ದಿ ಪಿಯಾನಿಸ್ಟ್ ಮತ್ತು ಮಂಟೂ
`ದಿ ಪಿಯಾನಿಸ್ಟ್’-ಆಸ್ಕರ್ ಪ್ರಶಸ್ತಿ ವಿಜೇತ ಸಿನಿಮಾ; ಜರ್ಮನಿಯ ನಾಜಿಗಳು ಪೊಲೆಂಡನ್ನು ಆಕ್ರಮಿಸಿಕೊಂಡಾಗ ಒಂದು ಸಣ್ಣಪಟ್ಟಣದಲ್ಲಿ ಜರುಗುವ ಘಟನೆಗಳನ್ನು ಆಧರಿಸಿ ತೆಗೆದಿದ್ದು. ನಾಜಿಗಳು ಪಟ್ಟಣದಲ್ಲಿದ್ದ ಯಹೂದಿ ಗಂಡಸರನೆಲ್ಲ ಹಿಡಿದು ಸೆರೆಯಲ್ಲಿಕ್ಕುತ್ತಾರೆ. ಅವರಲ್ಲಿ ಒಬ್ಬ ಪಿಯಾನೊ ವಾದಕ. ಅವನು ಜೈಲಿನೊಳಗಿದ್ದೇ ನಾಜಿಗಳ ವಿರುದ್ಧ ದಂಗೆಯೇಳಲು ತಕ್ಕ ಕೆಲಸ ಮಾಡುತ್ತಾನೆ; ಅವನ ಪ್ರೇರಣೆಯಿಂದ ಕೈದಿಗಳು ದಂಗೆಯೆದ್ದಾಗ ನಾಜಿಗಳು ಕನಲಿ ಊರನ್ನೇ ಸುಟ್ಟುಹಾಕುತ್ತಾರೆ. ಸಂಗೀತಗಾರ ಹೇಗೊ ತಪ್ಪಿಸಿಕೊಂಡು ಅರೆಸುಟ್ಟ ಮನೆಗಳಲ್ಲಿ ತೊಳಲುತ್ತ, ಹಸಿವಿನಿಂದ ಬಳಲುತ್ತ ಜೀವ ಉಳಿಸಿಕೊಂಡಿರುತ್ತಾನೆ. ಒಮ್ಮೆ ಹಸಿವಿನಿಂದ ಕಂಗಾಲಾಗಿ ಆತ ಖಾಲಿಬಿದ್ದ ಮನೆಯಲ್ಲಿ ತಿನ್ನಲು ಹುಡುಕುವಾಗ ಒಂದು ಡಬ್ಬಿ ಸಿಗುತ್ತದೆ. ಅದರ ಮುಚ್ಚಳ ತೆಗೆಯಲು ಯತ್ನಿಸುವಾಗ ಸಪ್ಪಳವಾಗುತ್ತದೆ. ಅದು ಬೀದಿಯಲ್ಲಿ ಹೋಗುತ್ತಿದ್ದ ನಾಜಿ ಸೇನಾಧಿಕಾರಿಗೆ ಕೇಳಿಸುತ್ತದೆ. ಆತ ಬಂದು ಕಲಾವಿದನನ್ನು ನೋಡಿ `ಯಾರು ನೀನು’ ಎಂದು ಕೇಳುತ್ತಾನೆ. `ನಾನೊಬ್ಬ ಪಿಯಾನೊ ವಾದಕ’ ಎಂದು ಈತ ಉತ್ತರಿಸುತ್ತಾನೆ. ಬೀದಿಗಸ್ತಿನಿಂದ ಬೇಸರಗೊಂಡಿದ್ದ ಸೇನಾಧಿಕಾರಿ ಕುತೂಹಲಗೊಂಡು `ಹೌದೇನು? ಈ ಮನೆಯಲ್ಲಿರುವ ಪಿಯಾನೊ ನುಡಿಸು ನೋಡೋಣ’ ಎಂದು ಆದೇಶಿಸುತ್ತಾನೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಗಾಯಕ ಪಿಯಾನೊ ಮೇಲೆ ಕೂತು ನೋವಿನ ರಾಗಗಳನ್ನು ನುಡಿಸಲು ಶುರು ಮಾಡುತ್ತಾನೆ. ದೇಶವೊಂದನ್ನು ಅದರಿಷ್ಟಕ್ಕೆ ವಿರುದ್ಧವಾಗಿ ಆಕ್ರಮಿಸಿಕೊಂಡು, ಅಮಾಯಕ ಜನರನ್ನು ಕೊಲ್ಲುವುದರಲ್ಲೇ ತೊಡಗಿದ್ದ ಸೇನಾಧಿಕಾರಿಗೆ, ಆತನ ಮಾನವೀಯ ಸಂವೇದನೆಗಳು ಜಾಗೃತವಾಗುವಂತೆ, ಆ ಸಂಗೀತವಿರುತ್ತದೆ. ಅಧಿಕಾರಿಗೆ ಯುದ್ಧ ತನ್ನ ಸೂಕ್ಷ್ಮತೆ ನಾಶಮಾಡಿದೆ ಎಂದು ಅರಿವಾಗುತ್ತದೆ. ತನ್ನ ಪರಿತಾಪ ಮೀರಲು ಆತ ಕಲಾವಿದನಿಗೆ ಕದ್ದುಮುಚ್ಚಿ ಆಹಾರ ತಂದುಕೊಡಲು ಆರಂಭಿಸುತ್ತಾನೆ; ಚಳಿತಡೆಯಲು ತನ್ನ ಕೋಟನ್ನು ನೀಡುತ್ತಾನೆ. `ರಶ್ಯನ್ ಸೇನೆ ಬರುತ್ತಿದೆ. ನಿಮ್ಮ ದೇಶ ಬಿಡುಗಡೆ ಆಗುತ್ತದೆ’ ಎಂದು ಭರವಸೆ ಸಹ ಕೊಡುತ್ತಾನೆ. ಒಂದು ದಿನ ರಶ್ಯನ್ ಸೇನೆ ನಾಜಿ ಸೈನಿಕರನೆಲ್ಲ ಹಿಡಿದು ಸೆರೆಗೆ ತಳ್ಳುತ್ತದೆ. ಆಗ ಸೇನಾಧಿಕಾರಿ `ನಾನು ನಿಮ್ಮೊಬ್ಬ ಸಂಗೀತಗಾರ ಕಷ್ಟದಲ್ಲಿದ್ದಾಗ ಸಹಾಯ ಮಾಡಿದ್ದೆ. ಅವನಿಗೆ ನನ್ನ ಬಗ್ಗೆ ತಿಳಿಸಿ’ ಎಂದು ಸಿಕ್ಕವರಿಗೆಲ್ಲ ಕೂಗಿ ಹೇಳುತ್ತಾನೆ. ಅವನ ಅಹವಾಲು ಬಿಡುಗಡೆಯ ಸಂಗೀತ ನುಡಿಸುತ್ತ ಸಂತೋಷದಲ್ಲಿರುವ ಕಲಾವಿದನಿಗೆ ತಲುಪುವುದಿಲ್ಲ.
