ಕೃಷ್ಣ ಆಲನಹಳ್ಳಿಯವರ ನೆನಪುಗಳು

3 years ago

ಕೃಷ್ಣ ಆಲನಹಳ್ಳಿಯವರ ನೆನಪುಗಳು.

ಕೃಷ್ಣ ಆಲನಹಳ್ಳಿಯವರು ನಿಧನರಾಗಿ ಇಂದಿಗೆ ಮುವತ್ತನಾಲ್ಕು ವರ್ಷಗಳು. 1989 ರ ಜನವರಿ 4 ರಂದು ಅವರು ತಮ್ಮ ನಲವತ್ತೆರೆಡನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ಕನ್ನಡ ಜಗತ್ತಿಗೆ ನೆರೆಯ ಕೇರಳದ ಕಥಾ ಲೋಕದ ಮಾಂತ್ರಿಕ ವೈಕಂ ಮಹಮ್ಮದ್ ಅವರನ್ನು ಪರಿಚಯಿಸಿದ ಹಾಗೂ ಕಾಡು, ಪರಸಂಗದ ಗೆಂಡೆ ತಿಮ್ಮ ಮತ್ತು ಬುಜಂಗಯ್ಯನ ದಶವತಾರಗಳು ಎಂಬ ಮಹಾನ್ ಕೃತಿಗಳನ್ನು ನೀಡಿದ ಇವರು ಮತ್ತು ಡಾಕ್ಟರ್ ಬೆಸಗರಹಳ್ಳಿ ರಾಮಣ್ಣ ಇಬ್ಬರೂ ನನ್ನ ಪಾಲಿಗೂ ಅಣ್ಣಂದಿರು ಹಾಗೂ ಗುರುಗಳಾಗಿದ್ದರು. ಅದೇ ವರ್ಷ 1989 ರ ಮೇ 28 ರಂದು ನಾನು ಕುವೆಂಪು ಮಂತ್ರ ಮಾಂಗಲ್ಯದ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗ ನನಗೆ ಪುರೋಹಿತನ ಸ್ಥಾನದಲ್ಲಿ ನಿಂತು ಪ್ರಮಾಣ ವಚನ ಬೋಧಿಸಿದ ರಾಮಣ್ಣನವರು ನನ್ನ ಮದುವೆಗೆ ಆಗಮಿಸಿದ್ದ ಪ್ರಜಾವಾಣಿ ಬಳಗದ ಗೆಳೆಯರಿಗೆ ಮಂಡ್ಯ ನಗರದ ತಮ್ಮ ಮನೆಯಲ್ಲಿ ಆ ರಾತ್ರಿ ಭರ್ಜರಿ ಔತಣಕೂಟವನ್ನು ಏರ್ಪಡಿಸಿದ್ದರು. ಹದಿನಾಲ್ಕು ವರ್ಷಗಳ ಹೋರಾಟದ ನನ್ನ ವಿವಾಹವನ್ನು ತಮ್ಮ ಮನೆಯ ಮಗನ ವಿವಾಹದಂತೆ ಸಂಭ್ರಮಿಸಿದರು. ಆ ದಿನ ಸಂಜೆ ನನ್ನನ್ನು ಹತ್ತಿರ ಕರೆದು ‘ ಮಗಾ, ಈ ದಿನ ಕೃಷ್ಣ ಇರಬೇಕಿತ್ತು’ ಎಂದು ನೆನಪಿಸಿಕೊಂಡು ಕಣ್ಣೀರು ಹಾಕಿದ್ದರು.

ನನ್ನ ಚಿಕ್ಕಪ್ಪನವರಾದ ಹೊಸಹಳ್ಳಿ ಶಿವರಾಮೇಗೌಡರ ಮೂಲಕ ನನಗೆ 1972 ರಿಂದ ರಾಮಣ್ಣ. ಆಲನಹಳ್ಳಿ ಮತ್ತು ದೇವನೂರು ಮಹಾದೇವ ಪರಿಚಯವಾದರು. ದೇವನೂರು ಅವರ ಎಂ.ಎ. ಸಹಪಾಠಿಯಾದ ನನ್ನ ಚಿಕ್ಕಪ್ಪ ಆ ಕಾಲದಲ್ಲಿ ಶ್ರೀರಂಗಪಟ್ಟಣದಲ್ಲಿ ಡಿ.ವೈ.ಎಸ್.ಪಿ.ಯಾಗಿದ್ದ ಲಿಂಗಾಯುತ ಸಮುದಾಯದ ನಾಗಪ್ಪ ಎಂಬುವವರ ಪುತ್ರಿಯನ್ನು ಮೈಸೂರಿನಲ್ಲಿ ಪ್ರೀತಿಸಿದ್ದರು. ಯು.ಆರ್.ಅನಂತಮೂರ್ತಿ, ಕೃಷ್ಣ ಆಲನಹಳ್ಳಿ ಹಾಗೂ ಡಾ.ರಾಮಣ್ಣ ನಿಂತು ವಿವಾಹ ಮಾಡಿಸಿದ್ದರು. ಎಂ.ಎ. ಪದವಿಯ ನಂತರ ಅವರಿಗೆ ಉದ್ಯೋಗವಿಲ್ಲದ ಕಾರಣ ವಿವಾಹವಾದ ನಂತರ ಶಿವರಾಮೇಗೌಡ ತಮ್ಮ ಪತ್ನಿ ಮಮತಾ ಅವರೊಂದಿಗೆ ಊರಿಗೆ ಬಂದು ವಾಸವಾಗಿದ್ದರು. ಆಗತಾನೆ ಎಸ್.ಎಸ್.ಎಲ್.ಸಿ. ಪಾಸಾಗಿದ್ದ ನಾನು ರಾಮಣ್ಣನವರು ಬಸ್ ಮೂಲಕ ನನ್ನೂರು ಕೊಪ್ಪಕ್ಕೆ ಕಳಿಸಿಕೊಡುತ್ತಿದ್ದ ಕಥೆ, ಕಾದಂಬರಿ ಪುಸ್ತಕಗಳನ್ನು ನನ್ನೂರಿಂದ ಮೂರು ಮೈಲಿ ದೂರದಲ್ಲಿದ್ದ ಹೊಸಳ್ಳಿಗೆ ಹೋಗಿ ಚಿಕ್ಕಪ್ಪನಿಗೆ ತಲುಪಿಸಿ ಬರುತ್ತಿದ್ದೆ. ನಂತರ ಯು.ಆರ್.ಅನಂತಮೂರ್ತಿಯವರು ಕೆ.ಎನ್.ಹರಿಕುಮಾರ್ ಗೆ ಹೇಳಿ ಅವರಿಗೆ ಪ್ರಜಾವಾಣಿಯ ಪತ್ರಿಕೆಯ ಮಾಹಿತಿ ವಿಭಾಗದಲ್ಲಿ 1973 ರಲ್ಲಿ ಕೆಲಸ ಕೊಡಿಸಿದರು.

ರಾಮಣ್ಣ ಮತ್ತು ಆಲನಹಳ್ಳಿ ಜೀವದ ಗೆಳೆಯರು ಮಾತ್ರವಲ್ಲ, ಅಪ್ಪಟ ಮಂಡ್ಯ ಭಾಷೆಯಲ್ಲಿ ಏಕವಚನದಲ್ಲಿ ಮಾತನಾಡಿಕೊಳ್ಳುತ್ತಿದ್ದ ಆತ್ಮೀಯರು. ಏನ್ಲಾ, ಹೋಗ್ಲಾ, ಬಾರ್ಲಾ ಇವೆಲ್ಲವೂ ಅವರ ನಡುವಿನ ಮಾತುಗಳಾಗಿದ್ದವು. ರಾಮಣ್ಣನವರು ಕುವೆಂಪು ಕೃತಿಗಳು ಮತ್ತು ಅವರ ವಿಚಾರಧಾರೆ ಕುರಿತು ಸದಾ ಮಾತನಾಡುವುದರ ಜೊತೆಗೆ ನನ್ನಂತಹ ಕಿರಿಯವರ ಎದೆಗೆ ಕುವೆಂಪು ಅವರನ್ನು ತಲುಪಿಸುವಲ್ಲಿ ಯಶಸ್ವಿಯಾದರು. ಅವರ ಪಾಲಿಗೆ ಕುವೆಂಪು ಎಂದರೆ, ಧ್ಯಾನವಾಗಿತ್ತು. ಇಸವಿ ಮರೆತು ಹೋಗಿದೆ. 1986 ಅಥವಾ 87 ಇರಬಹುದು. ರಾಮಣ್ಣನವರು ಟೈಪಾಯಿಡ್ ಗೆ ತುತ್ತಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಗೆಳೆಯರೆಲ್ಲಾ ಅವರನ್ನು ನೋಡಲು ಹೋಗಿದ್ದಾಗ, ರಾಮಣ್ಣನವರು ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿ ಕುರಿತು ಮಾತನಾಡುತ್ತಿದ್ದರು. ಇದರಿಂದ ಸಿಟ್ಟಿಗೆದ್ದ ಕೃಷ್ಣಾ ಅವರು ‘ ಏನ್ಲಾ ರಾಮಣ್ಣ ಯಾವಾಗ್ಲೂ ಕುವೆಂಪು ಕಾದಂಬರಿ ಬಗ್ಗೆ ಮಾತನಾಡ್ತಿಯಾ? ನಾನು ಅವರಪ್ಪನಂತಹ ಕಾದಂಬರಿ ಬರೆಯಬಲ್ಲೆ’ ಎಂದು ಬಿಟ್ಟರು. ಇದರಿಂದ ಕುಪಿತರಾದ ರಾಮಣ್ಣ ‘ ಲೇಯ್ ಬಡ್ಡತ್ತದೆ ಕಾದಂಬರಿ ಅಂದರೆ, ಕಂಠ ಮಟ್ಟ ಕುಡಿದು ಬಾಡ್ ತಿನ್ನುವಂಗಲ್ಲ, ತಿಳ್ಕೋ’ ಎಂದು ಕಿಚಾಯಿಸಿದರು. ‘ನಾನು ಅಂತಹ ಕಾದಂಬರಿ ಬರಿಯುವ ತನಕ ನಿನ್ನ ಮುಖ ನೋಡಾಕಿಲ್ಲ ಕನ್ಲಾ’ ಎಂದು ತಕ್ಷಣ ನುಡಿದು ಮನೆಯಿಂದ ಎದ್ದು ಹೋದ ಕೃಷ್ಣರವರು ಹತ್ತು ತಿಂಗಳು ಕಾಲ ರಾಮಣ್ಣನವರನ್ನು ಭೇಟಿಯಾಗಲಿಲ್ಲ.

ಸದಾ ಬೆಂಗಳೂರಿಗೆ ಜೊತೆಯಾಗಿ ಬರುತ್ತಿದ್ದ ರಾಮಣ್ಣ-ಕೃಷ್ಣರವರ ಜೊತೆ ನಾನು ಬಾಲಂಗೋಚಿ ತರ ಇರುತ್ತಿದ್ದೆ. ಜೊತೆಗೆ ಚಿಕ್ಕಪ್ಪ ಶಿವರಾಮೇಗೌಡ ಇರುತ್ತಿದ್ದರು. ಗಾಂಧಿನಗರದ ಮುದ್ದೆ ಮಾದಪ್ಪನ ಮೆಸ್ ನಲ್ಲಿ ಮುದ್ದೆ, ಅನ್ನ ಮತ್ತು ಲಾರ್ಡ್ಸ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಸಿಗುತ್ತಿದ್ದ ಹಂದಿ ಮಾಂಸದ ಪ್ರೈ, ಹಾಗೂ ಸಾಂಬಾರ್ ಇವುಗಳನ್ನು ಟಿಫನ್ ಕ್ಯಾರಿಯನಲ್ಲಿ ತಂದು ಕೊಡುವುದು ನನ್ನ ಕೆಲಸವಾಗಿತ್ತು. ಜಗಳವಾದ ನಂತರ ಕೃಷ್ಣ ಅವರು ಏಕಾಂಗಿಯಾಗಿ ಬೆಂಗಳೂರಿಗೆ ಬರತೊಡಗಿದರು. ಅವರ ಪುತ್ರ ಪ್ರದ್ಯುಮ್ನ ನನ್ನು ಕೋಲಾರ ಮೂಲದ ಐ.ಎ.ಎಸ್. ಅಧಿಕಾರಿಯಾಗಿದ್ದ ಸಿ.ಮುನಿಸ್ವಾಮಿ ಎಂಬುವರ ಇಂದಿರಾನಗರದ ಮನೆಯಲ್ಲಿಟ್ಟು ಓದಿಸುತ್ತಿದ್ದರು. ಮೈಸೂರಿನ ಅವರ ದೂರವಾಣಿ ನಂಬರ್ 555555 ರಿಂದ ನನಗೆ ಕರೆ ಮಾಡಿ ಬೆಂಗಳೂರಿಗೂ ಕೇಳಿಸುವಹಾಗೆ ತಮ್ಮ ಕಂಚಿನ ಕಂಠದಲ್ಲಿ ‘ ಲೇ ಜಗದೀಶಾ, ನಾನು ಏರ್ ಲೈನ್ಸ್ ಹೋಟೆಲ್ ನಲ್ಲಿ ಇರ್ತೀನಿ ಬಾ, ಸಂಜೆ ಇಂದಿರಾನಗರಕ್ಕೆ ಹೋಗಣ’ ಎನ್ನುತ್ತಿದ್ದರು. ನಾನು ನಿಮ್ಮ ಜೊತೆ ಅಣ್ಣಾ ( ರಾಮಣ್ಣನವರು) ಬರೋದಿಲ್ವೆ? ಎಂದು ಕೇಳುತ್ತಿದ್ದಂತೆ ಅವನ ಸುದ್ದಿ ನನ್ನ ಹತ್ರ ಎತ್ತಬೇಡ. ನಿನ್ನ ಕೊಂದಾಕ್ ಬುಡ್ತಿನಿ’ ಎನ್ನುತ್ತಿದ್ದರು.

ಇತ್ತ ಡಾ,ಬೆಸಗರಹಳ್ಳಿ ರಾಮಣ್ಣನವರು ಕೆ.ವಿ.ಶಂಕರಗೌಡರ ಪುತ್ರ ಸಚ್ಚಿದಾನಂದ ಜೊತೆಗೆ ಬೆಂಗಳೂರಿಗೆ ಬಂದು ರೇಸ್ ಕೋರ್ಸ್ ಬಳಿಯ ವುಡ್ ಲ್ಯಾಂಡ್ಸ್ ಹೋಟೆಲ್ ನಲ್ಲಿ ಉಳಿದುಕೊಳ್ಳುತ್ತಿದ್ದರು. ನಾನು ಅಣ್ಣನವರ ಜೊತೆ ಕೃಷ್ಣ ಈ ರೀತಿ ಅಂದ್ರು ಎನ್ನುತ್ತಿದ್ದಂತೆ ನಗುತ್ತಿದ್ದ ರಾಮಣ್ಣನವರು ‘ ಮಗಾ ನಿನಗೆ ಆ ಬಡ್ಡಿಮಗನ ಪ್ರತಿಭೆ ಗೊತ್ತಿಲ್ಲ ಅವನು ಒಳ್ಳೆಯ ಕಾದಂಬರಿ ಬರೆಯಲಿ ಎಂದು ಬೈಯ್ದು ಕಳಿಸಿದ್ದೀನಿ. ಅವ ಎಲ್ಲೂ ಹೋಗಲ್ಲ, ಕಾದಂಬರಿ ಬರೀತಾ ಇದ್ದನಂತೆ ಬರೀಲಿ ಸುಮ್ನಿರು’ ಎನ್ನುತ್ತಿದ್ದರು. ಒಂದು ವರ್ಷದ ನಂತರ ಬುಜಂಗಯ್ಯನ ದಶವತಾರ ಕಾದಂಬರಿ ಬರೆದುಕೊಂಡು ಹೋಗಿ ರಾಮಣ್ಣನವರಿಗೆ ಕೊಟ್ಟು, ‘ ನೋಡ್ಲಾ ರಾಮಣ್ಣ ಮಲೆಗಳಲ್ಲಿ ಮದುಮಗಳು ಕಾದಂಬರಿ ಮೀರಿಸುವಂತಹ ಕಾದಂಬರಿ ಬರೆದಿದ್ದೀನಿ ಎಂದರು. ರಾಮಣ್ಣನವರು ಆ ಕಾದಂಬರಿಯನ್ನು ಓದಿ ಕೃಷ್ಣ ಅವರಿಗೆ ಫೋನ್ ಮಾಡಿ ‘ ಕಂದಾ, ನೀನು ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಮೀರಿಸುವಂತಹ ಕಾದಂಬರಿ ಬರೆದಿಲ್ಲ ಆದರೆ, ಅದರ ಸಮನಕ್ಕೆ ನಿಲ್ಲುವ ಕಾದಂಬರಿ ಬರೆದಿದ್ದೀಯಾ. ಸಂಜೆ ಮಂಡ್ಯಕ್ಕೆ ಬಾ ಕಂದಾ, ಬಾಡ್ ಮಾಡುಸ್ತೀನಿ’ ಎಂದು ಆಹ್ವಾನಿಸಿದರು. ರಾಮಣ್ಣನವರ ನೆಪದಲ್ಲಿ ಆಲನಹಳ್ಳಿ ಕೃಷ್ಣ ಅವರಿಂದ ಒಂದು ಅದ್ಭುತ ಕಾದಂಬರಿ ಸೃಷ್ಟಿಯಾಯಿತು.

ಬಹುಷಃ ನನ್ನ ಬೌದ್ಧಿಕ ಮಿತಿಯಲ್ಲಿ ಹೇಳಬಹುದಾದರೆ ವಿಸ್ತಾರವಾದ ಕ್ಯಾನ್ವಾಸ್ ಮತ್ತು ಅಸಂಖ್ಯಾತ ಪಾತ್ರಗಳು ಇರುವ ಏಕೈಕ ಕಾದಂಬರಿ ಎಂದರೆ, ಅದು ಮಲೆಗಳಲ್ಲಿ ಮದುಮಗಳು ಮಾತ್ರ. ಈ ಕಾದಂಬರಿಯ ಪಕ್ಕದಲ್ಲಿ ಬುಜಂಗಯ್ಯನ ದಶಾವತಾರಗಳು ಕಾದಂಬರಿಯನ್ನು ಇಟ್ಟು ಹೋಲಿಸಿದಾಗ, ಅದೇ ವಿಸ್ತಾರವಾದ ಕ್ಯಾನ್ವಾಸ್ ಮತ್ತು ಅಸಂಖ್ಯಾತ ಪಾತ್ರಗಳನ್ನು ನಾವು ಕಾಣಬಹುದು. ಒಂದು ಮಲೆನಾಡಿನ ಮಹಾ ಕಾವ್ಯವಾದರೆ, ಇನ್ನೊಂದು ಬಯಲು ಸೀಮೆಯ ಮಹಾ ಕಾವ್ಯ. ಇಂದು ಬೆಳಿಗ್ಗೆ ಎದ್ದ ತಕ್ಷಣ ಕೃಷ್ಣ ನೆನಪಾದರು ಜೊತೆಗೆ ಅಣ್ಣ ರಾಮಣ್ಣವರೂ ನೆನಪಾಗಿಬಿಟ್ಟರು.

– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply