ಮುನ್ಶಿ ಪ್ರೇಮಚಂದ್ ಭಾರತದ ಪ್ರಖ್ಯಾತ ಸಾಹಿತಿ. 1880ರಲ್ಲಿ ಜನನ. 1903 ಸುಮಾರಿನಲ್ಲಿ “ನವಾಬ್ ರೈ” ಎಂಬ ಕಾವ್ಯನಾಮದಲ್ಲಿ ಉರ್ದುವಿನಲ್ಲಿ ಬರೆಯಲು ಆರಂಭಿಸುವ ಧನಪತ್ ರೈ ಶ್ರೀವಾಸ್ತವ, ಕೆಲವು ವರ್ಷಗಳ ಸಾಹಿತ್ಯಕೃಷಿಯ ನಂತರ ಹೆಸರು ಬದಲಾಯಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿ “ಪ್ರೇಮಚಂದ್” ಆಗುತ್ತಾರೆ. ಮತ್ತು ಅದೇ ಹೆಸರಿನಲ್ಲಿ 1915ರಿಂದ ಹಿಂದಿಯಲ್ಲಿಯೂ ಬರೆಯಲು ಆರಂಭಿಸುತ್ತಾರೆ. ಕೇವಲ 56 ವರ್ಷಗಳ ಕಾಲ ಬದುಕಿದ ಪ್ರೇಮಚಂದರು, ನಾಟಕಗಳು, ಲೆಕ್ಕವಿಲ್ಲದಷ್ಟು ಲೇಖನಗಳು, ನೂರಾರು ಸಣ್ಣಕತೆಗಳು ಮತ್ತು ಹತ್ತಾರು ಕಾದಂಬರಿಗಳನ್ನು ಬರೆದಿದ್ದು, “ಗೋದಾನ” ಇವರ ಕೊನೆಯ ಮತ್ತು ಅತಿಪ್ರಸಿದ್ಧ ಕಾದಂಬರಿ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
1930ರ ದಶಕದಲ್ಲಿಯ ಲಕ್ನೋ ಮತ್ತು ಅದರ ಗ್ರಾಮೀಣ ಭಾಗದ ಜನಜೀವನದ ಹಿನ್ನೆಲೆಯಲ್ಲಿ “ಗೋದಾನ” ರಚಿಸಲ್ಪಟ್ಟಿದೆ. ಇಲ್ಲಿ ಹತ್ತಾರು ಪಾತ್ರಗಳ ಗಟ್ಟಿ ಕತೆಯಿದೆ. ಆದರೆ ಮಹತ್ವಾಕಾಂಕ್ಷಿ ಲೇಖಕರಾದ ಪ್ರೇಮಚಂದ್, ತಮ್ಮ ತತ್ವದರ್ಶನದ ವಾಹನವಾಗಿ ಕತೆಯನ್ನು ಬಳಸಿಕೊಂಡಿದ್ದಾರೆ. ಪಾತ್ರಗಳ ಮತ್ತು ಸಂದರ್ಭದ ಮೂಲಕ ಹಲವು ವೈಚಾರಿಕ ಮತ್ತು ತಾತ್ವಿಕ ವಿಷಯಗಳನ್ನು ವಿವರವಾಗಿ ಚರ್ಚಿಸುತ್ತಾರೆ, ಅಲ್ಲಗೆಳೆಯುತ್ತಾರೆ, ಮರುರೂಪಿಸುತ್ತಾರೆ.
ಹಾಗೆಂದು ಕತೆ ಶುಷ್ಕವಾಗಿಲ್ಲ. ಪ್ರೇಮಚಂದ್ ವಾಸ್ತವವಾದಿ ಬರಹಗಾರ. ಹಾಗಾಗಿ ಅಂದಿನ ಸಾಮಾಜಿಕ ಶೋಷಣೆ ಮತ್ತು ಅಸಮಾನತೆಗಳು, ರಾಜಕೀಯ ಏರುಪೇರಾಟ, ರೈತಾಪಿ ವರ್ಗದ ಬವಣೆಗಳು, ಜಮೀನುದಾರರ ಸುಲಿಗೆ, ಲೇವಾದೇವಿಗಾರರ ಚಕ್ರಬಡ್ಡಿ ಮತ್ತು ಮೋಸ, ಸರ್ಕಾರಿ ಅಧಿಕಾರಿಗಳ ಲಂಚ ಮತ್ತು ಶೋಷಣೆ, ಜಾತಿ ತಾರತಮ್ಯ, ಸ್ತ್ರೀ ಶೋಷಣೆ, ಶ್ರೀಮಂತರ ವಿಲಾಸಿತನ ಮತ್ತು ಧೂರ್ತತೆ, ಕಾರ್ಖಾನೆ ಮಾಲೀಕರ ಕುತಂತ್ರ ಮತ್ತು ಕಾರ್ಮಿಕರ ದಡ್ಡತನ, ಪ್ರತಿಯೊಂದು ವರ್ಗದ ಜನರಲ್ಲಿಯೂ ಕಾಣಸಿಗುವ ಹಾದರ ಮತ್ತು ದಾಂಪತ್ಯನಿಷ್ಠೆ, ಜಾತಿ ಮತ್ತು ವರ್ಗಗಳನ್ನು ಮೀರಿದ ಪ್ರೇಮ, ಲಂಪಟತನ ಮತ್ತು ಸಂಯಮ, ಕುಟುಂಬಗಳ ವಿಘಟನೆ, ಹೀಗೆ ಕಾದಂಬರಿ ಹಲವು ಆಯಾಮಗಳಲ್ಲಿ ಮತ್ತು ಸ್ತರಗಳಲ್ಲಿ ಚಲಿಸುತ್ತದೆ.
