೆಲ ಕಾರಣಗಳಿಂದ ಅಲ್ಲಿ ಹೋಗದೇ ಇದ್ದರೂ, ಅಭಿಮಾನಿಗಳಿಗೋಸ್ಕರ ಅದು ಹಾಗೆಯೇ ಇರಲಿ ಅಂದುಕೊಂಡಿದ್ವಿ. ಆದರೆ ಅದು ತೆರವುಗೊಂಡಿದ್ದು ಖಂಡನೀಯ.

ಇನ್ನೂ ಮೈಸೂರಿನ ಸ್ಮಾರಕದ ವಿಷಯಕ್ಕೆ ಬಂದರೆ, ಅಲ್ಲೂ ನಮಗೆ ಸುಲಭವಾಗಿರಲಿಲ್ಲ. ತುಂಬಾ ಪರಿಶ್ರಮ ಪಟ್ಟಿದ್ದೇವೆ. “ಅಭಿಮಾನ ಸ್ಟೂಡಿಯೋದಲ್ಲೇ ಆಗಬೇಕು” ಅಂತ ಹಠ ಹಿಡಿದಿದ್ದರೆ ಅಥವಾ ನಾವು ಪ್ರಯತ್ನಿಸದೇ ಇದ್ದಿದ್ದರೆ, ಇವತ್ತಿಗೂ ಸ್ಮಾರಕವೇ ನಿರ್ಮಾಣವಾಗುತ್ತಿರಲಿಲ್ಲ. ಅಷ್ಟೇ ಯಾಕೆ, ಬನಶಂಕರಿಯಿಂದ ಕೆಂಗೇರಿವರೆಗೆ 14.3 ಕಿ.ಮೀ. ರಸ್ತೆಗೆ ನಾಮಕರಣ ಕೂಡ ಆಗುತ್ತಿರಲಿಲ್ಲ.

ದಯವಿಟ್ಟು ಇದನ್ನು ಅರ್ಥಮಾಡಿಕೊಳ್ಳಿ. ನಮ್ಮ ಪ್ರಾಮಾಣಿಕತೆ, ಪರಿಶ್ರಮದ ಬಗ್ಗೆ ಏನೂ ಗೊತ್ತಿಲ್ಲದೇ, ಕೆಲವರು ಮಾತಾಡುವುದು, ಆರೋಪಗಳನ್ನು ಮಾಡುವುದು, ಏನೂ ಮಾಡದೇ ಹೇಳಿಕೆಗಳನ್ನು ಕೊಟ್ಟು ಚಪ್ಪಾಳೆ ಗಿಟ್ಟಿಸಿಕೊಂಡು ಪ್ರಚಾರ ಪಡೆಯುವ ವ್ಯಕ್ತಿಗಳ ಬಗ್ಗೆ ತಮಲ್ಲಿ ಕೆಲವರಿಗೆ ವಿಶ್ವಾಸವಿರುವುದು ನಮಗೆ ನಿಜಕ್ಕೂ ತುಂಬಾ ಬೇಸರ ತಂದಿದೆ, ಸಾಕಾಗಿದೆ.

ಕೆಲವರು ಅಭಿಮಾನಿಗಳ ವೇಷ ತೊಟ್ಟು ತಮ್ಮ ತಮ್ಮ ಸ್ವಾರ್ಥಕ್ಕಾಗಿ ನಮ್ಮ ಮಧ್ಯೆ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ದಯವಿಟ್ಟು ಎಚ್ಚರಿಕೆಯಿಂದಿರಿ.

ಹಾಗೆಯೇ ಮೈಸೂರಲ್ಲೇ ಆಗಬೇಕು ಅನ್ನೋದು ಅಪ್ಪ ಅವರ ಆಸೆಯಾಗಿರಬಹುದು. ಅದಕ್ಕಾಗಿಯೇ ಅವರು ತಮ್ಮ ಕೊನೆಯ ಉಸಿರನ್ನು ಅಲ್ಲೇ ತೆಗೆದುಕೊಂಡರು. ಅಲ್ಲಿ ಅವರ ಅಸ್ತಿ ಇರಿಸಲಾಗಿದೆ; ಅದರ ಮೇಲೆಯೇ ಅವರ ಪ್ರತಿಮೆ ನಿಂತಿದೆ. ಅತ್ಯಂತ ಸೂಕ್ತವಾದ, ಬೃಹತ್ ಸ್ಮಾರಕ ಅದಾಗಿದೆ. ಅಪಾರ ಶ್ರದ್ಧೆಯಿಂದ ಮಾಡಿದ್ದೇವೆ… ಕ್ಷಮಿಸಿ, ಅಪ್ಪ ಅವರೇ ನಮ್ಮಿಂದ ಮಾಡಿಸಿದ್ದಾರೆ. ಅವರಿಗೆ ಗೌರವ ಕೊಡಿ. ದಯವಿಟ್ಟು ಅಲ್ಲಿ ಭೇಟಿ ನೀಡಿ… ಅಪ್ಪ ಅವರ ಆಶೀರ್ವಾದ ಪಡೆಯಿರಿ.

ಇಷ್ಟಕ್ಕೂ ಕೆಲವರು ಇನ್ನೂ ಕೂಡ ಏನೂ ಮಾಡದೇ, ಅಥವಾ ಮಾಡುತ್ತಿದ್ದೇವೆ, ಮಾಡ್ತೀವಿ ಎಂದು ಹೇಳಿ, ಕುತಂತ್ರ ಮಾಡೋ ಅಥವಾ ಮಾಡಿದ ವ್ಯಕ್ತಿಗಳು ಮತ್ತೆ ನಮ್ಮ ಮೇಲೆ ಆರೋಪ ಮಾಡಿದರೆ, ಅವರ ಮೇಲೆ ನಂಬಿಕೆ ಇಡಬೇಕೋ, ಬಿಡಬೇಕೋ ತಮಗೇ ಬಿಟ್ಟದ್ದು.

ಆದರೆ ಇನ್ನೂ ಮುಂದೆ ನಮ್ಮ ಕುಟುಂಬದಿಂದ ಇದರ ಬಗ್ಗೆ ಯಾವುದೇ ಸ್ಪಷ್ಟನೆ ನಿರೀಕ್ಷೆ ಮಾಡಬೇಡಿ. ಅಪ್ಪ ಅವರ ಮೇಲೆ ನಮಗಿರುವ ಪ್ರೀತಿ, ಅಭಿಮಾನ ಯಾರಿಗೂ ಸಾಬೀತುಪಡಿಸೋ ಅವಶ್ಯಕತೆ ನಮಗಿಲ್ಲ…

ಅಪ್ಪ ಅವರ ಆಶೀರ್ವಾದ ಅವರ ನಿಜವಾದ ಅಭಿಮಾನಿಗಳ ಮೇಲೆ ಸದಾ ಇರಲಿ.

– ಅನಿರುದ್ಧ, ನಟ

Leave a Reply