ಮನುಷ್ಯರು ಮಾರಾಟದ ಸರಕಾಗುವ ಕ್ರೌರ್ಯ ಮತ್ತು ಅಮಾನವೀಯತೆ ಅನಾವರಣಗೊಳಿಸುವ ಸದರಬಜಾರ್

2 years ago

ಡಿ.ಎಸ್.ಚೌಗಲೆ ಇವರು ಸದರಬಜಾರ್ ಎಂಬ ಈ ಅಪೂರ್ವ ಕಾದಂಬರಿಯನ್ನು ಕಳಿಸಿದ್ದಾರೆ. ಮೊನ್ನೆ ತಾನೆ ತಮಿಳು ಗಡಿನಾಡಿನಲ್ಲಿದ್ದ ಮಲೆಯ‌ ಮಹಾದೇಶ್ವರ ಬೆಟ್ಟ ಮತ್ತು ಬಿಳಿಗಿರಿರಂಗನ ಬೆಟ್ಟದ ನಡುವೆ ಇದ್ದ ಕನ್ನಡ ನಾಡಿನ ಹಳ್ಳಿ ಪೊನ್ನಾಚಿಯ ಕುರಿತು ಸ್ವಾಮಿ ಪೊನ್ನಾಚಿ ಬರೆದ ಅಪೂರ್ವ ಕೃತಿ “ಕಾಡು ಹುಡುಗನ ಹಾಡು ಪಾಡು” ಓದಿದೆ‌. ಇದೀಗ ಮಹಾರಾಷ್ಟ್ರದ ಗಡಿಪ್ರದೇಶದಲ್ಲಿದ್ದ ಇಚಲಕರಂಜಿ, ಅಬ್ದುಲ್ ಲಾಟ ಹಾಗೂ ಉತ್ತರ ಕರ್ನಾಟಕದ ಗಡಿ ಭಾಗವಾದ ಈ ಪ್ರದೇಶಗಳ ಕನ್ನಡ ನಾಡಿನ ಮತ್ತು ಗಡಿಯಾಚೆಯ ನಾಡಿನ ಕುರಿತು ಡಿ. ಎಸ್.ಚೌಗಲೆ ಅವರ ಕಾದಂಬರಿ ಓದಿದೆ.

ಈ ಎರಡೂ ಗಡಿ ಪ್ರದೇಶಗಳಲ್ಲಿ ಕನ್ನಡ ಭಾಷೆಯು ಅಲಕ್ಷ್ಯಕ್ಕೆ ಒಳಗಾಗಿದೆ ಎಂಬ ದುರಂತವನ್ನು ನಾವು ಕಾಣುತ್ತೇವೆ‌. ಈ ಎರಡೂ ಕೃತಿಗಳೂ ಆಯಾ ಪ್ರದೇಶಗಳ ನಮಗೆ ಪರಿಚಯವಿಲ್ಲದ ಬದುಕುಗಳನ್ನು ಅಲ್ಲಿನ ಸಾಮಾಜಿಕ ಲೋಕಗಳನ್ನು ತೆರೆದಿಡುತ್ತವೆ‌.

ಗಡಿ ನಾಡಿನ ಜನರಿಗೆ ಗಡಿನಾಡಿನ ಆಚೆಯ ಜನರೊಡನೆ ಹೊಕ್ಕುಬಳಕೆಯ ಸಂಬಂಧವಿದೆ. ಗಂಡ ಕನ್ನಡ ಮಾತಾಡಿದರೆ ಹೆಂಡತಿ ಮರಾಠಿಯಲ್ಲಿ ಉತ್ತರಿಸುತ್ತಾಳೆ‌‌ “ನೀವು ಹಾಸಿಗ್ಯಾಗ್ ಯಾವ್ ಭಾಷೆ ಮಾತಾಡ್ತಿರಲೆ?” ಎಂದು ಈ ದ್ವಿಭಾಷಿ ದಂಪತಿಗಳಿಗೆ ಕೇಳಿದಾಗ “ಮೌನದ ಭಾಷೆ ಮತ್ತಿನ್ಯಾವ ಭಾಷೆ?” ಎಂದು ಉತ್ತರಿಸುತ್ತಾನೆ ಗಂಡ‌.