ಲಕ್ನೋವಿನ ಗ್ರಾಮೀಣ ಭಾಗದ ಹಳ್ಳಿಯೊಂದರ ಮಧ್ಯಮವರ್ಗದ ರೈತ ಹೋರಿ ಮತ್ತು ಆತನ ಹೆಂಡತಿ ಧನಿಯ ತುಂಬು ಕುಟುಂಬದ ಜವಾಬ್ದಾರಿ ಹೊತ್ತು ನ್ಯಾಯ, ನೀತಿ ಎಂದು ಬದುಕಿದವರು. ತನ್ನವರಾಗಲಿ ಪರರಾಗಲಿ, ಎಷ್ಟೇ ಮೋಸ ಮತ್ತು ವಂಚನೆ ಮಾಡಿದರೂ ಹೋರಿ ತನ್ನ ಧರ್ಮಕ್ಕೆ ಕಟ್ಟುಬಿದ್ದವನು. ಅದೇ ಕಾರಣಕ್ಕಾಗಿ ಸಾಲದಲ್ಲಿ ಸಿಕ್ಕಿಬಿದ್ದವನು. ತಮ್ಮಂದಿರಿಂದ ಮೋಸ, ಭರ್ತ್ಸನೆಗೆ ಒಳಗಾದರೂ ಅಣ್ಣನಾಗಿ ಅವರಿಗೆ ಮಿಡಿಯುವವನು. ಗಂಡನೊಂದಿಗೆ ಎಷ್ಟೇ ಭಿನ್ನಾಭಿಪ್ರಾಯ ಬಂದರೂ ಧನಿಯ ನಿರ್ಣಾಯಕ ಹಂತಗಳಲ್ಲಿ ಗಂಡನ ಕೈಬಿಡಲಾರಳು. ನಿರ್ಗತಿಕರಾಗಿ ತನ್ನ ಮನೆಗೆ ಬರುವ ಪರಜಾತಿಯ ಮತ್ತು ಕೆಳಜಾತಿಯ ಪರಿತ್ಯಕ್ತ ಗರ್ಭಿಣಿಯರನ್ನು ತನ್ನ ಮಕ್ಕಳಂತೆ ನೋಡಿಕೊಳ್ಳಬಲ್ಲವಳು. ತಮಗಿರುವ ಜಮೀನಿನಲ್ಲಿ ಗಂಡಹೆಂಡತಿ ಹಗಲಿರುಳೆನ್ನದೆ ದುಡಿದರೂ ಒಂದಿಲ್ಲೊಂದು ಕಾರಣಕ್ಕೆ ತಮ್ಮ ಫಸಲನ್ನು ಉಣ್ಣಲಾರದೆ ಹೋಗುವವರು. ಹಾಲು ಕರೆಯುವ ಒಂದು ಹಸು ಬೇಕು ಎನ್ನುವ ತಮ್ಮ ಜೀವಮಾನದ ಆಸೆ ಇನ್ನೇನು ಪೂರ್ತಿಯಾಗುತ್ತದೆ ಎನ್ನುವ ಹೊತ್ತಿನಲ್ಲಿ ಆಶಾಭಂಗಕ್ಕೆ ಮತ್ತು ದುರಂತಕ್ಕೆ ಸಿಲುಕುವವರು.
ಇವರ ಬದುಕಿನ ಹಿನ್ನೆಲೆಯಲ್ಲಿ ಗೋದಾನ ಕಾದಂಬರಿ ಚಲಿಸುತ್ತದೆ. ಆದರೆ ಇದು ಕೇವಲ ಅವರ ಕತೆಯಲ್ಲ. ಅವರೊಂದು ಸೂತ್ರ ಮಾತ್ರ. ಲಕ್ನೋವಿನ ಶ್ರೀಮಂತ ರಜಪೂತ ಜಮೀನುದಾರರು ಮತ್ತವರ ವಿಲಾಸಿ ಜೀವನ, ಅಲ್ಲಿಯ ದೇಶಪ್ರೇಮಿ ಸಂಪಾದಕ, ವಿದೇಶದಲ್ಲಿ ಕಲಿತುಬಂದ ಯುವ ಶ್ರೀಮಂತ ವೈದ್ಯೆ, ಅವಳ ಹಿಂದೆ ಬಿದ್ದಿರುವ ಉದ್ದಿಮೆದಾರ ಮತ್ತು ತತ್ವಶಾಸ್ತ್ರದ ಪ್ರಾಧ್ಯಾಪಕ, ಅವರೊಳಗೆಯೆ ಬರುವ ಮತ್ಸರ ಮತ್ತು ಪೈಪೋಟಿ, ಅವರ ಕುಟುಂಬಗಳ ಸಿಕ್ಕುಗಳು, ಹೀಗೆ ಕಾದಂಬರಿಯ ಗಣನೀಯ ಭಾಗ ನಗರ ಕೇಂದ್ರಿತವಾಗಿಯೂ ಇದೆ. ಬದುಕಿನ ಹಲವು ಸ್ತರಗಳನ್ನು ಕಂಡ ಮತ್ತು ಅನುಭವಿಸಿದ ವ್ಯಕ್ತಿಗಳು ಮಾತ್ರ ಇಂತಹ ವಿಸ್ತಾರವಾದ ಮತ್ತು ಹಲವು ಆಯಾಮಗಳ ಕತೆಯನ್ನು ಹೆಣೆಯಬಲ್ಲರು. ಹಾಗಾಗಿಯೇ ಇದು ಭಾರತದ ದೇಶಿಭಾಷೆಗಳ ಕಾದಂಬರಿ ಲೋಕದಲ್ಲಿ ಪ್ರಮುಖ ಮತ್ತು ಮೌಲಿಕ ಕೃತಿಯಾಗಿದೆ.