ಈ ಚಿತ್ರವನ್ನೇ ಹೋಲುವ ಡಾಕ್ಯುಮೆಂಟರಿಯೊಂದಿದೆ. ಪೊಲೆಂಡಿನ ಮೇಲೆ ನಡೆದ ನಾಜಿಗಳ ಕ್ರೌರ್ಯದ ನೆನಪುಗಳುಳ್ಳ ಚಿತ್ರವಿದು. ಅದರಲ್ಲಿ ಪೊಲೆಂಡ್ ಪ್ರಜೆಗಳ ಸಂದರ್ಶನಗಳಿವೆ. ಅದರಲ್ಲಿ ಒಬ್ಬ ಮುದುಕಿ ಹೇಳುವ ಕತೆಯೂ ಇದೆ. ಆಕೆಯಿದ್ದ ಹಳ್ಳಿಗೆ ಒಮ್ಮೆ ನಾಜಿ ಸೈನಿಕರು ನುಗ್ಗುತ್ತಾರೆ. ಊರಲ್ಲಿದ್ದ ಯಹೂದಿ ಗಂಡಸರನೆಲ್ಲ ಹಿಡಿದು ದೊಡ್ಡದಾಗಿ ತೋಡಿದ ಗುಂಡಿಯ ದಡದಲ್ಲಿ ನಿಲ್ಲಿಸಿ ಗುಂಡುಹಾರಿಸಿ ಕೊಲ್ಲಲು ಸಿದ್ಧರಾಗುತ್ತಾರೆ. ಯಹೂದಿಗಳನ್ನು ಹಿಡಿದುಕೊಡಲು ಊರಿನ ಕೆಲವು ಕ್ರೈಸ್ತರೂ ನೆರವಾಗಿರುತ್ತಾರೆ. ಯಹೂದಿಗಳನ್ನು ಕೊಲ್ಲಲು ಬೀದಿಗಳಲ್ಲಿ ಎಳೆದುಕೊಂಡು ಹೋಗುವಾಗ, ಒಬ್ಬ ಯಹೂದಿ ಮನೆಗಳ ಮುಂದೆ ನಿಂತು ನೋಡುತ್ತಿದ್ದ ಜನರನ್ನು ನೋಡುತ್ತಾನೆ. ಅವರಲ್ಲಿ ಒಬ್ಬನ ಬಳಿ ಹೋಗಿ `ನನ್ನನಂತೂ ಕೊಲ್ಲುತ್ತಾರೆ. ಆದರೆ ನನ್ನ ಜತೆಯಲ್ಲಿ ಈ ಕೋಟಿಗೂ ಗುಂಡುಬಿದ್ದು ಮಣ್ಣಾಗಿ ಹೋಗುತ್ತದೆ. ಅದರ ಬದಲು ಇದು ನಿನ್ನ ಮೈಮೇಲಾದರೂ ಇರಲಿ. ಇದಕ್ಕಿನ್ನೂ ಚಳಿ ತಡೆಯುವ ಶಕ್ತಿಯಿದೆ’ ಎಂದು ತನ್ನ ಕೋಟನ್ನು ಬಿಚ್ಚಿಕೊಡುತ್ತಾನೆ.

ವಿಶೇಷವೆಂದರೆ, ಮೇಲಿನ ಎರಡೂ ಚಲನಚಿತ್ರಗಳಲ್ಲಿ ಕೋಟು ದಾನದ ಪ್ರಸಂಗಗಳಿವೆ. ಒಂದೆಡೆ ತಾನು ಕೊಲ್ಲಬಹುದಾಗಿದ್ದ ವ್ಯಕ್ತಿಯನ್ನು ಕೊಲ್ಲದೆ, ಕರುಣೆದೋರಿ ಕೋಟನ್ನಿತ್ತು ಕಾಪಾಡುವ ನಾಜಿ ಅಧಿಕಾರಿ; ಇನ್ನೊಂದೆಡೆ, ಸಾಯುವ ಮೊದಲು ತನ್ನೂರ ವ್ಯಕ್ತಿಗೆ ಕೋಟನ್ನು ಕೊಡುವ ವ್ಯಕ್ತಿ. ಒಂದೆಡೆ ತಮ್ಮೆಲ್ಲ ವೇದನೆಗಳಲ್ಲೂ ಬಿಡುಗಡೆಗಾಗಿ ಹೋರಾಡುವ ಜನರು; ಇನ್ನೊಂದೆಡೆ ಕ್ರಿಸ್ತನ ಕೊಲೆಗಾರರೆಂದು ಆಪಾದಿಸಲಾಗುವ ಯಹೂದಿಯೊಬ್ಬ ಕ್ರಿಸ್ತನ ಕರುಣೆಯನ್ನು ತೋರುವುದು. ನಿರ್ದಿಷ್ಟ ಮತಧರ್ಮದ ನೆಲೆಯಿಂದಲೇ ಕೊಲ್ಲುವ ದುಷ್ಟತನವೂ ಸಾಯುವ ಅಸಹಾಯಕತೆಯೂ ರಕ್ಷಿಸುವ ಕರುಣೆಯೂ ಹುಟ್ಟಿಬರುತ್ತಿವೆ.
