ಎರಡನೇ ಸ್ತರದ ನಗರಗಳಲ್ಲೂ ಹೂಡಿಕೆ ಉತ್ತೇಜಿಸಿದರೆ ಪ್ರಗತಿ ಸಾಧ್ಯವಾಗಲಿದೆ

1 year ago

ಟರ್ಬೊಸ್ಟಾರ್ಟ್‌ ಗ್ಲೋಬಲ್‌ ಸಿಇಒ ವೆಂಕಟ್‌ ರಾಜು ಹೇಳಿಕೆ

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ಮಾಹಿತಿ ತಂತ್ರಜ್ಞಾನ, ಐಟಿ ಆಧಾರಿತ ಸೇವಾ ವಲಯ ಜತೆಗೆ ಬಾಹ್ಯಾಕಾಶ, ರಕ್ಷಣೆ, ಬಯೋಟೆಕ್‌ ಕ್ಷೇತ್ರದಲ್ಲೂ ಹೆಸರುವಾಸಿಯಾಗಿದೆ. ಆಯಾ ಪ್ರದೇಶಗಳ ಸಂಪನ್ಮೂಲ ಸಾಮರ್ಥ್ಯಕ್ಕೆ ಅನುಗುಣವಾಗಿ ಎರಡನೇ ಸ್ತರದ ನಗರಗಳಲ್ಲೂ ಹೂಡಿಕೆ ಉತ್ತೇಜಿಸಿದರೆ ಪ್ರಗತಿ ಸಾಧ್ಯವಾಗಲಿದೆ ಎಂದು ʼಟರ್ಬೊಸ್ಟಾರ್ಟ್‌ ಗ್ಲೋಬಲ್‌ʼ ಸಿಇಒ ವೆಂಕಟ್‌ ರಾಜು ಹೇಳಿದರು.

ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ನಡೆದ  “ಬೆಳವಣಿಗೆಗೆ ಹೂಡಿಕೆಯ ಮರುಕಲ್ಪನೆ: ಕರ್ನಾಟಕದ ಕನಸು 2030 ಸಾಧಿಸಲು ಪೂರಕ ಐದು ವಲಯಗಳು” ಗೋಷ್ಠಿಯಲ್ಲಿ ಮಾತನಾಡಿದರು.

ಪಾರದರ್ಶಕತೆ, ಸ್ಥಿರತೆ ಹಾಗೂ ಮುಂದುವರಿಕೆಯಂಥ ವಾತಾವರಣ ನಿರ್ಮಾಣವಾದಲ್ಲಿ ಉದ್ಯಮಿಗಳು ಹೂಡಿಕೆಗೆ ಮುಂದೆ ಬರುವುದು ನಿಶ್ಚಿತ. ಗ್ಲೋಬಲ್‌ ಕೆಪಬಲಿಟಿ ಸೆಂಟರ್‌ಗಳ (ಜಿಸಿಸಿ) ಸ್ಥಾಪನೆಗೆ ಒತ್ತು ಕೊಡುವ ಮೂಲಕ ರಾಜ್ಯ ಸರಕಾರ ಉತ್ತಮ ಕೆಲಸ ಮಾಡಿದೆ. ಉತ್ಪಾದನಾ ವಲಯ ಮತ್ತು ಪೂರೈಕೆ ಸರಳಪಳಿ ನಡುವೆ ಸಮತೋಲನ ಸಾಧಿಸಬೇಕಿದೆ. ಜಾಗತಿಕವಾಗಿ ಸವಾಲು ಹಾಗೂ ಅವಕಾಶಗಳು ಇದ್ದೇ ಇರುತ್ತವೆ ಎಂದರು.

ದೇಶದ ಪ್ರಗತಿಗೆ ಹಾಗೂ ಬೆಂಗಳೂರಿಗೆ ವಿಶ್ವಮಟ್ಟದಲ್ಲಿ ಹೆಸರು ತಂದುಕೊಡುವಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪಾತ್ರ ದೊಡ್ಡದಿದೆ. ನಮ್ಮಲ್ಲಿ ಈಗ 1700 ಜಿಸಿಸಿ (ಗ್ಲೋಬಲ್‌ ಕೆಪಬಲಿಟಿ ಸೆಂಟರ್‌) ಕೇಂದ್ರಗಳಿವೆ. ಭಾರತವು ದೊಡ್ಡ ಮಾರುಕಟ್ಟೆಯಾಗಿರುವುದರಿಂದ ಇದು ಸಾಧ್ಯವಾಗಿದೆ ಎಂದರು.