ಪ್ರೇಮಚಂದರು ಪಾತ್ರಗಳ ವೈರುಧ್ಯಗಳನ್ನು ಬಹಳ ಸಹಜವಾಗಿ ಚಿತ್ರಿಸುತ್ತಾರೆ. ತನ್ನ ಮೌಲ್ಯ ಮತ್ತು ಆದರ್ಶಗಳ ಕಾರಣಕ್ಕೆ ಈ ಪಾತ್ರ ವಿಜೃಂಭಿಸಲಿದೆ ಎಂದು ನಾವು ಭಾವಿಸುವ ವ್ಯಕ್ತಿಗಳು ಇಲ್ಲಿ ಕಾಲಪ್ರವಾಹಕ್ಕೆ ಸಿಕ್ಕು ಪತಿತರಾಗುತ್ತಾರೆ. ಹಾಗೆಯೇ ನೀಚ ಮತ್ತು ಪಾಪಿಷ್ಟ ಮನಸ್ಥಿತಿಯ ಪಾತ್ರಗಳು ಸಾಕಷ್ಟು ಅವಮಾನ ಮತ್ತು ಮಾನಸಿಕ ಹಿಂಸೆ ಅನುಭವಿಸಿ, ಮನಪರಿವರ್ತನೆಗೊಂಡು ಉದಾತ್ತರಾಗುತ್ತಾರೆ, ನಮ್ಮ ಅನುಕಂಪಕ್ಕೆ ಪಾತ್ರರಾಗುತ್ತಾರೆ. ಮಕ್ಕಳು ಹುಟ್ಟುತ್ತವೆ, ಸಾಯುತ್ತವೆ. ಆ ಪ್ರಕ್ರಿಯೆಯಲ್ಲಿ ಅಪ್ಪಅಮ್ಮರಲ್ಲಿ ಮಾತೃತ್ವ ಮತ್ತು ಮನುಷ್ಯತ್ವವನ್ನು ಜಾಗೃತಗೊಳಿಸುತ್ತವೆ.
ಪ್ರೇಮಚಂದರ ಜೀವನವೂ ಸಹ ಯಾವುದೇ ಅಸಾಧಾರಣ ಕಾದಂಬರಿಯ ಅಸಾಮಾನ್ಯ ಪಾತ್ರಕ್ಕಿಂತ ಕಡಿಮೆಯಿಲ್ಲ. ವಾರಣಾಸಿ ಭಾಗದ ಕಾಯಸ್ಥ ಸಮುದಾಯದ ಇದ್ದುದರಲ್ಲಿ ಸ್ಥಿತಿವಂತ ಎನ್ನಬಹುದಾದ ಕುಟುಂಬದಲ್ಲಿ ಹುಟ್ಟುವ ಧನಪತ್ ರೈ ಶ್ರೀವಾಸ್ತವ ತಮ್ಮ 8ನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಳ್ಳುತ್ತಾರೆ. ನಂತರ ಬರುವ ಮಲತಾಯಿಗೂ ಇವರಿಗೂ ಹೊಂದಾಣಿಕೆ ಆಗುವುದಿಲ್ಲ. ಆರಂಭದ ಶಿಕ್ಷಣ ಮದರಸಾದಲ್ಲಿ ಆದ ಕಾರಣ ಉರ್ದು ಮತ್ತು ಪರ್ಷಿಯನ್ ಭಾಷೆ ಕಲಿಯುತ್ತಾರೆ. ನಂತರ ವಾರಣಾಸಿಯಲ್ಲಿ ಹೈಸ್ಕೂಲ್ ಮುಂದುವರೆಸುತ್ತಾರೆ. ಅದೇ ಸಮಯದಲ್ಲಿ, ಅವರಿಗೆ 15 ವರ್ಷ ವಯಸ್ಸು ಆಗಿದ್ದಾಗ, ಶ್ರೀಮಂತ ಕುಟುಂಬದ ಆದರೆ ಅವರಿಗಿಂತ ಸ್ವಲ್ಪ ಹಿರಿಯಳಾಗಿದ್ದ ಹೆಣ್ಣಿನೊಂದಿಗೆ ಮದುವೆ ಮಾಡಲಾಗುತ್ತದೆ. ಈ ಹದಿಹರೆಯದವರ (teenagers) ವೈವಾಹಿಕ ಜೀವನ ಸಂತಸದಿಂದ ಕೂಡಿರಲಿಲ್ಲ.
ಮೆಟ್ರಿಕ್ಯುಲೇಷನ್ ಮುಗಿದ ನಂತರ ಧನಪತ್ ರೈ’ರ ಓದು ಸುಗಮವಾಗಿ ಸಾಗುವುದಿಲ್ಲ. ಅಷ್ಟೊತ್ತಿಗೆ ಅವರ ತಂದೆ ತೀರಿಕೊಂಡಿರುತ್ತಾರೆ. ಹಾಗಾಗಿ ಓದನ್ನು ನಿಲ್ಲಿಸಿ ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಮತ್ತು ಸ್ಥಿತಿವಂತರ ಮಕ್ಕಳಿಗೆ ಮನೆಪಾಠ ಹೇಳಿಕೊಡುವುದನ್ನು ಆರಂಭಿಸುತ್ತಾರೆ. ಸಾಕಷ್ಟು ಸಾಹಿತ್ಯ ಓದುತ್ತಾರೆ. ತಮ್ಮ 19ನೇ ವಯಸ್ಸಿನಲ್ಲಿ ಮಿಷನರಿ ಶಾಲೆಯೊಂದರಲ್ಲಿ ಶಿಕ್ಷಕ ಕೆಲಸಕ್ಕೆ ಸೇರುತ್ತಾರೆ ಮತ್ತು ಮರುವರ್ಷ ಸರ್ಕಾರಿ ಶಿಕ್ಷಕನ ನೌಕರಿ ಸಿಗುತ್ತದೆ.