ಈ ಕೃತಿಯ ಹೆಚ್ಚಿನ ಪಾತ್ರಗಳು ಆಡುವ ಭಾಷೆ ಗಡಿನಾಡಿನ ಜನರು ಮಾತಾಡುವ ಮರಾಠಿ ಮಿಶ್ರಿತ ಕನ್ನಡ‌‌‌. ಉತ್ತರ ಕರ್ನಾಟಕದ ಜವಾರಿ ಭಾಷೆ. ಈ ಕಾದಂಬರಿಯ ಪಾತ್ರಗಳು ಉತ್ತರ ಕರ್ನಾಟಕದ ಮಿಶ್ರ ಭಾಷೆ ಮತ್ತು ಮಿಶ್ರ ಸಂಸ್ಕೃತಿಗಳ ಭಾಷೆಯನ್ನು ಆಡುತ್ತಾರೆ. ಆದರೆ ಯಾವ ಓದುಗನಿಗೂ ಪಾತ್ರಗಳ ಆಡುವ ಮಾತುಗಳ ಅರ್ಥ ಓದುಗರು ಕರ್ನಾಟಕದ ಯಾವ ಭಾಗದವರಿಗೂ ಅರ್ಥವಾಗುತ್ತದೆ‌‌‌.

ಉತ್ತರ ಕರ್ನಾಟಕ ಅತ್ಯಂತ ಹಿಂದುಳಿದ ಪ್ರದೇಶ. ಅದರ ಅಭಿವೃದ್ಧಿ ಸ್ವಾತಂತ್ರ್ಯ ಬಂದು ೭೮ ವರ್ಷಗಳು ಕಳೆದರೂ ಆಗಿಲ್ಲ. ಯಾಕೆ? ಇದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಈ ಕಾದಂಬರಿ ನಮಗೆ ಸಹಾಯ ಮಾಡುತ್ತದೆ‌ ಹಾಗಾಗಿ ಈ ಕಾದಂಬರಿಗೆ ಸಾಂಸ್ಕೃತಿಕ ಮಹತ್ವವಿದೆ‌.

ಕಾದಂಬರಿಕಾರರು “ಕಾದಂಬರಿಗೆ ಎರಡು ನುಡಿ” ಬರಹದಲ್ಲಿ ಹೀಗೆ ಬರೆಯುತ್ತಾರೆ.:” ಗಡಿಯಂಚಿನ ನನ್ನ ಗ್ರಾಮೀಣ ಅನುಭವವನ್ನು ಒಂದು ಬೃಹತ್ ಕ್ಯಾನ್ ವಾಸ್ ನ ಕಾದಂಬರಿಯಲ್ಲಿ ರಚಿಸುವ ಆಸೆ ಹಲವಾರು ವರ್ಷಗಳಿಂದಲೂ ನನ್ನೊಳಗೆ ಬತ್ತದೇ ಒರತೆಯಾಗಿ ಜಿನುಗುತ್ತಲೇ ಇದೆ.

ಸದರಬಜಾರ್ ಕಾದಂಬರಿಯ ವಸ್ತು ಎಂಬತ್ತನೆಯ ದಶಕದಲ್ಲಿಯದು‌‌. ಅಂದಿನ‌ ಗಡಿಯ ಈಚೆ ಮತ್ತು ಗಡಿಯ ಆಚೆಯ ಬದುಕು ಮತ್ತು ಸಮಾಜವು ಭಾಷೆಯ ಎಲ್ಲೆಯನ್ನು ಮೀರಿ ಜೀವಿಸಿವೆ. ಆ ಬದುಕಿನ ಹಲವು ಮಗ್ಗುಲಗಳ ಮಾನವೀ ಸಂಘರ್ಷ, ಅಸ್ಮಿತೆ, ಅಸಹಾಯಕ ಸ್ಥಿತಿಗಳು, ಹಸಿವು, ಕಾಮ, ಉದ್ಯೋಗ, ರಾಜಕಾರಣ, ಅರ್ಥಕಾರಣಗಳನ್ನು ಹಿಡಿದಿಡುವ ಪ್ರಾಮಾಣಿಕ ಯತ್ನವು ಈ ಕಾದಂಬರಿಯಲ್ಲಿದೆ‌.

