ಬೆಂಗಳೂರು: ಮರುಬಳಕೆ ಇಂಧನ ವಲಯದಲ್ಲಿ ಹೆಸರು ಮಾಡಿರುವ ಆರ್.ಪಿ-ಸಂಜೀವ್ ಗೊಯೆಂಕಾ ಉದ್ಯಮ ಸಮೂಹ ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮುಂದಿನ ಮೂರು ವರ್ಷಗಳಲ್ಲಿ 10,500 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿವೆ. ಇದಕ್ಕೆ ಸರಕಾರದ ಕಡೆಯಿಂದ ಬೇಕಾದ ನೆರವನ್ನು ಒದಗಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ.
- ಅಲೆಮಾರಿಗಳು ಇನ್ನೂ ಅತ್ಯಂತ ಹೀನಾಯ ಸ್ಥಿತಿಗೆ ತಲುಪುವ ಸಾಧ್ಯತೆ: ವಡ್ಡಗೆರೆ ನಾಗರಾಜಯ್ಯ
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಪಾಲ್ಗೊಂಡಿರುವ ಅವರು, ಈ ಮಾಹಿತಿ ನೀಡಿದ್ದು, ಇದೇ ರೀತಿಯಲ್ಲಿ ಈಗಾಗಲೇ ಕುಷ್ಟಗಿಯಲ್ಲಿ ಪವನ ವಿದ್ಯುತ್ ಕ್ಷೇತ್ರದಲ್ಲಿ ಅಗತ್ಯವಾಗಿರುವ ಟರ್ಬೈನ್ ಬ್ಲೇಡ್ ಉತ್ಪಾದನೆ ಆರಂಭಿಸಿರುವ ಐನಾಕ್ಸ್ ಜಿಎಫ್ಎಲ್ ಕಂಪನಿಯು ಮುಂಬರುವ ದಿನಗಳಲ್ಲಿ ಇದಕ್ಕೆ ಹತ್ತಿರದ ಪ್ರದೇಶದಲ್ಲೇ ಪವನ ವಿದ್ಯುತ್ತಿಗೆ ಬೇಕಾದ ದೈತ್ಯ ಗೋಪುರಗಳ (ಟವರ್) ಅಭಿವೃದ್ಧಿ ಘಟಕವನ್ನೂ ಆರಂಭಿಸಲು ಮುಂದಾಗಿದೆ. ಈ ಕಂಪನಿಯು ರಾಜ್ಯದಲ್ಲಿ ಈಗಾಗಲೇ 10 ಸಾವಿರ ಕೋಟಿ ರೂ. ಹೂಡಿಕೆ ಮಾಡಿದೆ ಎಂದು ಅವರು ಹೇಳಿದ್ದಾರೆ.
ತ್ಯಾಜ್ಯ ನಿರ್ವಹಣೆ ಕ್ಷೇತ್ರದಲ್ಲಿ ಪರಿಣತಿ ಸಾಧಿಸಿರುವ ರಾಮ್ಕಿ ಗ್ರೂಪ್, ರಾಜ್ಯದ ಕೆಐಎಡಿಬಿ ಕೈಗಾರಿಕಾ ಪ್ರದೇಶಗಳಲ್ಲಿ ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು (ಸಿಇಪಿಟಿ) ಸ್ಥಾಪಿಸಲು ಆಸಕ್ತಿ ತೋರಿಸಿದೆ. ಜತೆಗೆ, ಈ ಕಂಪನಿಯೊಂದಿಗೆ ರಾಜ್ಯದಲ್ಲಿ `ಫಾರ್ಮಾ ಪಾರ್ಕ್’ ಸ್ಥಾಪನೆ ಸಂಬಂಧ ಚರ್ಚಿಸಲಾಗಿದೆ. ಟೆಕ್ ಮಹೀಂದ್ರ ಕಂಪನಿ ಕೂಡ ರಾಜ್ಯದ 2ನೇ ಹಂತದ ನಗರಗಳಲ್ಲಿ ಕೈಗಾರಿಕಾ ಹೂಡಿಕೆ ಮಾಡಲು ಬಯಸಿದೆ ಎಂದು ಅವರು ವಿವರಿಸಿದ್ದಾರೆ.
ಸಿಂಗಪುರ್ ಮೂಲದ ಕಂಪನಿಗಳಿಂದ ರಾಜ್ಯಕ್ಕೆ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಬೇಕೆಂಬ ಆಲೋಚನೆ ನಮಗೆ ಗಟ್ಟಿಯಾಗಿದೆ. ಈ ನಿಟ್ಟಿನಲ್ಲಿ ಗುರಿ ಸಾಧಿಸಲು `ಸಿಂಗಪುರ್ ಪಾರ್ಕ್’ ಸ್ಥಾಪಿಸುವ ಬಗ್ಗೆ ಆ ದೇಶದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತಿರುವ `ಸಿಂಗಪುರ್ ಆರ್ಥಿಕ ಅಭಿವೃದ್ಧಿ ಮಂಡಲಿ’ಯ ಪ್ರತಿನಿಧಿಗಳ ಜತೆ ಪ್ರಸ್ತಾಪಿಸಲಾಗಿದೆ. ಸಿಂಗಪುರ್ ಜತೆ ನಮಗೆ ಸೆಮಿಕಂಡಕ್ಟರ್ಸ್, ಜೈವಿಕ ತಂತ್ರಜ್ಞಾನ ಮತ್ತು ವೈಮಾಂತರಿಕ್ಷ ಕ್ಷೇತ್ರಗಳಲ್ಲಿ ಸಹಭಾಗಿತ್ವಕ್ಕೆ ಹೆಚ್ಚಿನ ಅವಕಾಶಗಳಿವೆ ಎಂದಿದ್ದಾರೆ.