ತಮ್ಮ 23 ನೇ ವಯಸ್ಸಿನಲ್ಲಿ ಪ್ರೇಮಚಂದರು “ನವಾಬ್ ರೈ” ಎನ್ನುವ ಹೆಸರಿನಲ್ಲಿ “ಅಸ್ರರ್-ಎ-ಮಾಅಬಿದ್” (ದೇವಸ್ಥಾನದ ರಹಸ್ಯ) ಎನ್ನುವ ತಮ್ಮ ಮೊದಲ ಕಾದಂಬರಿಯನ್ನು ಉರ್ದುವಿನಲ್ಲಿ ಬರೆಯುತ್ತಾರೆ ಮತ್ತು ಅದು ಉರ್ದು ಪತ್ರಿಕೆಯೊಂದರಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತದೆ. ಅಲ್ಲಿಂದ ಹಲವು ವರ್ಷಗಳ ಕಾಲ ಅವರು ಉರ್ದುವಿನಲ್ಲಿ ಸಾಹಿತ್ಯ ರಚಿಸುತ್ತಾರೆ.
ಇದೇ ಸಮಯದಲ್ಲಿ ಅವರಿಗೆ ಬೇರೆಬೇರೆ ಕಡೆ ವರ್ಗ ಆಗುತ್ತಿರುತ್ತದೆ. ಕಾನ್ಪುರ’ದಲ್ಲಿ ನೌಕರಿ ಮಾಡುತ್ತಿದ್ದಾಗ ಒಮ್ಮೆ ಬೇಸಿಗೆ ರಜೆಯಲ್ಲಿ ಊರಿಗೆ ಹೋಗುತ್ತಾರೆ. ಅಲ್ಲಿ ಕೌಟುಂಬಿಕ ಸಮಸ್ಯೆ ಬಿಗಡಾಯಿಸಿರುತ್ತದೆ. ತನ್ನ ಮಲತಾಯಿ ಮತ್ತು ಹೆಂಡತಿ ನಡುವೆ ನಡೆಯುತ್ತಿದ್ದ ಜಗಳದ ಕಾರಣಕ್ಕೆ ಇವರು ಹೆಂಡತಿಯನ್ನು ಬೈಯ್ಯುತ್ತಾರೆ. ಆಕೆ ಆತ್ಮಹತ್ಯೆಗೆ ಯತ್ನಿಸುತ್ತಾರೆ. ಅದು ವಿಫಲವಾದ ಮೇಲೆ ತವರುಮನೆಗೆ ಹೋಗಿಬಿಡುತ್ತಾರೆ ಮತ್ತು ಇವರು ಆಕೆಯನ್ನು ವಾಪಸು ಕರೆತರಲು ಹೋಗುವುದಿಲ್ಲ. ಹೀಗೆ ಪ್ರೇಮಚಂದರ ಮೊದಲ ದಾಂಪತ್ಯ ಅವರ 25ನೆಯ ವಯಸ್ಸಿಗೆ ಮುರಿದು ಬೀಳುತ್ತದೆ.
ಅದಾದ ಒಂದೆರಡು ವರ್ಷದ ನಂತರ ಪ್ರೇಮಚಂದರು ಜಮೀನುದಾರರೊಬ್ಬರ ಬಾಲವಿಧವೆ ಮಗಳು ಶಿವರಾಣಿ ದೇವಿ’ಯವರನ್ನು ಮದುವೆ ಆಗುತ್ತಾರೆ. ಆಗಿನ ಕಾಲಕ್ಕೆ ಅದು ಕ್ರಾಂತಿಕಾರಕ ನಡೆ ಮತ್ತು ಅದಕ್ಕಾಗಿ ಅವರು ಸಮಾಜದಿಂದ ಸಾಕಷ್ಟು ವಿರೋಧವನ್ನು ಎದುರಿಸುತ್ತಾರೆ.
ಆ ಸಮಯದ ಆಚೀಚಿನಲ್ಲಿ (1905ರಲ್ಲಿ) ಅವರು ಭಾರತದ ಸ್ವಾತಂತ್ರ್ಯ ಹೋರಾಟದ ರಾಷ್ಟ್ರೀಯವಾದಿ ಚಳವಳಿಯಲ್ಲಿ ಆಸಕ್ತಿ ಹೊಂದಿರುತ್ತಾರೆ. ಸರ್ಕಾರಿ ಉದ್ಯೋಗದಲ್ಲಿ ಇರುವ ಸಂದರ್ಭದಲ್ಲಿಯೇ ಅವರು ಭಾರತದ ಆಗಿನ ಸೌಮ್ಯವಾದಿ ನಾಯಕ ಗೋಪಾಲಕೃಷ್ಣ ಗೋಖಲೆ’ಯವರ ಸೌಮ್ಯಸ್ವರೂಪದ ಹೋರಾಟಗಳನ್ನು ಟೀಕಿಸಿ ಲೇಖನ ಬರೆಯುತ್ತಾರೆ ಮತ್ತು ಸ್ವಾತಂತ್ರ್ಯಕ್ಕಾಗಿ ಬಾಲಗಂಗಾಧರ ತಿಲಕ’ರ ಉಗ್ರಸ್ವರೂಪದ ಹೋರಾಟಗಳನ್ನು ಬೆಂಬಲಿಸುತ್ತಾರೆ. ಆದರೆ ಮುಂದೆ, ಇದಾದ 15 ವರ್ಷಗಳ ನಂತರ, 1921ರಲ್ಲಿ, ಗೋಖಲೆಯವರ ಪ್ರಸಿದ್ಧ ಶಿಷ್ಯ ಮತ್ತು ಅನುಯಾಯಿ ಮೋಹನದಾಸ್ ಗಾಂಧಿ ದೇಶದಲ್ಲಿ ಅಸಹಕಾರ ಚಳವಳಿ ಆರಂಭಿಸಿದ ಸಂದರ್ಭದಲ್ಲಿ, ಗೋರಖ್‌ಪುರದಲ್ಲಿ ಗಾಂಧೀಜಿಯ ಭಾಷಣವನ್ನು ಕೇಳುತ್ತಾರೆ ಮತ್ತು ಬ್ರಿಟಿಷ್ ಸರ್ಕಾರದ ನೌಕರಿಯಲ್ಲಿರುವ ಭಾರತೀಯರು ತಮ್ಮ ಸರ್ಕಾರಿ ನೌಕರಿಯನ್ನು ತ್ಯಜಿಸಬೇಕು ಎನ್ನುವ ಗಾಂಧೀಜಿಯ ಕರೆಗೆ ಓಗೊಟ್ಟು ತಮ್ಮ ಆಗಿನ ಡೆಪ್ಯುಟಿ ಇನ್ಸ್‌ಪೆಕ್ಟರ್ ಆಫ್ ಸ್ಕೂಲ್ಸ್ ಹುದ್ದೆಗೆ ರಾಜೀನಾಮೆ ಕೊಡುತ್ತಾರೆ.
ಇದರ ನಡುವೆ ಅವರ ಬರವಣಿಗೆ ನಿರಂತರವಾಗಿ ನಡೆಯುತ್ತಿರುತ್ತದೆ. 1907ರಲ್ಲಿ “ನವಾಬ್ ರೈ”ರವರ “ಸೋಜ್-ಎ-ವತನ್” ಎನ್ನುವ ಉರ್ದು ಕಥಾಸಂಕಲನ ಪ್ರಕಟವಾಗುತ್ತದೆ. ಅದರಲ್ಲಿ ಭಾರತೀಯರನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡಲು ಪ್ರೇರೇಪಿಸುವ ಕೆಲವು ಕತೆಗಳು ಇರುತ್ತವೆ ಮತ್ತು ಅದೇ ಕಾರಣಕ್ಕೆ ವಿವಾದಕ್ಕೆ ಗುರಿಯಾಗಿ ಬ್ರಿಟಿಷ್ ಸರ್ಕಾರ ಆ ಪುಸ್ತಕವನ್ನು 1909ರಲ್ಲಿ ನಿಷೇಧಿಸುತ್ತದೆ ಮತ್ತು ಆ ಸಮಯದಲ್ಲಿ ಹಮಿರ್‌ಪುರದಲ್ಲಿ ಸಹಾಯಕ ಡೆಪ್ಯುಟಿ ಇನ್ಸ್‌ಪೆಕ್ಟರ್ ಆಫ್ ಸ್ಕೂಲ್ಸ್ ಆಗಿ ಕೆಲಸ ಮಾಡುತ್ತಿದ್ದ ಪ್ರೇಮಚಂದರ ಮನೆಯ ಮೇಲೆ ಬ್ರಿಟಿಷ್ ಅಧಿಕಾರಿಗಳು ದಾಳಿ ಮಾಡಿ ಮನೆಯಲ್ಲಿ ಸಿಕ್ಕ ಐದುನೂರು “ಸೋಜ್-ಎ-ವತನ್” ಪುಸ್ತಕಗಳನ್ನು ವಶಪಡಿಸಿಕೊಂಡು ಅವುಗಳನ್ನು ಸುಟ್ಟು ಹಾಕುತ್ತಾರೆ. ಹಾಗಾಗಿ ಧನಪತ್ ರೈ ಶ್ರೀವಾಸ್ತವ’ರು ಅಲ್ಲಿಂದ ಮುಂದಕ್ಕೆ ಪ್ರೇಮ್‌ಚಂದ್ ಎನ್ನುವ ಕಾವ್ಯನಾಮದಲ್ಲಿ ಬರೆಯಲು ಆರಂಭಿಸುತ್ತಾರೆ.
ಅಷ್ಟೊತ್ತಿಗೆ ಉರ್ದುವಿನ ಪ್ರಮುಖ ಸಾಹಿತಿಗಳಲ್ಲಿ ಒಬ್ಬರೆಂದು ಖ್ಯಾತ ರಾಗಿದ್ದ ಪ್ರೇಮಚಂದ್, 1915ರಲ್ಲಿ ಹಿಂದಿ ಭಾಷೆಯ ತಮ್ಮ ಮೊದಲ ಕತೆಯನ್ನು ಪ್ರಕಟಿಸುತ್ತಾರೆ. ಅಲ್ಲಿಂದ ಮುಂದಕ್ಕೆ ಇತರೆ ಭಾಷೆಗಳ ಹಲವು ಸಾಹಿತ್ಯಕ ಕೃತಿಗಳನ್ನು ಹಿಂದಿಗೆ ಅನುವಾದಿಸುತ್ತಾರೆ.
1919ರಲ್ಲಿ ಪ್ರೇಮಚಂದರ ಮೊದಲ ಪ್ರಮುಖ ಹಿಂದಿ ಕಾದಂಬರಿ “ಸೇವಾ ಸದನ್” ಪ್ರಕಟವಾಗುತ್ತದೆ. ಪ್ರೆಮರಾಹಿತ್ಯ ದಾಂಪತ್ಯದಲ್ಲಿ ಸಿಲುಕಿ ನಲುಗುವ ಶ್ರೀಮಂತ ಹೆಣ್ಣೊಬ್ಬಳು ಮನೆಯಿಂದ ಹೊರಹಾಕಲ್ಪಟ್ಟಾಗ ವಿಧಿಯಿಲ್ಲದೆ ಶ್ರೀಮಂತರ ವೇಶ್ಯೆಯಾಗಿ ಜೀವನ ಕಟ್ಟಿಕೊಳ್ಳುವ ಮತ್ತು ತನ್ನ ಶ್ರೀಮಂತಿಕೆಯನ್ನು ವೇಶ್ಯೆಯರ ಅನಾಥ ಹೆಣ್ಣುಮಕ್ಕಳನ್ನು ಪೋಷಿಸಲು ಬಳಸುವ ಕತೆ ಇದಾಗಿರುತ್ತದೆ. ಇದನ್ನು ಮೊದಲಿಗೆ ಉರ್ದುವಿನಲ್ಲಿ ಬರೆದಿದ್ದರೂ ಮೊದಲು ಪ್ರಕಟವಾಗುವುದು ಹಿಂದಿಯಲ್ಲಿ. ಈ ಕಾದಂಬರಿ ಪ್ರೇಮಚಂದರಿಗೆ ಸಾಕಷ್ಟು ಕೀರ್ತಿಯನ್ನು ತರುತ್ತದೆ. (ಈ ಕಾದಂಬರಿ ಪ್ರಕಟವಾದ 19 ವರ್ಷಗಳ ನಂತರ ಅದನ್ನು ತಮಿಳಿನಲ್ಲಿ “ಸೇವಾಸದನಮ್” ಎನ್ನುವ ಹೆಸರಿನಲ್ಲಿ ಸಿನೆಮಾ ಮಾಡಲಾಗುತ್ತದೆ ಮತ್ತು ಎಮ್.ಎಸ್.ಸುಬ್ಬುಲಕ್ಷ್ಮಿ ಅದರಲ್ಲಿ ನಾಯಕಿಯ ಪಾತ್ರ ವಹಿಸುತ್ತಾರೆ.)