20ನೇ ಶತಮಾನದಲ್ಲಿ ಧರ್ಮ ಮತ್ತು ಜನಾಂಗವಾದಗಳ ಹೆಸರಲ್ಲಿ ನಾಜಿಗಳು ಯಹೂದಿಗಳ ಮೇಲೆ ಮಾಡಿದ ಬಲಾತ್ಕಾರದ ನಂತರದ ಸ್ಥಾನ, ಬಹುಶಃ ದೇಶ ವಿಭಜನೆಯ ಹೊತ್ತಲ್ಲಿ ಭಾರತದ ಉಪಖಂಡದಲ್ಲಿ ನಡೆದ ಮತೀಯ ದಂಗೆಗಳದ್ದು. ಈ ದಂಗೆಗಳ ಘೋರ ಪಾತಕಗಳನ್ನು ಹಿಡಿದುಕೊಟ್ಟವರಲ್ಲಿ ಪಾಕಿಸ್ತಾನ-ಭಾರತ ಎರಡೂ ದೇಶಗಳಿಗೆ ಸೇರಿದ್ದ ಸಾದತ್ ಹಸನ್ ಮಂಟೂ ಒಬ್ಬರು. ಮಂಟೂ ಕತೆಗಳಲ್ಲಿ ಕೂಡ ಮೇಲ್ಕಾಣಿಸಿದ ಚಲನಚಿತ್ರಗಳಲ್ಲಿ ಇರುವ ನಾಟಕೀಯ ಸನ್ನಿವೇಶಗಳಿವೆ. ಒಂದು ಕತೆಯಲ್ಲಿ ಸಾಯುವ ಮೊದಲು ಯಹೂದಿ ಹುಡುಗಿ ಮೊಜೆಲ್, ತನ್ನ ಸಿಖ್‍ಗೆಳೆಯನ ಪ್ರೇಮಿಯನ್ನು ಮುಸ್ಲಿಂ ಮತಾಂಧರಿಂದ ಉಳಿಸಲು, ಬೆತ್ತಲೆಯಾಗಿ ಓಡಿಹೋಗುವ ಪ್ರಸಂಗ ಬರುತ್ತದೆ. ಮನುಷ್ಯ ಕುಲ ತೀವ್ರ ಇಕ್ಕಟ್ಟುಗಳಲ್ಲಿ ಪ್ರಕಟಿಸುವ ಇಂಥ ಭಾವುಕ ಮಾನವೀಯ ನಡೆಗಳು, ಹೀಗೆಯೇ ದಾರುಣವಾಗಿರುತ್ತವೆ. ಧರ್ಮಗಳು ಅಪಾರ ಪ್ರಮಾಣದ ಕ್ರೌರ್ಯವನ್ನು ಪ್ರಚೋದಿಸುತ್ತವೆ. ಆದರೆ ಅವನ್ನು ಮೆಟ್ಟಿ ನಿಲ್ಲುವ ಮಾನವತೆಯೂ ಇದರೊಟ್ಟಿಗೇ ಹುಟ್ಟುತ್ತದೆ.

