ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ ಉತ್ತೇಜಿಸುವ ಸಲುವಾಗಿ ಕುಂದಾನಗರಿ ಬೆಳಗಾವಿ, ಮೈಸೂರು ಮತ್ತು ಬೆಂಗಳೂರಿನಲ್ಲಿ ಮೂರು ಜಾಗತಿಕ ನಾವೀನ್ಯತಾ ಪಾರ್ಕ್‌ಗಳನ್ನು ಸ್ಥಾಪಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು.
- ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಫೇಕುಗಳ ಕಾಟ!
- ಇತಿಹಾಸದಲ್ಲೇ ದಾಖಲೆ ಬರೆಯುವಂತೆ ಬಸ್ ಟಿಕೆಟ್ ದರ ಏರಿಕೆ: ಆರ್ ಅಶೋಕ್
- ನವೆಂಬರ್ 07 ರಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನ
- ಆ್ಯಕ್ಸಿಡೆಂಟಲ್ ಸಿಎಂ ಬೊಮ್ಮಾಯಿ ಅವರೇ ಹಾವೇರಿ ಕ್ಷೇತ್ರದ ಬಗ್ಗೆ ಗಮನ ಕೊಡಿ: ಬಿ ಕೆ ಹರಿಪ್ರಸಾದ್
- 40 ದಾಟಿದ ಪುರುಷರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ?
ಬೆಂಗಳೂರು ಟೆಕ್ ಶೃಂಗಸಭೆಯ 27ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುತ್ತಲೇ ಪ್ರಾದೇಶಿಕ ಬಲವನ್ನು ಸಜ್ಜುಗೊಳಿಸಲು ಹಾಗೂ ಹೂಡಿಕೆಗಳನ್ನು ಆಕರ್ಷಿಸಲು ಸೂಕ್ತ ನೀತಿ ಮತ್ತು ಮೂಲಸೌಕರ್ಯವನ್ನು ಸೃಷ್ಟಿಸಲಾಗುತ್ತದೆ ಎಂದರು.
ದೇಶದಲ್ಲೇ ಮೊದಲ ಗ್ಲೋಬಲ್ ಕೇಪೆಬಲಿಟಿ ಸೆಂಟರ್ ನೀತಿಯನ್ನು ಕರ್ನಾಟಕ ಜಾರಿಗೆ ತಂದಿದೆ. ಇದರ ಭಾಗವಾಗಿ ಬೆಂಗಳೂರು, ಮೈಸೂರು ಹಾಗೂ ಬೆಳಗಾವಿಯಲ್ಲಿ ಮೂರು ನಾವೀನ್ಯತಾ ಪಾರ್ಕ್‌ಗಳನ್ನು ಸ್ಥಾಪಿಸಲಾಗುವುದು. ರಾಜ್ಯದಲ್ಲಿ ಜಿಸಿಸಿಗಳನ್ನು ಸ್ಥಾಪಿಸಲು ಈ ಪಾರ್ಕ್‌ಗಳು ಮೀಸಲಾಗಿರುತ್ತವೆ ಎಂದರು.
ಟೆಕ್ ಆಧಾರಿತ ವಲಯಗಳನ್ನು ಉತ್ತೇಜಿಸಲು ಬೌದ್ಧಿಕ ಮತ್ತು ಡಿಜಿಟಲ್ ಮೂಲಸೌರ್ಕಯದ ಮೇಲೆ ಸರ್ಕಾರ ಗಮನಾರ್ಹ ಹೂಡಿಕೆ ಮಾಡಿದೆ. ಗ್ರಾಮೀಣ ಸಂಪರ್ಕಕ್ಕಾಗಿ ನಮ್ಮ ಗ್ರಾಮ ನಮ್ಮ ಯೋಜನೆಯನ್ನು ಜಾರಿ ಮಾಡಿದೆ ಎಂದರು.
ರಾಜ್ಯಸರ್ಕಾರ ಐಟಿ-ಬಿಟಿ ಸೇರಿದಂತೆ ತಂತ್ರಜ್ಞಾನ ಆಧಾರಿತ ನಾವೀನ್ಯತೆ, ಸುಸ್ಥಿರತೆ ಮತ್ತು ಎಲ್ಲರನ್ನೊಳಗೊಂಡ ಬೆಳವಣಿಗೆಗೆ ಬದ್ಧವಾಗಿದೆ. ಸಾಫ್ಟ್‌ವೇರ್ ಬಯೋಟೆಕ್ನಾಲಜಿ, ಏರೋಸ್ಪೇಸ್ ಹಾಗೂ ಅಭಿವೃದ್ಧಿಗೊಂಡ ಉತ್ಪಾದನೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಭಾರತದ ತಂತ್ರಜ್ಞಾನ ಪರಿವರ್ತನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದರು.