ಕಥಾನಾಯಕ ಒಂದು ಅಸೈನ್ ಮೆಂಟಿಗಾಗಿ ಗಡಿಯ ಆಚೆ ಸಂಚರಿಸುತ್ತಾನೆ. ಆತನು ಅನುಭವಿಸಿದ ಅನುಭವಿಸುತ್ತ ಸಾಗುವ ಬದುಕು “ಟ್ರೆವಲಾಗ್” ಮೂಲಕ ತೆರೆದುಕೊಳ್ಳುತ್ತ ಸಾಗುತ್ತದೆ‌. ಬೆಡಗಿನಹಳ್ಳಿಯಿಂದ ಸದರಬಜಾರ್ ತನಕ.

ಸದರ ಎಂದರೆ ಮುಖ್ಯ, ಪ್ರಧಾನವೆಂದರ್ಥ. ಮುಖಿಯಾ, ಪ್ರಮುಖ ಎಂತಲೂ ಆಗುತ್ತದೆ‌. ಇದು ಪರ್ಷಿಯನ್ ಪದ. ಕಾಲಾಂತರದಲ್ಲಿ ಸದರ ಪದ ಬಜಾರ್ ಸಂಗಡ ಕೂಡಿ ಭಿನ್ನ ರೂಪಾರ್ಥಕ್ಕೆ ಹೊರಳಿರಬಹುದು. ದೇಶದ ಬಹುತೇಕ ಸದರ್ ಬಜಾರ್ ಗಳು ವೇಶ್ಯೆಯರ ಅಡ್ಡಾಗಳಾಗಿರಬಹುದು‌.

ಕರ್ನಾಟಕ ಮಹಾರಾಷ್ಟ್ರಗಳ ಗಡಿಭಾಗ ಇಚಲಕರಂಜಿ ಅಬ್ದುಲ್ಲಾಟ್ ಇಲ್ಲಿನ ಜವಳಿ ಮತ್ತು ಸಕ್ಕರೆ ಕಾರಖಾನೆಗಳ ಕೇಂದ್ರ‌ ಇಲ್ಲಿಗೆ ಕೆಲಸ ಹುಡುಕಿಕೊಂಡು ಬಂದವರು  ಬರಗಾಲದ ಬದುಕನ್ನು ಸಹಿಸಲಾರದೆ ಗುಳೆ ಹೊರಟು ಬಂದವರು‌‌ ಈ ಕಾರಖಾನೆಗಳಿಂದ ಬೆಳೆದ ಕಾರ್ಮಿಕರ ವಸಾಹತುಗಳಂತೆ ಬೆಳೆದ ಊರುಗಳು. ಕುಟುಂಬ ಮತ್ತು ಸಮಾಜದ ದೌರ್ಜನ್ಯಗಳಿಂದಾಗಿ ಓಡಿ ಬಂದು ಇಲ್ಲಿ ವೇಶ್ಯೆಯರಾಗಿ ಬದುಕುತ್ತಿರುವವರು‌.

ಇವರು ಮಾತಾಡುವ ಭಾಷೆ ಮರಾಠಿ ಮತ್ತು ಕನ್ನಡ ಭಾಷೆಯ ಹೈಬ್ರಿಡ್ ಭಾಷೆ. ಕೆಲವರು ಮಾತ್ರ ಕನ್ನಡ ಭಾಷೆಯನ್ನು ಮರೆಯದೆ ಬಳಸುವವರು. ಹಲವರು ಕ‌ನ್ನಡವನ್ನೇ ಮರೆತು ಮರಾಠಿಯನ್ನೇ ಮಾತಾಡುತ್ತ ಶಿವಸೇನೆಯನ್ನು ಸೇರಿದವರು‌‌.