ಗಾಂಧಿಯ ಕರೆಗೆ ಓಗೊಟ್ಟು 1921ರಲ್ಲಿ ಸರ್ಕಾರಿ ನೌಕರಿಯನ್ನು ತ್ಯಜಿಸುವ ಪ್ರೇಮಚಂದ್, ನಂತರ ತಮ್ಮ ಕುಟುಂಬಸಮೇತ ವಾರಣಾಸಿಗೆ ಬಂದು ನೆಲೆಸುತ್ತಾರೆ ಮತ್ತು ಪೂರ್ಣಾವಧಿ ಸಾಹಿತ್ಯ ಕೃಷಿಯಲ್ಲಿ ತೊಡಗುತ್ತಾರೆ. 1923ರಲ್ಲಿ ಕಾಶಿಯಲ್ಲಿ “ಸರಸ್ವತಿ ಪ್ರೆಸ್” ಎನ್ನುವ ಮುದ್ರಣಾಲಯ ಸ್ಥಾಪಿಸುತ್ತಾರೆ. ತಮ್ಮ ಅನಾರೋಗ್ಯ ಮತ್ತು ಲಾಭದಾಯಕವಾಗಿ ನಡೆಯದ ಪ್ರೆಸ್ಸಿನ ಕಾರಣ ಅವರು ಕೊನೆಯತನಕವೂ ಹಣಕಾಸಿನ ಸಮಸ್ಯೆ ಎದುರಿಸುತ್ತಾರೆ.
ವಾರಣಾಸಿಗೆ ಬಂದ ನಂತರ ಪ್ರೇಮಚಂದರ ಅತ್ಯುತ್ತಮ ಸಾಹಿತ್ಯಕ ಮೌಲ್ಯದ ಹಿಂದಿ ಕಾದಂಬರಿಗಳು ರಚಿಸಲ್ಪಡುತ್ತವೆ. ರಂಗಭೂಮಿ, ನಿರ್ಮಲ, ಪ್ರತಿಗ್ಯ, ಗಬನ್, ಕರ್ಮಭೂಮಿ, ಮತ್ತು ಗೋದಾನ್ ಈ ಅವಧಿಯಲ್ಲಿ ರಚಿಸಲ್ಪಟ್ಟ ಕಾದಂಬರಿಗಳು.
ಇದೇ ಅವಧಿಯಲ್ಲಿ ಪ್ರೇಮಚಂದರು ಕೆಲವು ವಾರಪತ್ರಿಕೆಗಳ ಸಂಪಾದಕರಾಗಿ ಕೆಲಸ ಮಾಡುತ್ತಾರೆ. ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಪ್ರೇರೇಪಿಸುವ ಹಿನ್ನೆಲೆಯ ವಾರಪತ್ರಿಕೆಗಳಾಗಿದ್ದರೂ ಅವು ಸದಾ ನಷ್ಟದಲ್ಲಿ ನಡೆಯುತ್ತವೆ. ಆ ಅವಧಿಯಲ್ಲಿ ಒಂದೆರಡು ಕಡೆ ಶಿಕ್ಷರಾಗಿಯೂ ಕೆಲಸ ಮಾಡುತ್ತಾರೆ, ಆದರೆ ಅವೆಲ್ಲವೂ ಕಡಿಮೆ ಅವಧಿಯ ನೌಕರಿ ಆಗಿರುತ್ತದೆ. ಪ್ರೆಸ್ ಸಹ ನಷ್ಟದಲ್ಲಿರುತ್ತದೆ.