ಉಡುಪಿ ಮೂಲದ ಸ್ವಿಟ್ಜರ್‌ಲೆಂಡ್‌ ಸಂಸದ ಹಾಗೂ ಸ್ವಿಜ್‌ ಇಂಡಿಯಾ ಪಾರ್ಲಿಮೆಂಟರಿ ಗ್ರೂಪ್‌ ಅಧ್ಯಕ್ಷ  ಎಚ್‌.ಸಿ. ನಿಕ್‌ ಗುಗ್ಗರ್‌ ಮಾತನಾಡಿ, ಕೆಪಿಐಟಿ ಟೆಕ್ನಾಲಜೀಸ್‌ ಕಂಪನಿಯ ಮುಖ್ಯ ಮಾರುಕಟ್ಟೆ ಅಧಿಕಾರಿ ಮೊಹಿತ್‌ ಕೊಚಾರ್‌, ಭಾರತದಲ್ಲಿ ಸಂಶೋಧನೆ ಮತ್ತು ವಿನ್ಯಾಸ ವಲಯದಲ್ಲಿ ವಿಫುಲ ಅವಕಾಶಗಳಿವೆ ಎಂದರು.

ಹಸಿರು ಇಂಧನ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕರ್ನಾಟಕದಲ್ಲಿ ಹೂಡಿಕೆಗೆ ವಿಫಲ ಅವಕಾಶಗಳಿವೆ. ಸ್ವಿಟ್ಜರ್‌ಲೆಂಡ್‌ ಕಂಪನಿಗಳು ಆಸಕ್ತಿ ತೋರಿವೆ ಎಂದರು.

ಸುಸ್ಥಿರ ಅಭಿವೃದ್ಧಿ ಪರಿಕಲ್ಪನೆ ವಿಶ್ವದಾದ್ಯಂತ ಮುಂಚೂಣಿಯಲ್ಲಿದೆ. ಕರ್ನಾಟಕವು ಹಸಿರು ಇಂಧನ ವಲಯದಲ್ಲಿ ಹೂಡಿಕೆಗೆ ಒತ್ತುಕೊಟ್ಟಿದೆ. ಈಗಾಗಲೇ ಉದ್ಯಮಿಗಳಾದ ಆನಂದ್‌ ಮಹೀಂದ್ರಾ, ಸಜ್ಜನ್‌ ಜಿಂದಾಲ್‌ ಅವರು ಸೌರಶಕ್ತಿ, ಪವನ ಶಕ್ತಿ ವಲಯದಲ್ಲಿ ಸಾವಿರಾರು ಕೋಟಿ ರೂ. ಹೂಡಿಕೆಯನ್ನು ಘೋಷಿಸಿದ್ದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಐಬಿಸಿ (ಇಂಟರ್‌ನ್ಯಾಷನಲ್‌ ಬ್ಯಾಟರಿ ಕಂಪನಿ) ಸಿಇಒ ಪ್ರಿಯದರ್ಶಿ ಪಾಂಡ ಹೇಳಿದರು.

ನವೀಕರಿಸಬಹುದಾದ ಇಂಧನದಿಂದ ಉತ್ಪಾದಿಸಿದ ವಿದ್ಯುತ್‌ಶಕ್ತಿಯನ್ನು ಸಂಗ್ರಹಿಸುವ ಬ್ಯಾಟರಿ ಮೂಲಸೌಕರ್ಯ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕಿದೆ. ಆಗ ಮಾತ್ರ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಸಮತೋಲನ ಸಾಧಿಸಲು ಸಾಧ್ಯವಾಗಲಿದೆ.  ಇದಕ್ಕಾಗಿ ಖಾಸಗಿ ಹೂಡಿಕೆದಾರರನ್ನೂ ಉತ್ತೇಜಿಸಬೇಕಿದೆ ಎಂದರು.

Leave a Reply