ಬೇಳೂರು ಮತ್ತು ಬೆಳಸೆ ಗ್ರಾಮಗಳು ಸ್ಮಾರ್ಟ್ ವಿಲೇಜ್ ಗಳಾಗಿ ಅಭಿವೃದ್ಧಿ:  ಸತೀಶ್ ಸೈಲ್

2 months ago

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬೇಳೂರು ಹಾಗೂ ಅಂಕೋಲಾ ತಾಲೂಕಿನ ಬೆಳಸೆ ಗ್ರಾಮಗಳನ್ನು ಕರ್ನಾಟಕ ರಾಜ್ಯ ಮಾರುಕಟ್ಟೆ ಸಂವಹನ ಮತ್ತು ಜಾಹೀರಾತು ಲಿಮಿಟೆಡ್ (KSMCA) ವತಿಯಿಂದ ಸ್ಮಾರ್ಟ್ ವಿಲೇಜ್ಗಳನ್ನಾಗಿ ಅಭಿವೃದ್ಧಿಪಡಿಸುವ ಪೈಲಟ್ ಕಾರ್ಯಕ್ರಮವನ್ನು ಆರಂಭಿಸಲಾಗುವುದು ಎಂದು ಕೆ.ಎಸ್.ಎಂ.ಸಿ.ಎ ಅಧ್ಯಕ್ಷ ಮತ್ತು ಶಾಸಕ ಸತೀಶ ಸೈಲ್ ತಿಳಿಸಿದ್ದಾರೆ.

ಈ ಯೋಜನೆ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಉದ್ಯಮಶೀಲತೆಯನ್ನು ಉತ್ತೇಜಿಸುವುದು, ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಹಾಗೂ ಗ್ರಾಮೀಣ ಉತ್ಪನ್ನಗಳಿಗೆ ಸಂಘಟಿತ ಮಾರುಕಟ್ಟೆ ಪ್ರವೇಶವನ್ನು ಒದಗಿಸುವುದರ ಮೂಲಕ ಗ್ರಾಮಗಳನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿಸುವ ಉದ್ದೇಶ ಹೊಂದಿದೆ.

ಪೈಲಟ್ ಕಾರ್ಯಕ್ರಮದ ಅಡಿಯಲ್ಲಿ ಕೃಷಿ ಮತ್ತು ಸಹಾಯಕ ಚಟುವಟಿಕೆಗಳು, ಮೀನುಗಾರಿಕೆ, ಪಾರಂಪರಿಕ ಉತ್ಪನ್ನಗಳು, ಕರಕುಶಲ ವಸ್ತುಗಳು ಹಾಗೂ ಮಹಿಳಾ ಸ್ವಸಹಾಯ ಸಂಘಗಳ (SHG) ಆಧಾರಿತ ಉದ್ಯಮಗಳನ್ನು ಗುರುತಿಸಿ ಬೆಂಬಲ ನೀಡಲಾಗುವುದು. ಮಹಿಳೆಯರು ಮತ್ತು ಯುವಕರ ಸಬಲೀಕರಣ ಹಾಗೂ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿವುದು ಈ ಕಾರ್ಯಕ್ರಮದ ಪ್ರಮುಖ ಗುರಿಗಳಾಗಿವೆ.

ಈ ಯೋಜನೆಗೆ, SAMPATTI – Marketing, Branding and Advertising and Mentoring Support to Start -ups, MSME and Women Enterprises ಕಾರ್ಯಕ್ರಮದ ಅಡಿಯಲ್ಲಿ ತರಬೇತಿ, ಮಾರ್ಗದರ್ಶನ (Mentoring), ಬ್ರಾಂಡಿಂಗ್, ಪ್ಯಾಕೇಜಿಂಗ್ ಮತ್ತು ಮಾರುಕಟ್ಟೆ ಸಂರ್ಪಕದ ಸಮಗ್ರ ಬೆಂಬಲ ಒದಗಿಸಲಾಗುತ್ತದೆ. 12 ವಾರಗಳ ಅವಧಿಯಲ್ಲಿ ಈ ಪೈಲಟ್ ಯೋಜನೆಯಡಿ ಮೂಲ ಸಮೀಕ್ಷೆ, ಉದ್ಯಮ ಗುರುತಿಸುವುದು, ಸಾಮರ್ಥ್ಯ ವೃದ್ಧಿ, ಡಿಜಿಟಲ್ ಸಬಲೀಕರಣ ಹಾಗೂ ಜಿಲ್ಲಾ ರಾಜ್ಯ ಮಟ್ಟದ ಮಾರುಕಟ್ಟೆಗಳಿಗೆ ಸಂರ್ಪಕ ಕಲ್ಪಿಸಲಾಗುತ್ತದೆ. ಯೋಜನೆಯನ್ನು ಗ್ರಾಮ ಪಂಚಾಯತಗಳು ಹಾಗೂ ಸಂಬಂಧಿತ ಇಲಾಖೆ ಸಮನ್ವಯ ಸಾಧಿಸಿ (convergence approach) ಅನುಷ್ಠಾನಗೊಳಿಸಲಾಗುತ್ತದೆ.

ಬೇಳೂರು ಮತ್ತು ಬೆಳಸೆ ಗ್ರಾಮಗಳಲ್ಲಿ ಜಾರಿಗೆ ಬರುತ್ತಿರುವ ಈ ಸ್ಮಾರ್ಟ್ ವಿಲೇಜ್ ಪೈಲಟ್ ಕಾರ್ಯಕ್ರಮ ಉತ್ತರ ಕನ್ನಡ ಜಿಲ್ಲೆ ಹಾಗೂ ರಾಜ್ಯದ ಇತರ ಗ್ರಾಮಗಳಿಗೆ ಮಾದರಿಯಾಗಿ (Replicable Model) ವಿಸ್ತರಿಸಬಹುದಾದ ಯೋಜನೆಯಾಗಲಿದ್ದು, ಈ ಯೋಜನೆಯಿಂದ 30-50 ಗ್ರಾಮ ಮಟ್ಟದ ಸ್ಥಿರ ಉದ್ಯಮಗಳು ಮತ್ತು ಕುಟುಂಬ ಆದಾಯದಲ್ಲಿ ಹೆಚ್ಚಳ ಹಾಗೂ ಗ್ರಾಮದಿಂದ ಮಾರುಕಟ್ಟೆಗೂ ಬಲವಾದ ಸಂರ್ಪಕ ಸಾಧಿಸುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

Leave a Reply