ಈ ಸಮಯದಲ್ಲಿ, 1934ರಲ್ಲಿ, ಪ್ರೇಮಚಂದರು ಸಿನೆಮಾಗಳಿಗೆ ಕೆಲಸ ಮಾಡಲು ಮುಂಬಯಿಗೆ ಬರುತ್ತಾರೆ. ವರ್ಷಕ್ಕೆ 8000 ರೂಪಾಯಿ ಸಂಬಳದ ಒಪ್ಪಂದದ ಮೇರೆಗೆ ಅಜಂತಾ ಸಿನಿಟೋನ್ ನಿರ್ಮಾಣ ಸಂಸ್ಥೆಗೆ ಚಿತ್ರಕತೆಗಳನ್ನು ಬರೆದು ಕೊಡುವ ಕೆಲಸ ಅದು. ಅವರ ಚಿತ್ರಕತೆಯ ಮೊದಲ ಚಿತ್ರ “ಮಜ್ದೂರ್”. ಆದರೆ ಅದು ಕಾರ್ಮಿಕರನ್ನು ಹರತಾಳ ಮಾಡಲು ಪ್ರೇರೇಪಿಸುತ್ತದೆ ಎನ್ನುವ ಕಾರಣ ನೀಡಿ, ಬಿಡುಗಡೆಯಾದ ಕೆಲವೇ ದಿನಗಳಿಗೆ ಸರ್ಕಾರ ಅದನ್ನು ನಿಷೇಧಿಸುತ್ತದೆ. ಈ ಸಿನೆಮಾದ ಕತೆಯಿಂದ ಯಾವ ಕಾರ್ಮಿಕರು ಪ್ರೇರೇಪಣೆ ಪಡೆದರೋ ಇಲ್ಲವೋ, ಸ್ವತಃ ಪ್ರೇಮಚಂದರ ವಾರಣಾಸಿಯ “ಸರಸ್ವತಿ ಪ್ರೆಸ್”ನ ಕಾರ್ಮಿಕರನ್ನಂತೂ ಅದು ಪ್ರೇರೇಪಿಸುತ್ತದೆ ಮತ್ತು ಅವರು ತಮ್ಮ ಬಾಕಿ ಇರುವ ಸಂಬಳಕ್ಕಾಗಿ ಮುಷ್ಕರ ಹೂಡುತ್ತಾರೆ. ಅಷ್ಟೊತ್ತಿಗೆ ಮುಂಬಯಿಯ ಅಸಾಹಿತ್ಯಕ ಮತ್ತು ವ್ಯಾಪಾರಿ ಮನೋಭಾವದ ವಾತಾವರಣದಿಂದ ಬೇಸತ್ತ ಪ್ರೇಮಚಂದರು, ತಮ್ಮ ವಾರ್ಷಿಕ ಒಪ್ಪಂದದ ಅವಧಿ ಮುಗಿಯುವ ಮೊದಲೇ, 1935ರ ಏಪ್ರಿಲ್‌ನಲ್ಲಿ ಮುಂಬಯಿಯಿಂದ ಅಲಹಾಬಾದ್‌ಗೆ ಮತ್ತು ತದನಂತರ ವಾರಣಾಸಿಗೆ ವಾಪಸಾಗುತ್ತಾರೆ.
1936 ರಲ್ಲಿ “ಗೋದಾನ್” ಕಾದಂಬರಿ ಪ್ರಕಟವಾಗುತ್ತದೆ. ಅದೇ ವರ್ಷ ಲಕ್ನೋದಲ್ಲಿ ಆರಂಭವಾದ “ಪ್ರಗತಿಪರ ಲೇಖಕರ ಸಂಘ”ದ ಮೊದಲ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಆದರೆ ಕೆಲಕಾಲದಲ್ಲಿಯೆ ತೀವ್ರ ಅನಾರೋಗ್ಯಕ್ಕೆ ತುತ್ತಾಗುವ ಪ್ರೇಮಚಂದರು ಅಕ್ಟೋಬರ್ 8, 1936ರಂದು, ತಮ್ಮ 56ನೆಯ ವಯಸ್ಸಿನಲ್ಲಿ ನಿಧನರಾಗುತ್ತಾರೆ.
ಹಿಂದಿಯ ಅತಿದೊಡ್ಡ ಸಾಹಿತಿಗಳಲ್ಲಿ ಒಬ್ಬರಾದ ಪ್ರೇಮಚಂದರ ಪ್ರಭಾವ ವ್ಯಾಪಕವಾದದ್ದು. ಕಾಲಾಂತರದಲ್ಲಿ ಅವರ ಅನೇಕ ಸಣ್ಣಕತೆಗಳು ಮತ್ತು ಕಾದಂಬರಿಗಳು ಚಲನಚಿತ್ರಗಳಾಗಿವೆ ಮತ್ತು ದೂರದರ್ಶನದಲ್ಲಿ ಧಾರಾವಾಹಿಗಳಾಗಿವೆ. ಅವರ “ಶತರಂಜ್ ಕೆ ಖಿಲಾಡಿ” ಸಣ್ಣಕತೆಯನ್ನು ಸತ್ಯಜಿತ್ ರೇ’ಯವರು ಅದೇ ಹೆಸರಿನಲ್ಲಿ ಹಿಂದಿಯಲ್ಲಿ ಸಿನೆಮಾ ಮಾಡುತ್ತಾರೆ ಮತ್ತು ಆ ಚಲನಚಿತ್ರಕ್ಕೆ “ಹಿಂದಿಯ ಅತ್ಯುತ್ತಮ ಚಲನಚಿತ್ರ ರಾಷ್ಟ್ರೀಯ ಪುರಸ್ಕಾರ” ಲಭಿಸುತ್ತದೆ.
ನನಗೆ ಇತ್ತೀಚಿನವರೆಗೂ ಪ್ರೇಮಚಂದರ ಯಾವ ಕೃತಿಯೂ ಕನ್ನಡದಲ್ಲಿ ಓದಲು ಸಿಕ್ಕಿರಲಿಲ್ಲ. ಬಹುಶಃ ನಾಲ್ಕೈದು ವರ್ಷದ ಹಿಂದೆ “ಗೋದಾನ” ಕಾದಂಬರಿಯ ಇಂಗ್ಲಿಷ್ ಅನುವಾದವನ್ನು ಕೊಂಡುತಂದಿದ್ದೆ. ಆದರೆ ದೇಶಿಭಾಷೆಗಳ ಸಾಹಿತ್ಯವನ್ನು ಇಂಗ್ಲಿಷ್‌ನಲ್ಲಿ ಓದಲು ಇಷ್ಟವಿಲ್ಲದೆ ಅದನ್ನು ತೆರೆದು ನೋಡಲೂ ಹೋಗಿರಲಿಲ್ಲ. ತಿಂಗಳ ಹಿಂದೆ ನಮ್ಮ ಮನೆಯ ಬಳಿ ಇರುವ ರಾಷ್ಟ್ರೀಯ ಕ್ರೀಡಾಗ್ರಾಮದ ಸಾರ್ವಜನಿಕ ಗ್ರಂಥಾಲಯದಲ್ಲಿ ಕನ್ನಡ ಅನುವಾದ ಸಿಕ್ಕಿತು. ಆಗಾಗ್ಗೆ ಓದುತ್ತಿದ್ದೆ, ಆದರೆ ಕಾರಣಾಂತರಗಳಿಂದ ಮುಂದಕ್ಕೆ ಹೋಗುತ್ತಿರಲಿಲ್ಲ. ದೈಹಿಕ ಸಮಸ್ಯೆಯೊಂದರ ಕಾರಣ ನಾಲ್ಕು ದಿನದ ಹಿಂದೆ ಆಯುರ್ವೇದೀಯ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದೇನೆ. ಬಿಡುವಿನ ಸಮಯ ಬಳಸಿಕೊಂಡು ಪಟ್ಟು ಹಿಡಿದು ನೆನ್ನೆ ಗೋದಾನ’ವನ್ನು ಓದಿ ಮುಗಿಸಿದೆ. ಭಾರತೀಯ ಸಾಹಿತ್ಯದಲ್ಲಿ ಅದೆಷ್ಟು ಅನರ್ಘ್ಯ ರತ್ನಗಳಿವೆ! ಅದರಲ್ಲಿಯೂ 20ನೆಯ ಶತಮಾನದ ಭಾರತೀಯ ಸಾಹಿತ್ಯ ಅತ್ಯಮೋಘ. ಎಂತೆಂತಹ ಪ್ರತಿಭಾವಂತರು ಮತ್ತು ಮಹತ್ವಾಕಾಂಕ್ಷಿ ಲೇಖಕರು ಇದ್ದರು ಆಗ!?
ಗೋದಾನ’ವನ್ನು ಕನ್ನಡಕ್ಕೆ ಅನುವಾದಿಸಿರುವವರು ಡಾ. ಎ. ಜಾನಕಿ. ಬಹಳ ಉತ್ತಮವಾಗಿ ಮತ್ತು ಸಶಕ್ತವಾಗಿ ಅನುವಾದಿಸಿದ್ದಾರೆ. ಶಿಷ್ಟ ಭಾಷೆ ಮತ್ತು ಗ್ರಾಮೀಣ ಸೊಗಡಿನ ಭಾಷೆ, ಹೀಗೆ ಎರಡೂ ಪ್ರಕಾರಗಳನ್ನು ಅನುವಾದದಲ್ಲಿಯೂ ಉಳಿಸಿಕೊಂಡು ಕೃತಿಯ ಮೌಲ್ಯವನ್ನು ಹೆಚ್ಚಿಸಿದ್ದಾರೆ ಮತ್ತು ಸಾಧ್ಯವಾದಷ್ಟು ಸ್ಥಳೀಯವಾಗಿಸಿದ್ದಾರೆ. ಮೈಸೂರಿನ “ಭಾರತೀ ಪ್ರಕಾಶನ”ದವರು 2008ರಲ್ಲಿ ಈ ಕನ್ನಡ “ಗೋದಾನ”ವನ್ನು ಪ್ರಕಟಿಸಿದ್ದಾರೆ.
“ಗೋದಾನ” ಎನ್ನುವ ಹೆಸರು ಕಾದಂಬರಿಯ ಕೊನೆಯ ತನಕವೂ ಓದಿನ ಕುತೂಹಲವನ್ನು ಹಿಡಿದಿಟ್ಟುಕೊಳ್ಳಲು ಸಹಕರಿಸುವುದು ಈ ಕಾದಂಬರಿಯ ಇನ್ನೊಂದು ವಿಶೇಷ. ಮನೆಗೆ ಹಾಲು ಕರೆಯುವ ಹಸುವೊಂದನ್ನು ಕೊಳ್ಳಬೇಕು ಎಂದು ಹಂಬಲಿಸುವ ಬಡರೈತನೊಬ್ಬ ಗೋದಾನ ಮಾಡಲು ಹೇಗೆ ಸಾಧ್ಯ ಎನ್ನುವುದು ನಮ್ಮನ್ನು ಕಾಡುತ್ತಿರುತ್ತದೆ ಮತ್ತು ಕಾದಂಬರಿಯ ಅಂತಿಮ ಪುಟಗಳು ಬರುತ್ತಿರುವಂತೆ ಆ ಕುತೂಹಲ ಹೆಚ್ಚುತ್ತಾ ಹೋಗುತ್ತದೆ. ಕಾದಂಬರಿಯೊಂದರ ಹೆಸರನ್ನೂ ಎಷ್ಟು ಸಶಕ್ತವಾಗಿ ಕಥನಕ್ರಿಯೆಯಲ್ಲಿ ಬಳಸಬಹುದು ಎಂದು ಸಾರುವ ಕೆಲವೇ ಕಾದಂಬರಿಗಳಲ್ಲಿ “ಗೋದಾನ”ವೂ ಒಂದು.
ಭಾರತದ ಈ ಅಮೂಲ್ಯ ಸಾಹಿತ್ಯ ಕೃತಿಯನ್ನು ಸಾಧ್ಯವಾದರೆ ನೀವೂ ದಯವಿಟ್ಟು ಓದಿ. ಇಂದಿಗೂ ಅಷ್ಟೇನೂ ಬದಲಾಗದ ಭಾರತದ ರೈತಾಪಿ ಜನರಿಗಾಗಿ ಒಂದಷ್ಟು ಮಿಡಿಯಿರಿ. ಅತ್ಯಗತ್ಯವಾಗಿ ಆಗಬೇಕಾದ ಸಾಮಾಜಿಕ ಬದಲಾವಣೆಗಳನ್ನು ಬೆಂಬಲಿಸಿ.
ಮುನ್ಶಿ ಪ್ರೇಮಚಂದರಿಗೆ ನಮನಗಳು.
– ರವಿ ಕೃಷ್ಣಾರೆಡ್ಡಿ, ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ



