ಅಂಬೇಡ್ಕರ್ ಅವರನ್ನು ಜಾತಿ ಸಂಕೋಲೆಗಳಿಂದ ಬಂಧಿಸಿರುವುದು ವಿಷಾದದ ಸಂಗತಿ: ಸಿ.ಎಂ.ನರಸಿಂಹಮೂರ್ತಿ

1 year ago

ಚಾಮರಾಜನಗರ: ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರು ಕೇವಲ ದೀನ ದಲಿತರ ಸ್ವತ್ತಲ್ಲ. ವಿಶ್ವದ ಮಹಾನ್ ಜ್ಞಾನದ ಶಿಖರ ಭಾರತ ಭಾಗ್ಯವಿಧಾತ ಎಂದು ಒಪ್ಪಿಕೊಂಡರು ಜಾತಿ ಮನಸ್ಸಿನ ಜನರು ಮಾತ್ರ ಅಂಬೇಡ್ಕರ್ ಅವರನ್ನು ಜಾತಿ ಸಂಕೋಲೆಗಳಿಂದ ಬಂಧಿಸಿ ನೋಡುತ್ತಿರುವುದು ವಿಷಾದದ ಸಂಗತಿ ಎಂದು ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಹೇಳಿದರು.

ಇಲ್ಲಿನ ಕರಿನಂಜನಪುರದ ರಸ್ತೆಯಲ್ಲಿರುವ  ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ 68ನೇ ಪರಿನಿಬ್ಬಾ ಣ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಅಂಬೇಡ್ಕರ್ ತಳ ಸಮುದಾಯದ ಒಳಿತಿಗಾಗಿ ದುಡಿದ ಮಹಾನ್ ನಾಯಕರು. ಸಮ ಸಮಾಜದ ಕನಸುಗಾರ  ಅಂಬೇಡ್ಕರ್ ಅವರು ಭಾರತಕ್ಕೆ ಶ್ರೇಷ್ಠ ಸಂವಿಧಾನವನ್ನು ಬರೆದುಕೊಟ್ಟು ಭಾರತದ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಎಂದರು.

ಚಾಮರಾಜನಗರ ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕ ಬಸವಣ್ಣ ಮೂಕಹಳ್ಳಿ ಮಾತನಾಡಿ, ಅಂಬೇಡ್ಕರ್ ಅವರ ಕೊನೆ ದಿನಗಳಲ್ಲಿ ಅನುಭವಿಸಿದ ಯಾತನೆ, ಖಿನ್ನತೆ, ಆತಂಕ ಎಲ್ಲವೂ ನಮ್ಮ ಕಣ್ಣೆದುರಿಗೆ ಬಂದಾಗ, ಅಂಬೇಡ್ಕರ್ ಅವರ ನೈಜ ಹೋರಾಟವನ್ನು ನಾವು ಅರ್ಥಮಾಡಿಕೊಳ್ಳಲು ವಿಫಲರಾಗಿದ್ದೇವೆ. ಅಂಬೇಡ್ಕರ್ ಎಳೆದು ತಂದಿರುವ ವಿಮೋಚನಾ ರಥವನ್ನು ಮುಂದೆ ಎಳೆದು ಹೋದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ, ಇಲ್ಲದೆ ಹೋದಲ್ಲಿ ಕೇವಲ ನಾವು ಹೆಸರಿಗೆ ಮಾತ್ರ ಅಂಬೇಡ್ಕರ್ ಅನುಯಾಯಿಗಳಾಗಿ ಡೋಂಗಿತನ ಪ್ರದರ್ಶನ ಮಾಡಿದಂತಾಗುತ್ತದೆ ಎಂದರು.

ಮಹಿಳಾ ಚಿಂತಕಿ ಡಾ. ಪ್ರೇಮ ಮಾತನಾಡಿ, ಮಹಿಳೆಯರು ಇಂದು ಸಾಧನೆಯನ್ನು ಮಾಡಿ ಸಮಾಜದಲ್ಲಿ ಮುಖ್ಯ ವಾಹಿನಿಯಲ್ಲಿದ್ದಾರೆ ಎಂದರೆ ಅದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ. ಅವರ ಋಣ ನಮ್ಮೆಲ್ಲರ ಮೇಲಿದೆ. ಅವರ ಆದರ್ಶ ತತ್ವಗಳನ್ನು ಪಾಲಿಸೋಣ ಎಂದರು.

ಅಂಬೇಡ್ಕರ್ ಅವರ ಸ್ಮರಣಾರ್ಥ ಮೌನಾಚರಣೆ ಮಾಡಲಾಯಿತು. ನಂತರ ನಡೆದ ದಲಿತ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಗೆ 50 ವರ್ಷ ತುಂಬಿದ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ದಸಂಸ-50 ಸುವರ್ಣ ಸಂಭ್ರಮ ಹಾಗೂ ದಲಿತ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು  ಅರ್ಥಪೂರ್ಣವಾಗಿ ನಡೆಸಲು ಸಭೆ ತೀರ್ಮಾನಿಸಿತು. 

ಮುಂದಿನ ದಿನಗಳಲ್ಲಿ ತಾಲೂಕು ಸಮ್ಮೇಳನಗಳು, ಜಿಲ್ಲಾ ಸಮ್ಮೇಳನ ಹಾಗೂ ಬೌದ್ಧ ಸಾಹಿತ್ಯ ಸಮ್ಮೇಳನ ನಡೆಸಲು ಕಾರ್ಯಕ್ರಮವನ್ನು ರೂಪಿಸಲಾಗುವುದು ಎಂದು ಸಿ.ಎಂ. ನರಸಿಂಹಮೂರ್ತಿ ಸಭೆಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಕೇಂದ್ರ ಸಮಿತಿಗೆ ಶಿಫಾರಸು ಮಾಡಲಾಯಿತು.

Leave a Reply