ಮಂಟೂ ಅವರ ಕತೆಗಳು ಹಿಂದಿನಿಂದಲೂ ಕನ್ನಡಕ್ಕೆ ಬಿಡಿಬಿಡಿಯಾಗಿ ಬಂದಿವೆ. ಅವರ ಪ್ರಸಿದ್ಧಕತೆ `ತೋಬತೇಕ್‍ಸಿಂಗ್’ನ ಎರಡು ಅನುವಾದಗಳಿವೆ. ಆದರೆ ಅವರ ಕತೆಗಳ ಸ್ವತಂತ್ರ ಸಂಕಲನವೊಂದು ಬರುತ್ತಿರುವುದು ಇದುವೇ ಮೊದಲು. ದೇಶ ವಿಭಜನೆಯ ಹೊತ್ತಿನ ಈ ಕತೆಗಳು ಈಗ ಬರುತ್ತಿರುವುದು ಅರ್ಥಪೂರ್ಣ. ನಮ್ಮ ಸಾಮಾಜಿಕ ರಾಜಕೀಯ ದುರಂತಗಳಿಗೆ ಮತ್ತೆಮತ್ತೆ ಸಾಹಿತ್ಯ ಕಲೆಗಳ ಭುಜಗಳ ಮೇಲೆ ತಲೆಯನ್ನಿರಿಸಿ ದುಃಖ ತೋಡಿಕೊಳ್ಳುತ್ತೇವೆ. ಇದು ನಮ್ಮ ಅಸಹಾಯಕತೆಯೊ ನಾಗರಿಕ ಸಮಾಜಗಳು ಕಂಡುಕೊಂಡಿರುವ ಸಹಜ ಪರಿಹಾರಗಳಲ್ಲಿ ಒಂದೊ ತಿಳಿಯದು. ಮನುಷ್ಯ ಸಂಬಂಧಗಳನ್ನು ರಾಜಕಾರಣ ಮತ್ತು ಮತಧರ್ಮಗಳು ಭಗ್ನಗೊಳಿಸುವ ಪರಿಯನ್ನು ಮಂಟೂ ಕತೆಗಳು ಎದೆಗೆ ತಟ್ಟುವಂತೆ ಹಿಡಿದುಕೊಡುತ್ತವೆ. ತಣ್ಣನೆಯ ಆದರೆ ಹರಿತವಾದ ವ್ಯಂಗ್ಯದನಿಯಲ್ಲಿ ಇರುವ ಅವು ಓದುಗರನ್ನು ಜರ್ಜರಿತಗೊಳಿಸುತ್ತವೆ. 20ನೇ ಶತಮಾನದಲ್ಲಿ ಧರ್ಮ ಮತ್ತು ಹಿಂಸೆಗಳಿಗೆ ಭಿನ್ನವ್ಯಾಖ್ಯೆ ಬರೆದ ದಾರ್ಶನಿಕ ಲೇಖಕರಲ್ಲಿ ಮಂಟೂ ಒಬ್ಬರು. ಅವರ ಕತೆಗಳಲ್ಲಿ ಹಿಂದೂ ಇಸ್ಲಾಂ ಸಿಖ್ ಯಹೂದಿ ಧರ್ಮಗಳಿಂದ ಬಂದ ವ್ಯಕ್ತಿಗಳು, ಏಕಕಾಲದಲ್ಲಿ ತಮ್ಮ ದುಷ್ಟತನ ಹಾಗೂ ಮನುಷ್ಯತ್ವದಲ್ಲಿ ಕಾಣಿಸಿಕೊಳ್ಳುತ್ತಾರೆ. ಮಂಟೂ, ರಾಜೇಂದ್ರಸಿಂಗ್ ಬೇಡಿ, ಅಮೃತಾ ಪ್ರೀತಂ ಇವರನ್ನೆಲ್ಲ ಅವರ ಜನ್ಮದ ಹಿನ್ನೆಲೆಯಿಂದ ಮುಸ್ಲಿಮೆಂದೊ ಸಿಖ್ಖರೆಂದೊ ಕರೆಯಬಹುದು. ಆದರೆ ಕಲಾವಿದರಾಗಿ ಇವರು ಧರ್ಮಗಳ ಸಾಂಪ್ರದಾಯಿಕ ಚೌಕಟ್ಟಿನಾಚೆ ಚಲಿಸಿದ ಮನುಕುಲದ ಕತೆಗಾರರು.

