ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಶಾಸನಶಾಸ್ತ್ರ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಎಪ್ರಿಲ್ ೧೦ರಂದು ಸೋಮವಾರ ಬೆಳಗ್ಗೆ ೧೦.೩೦ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಶೋಧನಾಸಕ್ತರು, ವಿದ್ಯಾರ್ಥಿಗಳು, ಕನ್ನಡಾಭಿಮಾನಿಗಳು ಹಾಗೂ ಆಸಕ್ತರು ಭಾಗವಹಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ಜನಪದ ಮತ್ತು ಕನ್ನಡ-ಕನ್ನಡಿಗ-ಕರ್ನಾಟಕದ ಅಭಿವೃದ್ಧಿ ಹಿತರಕ್ಷಣೆಯ ಆಶಯದಿಂದ ೧೯೧೫ರಲ್ಲಿ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ತು, ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಕಳೆದ ೧೦೮ ವರ್ಷಗಳಿಂದ ನಿರಂತರವಾಗಿ ಸೇವೆ ಮಾಡುತ್ತ ಬಂದಿದೆ. ಈ ಹಿನ್ನೆಲೆಯಲ್ಲಿ ಸಂಶೋಧನಾಸಕ್ತರಿಗೆ, ವಿದ್ಯಾರ್ಥಿಗಳಿಗೆ, ಪ್ರಯೋಜನಕಾರಿಯಾಗುವಂತಹ ವಿವಿಧ ವಿಷಯಗಳಿಗೆ ಸಂಬಂಧಿಸಿದ ಮಹತ್ವದ ವಿಷಯಗಳ ಕುರಿತು ಸಂಶೋಧನಾ ಉಪನ್ಯಾಸಗಳನ್ನು ಆಯಾ ಕ್ಷೇತ್ರದ ನುರಿತ ವಿದ್ವಾಂಸರುಗಳಿಂದ ಏರ್ಪಡಿಸಲಾಗಿದೆ.
ಕನ್ನಡ ಯುವ ಜನತೆಯಲ್ಲಿ ಶಾಸನಶಾಸ್ತ್ರ, ಸಂಶೋಧನಾ ಅಧ್ಯಯನದ ಬಗೆಗೆ ಆಸಕ್ತಿಯನ್ನು ಮೂಡಿಸಲು ಖ್ಯಾತ ಸಂಶೋಧಕರು ಹಾಗೂ ಹಿರಿಯ ಸಾಹಿತಿಗಳಾದ ನಾಡೋಜ ಡಾ. ಹಂಪ ನಾಗರಾಜಯ್ಯ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶಾಸನಶಾಸ್ತ್ರ/ ಪದವಿಯಲ್ಲಿ ಕನ್ನಡ ಐಚ್ಛಿಕ ವಿಷಯವನ್ನು ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅನುಕೂಲವಾಗುವಂತೆ ಸಂಶೋಧನಾ ಕಮ್ಮಟವನ್ನು ಏರ್ಪಡಿಸಲು ದತ್ತಿ ಸ್ಥಾಪಿಸಿದ್ದು, ಅವರ ಆಶಯದಂತೆ ಈ ಕಾರ್ಯಕ್ರಮವನ್ನು ಹಮ್ಮಿಕೊಳಲಾಗಿದೆ ಎಂದು ತಿಳಿಸಿದ್ದಾರೆ.
ದಿನಾಂಕ ೧೦-೦೪-೨೦೨೩ರ ಸೋಮವಾರ ಬೆಳಗ್ಗೆ ೧೦.೩೦ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಂಡ ಉಪನ್ಯಾಸ ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧಕ ಡಾ. ದೇವರಕೊಂಡಾರೆಡ್ಡಿ ಹಾಗೂ ಕೆ. ಧನಪಾಲ್ ಅವರು ʻಶಾಸನಗಳ ಇತ್ತೀಚಿನ ಶೋಧಗಳುʼ (ಭಾಗ-೧ ಹಾಗೂ ಭಾಗ-೨) ಕುರಿತು ತಲಾ ಒಂದು ಗಂಟೆಗಳ ಕಾಲ ಉಪನ್ಯಾಸವನ್ನು ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



