35 ಬಿಲಿಯನ್ ಡಾಲರ್ ಹೂಡಿಕೆ
15 ಮಿಲಿಯನ್ ಸಣ್ಣ ಉದ್ಯಮಗಳಿಗೆ ನೆರವು
ಲಕ್ಷಾಂತರ ಉದ್ಯೋಗಗಳ ಸೃಷ್ಟಿ!
ಬೆಂಗಳೂರು: ಅಮೆಜಾನ್ ಕಂಪನಿಯು ಯಲಹಂಕ ಸಮೀಪದಲ್ಲಿ ನಿರ್ಮಿಸಿರುವ, 11 ಲಕ್ಷ ಚದರ ಅಡಿ ವಿಸ್ತಾರದ ಸುಸಜ್ಜಿತ ಕಾರ್ಪೊರೇಟ್ ಪ್ರಧಾನ ಕಚೇರಿಯನ್ನು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಉದ್ಘಾಟಿಸಿದರು.
- 40 ದಾಟಿದ ಪುರುಷರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ?
- ಸಂಗೀತ ಬಾರ್ & ರೆಸ್ಟೋರೆಂಟ್ ಚಿತ್ರದ ಟೀಸರ್ ಬಿಡುಗಡೆಗೆ ಮುಹೂರ್ತ ನಿಗದಿ
- ಅನರ್ಹ ಕಂಪನಿಗೆ ಕಸದ ಟೆಂಡರ್: ಆರ್.ಅಶೋಕ
- ಮಾಂಜಾ ದಾರ ಮಾರಾಟ, ಬಳಕೆ ನಿಷೇಧಕ್ಕೆ ಕಠಿಣ ಕ್ರಮ: ಡಾ.ಜಿ.ಪರಮೇಶ್ವರ್
- ಶೂದ್ರ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ನಂತರ ಮಾತನಾಡಿದ ಅವರು, ಕರ್ನಾಟಕದಲ್ಲಿ ಇದು ಅಮೆಜಾನ್ ಕಂಪನಿಯ 10ನೆಯ ಕಾರ್ಪೊರೇಟ್ ಕಚೇರಿಯಾಗಿದೆ. ರಾಜ್ಯದೊಂದಿಗೆ ಎರಡು ದಶಕಗಳ ಬಾಂಧವ್ಯ ಹೊಂದಿರುವ ಕಂಪನಿಯು ಮುಂದಿನ 4 ವರ್ಷಗಳಲ್ಲಿ ಭಾರತದಲ್ಲಿ 35 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡಲಿದೆ. ಇದರಿಂದ 15 ಮಿಲಿಯನ್ ಸಣ್ಣ ಉದ್ಯಮಗಳಿಗೆ ನೆರವು ಸಿಗಲಿದ್ದು, ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರಲ್ಲಿ ರಾಜ್ಯಕ್ಕೆ ಗಮನಾರ್ಹ ಪಾಲು ಹರಿದು ಬರಲಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ 3.80 ಲಕ್ಷ ರೂ.ಗಳಿಗಿಂತ ಹೆಚ್ಚು ತಲಾ ಆದಾಯ ಹೊಂದಿದ್ದು, ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಜೊತೆಗೆ, ದೇಶದ ಬೊಕ್ಕಸಕ್ಕೆ ವಾರ್ಷಿಕ 1.6 ಲಕ್ಷ ಕೋಟಿ ರೂ. ಜಿ.ಎಸ್.ಟಿ ಪಾವತಿ ಮೂಲಕ ದ್ವಿತೀಯ ಸ್ಥಾನದಲ್ಲಿದ್ದೇವೆ. ನಾವೀನ್ಯತಾ ಸೂಚ್ಯಂಕದಲ್ಲಿ ಬೆಂಗಳೂರು ಜಾಗತಿಕ ಸ್ತರದಲ್ಲಿ 21ನೇ ಸ್ಥಾನಕ್ಕೆ ಜಿಗಿದಿದೆ. ಟೆಕ್-ಸಿಟಿ ಸೂಚ್ಯಂಕದಲ್ಲಿ ಮೊದಲ 30 ಸ್ಥಾನಗಳ ಒಳಗೆ ಕಾಣಿಸಿಕೊಂಡಿರುವ ದೇಶದ ಏಕೈಕ ನಗರ ಬೆಂಗಳೂರಾಗಿದೆ ಎಂದರು.