ಬೆಂಗಳೂರು ಜಾಗತಿಕ ನಾವೀನ್ಯತಾ ಜಿಲ್ಲೆಯು ಜ್ಞಾನ, ಆರೋಗ್ಯ ಮತ್ತು ನಾವೀನ್ಯತೆಯ ನಗರದ ಭಾಗವಾಗಿರಲಿದೆ(ಕ್ವಿನ್ ಸಿಟಿ). ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 45 ನಿಮಿಷಗಳ ಅಂತರದಲ್ಲಿದ್ದು, ನಾವೀನ್ಯತೆ ಮತ್ತು ಸಂಶೋಧನೆಗೆ ಜಾಗತಿಕ ಕೇಂದ್ರವಾಗಿ ಪರಿಣಮಿಸಲಿದೆ ಎಂದರು.
ಇಂಜಿನಿಯರಿಂಗ್ ಪ್ರತಿಭೆ ಮತ್ತು ಜಾಗತಿಕವಾಗಿ ಅತ್ಯಧಿಕ ಎ ಐ ವೃತ್ತಿಪರರನ್ನು ಹೊಂದಿರುವ ಕರ್ನಾಟಕ ಜಿಸಿಸಿಗಳಿಗೆ ಅತಿ ಪ್ರಿಯವಾದ ಗಮ್ಯವಾಗಿದೆ. ಎನ್ ಐ ಪಿ ಯು ಎನ್ ಎ ಕರ್ನಾಟಕದಡಿಯಲ್ಲಿ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸಲು ಸಿದ್ದರಿರುವ ಕಾರ್ಮಿಕಪಡೆಯನ್ನು ತಯಾರು ಮಾಡಲು ನಾವು ಕೈಗೊಂಡ ಯೋಜನೆಗಳು ಇನ್ನಷ್ಟು ಬಲಪಡಿಸಲಿವೆ ಎಂದರು.
ಈಗ ತಾನೇ ಮೈಕ್ರೋ ಸಾಫ್ಟ್, ಇಂಟೆಲ್, ಆಕ್ಸೆಂಚರ್, ಐ.ಬಿ.ಎಂ ಮತ್ತು ಬಿ ಎಫ್ ಎಸ್ ಕಾಂಸಾರ್ಟಿಯಂ ಜೊತೆಗೆ ಸಹಿ ಹಾಕಲಾದ ಐದು ಒಪ್ಪಂದಗಳು ಕರ್ನಾಟಕದ ಒಂದು ಲಕ್ಷ ವ್ಯಕ್ತಿಗಳನ್ನು ಕೌಶಲಯುಕ್ತ ಗೊಳಿಸಲಿದೆ ಎಂದರು.
ಗ್ರಾಮೀಣ ಸಂಪರ್ಕಕ್ಕಾಗಿ ‘ನಮ್ಮ ಗ್ರಾಮ ನಮ್ಮ ಯೋಜನೆ ‘ ಮತ್ತು ವಿಶೇಷ ಅಭಿವೃದ್ಧಿ ಯೋಜನೆಗಳು ಸಂಪರ್ಕ ಮತ್ತು ಆರ್ಥಿಕ ಅವಕಾಶಗಳನ್ನು ಕರ್ನಾಟಕದಾದ್ಯಂತ ವೃದ್ಧಿಸಿದೆ. ಬಿಯಾಂಡ್ ಬೆಂಗಳೂರು ಕಾರ್ಯಕ್ರಮಗಳ ಮೂಲಕ ಬೆಳವಣಿಗೆಯ ಸೌಲಭ್ಯಗಳನ್ನು ಟೆಕ್ ವಲಯದಿಂದಾಚೆಗೂ ಕೊಂಡೊಯ್ಯುವುದರಲ್ಲಿ ನಮಗೆ ನಂಬಿಕೆಯಿದೆ. ಇದರಿಂದ ಗ್ರಾಮೀಣ ಪ್ರದೇಶಗಳಿಗೆ ತಂತ್ರಜ್ಞಾನ, ವಿದ್ಯಾರ್ಥಿಗಳಿಗೆ ಇ – ಶಿಕ್ಷಣದ ಸುಧಾರಣೆ ಮತ್ತು ಎಲ್ಲಾ ನಾಗರಿಕ ಸೇವೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದರು.
ಈ ಪರಂಪರೆಯನ್ನು ವಿಸ್ತರಿಸಲು ನಾವು ಬದ್ಧರಾಗಿದ್ದು, ತಂತ್ರಜ್ಞಾನ ಮತ್ತು ಪ್ರಗತಿಯಲ್ಲಿ ಕರ್ನಾಟಕವು ಜಾಗತಿಕ ನಾಯಕನಾಗಿ ಉಳಿಯಲಿರುವುದನ್ನು ಖಾತ್ರಿಪಡಿಸುತ್ತೇವೆ. ನಾವೀನ್ಯತೆ, ಸಹಯೋಗ ಮತ್ತು ಬೆಳವಣಿಗೆಯ ಈ ಪ್ರಯಾಣದಲ್ಲಿ ನಮ್ಮೊಂದಿಗೆ ಕೈಜೋಡಿಸಿದ್ದಕ್ಕಾಗಿ ಧನ್ಯವಾದಗಳು. ಒಟ್ಟಾಗಿ, ನಾವು ಕರ್ನಾಟಕ ಮತ್ತು ಅದರಾಚೆಗಿನ ಪರಿವರ್ತನೆಯನ್ನು ಮುಂದುವರಿಸೋಣ ಎಂದರು.