ಪರ್ಸನಲ್ ಕಂಪ್ಯೂಟರ್, ಲ್ಯಾಪ್ ಟಾಪ್, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನ್ ತಯಾರಿಕೆಗೆ ಹೆಸರಾಗಿರುವ ಲೆನೋವೋ ಕಂಪನಿಯು ಸ್ಥಳೀಯ ಪೂರೈಕೆದಾರರು ಮತ್ತು ಉದ್ಯಮಿಗಳೊಂದಿಗೆ ಸಹಭಾಗಿತ್ವ ಹೊಂದುವ ಕುರಿತು ವಿಚಾರ ವಿನಿಮಯ ನಡೆಸಿದೆ. ರಕ್ಷಣಾ ಕ್ಷೇತ್ರದಲ್ಲಿರುವ ಎಕ್ಸಾನ್ ಕೇಬಲ್ಸ್, ಭಾರತದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ತೀರ್ಮಾನಿಸಿದೆ. ಇದನ್ನು ಮನಗಂಡು, ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಅವರಿಗೆ ಕೋರಿದ್ದೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾಗತಿಕ ವ್ಯಾಪಾರ ಹಾಗೂ ಕೈಗಾರಿಕಾ ಪರಿವರ್ತನೆಯ ಮುಂದಿನ ಹಂತದಲ್ಲಿ ಕರ್ನಾಟಕವು ಹಿಂದೆ ಬೀಳದಂತೆ, ಸ್ಪರ್ಧಾತ್ಮಕವಾಗಿ ತನ್ನ ಸ್ಥಾನ ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಸುಂಕ, ಕೃತಕ ಬುದ್ಧಿಮತ್ತೆ ಹಾಗೂ ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿನ ಭವಿಷ್ಯದ ಕಾರ್ಯತಂತ್ರಗಳ ಕುರಿತು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ಯ (ಬಿಸಿಜಿ) ವ್ಯವಸ್ಥಾಪಕ ನಿರ್ದೇಶಕ ನಿಕೊಲಾಸ್ ಲ್ಯಾಂಗ್ ಅವರ ಜೊತೆ ರಾಜ್ಯದ ನಿಯೋಗವು ವಿಸ್ತೃತವಾಗಿ ಚರ್ಚಿಸಿದೆ. ಕಾಲಮಿತಿ ಒಳಗೆ ಯೋಜನೆಗಳನ್ನು ಕಾರ್ಯಗತಗೊಳಿಸಲು ರಾಜ್ಯ ಸರ್ಕಾರ ನೀಡುತ್ತಿರುವ ಬೆಂಬಲವನ್ನು ವಿವಿಧ ಉದ್ಯಮ ಸಮೂಹಗಳು ಮುಕ್ತಕಂಠದಿಂದ ಪ್ರಶಂಸಿಸಿವೆ ಎಂದು ತಿಳಿಸಿದ್ದಾರೆ.
ಈ ನಡುವೆ ಸ್ವಿಟ್ಜರ್ಲೆಂಡಿನ ಕಂಪನಿಗಳೊಂದಿಗೆ ರಾಜ್ಯದ ಕೈಗಾರಿಕಾ ಸಂಬಂಧವನ್ನು ಉತ್ತೇಜಿಸುವ ಉದ್ದೇಶದಿಂದ ಸ್ವಿಸ್ ಚೇಂಬರ್ಸ್ ಇಂಡಿಯಾದೊಂದಿಗೆ ದಾವೋಸ್ ಸಮಾವೇಶದಲ್ಲಿ ರಾಜ್ಯ ಸರಕಾರವು ಒಡಂಬಡಿಕೆಗೆ ಸಹಿ ಹಾಕಿದೆ. ಈ ಸಂದರ್ಭದಲ್ಲಿ ಸ್ವಿಸ್ ಚೇಂಬರ್ಸ್ ಮುಖ್ಯಸ್ಥ ಸತೀಶ್ ರಾವ್ ಮತ್ತು 6 ಸ್ವಿಸ್ ಕಂಪನಿಗಳ ಸಿಇಒಗಳು ಉಪಸ್ಥಿತರಿದ್ದರು ಎಂದು ಹೇಳಿದ್ದಾರೆ.