ಕಳೆದ ವರ್ಷ ಬೆಂಗಳೂರಿನಲ್ಲಿ 14.6 ಮಿಲಿಯನ್ ಚದರ ಅಡಿ ಜಾಗವನ್ನು ಕೈಗಾರಿಕಾ ವಹಿವಾಟು ಉದ್ದೇಶಕ್ಕೆ ಭೋಗ್ಯಕ್ಕೆ ನೀಡಿದ್ದು, ನಾವು ಪ್ರಥಮ ಸ್ಥಾನದಲ್ಲಿದ್ದೇವೆ ಎಂದರು.
ದೇಶದಲ್ಲಿ ಒಟ್ಟು 900 ಜಿಸಿಸಿ ಕೇಂದ್ರಗಳಿದ್ದು, ಇವುಗಳ ಪೈಕಿ ಶೇ.35ರಷ್ಟು ಕರ್ನಾಟಕದಲ್ಲೇ ಇವೆ. ಇ-ಕಾಮರ್ಸ್ ವಹಿವಾಟಿಗೆ ಬೇಕಾದ ಮೂಲಸೌಕರ್ಯದಲ್ಲೂ ರಾಜ್ಯವು ಮೊದಲ ಸ್ಥಾನದಲ್ಲಿದೆ. ನಮ್ಮಲ್ಲಿ 42.48 ಲಕ್ಷ ಟನ್ ದಾಸ್ತಾನು ಸಂಗ್ರಹಿಸುವಷ್ಟು ಉಗ್ರಾಣಗಳು ಮತ್ತು 233 ಶೀತಲಗೃಹಗಳಿವೆ. ಇದಕ್ಕೆ ತಕ್ಕಂತೆ ಇ-ಕಾಮರ್ಸ್ ವಹಿವಾಟು ಶೇ.11ರಷ್ಟು ಬೆಳವಣಿಗೆ ಸಾಧಿಸುತ್ತಿದೆ ಎಂದರು.
ಅಮೆಜಾನ್ ಮತ್ತು ಜಾಗತಿಕ ಮಟ್ಟದ ಇತರ ಕಂಪನಿಗಳು ರಾಜ್ಯದಲ್ಲಿರುವ ಈ ಕೈಗಾರಿಕಾಸ್ನೇಹಿ ಕಾರ್ಯಪರಿಸರದ ಲಾಭವನ್ನು ಪಡೆದುಕೊಂಡು ಹೆಚ್ಚುಹೆಚ್ಚು ಹೂಡಿಕೆ ಮಾಡಬೇಕು. ಜತೆಗೆ ಇಲ್ಲೇ ಉತ್ಪಾದನೆ ಮಾಡಿ, ಜಗತ್ತಿನ ವಿವಿಧ ದೇಶಗಳಿಗೆ ರಫ್ತು ಮಾಡುವ ಮೂಲಕ ಕರ್ನಾಟಕವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿಸಬೇಕು ಎಂದು ಕರೆನೀಡಿದರು.
ಕಾರ್ಯಕ್ರಮದಲ್ಲಿ ಅಮೆಜಾನ್ ಕಂಪನಿಯ ಜಾಗತಿಕ ವ್ಯವಹಾರಗಳ ವಿಭಾಗದ ಮುಖ್ಯಸ್ಥ ಡೇವಿಡ್ ಝಪೊಲೋಸ್ಕಿ, ಉಪಾಧ್ಯಕ್ಷ ಚೇತನ್ ಕೃಷ್ಣಸ್ವಾಮಿ, ಮತ್ತೋರ್ವ ಉಪಾಧ್ಯಕ್ಷ ಸಮೀರ್ ಕುಮಾರ್, ಜಾಗತಿಕ ಆಸ್ತಿಪಾಸ್ತಿಗಳ ವಿಭಾಗದ ಉಪಾಧ್ಯಕ್ಷ ಸೀನ್ ಲೀ ಮುಂತಾದವರು ಹಾಜರಿದ್ದರು.




