ಬೆಂಗಳೂರು: ರಾಜ್ಯದ ರೈತರು ಭೀಕರ ಬರದಿಂದ ಕಂಗೆಟ್ಟು, ಬೆಳೆ ಕಳೆದುಕೊಂಡು, ಸಾಲದ ಸುಳಿಯಲ್ಲಿ ಸಿಲುಕಿ ಸಂಕಷ್ಟ ಪಡುತ್ತಿರುವ ಸಮಯದಲ್ಲಿ ಮೂರು ದಿನಗಳ ವಿಶೇಷ ಅಧಿವೇಶನ ಕರೆದ ಕಾಂಗ್ರೆಸ್ ಸರ್ಕಾರ ಕೊನೆಗೆ ರೈತರ ಕೈಗೆ ಕೇವಲ ₹2,500 ನೀಡಿದೆ. ಈ ಮೂಲಕ ರೈತರ ಕೈಗೆ ಸರ್ಕಾರ ಚೊಂಬು ನೀಡಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
- ಹೈಕಮಾಂಡ್‌ಗೆ ಕೊಡಲು ಹಣವಿದೆ, ರೈತರಿಗೆ ಕೊಡಲು ಹಣವಿಲ್ಲ: ಆರ್.ಅಶೋಕ
- ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಕುರಿತು ಡಿ ಕೆ ಶಿವಕುಮಾರ್ ಹೇಳಿದ್ದೇನು?
- ಬರ ಘೋಷಣೆಗಿರುವ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಲಿ: ಡಾ. ಜಿ. ಪರಮೇಶ್ವರ್
- ಧನುಷ್ ನಟನೆಯ ‘OM’ ಬಿಡುಗಡೆ ದಿನಾಂಕ ಮುಂದೂಡಿಕೆ!
- ಈ ದೇಶ ಕಟ್ಟಿದ್ದೇ ದಲಿತರು, ನೀಲಿ ಶಾಲು ಬಗ್ಗೆ ಮಾತಾಡೋಕೆ ನೀನ್ಯಾವನೋ?
ವಿಧಾನಸಭಾ ಅಧಿವೇಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬೇಡಿಕೆ ಇಟ್ಟಂತೆ ಪ್ರತಿ ಎಕರೆಗೆ ಪರಿಹಾರ ನೀಡಿಲ್ಲ. ಒಂದು ಕುಟುಂಬಕ್ಕೆ ಪರಿಹಾರ ನೀಡಲಾಗಿದೆ. ರೈತರ ಕಣ್ಣೀರನ್ನು ಒರೆಸಲು ವಿಶೇಷ ಅಧಿವೇಶನ ಕರೆದ ಸರ್ಕಾರ, ಕೊನೆಗೆ ರೈತರ ಕೈಗೆ ಚೊಂಬು ಕೊಟ್ಟು ಕಳುಹಿಸಿದೆ. ವಿಶೇಷ ಅಧಿವೇಶನ ಎಂದಾಗ ರೈತರಿಗೆ ಈ ಸರ್ಕಾರ ಇತಿಹಾಸದಲ್ಲಿ ದಾಖಲಾಗುವಂತಹ ವಿಶೇಷ ಪರಿಹಾರ ನೀಡಲಿದೆ ಎಂದು ನಿರೀಕ್ಷಿಸಿದ್ದೆವು. ಆದರೆ ಮೂರು ದಿನಗಳ ಚರ್ಚೆಯ ನಂತರ ಸಿಕ್ಕಿದ್ದು ₹2,500 ಮಾತ್ರ, ಇದು ರೈತರನ್ನು ಅಣಕಿಸುವ ಕೆಲಸ. ರೈತರ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ಕಣ್ಣು ಕಿವಿ ಇಲ್ಲದ ಈ ಸರ್ಕಾರಕ್ಕೆ ರಿಯಲ್ ಎಸ್ಟೇಟ್ ಮಾತ್ರ ಕಾಣುತ್ತದೆ. ರಾಹುಲ್ ಗಾಂಧಿಗೆ ಕಳುಹಿಸಲು ಇವರ ಬಳಿ ಹಣವಿದೆ. ಸಚಿವ ಸ್ಥಾನ ನೀಡಲು ಕೋಟಿಗಟ್ಟಲೆ ಲಂಚ ಪಡೆಯಲಾಗಿದೆ. ಆದರೆ ರೈತರ ವಿಚಾರ ಬಂದ ಹಣ ಕೊರತೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ಎಕರೆ ಜಮೀನಿನಲ್ಲಿ ಬೆಳೆ ಬೆಳೆಯಲು ಬೀಜ, ಉಳುಮೆ, ಕೂಲಿ, ಕಳೆ ತೆಗೆಯುವುದು, ನೀರಾವರಿ ಸೇರಿದಂತೆ ಕನಿಷ್ಠ ₹20,000 ರಿಂದ ₹30,000ವರೆಗೆ ಖರ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ₹2,500 ನೀಡಿ ರೈತರ ಸಂಕಷ್ಟ ಪರಿಹರಿಸಿದ್ದೇವೆ ಎಂದು ಹೇಳುವುದು ಯಾವ ನ್ಯಾಯ? ಬಿತ್ತನೆ ಬೀಜಕ್ಕೆ ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಉಳುಮೆ, ಕೂಲಿ, ನೀರು ಎಲ್ಲ ಸೇರಿಸಿದರೆ ಹತ್ತಾರು ಸಾವಿರ ರೂಪಾಯಿ ಖರ್ಚಾಗುತ್ತದೆ. ಗೃಹಲಕ್ಷ್ಮಿಗೆ 2,000 ರೂ. ಕೊಡುವಾಗ ರೈತರಿಗೆ ₹2,500 ನೀಡಲಾಗುತ್ತಿದೆ. ಕೂಲಿ ಕೆಲಸಕ್ಕೆ ಹೋದರೆ ಇದಕ್ಕಿಂತ ಹೆಚ್ಚು ದೊರೆಯುತ್ತದೆ. ಇದು ರೈತರಿಗೆ ಪರಿಹಾರವೇ? ರೈತರನ್ನು ಅವಮಾನಿಸುವುದೇ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ 177ಕ್ಕೆ ಏರಿದ್ದು, ಇನ್ನಷ್ಟು ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರುವ ಸಾಧ್ಯತೆಯಿದೆ ಎಂದು ಸರ್ಕಾರವೇ ಹೇಳಿರುವ ಸಂದರ್ಭದಲ್ಲಿ ರೈತರಿಗೆ ಸಮರ್ಪಕ ಪರಿಹಾರ ನೀಡಬೇಕಿತ್ತು. ನಾವು ಎಕರೆಗೆ 50,000 ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದೆವು. ಅದಾಗದಿದ್ದರೂ ಕನಿಷ್ಠ 25,000 ರೂ. ನೀಡಬೇಕಿತ್ತು. ರೈತರು ಹೊಲದ ಕಡೆ ಹೋಗಲಾಗದ ಸ್ಥಿತಿ ಬಂದಿದೆ. ಜಾನುವಾರುಗಳಿಗೆ ಮೇವು ಸಿಗದೆ ಕಾಡಿನತ್ತ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಮಕ್ಕಳು ಉದ್ಯೋಗಕ್ಕಾಗಿ ಊರು ಬಿಟ್ಟು ಹೋಗುತ್ತಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸರ್ಕಾರಕ್ಕೆ ರೈತರ ನೋವು ಕಾಣುತ್ತಿಲ್ಲ. ಕಣ್ಣಿದ್ದರೂ ರೈತರ ಸಂಕಷ್ಟ ಕಾಣದ, ಕಿವಿಯಿದ್ದರೂ ರೈತರ ಕೂಗು ಕೇಳದ ಸರ್ಕಾರ ಇದು ಎಂದು ವಾಗ್ದಾಳಿ ನಡೆಸಿದರು.
ರೈತರಿಗಾಗಿ ಸರ್ಕಾರದ ಮುಂದೆ ₹50,000 ಪ್ರತಿ ಎಕರೆಗೆ ಪರಿಹಾರ ನೀಡುವ ಬೇಡಿಕೆಯನ್ನು ಈಗಾಗಲೇ ಇಡಲಾಗಿದೆ. ರೈತರು ಭಿಕ್ಷೆ ಬೇಡುವವರಲ್ಲ. ಅವರು ಈ ದೇಶದ ಅನ್ನದಾತರು ಹಾಗೂ ದುಡಿದು ತಿನ್ನುವವರು. ಅಂತಹ ರೈತರ ಕೈಗೆ ₹2,500 ಇಟ್ಟು ದೊಡ್ಡ ಸಾಧನೆ ಮಾಡಿದಂತೆ ಬೀಗುವುದು ರೈತರ ಆತ್ಮಗೌರವಕ್ಕೆ ಮಾಡಿದ ಅವಮಾನ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರೈತರ ಪರವಾಗಿ ಕೈಮುಗಿದು ಮನವಿ ಮಾಡಿದ್ದೇನೆ. ನಿಮಗೆ ರೈತನ ಮಗ ಎಂದು ಹೇಳಿಕೊಳ್ಳುವ ಅವಕಾಶ ಬೇಕಿಲ್ಲ. ರೈತನ ಸಂಕಷ್ಟದಲ್ಲಿ ನಿಂತು ತೋರಿಸುವ ಅವಕಾಶ ಬಂದಿದೆ. ರೈತರಿಗಾಗಿ ಹಣ ಕೊಡಿ. ರೈತರಿಗೆ ಮೋಸ ಮಾಡಬೇಡಿ. ಈ ರೀತಿ ಮಾಡಿದರೆ ಮುಂದೆ ಸರ್ಕಾರ ಉಳಿಯುವುದಿಲ್ಲ. ವಿಶೇಷ ಅಧಿವೇಶನದಲ್ಲಿ ಬಿಜೆಪಿ ಶಾಸಕರು ರೈತರ ಸಮಸ್ಯೆಗಳನ್ನು ಸಮರ್ಥವಾಗಿ ಪ್ರಸ್ತಾಪಿಸಿದ್ದಾರೆ. ಫಸ್ಟ್ ಪ್ರೈಸ್ ಇಲ್ಲ, ಸೆಕೆಂಡ್ ಪ್ರೈಸ್ ಇಲ್ಲ, ಥರ್ಡ್ ಪ್ರೈಸ್ ಇಲ್ಲ, ಕನ್ಸೊಲೇಶನ್ ಪ್ರೈಸ್ ಕೂಡ ಇಲ್ಲ. ಮೂರು ದಿನ ಅಧಿವೇಶನ ನಡೆಸಿ ರೈತರಿಗೆ ಕೊಟ್ಟಿದ್ದು ₹2,500. ಇದು ವಿಶೇಷ ಅಧಿವೇಶನವಲ್ಲ; ರೈತರ ನಿರೀಕ್ಷೆಗೆ ಮಾಡಿದ ವಿಶೇಷ ಅವಮಾನ ಎಂದರು.
ಕಸ್ತೂರಿ ರಂಗನ್ ವರದಿ ಜಾರಿ ವಿಚಾರದಲ್ಲಿ ರಾಜ್ಯದ ಪರವಾಗಿ ನಾವು ಸರ್ಕಾರದ ಜೊತೆ ನಿಲ್ಲುತ್ತೇವೆ. ಆದರೆ ಬರ ಪರಿಹಾರದ ವಿಚಾರದಲ್ಲಿ ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಾರದು. ಹಿಂದೆ ಬಿಜೆಪಿ ಸರ್ಕಾರ ನೀಡಿದಷ್ಟು ಪರಿಹಾರವನ್ನಾದರೂ ನೀಡಬೇಕು. ರೈತರ ಕಣ್ಣೀರು ಒರೆಸಲು ಹಣವಿಲ್ಲ ಎನ್ನುವ ಸರ್ಕಾರಕ್ಕೆ ಬೇರೆ ವಿಚಾರಗಳಿಗೆ ಹಣ ಎಲ್ಲಿಂದ ಬರುತ್ತದೆ? ರೈತನಿಗೆ ಕೊಡಲು ಹಣವಿಲ್ಲ, ಆದರೆ ರಾಜಕೀಯಕ್ಕೆ ಹಣದ ಕೊರತೆಯಿಲ್ಲ. ರೈತರ ಸಮಸ್ಯೆಯನ್ನು ಜನತಾ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಿ ನ್ಯಾಯ ಪಡೆಯುತ್ತೇವೆ. ರೈತರಿಗೆ ನ್ಯಾಯ ಸಿಗುವವರೆಗೂ ಬಿಜೆಪಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಈ ಸರ್ಕಾರ ರೈತರ ಪರವೇ, ರೈತ ವಿರೋಧಿಯೇ ಎಂಬುದನ್ನು ಜನರ ಮುಂದೆ ಇಡುತ್ತೇವೆ. ರೈತರು ಎಲ್ಲವನ್ನೂ ನೋಡುತ್ತಿದ್ದಾರೆ, ಎಲ್ಲವನ್ನೂ ನೆನಪಿಟ್ಟುಕೊಳ್ಳುತ್ತಿದ್ದಾರೆ. ಇಂದು ರೈತರ ಮುಂದೆ ನಿಂತು ಸರ್ಕಾರ ಏನು ಹೇಳುತ್ತದೆ? ಮೂರು ದಿನ ಅಧಿವೇಶನ ನಡೆಸಿದೆವು, ₹2,500 ಕೊಟ್ಟಿದ್ದೇವೆ ಎಂದು ಹೇಳುತ್ತದೆಯೇ? ರೈತರ ಕಣ್ಣೀರಿನ ಬೆಲೆ ₹2,500 ಅಲ್ಲ. ರೈತರ ಬದುಕಿಗೆ ನ್ಯಾಯ ಸಿಗಬೇಕು. ಈ ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ ಎಂದರು.