ಇಲ್ಲಿ ಕಾದಂಬರಿಕಾರ ಇಲ್ಲಿನ ಕೊಳೆಗೇರಿ, ವೇಶ್ಯಾವಾಟಿಕೆ, ಶ್ರಮಜೀವಿಗಳ ಬಡತನ, ಬಡತನ ದೌರ್ಜನ್ಯ ಅತ್ಯಾಚಾರ ಶೋಷಣೆಗಳ ಎಡೆಯಲ್ಲಿಯೂ ಬದುಕಬೇಕೆನ್ನುವ ಈ ಜೀವನಪ್ರೀತಿ ಈ ಎಲ್ಲವುಗಳ ಚಿತ್ರಣ ಸಶಕ್ತ ನಿರೂಪಣಾ ಶೈಲಿಯಲ್ಲಿ ಹಿಡಿದಿಡಲಾಗಿವೆ‌.

ಹೆಚ್ಚಿನ ಹೆಣ್ಣು ಪಾತ್ರಗಳು ಪುರುಷರ ದೌರ್ಜನ್ಯ, ಅತ್ಯಾಚಾರ, ಪುರುಷರ ಅಲಕ್ಷ್ಯಕ್ಕೆ ತುತ್ತಾಗಿ ಹಲವರು ವೇಶ್ಯಾವೃತ್ತಿಯನ್ನು ಬದುಕುವ ಅಥವಾ ಬಿಡುಗಡೆಯ ದಾರಿಯಾಗಿ ಕಂಡುಕೊಂಡವರು. ಗೃಹಿಣಿಯಾದ ಪದ್ಮಾ ಕುಡುಕ ಗಂಡನ ನಿರ್ಲಕ್ಷ್ಯಕ್ಕೆ ಗುರಿಯಾಗಿ ಮನೆಯ ಕೆಲಸದಾಳಿನಲ್ಲಿ ಭಾವನಾತ್ಮಕ ಸಂಬಂಧವನ್ನು ಕಂಡುಕೊಂಡವಳು. ಗಂಡ ಕೆಲಸದವನು ಮತ್ತು ಹೆಂಡತಿಯ ಅನೈತಿಕ ಸಂಬಂಧ ಕಣ್ಣಾರೆ ಕಂಡು ಕೊಲ್ಲಲು ಮುಂದಾದಾಗ ಗಂಡನನ್ನೇ ಕೆಲಸದವನು ಕುತ್ತಿಗೆ ಅಮುಕಿ ಕೊಲ್ಲುತ್ತಾನೆ. ಅವಳು ಆ ಕೆಲಸದವನೊಂದಿಗೆ ಓಡಿ ಹೋಗಿ ಸದರ ಬಜಾರಿನಲ್ಲಿ ವೇಶ್ಯಾವಾಟಿಕೆ ನಡೆಸಿ ಜೀವನ ಸಾಗಿಸುತ್ತಿರುತ್ತಾಳೆ. ಅವಳು ಹೇಳುತ್ತಾಳೆ-  “ಹೆಂಗಸರಿಗೆ ಬಯಕೆಗಳಿಲ್ಲವೆ?”

ಈ ಕಾದಂಬರಿ ರಾಜಕಾರಣಿಗಳು ಯಾವ ರೀತಿಯಲ್ಲಿ ಜನಸಾಮಾನ್ಯರನ್ನು ಮೋಸಗೊಳಿಸುತ್ತಾರೆ ಎಂಬ ಚಿತ್ರಣವನ್ನೂ ಕೊಡುತ್ತದೆ.

ಕಾದಂಬರಿಯಲ್ಲಿ ಮುಖ್ಯ ಕಥೆಗೆ ಪೂರಕವಾಗುವ ಅನೇಕ ಉಪಕಥೆಗಳಿವೆ. ಮುಖ್ಯ ಪಾತ್ರ ಶಿವು ಭೇಟಿಯಾಗುವ ಅವನ ಸಂಬಂಧಿಕರು ಊರಾದ ಬೆಡಗಿನಹಳ್ಳಿಯವರು‌. ಚಂದ್ರು ಎಂಬ ಸಾತ್ವಿಕ ಪಾತ್ರ‌ವೂ ಇದೆ. ಕಲಿತರೂ ಉದ್ಯೋಗವಿಲ್ಲದ ಶಿವೂನಿಗೆ ಸದರ್ ಬಜಾರಿನಲ್ಲಿ ಪ್ರಶಾಂತ ಎಂಬ ಗಣ್ಯ ವ್ಯಕ್ತಿಯ ಸಹಾಯದಿಂದ ಸಿಗುವ ಮ್ಯಾಕ್ ಡೋವೆಲ್ ಲೋಗೋವನ್ನು  ಬಾರ್ ಗಳ ಶಟರ್ಸ್ ಗಳಿಗೆ ಪೇಂಟ್ ಮಾಡುವ ಕೆಲಸ.

ಮನುಷ್ಯನ ಆದಿಮ ಪ್ರವೃತ್ತಿಯಾದ ಕಾಮ, ಅದನ್ನು ಚಿತ್ರಿಸುವ ವೈವಿಧ್ಯಮಯ ಚಿತ್ರಣಗಳು ನಿಜಕ್ಕೂ ಹೊಸ ಬಗೆಯವೇ ಆಗಿವೆ‌.

ಚೌಗಲೆಯವರು ಉಪಯೋಗಿಸಿದ ಹಲವು ಉಪಮೆಗಳು ಹಾಗೂ ಗಾದೆ ಮಾತುಗಳು ಸೂಕ್ತವಾಗಿವೆ‌ ಮತ್ತು ವೇಶ್ಯಾವಾಟಿಕೆಯ ವಿವರ ಪಂಪನ ವಿಕ್ರಮಾರ್ಜುನ ವಿಜಯದಲ್ಲಿಯ ವೇಶ್ಯಾವಾಟಿಕೆಯ ನೆನಪಿಸುತ್ತದೆ.

ಕಾಮ್ರೇಡ್ ಮಮದಾಪುರೆ ಕಾರ್ಮಿಕ ಸಂಘಗಳಿಗೆ ಬೆನ್ನೆಲುಬಾದವನು. ಮಾನವತಾವಾದಿ‌.‌ ಗುಜರಾತಿ ಹಾಗು ಮಾರವಾಡಿಗಳ ಕೈಯಲ್ಲಿ ಪ್ರಧಾನವಾಗಿ ಜವಳಿ ಉತ್ಪನ್ನಗಳು, ಮಗ್ಗಗಳು ಮತ್ತು ನೂಲು, ಬಣ್ಣ, ಉಡುಪು ಸಿದ್ಧಪಡಿಸುವುದು, ಸಕಲವೂ ಅವರ ಕೈಯಲ್ಲೇ‌. ಅವರದು ಘನಘೋರ ಯಜಮಾನಿಕೆಯಾಗಿತ್ತು‌. ಇಂಥ ಹಣ ಬಲ ಮತ್ತು ವ್ಯಾಪಾರದ ಬಲ ಅವರದು‌.‌ ತೀವ್ರ ತರದ ಕಾರ್ಮಿಕ ಸಂಘರ್ಷಗಳು, ಕಾರ್ಮಿಕರ ಸಂಖ್ಯೆಯ ಒತ್ತಡ ಮತ್ತು ಮಮದಾಪುರೆಯವರ ಮುತ್ಸದ್ದಿತನ, – ಇವು ಗುಜರಾತಿ ಯಜಮಾನಿಕೆಯ ಲಾಬಿಯನ್ನು ತಣ್ಣಗೆ ಮಕಾಡೆ ಮಲಗಿಸಿದ್ದವು‌. ಅದನ್ನು ಹೊಡೆದು ಹಾಕುವಲ್ಲಿ ಮಮದಾಪುರ ಮತ್ತು ಅವರ ಲಾಲಬಾವುಟ ಕಾರ್ಮಿಕ ಸಂಘಟನೆಗೆ ಸಾಧ್ಯವಾಗಿತ್ತು‌”

ಇಚಲಕರಂಜಿಯಲ್ಲಿ ಕಾರ್ಮಿಕರು ಸಂಘಟಿತರಾಗಿ ಹೋರಾಡಿ ಏಳನೆಯ ತರಗತಿಯವರೆಗಿನ ಕನ್ನಡ ಮಾಧ್ಯಮ ಶಾಲೆಯನ್ನು ಸರಕಾರದ ಅನುದಾನ ಪಡೆದು ಪ್ರಾರಂಭಿಸುವಲ್ಲಿ ಯಶಸ್ವಿಯಾಗುತ್ತಾರೆ‌.

ಆಧುನಿಕ ತಂತ್ರಜ್ಞತೆಯು ಯಾವ ರೀತಿ ಗ್ರಾಮೀಣ ಸಮಾಜವನ್ನು ಅಧೋಗತಿಗೆ ತರುತ್ತದೆ ಎಂಬುದನ್ನು ಪೋರ್ನೊ ವಿಡಿಯೋ ಪಾರ್ಲರ್ ಗಳ ವೀಕ್ಷಣೆಯ ಮೂಲಕ ಕಾದಂಬರಿಕಾರ ಹೂಬೇ ಹೂಬೇ ಚಿತ್ರಿಸುತ್ತಾರೆ‌.

ಈ ಕಾದಂಬರಿಯ ಘಟನೆಗಳು ನಡೆದಿರುವ ಪ್ರದೇಶದ ವರ್ಣನೆ ಹೀಗಿದೆ: “ಏಳು ನದಿಗಳು ಹರಿಯುವ ಭೂಭಾಗ‌ ಸಂಪನ್ಮೂಲಗಳಿಂದ ಸಮೃದ್ಧ. ಆದರೆ ಸ್ವಾತಂತ್ರ್ಯಾ ನಂತರರದ ಮೂವತ್ತು ವರ್ಷಗಳಲ್ಲಿ ಆಗಬೇಕಾದ ಅಭಿವೃದ್ಧಿ ಮಾತ್ರ ಶೂನ್ಯ ‌ಭಾಷೆ, ಸಾಮಾಜಿಕ ಸಂರಚನೆಯ ಸಂಸ್ಕೃತಿಗಳಲ್ಲಿ ತನ್ನದೇ ಆದ ಛಾಪು ಹೊಂದಿದ ಇಲ್ಲಿಯ ಜನಸಮುದಾಯ. ಆಹಾರ, ಉಡುಗೆ ತೊಡುಗೆ, ಸಂಪ್ರದಾಯಗಳಲ್ಲಿ ತನ್ನದೇ ಅನನ್ಯತೆ, ಉಳ್ಳವರು‌ ಚಾಲುಕ್ಯ, ರಾಷ್ಟ್ರಕೂಟರಿಂದ ಶಾಹು ಮಹಾರಾಜರ ತನಕ ಕರ್ನಾಟಕಾಂಧ್ರ ಮಹಾರಾಷ್ಟ್ರ ಸಮುದಾಯಗಳ ಬದುಕು ಒಂದೇ‌ ಆದರೆ ವರ್ತಮಾನದಲ್ಲಿ ಸಮುದಾಯಗಳ ಬಳಕೆಯನ್ನು ರಾಜಕೀಯ ದಾಳವಾಗಿ ಧೃವೀಕರಣಕ್ಕೊಳಪಡಿಸಲಾಗಿದೆ.

ಮಹಾರಾಷ್ಟ್ರಕ್ಕೆ ಅಂಟಿಕೊಂಡ ಉತ್ತರ ಕರ್ನಾಟಕ ಗಡಿನೆಲದ ಮಾನವ ಸಂಪನ್ಮೂಲವನ್ನು ಮತ್ತು ನಿಸರ್ಗ ಸಂಪತ್ತನ್ನು ಮಹಾರಾಷ್ಟ್ರವು ಸಹಕಾರಿ ರಂಗದ ಮೂಲಕ ಯಥೇಚ್ಛವಾಗಿ ಬಳಸಿಕೊಳ್ಳುತ್ತಿದೆ‌. ನಸುಕು ಹಲವಾರು ಕಾರ್ಮಿಕ ವರ್ಗಗಳು ‌ನಿತ್ಯ ನಲವತ್ತೋ ಮೂವತ್ತೋ ಕಿಮಿ ಸೈಕಲ್ ತುಳಿದು ತಮ್ಮ ರಕ್ತ ಮಾಂಸವನ್ನು ಬೆವರಾಗಿಸಿ ಹರಿಸುತ್ತಿವೆ‌. ಅನ್ನದ ಋಣಕ್ಕೆಂದು ನೆಲದ ಜನ‌ ಗಡಿಯ ಮೀರಿ‌ ಹಸಿವ ತಣಿಸಿಕೊಳ್ಳಲು ಹರಸಾಹಸ ಮಾಡುವಾಗ ನಮ್ಮ ಜನಪ್ರತಿನಿಧಿಗಳ ಲೆಕ್ಕವೆಲ್ಲ ಸ್ವಲಾಭಕೇಂದ್ರಿತವೋ? ಈ ಸಾಮಾನ್ಯಜನರ ದೌರ್ಬಲ್ಯವನ್ನು ಬಳಸಿಕೊಳ್ಳುವವರೇ ಹೇರಳ.”

“ಉತ್ತರ ಕರ್ನಾಟಕ ಜಾತಿ ಶೋಷಣೆಯಿಂದ ಜನಸಾಮಾನ್ಯರ ಬದುಕು ದುರಂತಮಯ‌. ಈ ಪರಂಪರೆಯ ಸ್ವಾರ್ಥ ರಾಜಕಾರಣದ ಕುಡಿಗಳೇ ಉಚ್ಚ ಸಮುದಾಯದ ಪುಢಾರಿಗಳು.”(ಪುಟ ಸಂಖ್ಯೆ ೫೩)

ಕಾದಂಬರಿ ಶಿವುನಿಗೆ ಸರಕಾರಿ ಶಾಲೆಯಲ್ಲಿ ಡ್ರಾಯಿಂಗ್ ಮಾಸ್ಟರ್ ಆಗಿ ಉದ್ಯೋಗ ಸಿಕ್ಕು ಸುಖಾಂತವಾಗುತ್ತದೆ‌.

ಈ ಕೃತಿಯ ಪ್ರಮುಖವಾದ ಕೇಂದ್ರವೆಂದರೆ ಸದರಬಜಾರ್‌‌. ಇಲ್ಲಿ ವೇಶ್ಯಾವಾಟಿಕೆಯ ನರಕವಿದೆ‌‌. ಕಾರ್ಮಿಕರ ಶೋಷಣೆ ಇದೆ‌. ಮನುಷ್ಯರು ಮಾರಾಟದ ಸರಕಾಗುವ ಕ್ರೌರ್ಯ ಮತ್ತು ಅಮಾನವೀಯತೆ ಇದೆ‌. ಈ ಕಾದಂಬರಿ ಡಿ.ಎಸ್.ಚೌಗಲೆ ಅವರ ಚೊಚ್ಚಲ ಕಾದಂಬರಿ ಆದರೂ ಶ್ರೇಷ್ಠ ಕಾದಂಬರಿಯಾಗಿದೆ. ಓದಿರಿ.

– ಉದಯಕುಮಾರ ಹಬ್ಬು, ಲೇಖಕರು, ಕಿನ್ನಿಗೋಳಿ

Leave a Reply