ರಾಜಕಾರಣ ಹಾಗೂ ಧರ್ಮಗಳು ಹುಟ್ಟಿಸುವ ಕ್ರೌರ್ಯವನ್ನು ಮಾತ್ರ ಮಂಟೂ ಕತೆಗಳು ಹೇಳುವುದಿಲ್ಲ; ಅವು ಬದುಕಿನ ಅಪಾರ ಚೆಲುವನ್ನು ಕುರಿತೂ ಮಾತಾಡುತ್ತವೆ. `ಏಜಿದ್’ ಕತೆಯನ್ನು ಗಮನಿಸಬೇಕು. ನದಿಯನ್ನು ತಡೆಗಟ್ಟುವವರು ಇರುವಂತೆ ಅದನ್ನು ಬಿಡುಗಡೆಗೊಳಿಸುವವರೂ ಇದ್ದಾರೆ. ಎರಡೂ ಕ್ರಿಯೆಗಳ ಮೂಲ ಒಂದೇ. ಈ ಕತೆಯ ಕರೀಮದಾದ್ ಮಂಟೂ ದಾರ್ಶನಿಕತೆಯನ್ನು ಚೆನ್ನಾಗಿ ಪ್ರತಿನಿಧಿಸುತ್ತಾನೆ. ಮಂಟೂ ಕತೆಗಳಲ್ಲಿ `ಕ್ಷುದ್ರ’ ಎನಿಸುವ ಬಹಳಷ್ಟು ಸಂಗತಿಗಳು ಬರುತ್ತವೆ. ಸೊಳ್ಳೆ ಪರದೆಯಲ್ಲಿ ಮಲಗುವಂತಹ ವಿಷಯವೂ ಹೇಗೆ ಭಾವನೆಗಳ ಸಂಘರ್ಷದೊಂದಿಗೆ ತಳುಕುಗೊಂಡಿದೆ; ಈ ಭಾವನೆಗಳು ದೇಶವಿಭಜನೆಯಂತಹ ವಿರಾಟ್ ರಾಜಕೀಯ ವಿದ್ಯಮಾನದ ಪರಿಣಾಮ ಎಂಬುದನ್ನು ಸೂಚಿಸುವ ಪರಿಯೇ ಅದ್ಭುತ. ಆದರೆ ಮಂಟೂ ಕೇವಲ ಭಾವುಕ ಕಲಾವಿದರಲ್ಲ. ತಮ್ಮ ಇನ್ನಿಲ್ಲದ ದುಗುಡದಲ್ಲೂ ತಮಾಶೆ ಗುಣವನ್ನು ಬಿಡದವರು. ಆಘಾತ ಕೊಡುವ ಮತ್ತು ಪತ್ತೇದಾರಿ ಕುತೂಹಲ ಉಳಿಸಿಕೊಳ್ಳುವ ಅವರೊಬ್ಬ ಚತುರ ಕತೆಗಾರ ಕೂಡ. ಎಂತಲೇ ಅಮುಖ್ಯ ಎನಿಸುವ ಸಂಗತಿಗಳನ್ನು ಇರಿಸಿಕೊಂಡು ದೊಡ್ಡ ರಾಜಕೀಯ ಸಾಮಾಜಿಕ ಧಾರ್ಮಿಕ ಸತ್ಯಗಳನ್ನು ಹೇಳುವ ದಾರ್ಶನಿಕ ಆಳವು ಅವರಿಗೆ ಸಹಜವಾಗಿ ದಕ್ಕಿದೆ. ವಾಚ್ಯ ಮಾಡದೆ ಧ್ವನಿಪೂರ್ಣವಾಗಿ, ಆರ್ತವಾಗಿ ಅರ್ಥ ಹೊಮ್ಮಿಸುವ ಅವರ ಸಂಯಮ ಕಲೆಗಾರಿಕೆಯ ಕುರುಹಾಗಿದೆ. ಆದರೆ ಈ ದಾರುಣತೆ ಮಾನವತಾವಾದ ಹಾಗೂ ಕಲೆಗಾರಿಕೆಗಳ ಹಿನ್ನೆಲೆಯಲ್ಲಿ ಸ್ವಂತ ಬಾಳನ್ನೇ ಕಷ್ಟಕ್ಕೊಡ್ಡಿಕೊಂಡ ಮಂಟೂ ಅವರ ವಿಕ್ಷಿಪ್ತತೆಯಿದೆ. ತರ್ಕದ ಹಿಡಿತಕ್ಕೆ ಸಿಗದೆ ನಡೆಯುತ್ತಿದ್ದ ಮತೀಯ ಹಿಂಸೆಯನ್ನು ಕಂಡು ರೋಸಿ ಹುಚ್ಚನಾದವವರು ಅವರು; ಅವರನ್ನು ಅಕ್ಷರಶಃ ಪಾಕಿಸ್ತಾನದ ಸರ್ಕಾರ ಹುಚ್ಚಾಸ್ಪತ್ರೆಯಲ್ಲಿರಿಸಿತ್ತು.

