ಬೆಂಗಳೂರು: ಬೆಂಗಳೂರಿನಲ್ಲಿ ನಿನ್ನೆ ನಿಧನರಾದ ಬಹುಭಾಷಾ ತಾರೆ, ಹಿರಿಯ ನಟಿ ಬಿ.ಸರೋಜಾದೇವಿ ಅವರ ಪಾರ್ಥಿವ ಶರೀರದ ದರ್ಶನ ಪಡೆದು, ಅಂತಿಮ ನಮನವನ್ನು ಸಿಎಂ ಸಿದ್ದರಾಮಯ್ಯ ಸಲ್ಲಿಸಿದರು.
- ಚಿತ್ರದುರ್ಗ ಜಿಲ್ಲೆಯ ವಸತಿ ರಹಿತರಿಗೆ ಸುವರ್ಣಾವಕಾಶ
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
ಬಿ.ಸರೋಜಾದೇವಿ ಒಬ್ಬ ಮೇರು ನಟಿ. ಪಂಚಭಾಷೆ ತಾರೆಯಾಗಿ ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದ ಅದ್ಭುತ ನಟಿ ಎಂದರು.
ಅನೇಕ ಬಾರಿ ಸರೋಜಾದೇವಿಯವರನ್ನು ಭೇಟಿ ಮಾಡಿದ್ದೇನೆ. ಎಲ್ಲರೊಂದಿಗೆ ಆತ್ಮೀಯವಾಗಿ, ಪ್ರೀತಿಯಿಂದ ಮಾತನಾಡುತ್ತಿದ್ದರು. ದೊಡ್ಡ ವ್ಯಕ್ತಿತ್ವವಿದ್ದ ನಟಿ ಅವರು. ಅವರ ಸಿನಿಮಾಗಳಲ್ಲಿ ಮಲ್ಲಮ್ಮನ ಪವಾಡ, ಕಿತ್ತೂರು ಚೆನ್ನಮ್ಮ, ಭಾಗ್ಯವಂತರು, ಬಬ್ರುವಾಹನ, ನ್ಯಾಯವೇ ದೇವರು ಸೇರಿದಂತೆ ಅನೇಕ ಚಿತ್ರಗಳನ್ನು ನಾನು ನೋಡಿದ್ದೇನೆ ಎಂದರು.
ಬಹುಭಾಷಾ ನಟಿ ಬಿ.ಸರೋಜಾದೇವಿ ಅವರ ನಿಧನ ಇಡೀ ಚಿತ್ರರಂಗಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಚಿಕ್ಕವಯಸ್ಸಿನಲ್ಲಿಯೇ ಸಿನಿಮಾರಂಗವನ್ನು ಪ್ರವೇಶಿಸಿ ಏಳು ದಶಕಗಳ ಕಾಲ ಕಲಾವಿದೆಯಾಗಿದ್ದವರು. ಅಭಿನವ ಸರಸ್ವತಿ ಎಂಬ ಬಿರುದು ಚಿಕ್ಕವಯಸ್ಸಿಗೆ ದೊರೆತಿತ್ತು ಎಂದರು.
ಎಲ್ಲಾ ಭಾಷೆಯ ಹೆಸರಾಂತ ನಟರೊಂದಿಗೆ ನಟಿಸಿದ್ದರು. ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್, ದೇವ್ ಆನಂದ್, ಎಂ.ಜಿ.ಆರ್, ಎನ್.ಟಿ.ಆರ್, ಶಿವಾಜಿ ಗಣೇಶನ್, ರಾಜ್ ಕುಮಾರ್ ಅವರೊಂದಿಗೂ ಅನೇಕ ಚಿತ್ರಗಳಲ್ಲಿ ನಟಿಸಿದ್ದರು ಎಂದರು.
ಸರೋಜಾದೇವಿಯವರು ಯಾವುದೇ ಪಾತ್ರಕ್ಕೂ ಜೀವ ತುಂಬುತ್ತಿದ್ದರು. ಖಾಸಗಿ ಜೀವನದಲ್ಲಿಯೂ ಶಿಸ್ತುಬದ್ಧ ಜೀವನವನ್ನು ನಡೆಸಿದವರು. ಕನ್ನಡ ಚಿತ್ರರಂಗ ಬೆಳೆಯಲು ಅಪಾರ ಕೊಡುಗೆಯನ್ನು ಕೊಟ್ಟಿದ್ದಾರೆ. ಅವರ ಸಾವಿನಿಂದ ಚಿತ್ರರಂಗಕ್ಕೆ ಅಪಾರವಾದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಅವರ ಕುಟುಂಬ ವರ್ಗದವರಿಗೆ ಅವರ ಸಾವಿನಿಂದಾದ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಸರೋಜಾದೇವಿಯವರ ಹೆಸರನ್ನು ಅವರು ವಾಸಿಸುತ್ತಿದ್ದ ರಸ್ತೆಗೆ ಇಡುವ ಬಗ್ಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಜೊತೆ ಚರ್ಚಿಸುತ್ತೇನೆ ಎಂದರು.