ಇಂತಹ ಅಪೂರ್ವ ಕತೆಗಳನ್ನು ಅನುವಾದ ಮಾಡಿರುವ ಹಸನ್ ನಯೀಮ ಸುರಕೋಡರು ಒಬ್ಬ ಸಮಾಜವಾದಿ ಚಿಂತಕ; ರಾಮದುರ್ಗದಂತಹ ಚಿಕ್ಕಪಟ್ಟಣದಲ್ಲಿ ದುಸ್ತರ ಬದುಕು ಸಾಗಿಸುತ್ತಿರುವವರು. ಅವರು ಅಮೃತಾ ಪ್ರೀತಮರ `ರಸೀದಿ ತಿಕೀಟು’ ಆತ್ಮಕತೆಯನ್ನು ಅದ್ಭುತವಾಗಿ ಅನುವಾದಿಸಿದರು. ಕನ್ನಡದಲ್ಲೇ ಉದಿಸಿದೆಯೆಂಬಷ್ಟು ಅದರ ಅನುವಾದ ಜೀವಂತವಾಗಿದೆ. ಮಂಟೂ ಕತೆಗಳ ಈ ಅನುವಾದ ಕೂಡ ಅವರೊಬ್ಬ ಸೃಜನಶೀಲ ಮನಸ್ಸಿನವರೆಂದು ಸಾಬೀತುಗೊಳಿಸುತ್ತಿದೆ. ಮುಖ್ಯ ಸಂಗತಿಯೆಂದರೆ, ಈ ಕತೆಗಳು ಉರ್ದುವಿನಿಂದ ನೇರವಾಗಿ ಬರುತ್ತಿರುವುದು. ಭಾರತೀಯ ಭಾಷೆಗಳಲ್ಲಿರುವ ಸಾಹಿತ್ಯವು ಇನ್ನೊಂದು ಭಾರತೀಯ ನುಡಿಗೆ ಹೋಗಬೇಕಾದರೆ ಇಂಗ್ಲೀಶಿನ ಕೊಂಕಣ ಹಾಯಬೇಕು. ಇಲ್ಲಿ ಹಾಗಾಗಿಲ್ಲ. ಸುರಕೋಡರು ಎಷ್ಟು ಒಳ್ಳೆಯ ಮನಸ್ಸನ್ನೂ ಭಾಷೆಯನ್ನೂ ಹೊಂದಿದ್ದಾರೆ ಎನ್ನುವುದಕ್ಕೆ ಈ ಅನುವಾದ ಸಾಕ್ಷಿ.
– ಪ್ರೊಫೆಸರ್ ರಹಮತ್ ತರೀಕೆರೆ
(ಸುರಕೋಡರ `ಸದ್ಯಕಿದು ಹುಚ್ಚರ ಸಂತಿ’ ಕೃತಿಗೆ ಬರೆದ ಮುನ್ನುಡಿ)




